ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ವಿರೋಧಿ ಹೇಳಿಕೆ: ಕಠಿಣ ಕ್ರಮಕ್ಕೆ ಆಗ್ರಹ

Last Updated 1 ಅಕ್ಟೋಬರ್ 2014, 10:16 IST
ಅಕ್ಷರ ಗಾತ್ರ

ರಾಮನಗರ: ಕನ್ನಡ ನೆಲದಲ್ಲಿ ಸೌಲಭ್ಯಗಳನ್ನು ಪಡೆದು ಕನ್ನಡ ನೆಲ, ಜಲದ ಬಗ್ಗೆ ಹಗುರವಾಗಿ ಮಾತನಾಡು­ವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾ­ಗಬೇಕು ಎಂದು ಕನ್ನಡ ಸಾಹಿತ್ಯ ಪರಿ­ಷತ್ತಿನ ಮಾಜಿ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್‌ ಒತ್ತಾಯಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕ ರಾಮನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕರ್ನಾಟಕದ ಗಡಿ ಭಾಗದಲ್ಲಿ ಬೆಂಕಿ ಬಿದ್ದಿದೆ. ಬೆಳಗಾವಿಯಲ್ಲಿ ಎಂ.ಇ.ಎಸ್‌ ಸಂಘಟನೆಯ ಪುಂಡಾಟಿಕೆ ಹೆಚ್ಚಾಗಿದೆ. ನಮ್ಮವರೇ ಎನ್ನಲಾಗಿರುವ ಉಮೇಶ್‌ ಕತ್ತಿ, ಸುರೇಶ್‌ ಅಂಗಡಿ ಅವರು ಪ್ರತ್ಯೇ­ಕತೆಯ ಬಗ್ಗೆ ಮಾತನಾಡು­ತ್ತಿದ್ದಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮೌನವಾಗಿರುವ ಸರ್ಕಾರ: ‘ಇವುಗಳನ್ನೇಲ್ಲ ಕೇಳಿಸಿಕೊಂಡು ಸುಮ್ಮ­ನಿರುವ ಸರ್ಕಾರಕ್ಕೆ ತನ್ನ ಬಳಿ ಇರುವ ಅಸ್ತ್ರ ಝಳಪಿಸಲು ಏಕೆ ಆಗು­ತ್ತಿಲ್ಲ’ ಎಂದು ಅವರು ಪ್ರಶ್ನಿಸಿದರು.  ಅನ್ಯ ಭಾಷಿಕರು ಕನ್ನಡ ಭಾಷೆ, ಸಂಸ್ಕೃತಿ ಮತ್ತು ಆರ್ಥಿಕತೆಯ ಮೇಲೆ ಆಕ್ರಮಣ ಮಾಡುತ್ತಿದ್ದಾರೆ. ಅವರಿಂದ ಕನ್ನಡಿಗರ ಆರ್ಥಿಕ ಬದುಕು ನಾಶವಾಗುತ್ತದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರು ಅನಾಥರಾಗುವ ಸ್ಥಿತಿ ಬಂದಿದೆ. ಆದರೆ ರಾಜ್ಯ ಸರ್ಕಾರ ಮೌನವಾಗಿದೆ ಎಂದು ಅವರು ಕಿಡಿಕಾರಿದರು.

ಮಾತೃಭಾಷಾ ಶಿಕ್ಷಣ, ಗಡಿ, ನದಿ ವಿಚಾರವಾಗಿ ರಾಜ್ಯದ ಸರ್ಕಾರಗಳು ಮೌನವಾಗಿವೆ. ಈ ಕಾರಣದಿಂದಾಗಿ ಕನ್ನಡ, ಕನ್ನಡಿಗರು, ಗಡಿ, ನದಿ, ನೆಲದ ರಕ್ಷಣೆಗೆಂದು ಸಂಘಟನೆಗಳು ಜನ್ಮತಾ­ಳುತ್ತಿವೆ ಎಂದು ಅವರು ಹೇಳಿದರು.

ಪ್ರಾದೇಶಿಕ ಭಾಷೆಯಾ ಮಾತೃಭಾಷೆ ಎಂದು ಪರಿಗಣಿಸಿ, ಆ ಭಾಷೆಯಲ್ಲಿ ರಾಜ್ಯದಾದ್ಯಂತ ಶಿಕ್ಷಣ ದೊರೆಯು­ವಂತಾಗಬೇಕು. ದೇಶದಾದ್ಯಂತ ಏಕ­ರೂಪ ಶಿಕ್ಷಣ ನೀತಿ ಜಾರಿಯಾ­ಗಬೇಕು. ಅಗತ್ಯವಿದ್ದರೆ ಇಂಗ್ಲಿಷ್‌ ಸೇರಿದಂತೆ ಇತರ ಎಲ್ಲ ಭಾಷೆಗಳನ್ನು ಕಲಿಯೋಣ. ಆದರೆ ಕನ್ನಡವನ್ನು ಕೊಂದು ಇಂಗ್ಲಿಷ್‌ ಕಲಿ­ಯುವ ಕೆಲಸ ಕೈಗೊಳ್ಳಬೇಡಿ ಎಂದು ಅವರು ಕಿವಿಮಾತು ಹೇಳಿದರು.

ಕರವೇ ಅಧ್ಯಕ್ಷ ಟಿ.ಎ.ನಾರಾ­ಯಣಗೌಡ ಮಾತನಾಡಿ, ರಾಜ್ಯಕ್ಕೆ ಒಳ ಮತ್ತು ಹೊರ ಶತ್ರುಗಳ ಕಾಟ ಹೆಚ್ಚಾಗಿದೆ. ಮಹಾಜನ್‌ ವರದಿ ಪ್ರಕಾರ ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ ಎಂಬುದು ಈಗಾಗಲೇ ಸಾಬೀತಾಗಿದೆ. ಹೀಗಿರುವಾಗ ಈ ವಿಷಯದಲ್ಲಿ ನಾಡದ್ರೋಹ ಮಾಡುವ ದ್ರೋಹಿಗಳನ್ನು ಕರವೇ ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು.

ರಾಜ್ಯದ ಹೊರಗಿರುವ ಕಾಸರಗೂಡು (ಕೇರಳ), ಸೊಲ್ಲಾಪುರ, ದಕ್ಷಿಣ ಸೊಲ್ಲಾಪುರ, ಸಾಂಗ್ಲಿ (ಮಹಾ­ರಾಷ್ಟ್ರ), ಮಡಕಶಿರ (ಆಂಧ್ರ), ಹೊಸೂರು, ತಾಳವಾಡಿ, ಊಟಿ, ನೀಲ­ಗಿರಿ (ತಮಿಳುನಾಡು) ಸೇರಿದಂತೆ ಕೆಲ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸು­ವಂತೆ ಹೋರಾಟ ರೂಪಿಸ­ಬೇಕಾದ ಈ ಸಂದರ್ಭದಲ್ಲಿ ಶಾಸಕ ಉಮೇಶ್‌ ಕತ್ತಿ ಅವರು ರಾಜ್ಯ ವಿಭಜಿ­ಸುವ ಕುರಿತು ನೀಡಿರುವ ಹೇಳಿಕ ಖಂಡನೀಯ ಎಂದರು.

ಕರ್ನಾಟಕವನ್ನು ಕೇವಲವಾಗಿ ಕಂಡಂತಹ, ಕಾವೇರಿ ವಿಷಯದಲ್ಲಿ ಕನ್ನಡಿಗರ ಕಣ್ಣಿಂದ ನೀರು ಸುರಿಯು­ವಂತೆ ಮಾಡಿದ ತಮಿಳುನಾಡಿದ ಎಐಡಿಎಂಕೆ ವರಿಷ್ಠೆ ಜೆ.ಜಯಲಲಿತಾ ಅವರು ಕೊನೆಗೆ ಕರ್ನಾಟಕ ನ್ಯಾಯಾ­ಲಯಕ್ಕೆ ಬರಬೇಕಾಯಿತು. ಅಲ್ಲದೆ ಇಲ್ಲಿನ ಜೈಲಿನಲ್ಲಿಯೇ ಮುದ್ದೆ ಮುರಿ­ಯಬೇಕಾದ ಸ್ಥಿತಿ ಬಂದೆರಗಿದೆ ಎಂದು ಹೇಳಿದರು.

ಅಭಿಮಾನದ ಕೊರತೆ: ಜಯಲಲಿತಾ ಅವರು ಜೈಲು ಪಾಲಾದ ಕಾರಣ ತಮಿಳುನಾಡಿನ ಬಹುತೇಕರು ಕಣ್ಣೀರು ಸುರಿಸುತ್ತಿದ್ದಾರೆ. ಆದರೆ ಕರ್ನಾಟಕದ ಯಾವ ರಾಜಕಾರಣಿ ಜೈಲು ಪಾಲಾದರೂ ಕರ್ನಾಟಕದ ಜನ ಕಣ್ಣೀರು ಸುರಿಸುವುದಿಲ್ಲ. ಕಾರಣ ರಾಜ್ಯದ ಯಾವ ರಾಜಕಾರಣಿಗೂ ಇಲ್ಲಿನ ನೆಲ, ಜಲ, ಗಡಿ ವಿಷಯದಲ್ಲಿ ಅಭಿಮಾನ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದಿ ಚುಂಚನಗಿರಿ ಮಠದ ರಾಮನಗರ ಶಾಖೆಯ ಅನ್ನದಾನೇ­ಶ್ವರನಾಥ ಸ್ವಾಮೀಜಿ, ಕನಕಪುರದ ಮರಳೇಗವಿ ಮಠದ ಮುಮ್ಮಡಿ ಶಿವ­ರುದ್ರ ಸ್ವಾಮೀಜಿ, ಚನ್ನಪಟ್ಟಣದ ವಿರಕ್ತ ಮಠದ ಶಿವರುದ್ರ ಸ್ವಾಮೀಜಿ, ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಪ್ರಧಾನ ಕಾರ್ಯ­ದರ್ಶಿ ಮರಿದೇವರು ಮಾತನಾಡಿದರು.

ಕರವೇ ರಾಜ್ಯ ಸಂಘಟನಾ ಕಾರ್ಯ­ದರ್ಶಿ ಅಶ್ವಿನಿ, ಮುಖಂಡರಾದ ಸಣ್ಣೀರಪ್ಪ, ಸತೀಶ್‌ ಗೌಡ, ಉಮಾ­ಶಂಕರ್‌, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಧರ್‌ ಮೊದಲಾದವರು ಉಪಸ್ಥಿತರಿದ್ದರು. ಕರವೇ ಸಹ ಕಾರ್ಯದರ್ಶಿ ಜಿ. ಶಿವಣ್ಣ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT