ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪುಹಣಕ್ಕೆ ಕಡಿವಾಣ

Last Updated 29 ಮೇ 2014, 19:30 IST
ಅಕ್ಷರ ಗಾತ್ರ

ನರೇಂದ್ರ ಮೋದಿ ಸರ್ಕಾರ ತನ್ನ ಮೊದಲ ಸಂಪುಟ ಸಭೆಯಲ್ಲಿಯೇ ಸುಪ್ರೀಂ ಕೋರ್ಟ್‌ ಸೂಚನೆಯಂತೆ ಕಪ್ಪುಹಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಿ ಅನುಕರಣೀಯ ಕೆಲಸವನ್ನೇ ಮಾಡಿದೆ. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಂ.ಬಿ. ಷಾ ಈ ತಂಡದ ಅಧ್ಯಕ್ಷರಾಗಿದ್ದು, ಇನ್ನೊಬ್ಬ ನಿವೃತ್ತ ನ್ಯಾಯಮೂರ್ತಿ ಅರಿಜಿತ್‌ ಪಸಾಯತ್‌ ಉಪಾಧ್ಯಕ್ಷ­ರಾಗಿ­ದ್ದಾರೆ.

ಇದರಲ್ಲಿ ರಿಸರ್ವ್‌ ಬ್ಯಾಂಕ್‌ ಉಪ ಗವರ್ನರ್‌, ಸಿಬಿಐ, ಬೇಹು­ಗಾರಿಕೆ ದಳ, ರಾ, ಕಂದಾಯ ಗೂಢಚರ್ಯೆ ನಿರ್ದೇಶನಾಲಯಗಳ ನಿರ್ದೇ­ಶ­ಕರು ಸೇರಿದಂತೆ ವಿವಿಧ ಉನ್ನತ ಅಧಿಕಾರಿಗಳು, ತಜ್ಞರಿದ್ದಾರೆ. ಇದು ವಿದೇಶಿ ಬ್ಯಾಂಕ್‌ಗಳಲ್ಲಿ ಭಾರತೀಯರು ಗುಪ್ತವಾಗಿ ಇಟ್ಟಿರುವ ಹಣ ಬಯ­ಲಿಗೆ ಎಳೆದು ವಾಪಸ್‌ ತರುವ, ಕಪ್ಪುಹಣ ಸೃಷ್ಟಿ ತಡೆಯುವ ದಿಸೆಯಲ್ಲಿ ಮಹತ್ವದ ಹೆಜ್ಜೆ.

ಇಂಥ ತಂಡವೊಂದನ್ನು ಮೇ 29ರ ಒಳಗೆ ರಚಿಸುವಂತೆ ಸುಪ್ರೀಂಕೋರ್ಟ್‌ ಗಡುವು ನೀಡಿತ್ತು. ಹಾಗೆ ನೋಡಿದರೆ ಇಂಥ ತಂಡದ ರಚನೆಗೆ ಕೋರ್ಟ್‌ ಕಿವಿಹಿಂಡಬೇಕಿರಲಿಲ್ಲ. ಆದರೆ ಹಿಂದಿನ ಸರ್ಕಾರಗಳು ಈ ವಿಷಯವನ್ನು ರಾಜಕೀಯ ಕಾರಣಗಳಿಗಾಗಿ ಮುಂದೂಡುತ್ತಲೇ ಬಂದಿದ್ದವು. ಮೂರು ವರ್ಷದ ಹಿಂದೆ ಒಮ್ಮೆ ಸುಪ್ರೀಂ ಕೋರ್ಟ್‌ ವಿಶೇಷ ತನಿಖಾ ತಂಡ ರಚನೆಗೆ ಆದೇಶಿಸಿದರೂ ಯುಪಿಎ 2 ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಲೇ ಇಲ್ಲ.

ಹೀಗಾಗಿ ಮತ್ತೆ ಕೋರ್ಟ್‌ ಕಟ್ಟುನಿಟ್ಟು ತಾಕೀತು ಮಾಡಬೇಕಾಯಿತು. ಇದೇನೇ ಇದ್ದರೂ, ತಂಡವಂತೂ ಈಗ ಅಸ್ತಿತ್ವಕ್ಕೆ ಬಂದಿದೆ. ಅದರ ಮುಂದೆ ದೊಡ್ಡ ಜವಾಬ್ದಾರಿ ಇದೆ. ಕಪ್ಪುಹಣ ಸೃಷ್ಟಿಯಾಗದಂತೆ ತಡೆಯುವುದು ದೊಡ್ಡ ಸವಾಲು. ಏಕೆಂದರೆ ರಾಜಕಾರಣಿಗಳು ಮತ್ತು ಅಧಿಕಾರಿಗಳ ಸಹ­ಭಾ­ಗಿತ್ವವಿಲ್ಲದೆ ಕಪ್ಪುಹಣ ಸೃಷ್ಟಿ ಕಷ್ಟ. ತೆರಿಗೆ ಪದ್ಧತಿ ಸುಧಾರಣೆ ಮತ್ತು ಸರಳೀಕರಣ, ಚುನಾವಣಾ ವೆಚ್ಚಗಳಲ್ಲಿ ಪಾರದರ್ಶಕತೆ ತರುವುದು ಇದ­ಕ್ಕೊಂದು ಪರಿಹಾರ. ಏಕೆಂದರೆ ಇವು ಕಪ್ಪುಹಣದ ಮುಖ್ಯ ಮೂಲಗಳು. ಹೀಗಾಗಿ ಇದನ್ನು ಮಟ್ಟಹಾಕಲು ತಂಡಕ್ಕೆ ಸರ್ಕಾರ ಬೆನ್ನೆಲುಬಾಗಿ ನಿಲ್ಲ­ಬೇಕು, ತಪ್ಪಿತಸ್ಥರಿಗೆ ಕಟ್ಟುನಿಟ್ಟು ಶಿಕ್ಷೆ ಕೊಡಲು ರಾಜಕೀಯ ಇಚ್ಛಾಶಕ್ತಿ­ಯನ್ನೂ ತೋರಿಸಬೇಕು.

ಅನೇಕ ಭಾರತೀಯರು ವಿದೇಶಿ ಬ್ಯಾಂಕುಗಳಲ್ಲಿ ಕಪ್ಪುಹಣದ ರೂಪದಲ್ಲಿ ಅಪಾರ ಸಂಪತ್ತು ಕೂಡಿಟ್ಟಿದ್ದು, ಇದನ್ನು ವಾಪಸ್‌ ಸ್ವದೇಶಕ್ಕೆ ತರಲು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಬಹಳ ಕಾಲದಿಂದಲೂ ಇದೆ. ಈ ಬಗ್ಗೆ ಲೆಕ್ಕ­ವಿಲ್ಲದಷ್ಟು ಚರ್ಚೆಗಳು ಸಂಸತ್ತಿನ ಒಳಗೆ, ಹೊರಗೆ ನಡೆದಿವೆ. ಚುನಾವಣೆ ಸಂದರ್ಭದಲ್ಲಂತೂ ಇದು ರಾಜಕೀಯ ಮೇಲಾಟದ ವಿಷಯ ಆಗಿದ್ದನ್ನು ನೋಡಿ­ದ್ದೇವೆ.

ಆದರೆ ವಿದೇಶಿ ಬ್ಯಾಂಕ್‌ಗಳಲ್ಲಿ ಗುಪ್ತವಾಗಿ ಇಟ್ಟ ಹಣ ಎಷ್ಟು, ಇಟ್ಟವರು ಯಾರು ಎಂಬುದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನಗಳು ಪೂರ್ಣ ಫಲ ಕೊಟ್ಟಿರಲಿಲ್ಲ. ತಂಡ ರಚನೆಯಿಂದಾಗಿ ಇದಕ್ಕೊಂದು ಚಾಲನೆ ಸಿಕ್ಕಂತಾಗಿದೆ.  ವಿದೇಶಿ ಬ್ಯಾಂಕ್‌ನಲ್ಲಿರುವ ಭಾರತೀಯರ ಅಕ್ರಮ ಸಂಪತ್ತು  ವಾಪಸ್‌ ತರುವುದನ್ನು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿತ್ತು.  ಹಿಂದಿನ ಸರ್ಕಾರಗಳಿಗಿಂತ ಭಿನ್ನ ರೀತಿಯಲ್ಲಿ ಕಾರ್ಯ ಪ್ರಾರಂಭಿಸಿರುವ ಮೋದಿ ಅವರ ಸರ್ಕಾರ ಈ ವಾಗ್ದಾನ ಈಡೇರಿಸುತ್ತದೆ ಎಂಬ ವಿಶ್ವಾಸ ಜನರಲ್ಲಿದೆ. ಅದು ಹುಸಿಯಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT