ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಹಿತ್ಯ ಪರಿಚಾರಕ ಸಂತ

Last Updated 6 ಜುಲೈ 2015, 19:30 IST
ಅಕ್ಷರ ಗಾತ್ರ

ಇವರಿಗೆ ಹೆಸರು, ಕೀರ್ತಿ, ಅಧಿಕಾರ, ಹಣ... ಯಾವುದೂ ಬೇಡ.  ಕೆಲಸವನ್ನು ಹುಡುಕಿಕೊಂಡು ಹೋಗುತ್ತಾರೆ. ಅಷ್ಟೇ ನಿಷ್ಠೆಯಿಂದ ಆ ಕೆಲಸ ಮುಗಿಸುತ್ತಾರೆ, ‘ಈ ಕೆಲಸವನ್ನು ನಾನು ಮಾಡಿದೆ’ ಎಂಬುದನ್ನು ಮರೆತು ಸಂತರಂತೆ ಹೊರಟು ಬಿಡುತ್ತಾರೆ...

ವಿಜಯಪುರದ ಟ್ರೆಜರಿ ಕಾಲೊನಿಯಲ್ಲಿ ಅಂಥ ಸಾಹಿತಿಯೊಬ್ಬರು ಇದ್ದಾರೆ. ಅವರ ಹೆಸರು ಮಹಾಂತ ಗುಲಗಂಜಿ. ಮಕ್ಕಳ-ಮೊಮ್ಮಕ್ಕಳ ಆಕಸ್ಮಿಕ ಸಾವು, ಕೆಲವು ಬಾರಿ ನಡೆದ ಅಪಘಾತ-ಆಘಾತ ಎಲ್ಲದಕ್ಕೂ ಎದೆಯೊಡ್ಡಿ ನಿಂತವರಿವರು.

ಗುಲಗುಂಜಿಯವರ ಹುಟ್ಟೂರು ಬಾಗಲಕೋಟೆ ಜಿಲ್ಲೆಯ ಶಿರೂರು. ಅಲ್ಲಿನ ಜನ, ಸಂತೆ, ಸಂಪ್ರದಾಯ, ಸೊಬಗು... ಎಲ್ಲವೂ ಅವರ ಬರಹಕ್ಕೆ ಪ್ರೇರಣೆ.  ಅಲ್ಲಿಯೇ ಅವರ ಪ್ರಾಥಮಿಕ ಶಿಕ್ಷಣ ಸಾಗಿದ್ದು. ಹಾವೇರಿಯಲ್ಲಿ ಪ್ರೌಢ ಶಿಕ್ಷಣ, ವಿಜಯಪುರದಲ್ಲಿ ಉಚ್ಚಶಿಕ್ಷಣ ನಡೆಯಿತು.

ಪ್ರೌಢಶಾಲೆಯಲ್ಲಿದ್ದಾಗಲೇ ಸಾಹಿತ್ಯಾಸಕ್ತಿ ಕುಡಿಯೊಡೆದದ್ದು.  ಲಲಿತ ಪ್ರಬಂಧ, ಏಕಾಂಕ ನಾಟಕ, ಹನಿಗವನ, ಚುಟುಕು, ಪತ್ರ ಲೇಖನ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ಕಥೆ, ಕಾದಂಬರಿ... ಹೀಗೆ ಎಲ್ಲ ಪ್ರಾಕಾರಗಳಲ್ಲೂ ಇವರದ್ದು ಎತ್ತಿದ ಕೈ. ಪ್ರಬಂಧ ಸಾಹಿತ್ಯವೆಂದರೆ ಅಚ್ಚುಮೆಚ್ಚು.  ಅವರ ‘ನಡೆಯದ ನೋಟಿನ ಲೀಲಾ ವಿಲಾಸ’ಕ್ಕೆ ರಾಜ್ಯ ಮಟ್ಟದಲ್ಲಿ ಪ್ರಥಮ ಪ್ರಶಸ್ತಿ ಬಂದಿತ್ತು.  ಅದು ಮಹಾರಾಷ್ಟ್ರದ ಕನ್ನಡ ಪಠ್ಯ ಪುಸ್ತಕದಲ್ಲೂ ಸೇರಿತು.

ಆಗಿನ ಅನೇಕ ಪತ್ರಿಕೆಗಳಲ್ಲಿ ಅವರ ಲೇಖನ, ಕವಿತೆ, ಕಥೆ, ಕಾದಂಬರಿಗಳು ಪ್ರಕಟವಾದವು. ವಾರ ಪತ್ರಿಕೆಯೊಂದರ ಸಹಾಯಕ ಸಂಪಾದಕರಾಗಿಯೂ ಕೆಲಸ ಮಾಡಿದರು. ಗುಲಗುಂಜಿಯವರು ವಿಜಯಪುರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಏಕಮೇವ ವ್ಯಕ್ತಿ.  ಹಾಗೆಯೇ ವಿಜಯಪುರ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೂ ಪಾತ್ರರಾದರು. 

ಆ ಸಂದರ್ಭದಲ್ಲಿ ಅವರ ವಿರುದ್ಧ ಒಂದು ಸಣ್ಣ ಅಪಸ್ವರ ಕೂಡ ಎಲ್ಲೂ ಕೇಳಲಿಲ್ಲ.  ಅಷ್ಟು ಶ್ರದ್ಧೆಯ ಕೆಲಸ ಅವರದ್ದು. ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಆರಂಭದಿಂದ ಇಂದಿನವರೆಗೆ, ಅದರ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಗುಲಗಂಜಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆಯನ್ನು ಆರಂಭಿಸಿ, ಕರಣಿಕರಾಗಿ, ಲೆಕ್ಕಿಗರಾಗಿ, ಸೂಪರಿಂಟೆಂಡೆಂಟರಾಗಿ, ಕೊನೆಗೆ ಗೆಜಿಟೆಡ್ ಅಸಿಸ್ಟಂಟ್‌ ಆಗಿ ಪದೋನ್ನತಿ ಹೊಂದಿ 1983ರಲ್ಲಿ ನಿವೃತ್ತರಾದರು.
 
ಜನರಲ್ಲಿ ಓದುವ ಅಭಿರುಚಿಯನ್ನು ಹೆಚ್ಚಿಸುವ ಉದ್ದೇಶದಿಂದ ‘ಆಶಾ ಸಾಹಿತ್ಯ ಮಂದಿರ’ ಹಾಗೂ ‘ವಿವೇಕಾನಂದ ವಾಚನಾಲಯ’ವನ್ನು 1951ರಲ್ಲಿ ಆರಂಭಿಸಿದರು.  ಆ ಮೂಲಕ ನಾಡಿನ ಖ್ಯಾತ ಸಾಹಿತಿಗಳನ್ನು ವಿಜಯಪುರಕ್ಕೆ ಬರಮಾಡಿಕೊಂಡು ವೈವಿಧ್ಯಮಯ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಂಡರು.  ಇದು 15 ವರ್ಷ ನಿರಂತರವಾಗಿ ನಡೆಯಿತು. ಇದೊಂದು ವಿಜಯಪುರದ ಸಾಹಿತ್ಯಿಕ ಇತಿಹಾಸದಲ್ಲಿ ಮರೆಯಲಾಗದ ಸುವರ್ಣ ಪುಟ.

ಖ್ಯಾತ ಹಾಸ್ಯ ಸಾಹಿತಿ ಬೀಚಿ, ನಿರಂಜನ, ಎಂ.ರಾಮಮೂರ್ತಿ, ಬಸವರಾಜ ಕಟ್ಟಿಮನಿ ಮುಂತಾದವರು ತಮ್ಮ ಹಸ್ತಾಕ್ಷರದಲ್ಲಿ ಬರೆದ ಪತ್ರಗಳನ್ನು ಇವರು ಜತನ ಮಾಡಿಟ್ಟುಕೊಂಡಿದ್ದಾರೆ. ಗುಲಗಂಜಿಯವರ ಮನೆ ಗ್ರಂಥಾಲಯ ಎಂಬಂತೆ ಭಾಸವಾಗುತ್ತದೆ. ಈವರೆಗೆ ಮಹಾಂತ ಗುಲಗಂಜಿಯವರು ನಾಲ್ಕು ಅಭಿನಂದನಾ ಗ್ರಂಥಗಳು ಹಾಗೂ ನಾಲ್ಕು ಸಂಸ್ಮರಣ ಗ್ರಂಥಗಳನ್ನು ಸಂಪಾದಿಸಿದ್ದಾರೆ.  ಸುಮಾರು ಹತ್ತು ಸಾವಿರ ಜನಪದ ಶಬ್ದಗಳನ್ನು ಸಂಗ್ರಹಿಸಿದ್ದಾರೆ.

ಪ್ರತಿ ಶಬ್ದಕ್ಕೂ ಸೂಕ್ತವಾದ ಅರ್ಥ ವಿವರಣೆಯನ್ನೂ ನೀಡಿದ್ದಾರೆ.  ಇದೊಂದು ಜನಪದ ನಿಘಂಟಿನ ಕರಡು ಪ್ರತಿ. ಇದಲ್ಲದೇ ಅವರು ಸಂಪಾದಕರಲ್ಲದ ಹಾಗೂ ಸಂಪಾದಕ ಮಂಡಳಿಯಲ್ಲೂ ಇಲ್ಲದ ಅನೇಕ ಗ್ರಂಥಗಳನ್ನು ತಿದ್ದಿ-ತೀಡಿ ಸುಂದರ ಪುಸ್ತಕಗಳಾಗಿ ಹೊರಬರಲು ಶ್ರಮಿಸಿದ್ದಾರೆ.  ಈಗಲೂ ಅವರು ಅಂಥ ಒಂದಿಲ್ಲೊಂದು ಕಾರ್ಯಗಳಲ್ಲಿ ಸ್ವಪ್ರೇರಣೆಯಿಂದ ನಿರತರಾಗಿರುತ್ತಾರೆ. 

ತಪ್ಪಿಲ್ಲದ ಶುದ್ಧವಾದ ಕೃತಿಗಳನ್ನು ಕೊಡಲು ಅವರು ಎಷ್ಟು ಬಾರಿಯಾದರೂ ಓದುತ್ತಾರೆ, ಕರಡು ಪ್ರತಿಯನ್ನು ತಿದ್ದುತ್ತಾರೆ. ಅವರ ಹಾಗೆ ಪ್ರೂಫ್ ತಿದ್ದುವವರು ಈಗ ಯಾರೂ ಇಲ್ಲ ಎಂದು ಅನೇಕ ಹಿರಿಯ ಸಾಹಿತಿಗಳೇ ಮೆಚ್ಚುಗೆ ಸೂಚಿಸಿದ್ದಾರೆ.ಕನ್ನಡ ಸಾಹಿತ್ಯದ ಶ್ರದ್ಧಾವಂತ ಪರಿಚಾರಕರಾಗಿ ಇಷ್ಟೆಲ್ಲ ಕೆಲಸ ಮಾಡಿದ ಗುಲಗಂಜಿಯವರ ಒಂದೇ ಒಂದು ಪುಸ್ತಕ ಇನ್ನೂ ಪ್ರಕಟವಾಗಿಲ್ಲ. ಅವರು ಬರೆದು ಪ್ರಕಟಣೆಗಾಗಿ ಕಾಯುತ್ತಿರುವ ಅವರ ಸಾಹಿತ್ಯ ಹಸ್ತಪ್ರತಿಯ ರೂಪದಲ್ಲಿ ಸಿದ್ಧವಾಗಿ ಕುಳಿತಿದೆ.

ಬೇರೆಯವರ ಕೃತಿಗಳನ್ನೇ ತಿದ್ದಿತೀಡಿ ಅಂದವಾಗಿ ಪ್ರಕಟಿಸುವ ಕಾರ್ಯದಲ್ಲಿ ತೊಡಗಿರುವ ಹಾಗೂ ಅವುಗಳನ್ನೇ ತಮ್ಮ ಕೃತಿ ಎನ್ನುವಂತೆ ಸಂಭ್ರಮ ಪಡುವುದರ ನಡುವೆ ತಮ್ಮ ಪುಸ್ತಕಗಳ ಪ್ರಕಟಣೆ ಬಗ್ಗೆ ಅವರಿಗೆ ಮರೆತೇ ಹೋಗಿದೆ ಎನ್ನಬಹುದೇನೋ!

****
‘ಗುಲಗಂಜಿ ಎಂದರೆ ಬಂಗಾರವನ್ನು ತೂಗುವಂಥದ್ದು. ಚಿನ್ನಕ್ಕೆ ಬೆಲೆ ಕಟ್ಟುವಂಥದ್ದು’ ಎಂದು ಇವರನ್ನು ಯಾರೋ ಪರಿಚಯಿಸಿದರಂತೆ. ಅದಕ್ಕೆ ಗುಲಗಂಜಿಯವರು ನೀಡಿದ ಪ್ರತಿಕ್ರಿಯೆ ನೋಡಿ: “ಬಂಗಾರ ಅಕ್ಕಸಾಲಿಗನಿಗೆ  ‘ನೀನು ನನ್ನನ್ನು ಬಡಿಯುತ್ತಿ, ಬೆಂಕಿಯಲ್ಲಿ ಹಾಕಿ ಕರಗಿಸುತ್ತಿ, ಕತ್ತರಿಸುತ್ತಿ...  ಏನೆಲ್ಲ ನೋವು ಕೊಡುತ್ತಿ. ಆದರೆ ಇದ್ಯಾವುದಕ್ಕೂ ನನಗೆ ದುಃಖವಿಲ್ಲ.  ಕೊನೆಗೆ ನೀನು ಆ ಪುಟಗೋಸಿ ಗುಲಗಂಜಿಯೊಂದಿಗೆ ನನ್ನನ್ನು ತೂಗುತ್ತೀಯಲ್ಲ ಅದೇ ನನಗೆ ಬೇಸರದ ವಿಷಯ’ ಎಂದು ಹೇಳಿತಂತೆ” ಎಂದು ತಿಳಿಹಾಸ್ಯದೊಂದಿಗೆ ತಮ್ಮನ್ನು ಹೊಗಳಬೇಡಿ ಎಂದು ಸೂಚ್ಯವಾಗಿ ಹೇಳಿದ್ದರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT