ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪುಹಣ ನಿಗ್ರಹಕ್ಕೆ ಬೇಕು ಇನ್ನಷ್ಟು ಸುಧಾರಣಾ ಕ್ರಮ

Last Updated 5 ಅಕ್ಟೋಬರ್ 2015, 19:34 IST
ಅಕ್ಷರ ಗಾತ್ರ

ತೆರಿಗೆ ಪಾವತಿಸದ ಮತ್ತು ದೇಶ– ವಿದೇಶಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿರುವ ಕಪ್ಪು ಹಣದ ಹಾವಳಿ ಮಟ್ಟ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ಉತ್ತೇಜಕರ ಪ್ರತಿಕ್ರಿಯೆ ದೊರೆತಿಲ್ಲ. ಸರ್ಕಾರ ಪ್ರಕಟಿಸಿದ್ದ ಕ್ಷಮಾದಾನ ಯೋಜನೆಗೆ 638 ಜನರು ಮಾತ್ರ ಸ್ಪಂದಿಸಿ, ತಮ್ಮ ಬಳಿ ₹ 4,147 ಕೋಟಿಗಳಷ್ಟು ಅಕ್ರಮ ಸಂಪತ್ತಿದೆ ಎಂದು ಘೋಷಿಸಿಕೊಂಡಿರುವುದನ್ನು ನೋಡಿದರೆ, ಸರ್ಕಾರದ ನಡೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಸ್ಪಷ್ಟ.

ಲೆಕ್ಕಕ್ಕೆ ಸಿಗದ ಅಪಾರ ಪ್ರಮಾಣದ ಕಪ್ಪು ಹಣಕ್ಕೆ ಹೋಲಿಸಿದರೆ ಇದು ತೀರ ಅತ್ಯಲ್ಪ ಪ್ರಮಾಣದ್ದಾಗಿದೆ. ವಿದೇಶಗಳಲ್ಲಿ ಅಕ್ರಮವಾಗಿ ಇರಿಸಿರುವ ಸಂಪತ್ತು ಘೋಷಿಸಿ, ಕಪ್ಪು ಹಣಕ್ಕೆ ಸಂಬಂಧಿಸಿದ ಹೊಸ ಕಾಯ್ದೆಯ ಕಠಿಣ ಸ್ವರೂಪದ ದಂಡನಾ ಕ್ರಮಗಳಿಂದ ಪಾರಾಗಲು ಸರ್ಕಾರ ಒದಗಿಸಿದ್ದ ಅವಕಾಶವನ್ನು ಬಹುತೇಕರು ಬಳಸಿಕೊಳ್ಳದಿರುವುದಕ್ಕೆ ಅನೇಕ ಸಕಾರಣಗಳಿವೆ. ದೇಶದಲ್ಲಿ ಲೆಕ್ಕಕ್ಕೆ ಸಿಗದ ಕಪ್ಪು ಹಣದ ಮೊತ್ತವು ಭಾರಿ ಪ್ರಮಾಣದಲ್ಲಿ ಇದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರೇ ಒಪ್ಪಿಕೊಂಡಿರುವುದರಲ್ಲಿ ಹೊಸತೇನೂ ಇಲ್ಲ. ಇದಕ್ಕೆ ನಮ್ಮ ತೆರಿಗೆ ವ್ಯವಸ್ಥೆಯಲ್ಲಿನ ಲೋಪ ದೋಷಗಳೇ ಕಾರಣ.

ಗರಿಷ್ಠ ಮೊತ್ತದ ತೆರಿಗೆ ಪಾವತಿಸಲು ಹಿಂದೇಟು ಹಾಕುವ ಸಿರಿವಂತರು, ಉದ್ಯಮಿಗಳು, ಇತರ ವ್ಯವಹಾರಸ್ಥರು ತಮ್ಮ ಬಳಿಯ ಕಪ್ಪು ಹಣವನ್ನು ಕಾನೂನುಬಾಹಿರ ಮಾರ್ಗಗಳಲ್ಲಿ ಸಕ್ರಮಗೊಳಿಸುತ್ತಾರೆ. ಇದು ಇನ್ನಷ್ಟು ಅಕ್ರಮಗಳಿಗೆ ಎಡೆಮಾಡಿಕೊಡುತ್ತಿದೆ. ದೇಶದೊಳಗಿನ ಕಪ್ಪು ಹಣವನ್ನು ವಿದೇಶಗಳಿಗೆ ಸಾಗಿಸಿ, ಅದನ್ನು ಸಂಕೀರ್ಣಮಯ ಹೂಡಿಕೆ ಯೋಜನೆಗಳ ಮೂಲಕ ಮರಳಿ ದೇಶಿ ಹಣಕಾಸು ಪೇಟೆಯಲ್ಲಿ ತೊಡಗಿಸಲಾಗುತ್ತಿದೆ. ವಿದೇಶಗಳಲ್ಲಿನ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಲಾಗುತ್ತಿದೆ.

ಇಂತಹ ಅಕ್ರಮ ಸಂಪತ್ತಿನ ಒಡೆಯರು ತಮ್ಮ ಅಘೋಷಿತ ಸಂಪತ್ತನ್ನು ಬಹಿರಂಗಪಡಿಸಲು ಒಂದು ಬಾರಿಯ ಕ್ಷಮಾದಾನ ಯೋಜನೆಗೆ ನಿರೀಕ್ಷಿತ ರೀತಿಯಲ್ಲಿ ಸ್ಪಂದಿಸದಿರುವುದು ಸರ್ಕಾರಕ್ಕೆ ಎಚ್ಚರಿಕೆಯ ಪಾಠವಾಗಬೇಕಾಗಿದೆ. ಘೋಷಿತ ಕಪ್ಪು ಹಣಕ್ಕೆ ಯಾವುದೇ ದಂಡನೆ ಇರುವುದಿಲ್ಲ ಎಂಬ ಸರ್ಕಾರದ ಭರವಸೆಯಲ್ಲಿ ನಂಬಿಕೆ ಇಲ್ಲದಿರುವುದೇ ಈ ಯೋಜನೆ ವಿಫಲಗೊಳ್ಳಲು ಮುಖ್ಯ ಕಾರಣವಾಗಿದೆ. ಈ ಕ್ಷಮಾದಾನ ಯೋಜನೆಯಲ್ಲಿನ ಲೋಪಗಳನ್ನು ಸರಿಪಡಿಸಿಕೊಳ್ಳಲೂ ಇದು ಸಕಾಲವಾಗಿದೆ.

ಕ್ಷಮಾದಾನ ಯೋಜನೆಯಲ್ಲಿ ಸ್ಪಷ್ಟತೆ ಇರದಿರುವುದು, ಗೋಪ್ಯತೆ ಕಾಪಾಡಿಕೊಳ್ಳುವುದರ ಕುರಿತ ಸಂದೇಹ ಮತ್ತು ಭವಿಷ್ಯದಲ್ಲಿ ಕಿರುಕುಳಕ್ಕೆ ಒಳಗಾಗುವ ಭೀತಿ ಕಾರಣಕ್ಕೆ ಅನೇಕರು ತಮ್ಮ ಬಳಿ ಇರುವ ಕಪ್ಪು ಹಣ ಘೋಷಿಸಲು ಹಿಂದೇಟು ಹಾಕಿರುವ ಸಾಧ್ಯತೆ ತಳ್ಳಿಹಾಕಲಿಕ್ಕಾಗದು. ಕಪ್ಪು ಹಣ ಘೋಷಣೆ ಮಾಡಿಕೊಂಡವರ ಬಗ್ಗೆ ಯಾವುದೇ ಬಗೆಯ ತಾರತಮ್ಯ ನೀತಿ ಅನುಸರಿಸದೆ, ಎಲ್ಲರನ್ನೂ ಸಮಾನವಾಗಿ ನೋಡಬೇಕಾಗಿದೆ.

ಕಾನೂನಿನ ಬೆಂಬಲದ ಜತೆ ಇನ್ನಷ್ಟು ಹೆಚ್ಚು ವಿಶ್ವಾಸಾರ್ಹವಾದ, ಏಕರೂಪದ ಮತ್ತು ಸಮಗ್ರ ಕ್ಷಮಾದಾನದ ಯೋಜನೆಯನ್ನು ಮತ್ತೊಮ್ಮೆ ಜಾರಿಗೆ ತರಬೇಕಾಗಿದೆ. ವಿದೇಶಗಳಲ್ಲಿ ಇರುವ ಲಕ್ಷಾಂತರ ಕೋಟಿ ಮೊತ್ತದ ಕಪ್ಪು ಹಣವನ್ನು ಸ್ವದೇಶಕ್ಕೆ ತರುವುದಾಗಿ ಲೋಕಸಭಾ ಚುನಾವಣೆ ಪ್ರಚಾರ ವೇಳೆ ಬಿಜೆಪಿ  ಭರವಸೆ ನೀಡಿತ್ತು. ಆದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಹೇಳಿದಂತೆ ನಡೆದುಕೊಳ್ಳಲು ಇದುವರೆಗೂ ಸಾಧ್ಯವಾಗಿಲ್ಲ.

ವಿದೇಶಗಳಲ್ಲಿನ ಕಪ್ಪು ಹಣ ಸ್ವದೇಶಕ್ಕೆ ತರುವುದು ಹೇಳಿದಷ್ಟು ಸುಲಭವಲ್ಲ ಎನ್ನುವುದು ಈಗ ಮತ್ತೊಮ್ಮೆ ಸಾಬೀತಾಗಿದೆ. ಸುಧಾರಣಾ ಕ್ರಮಗಳಾದ ಸರಕು ಮತ್ತು ಸೇವಾ ತೆರಿಗೆಯು (ಜಿಎಸ್‌ಟಿ) ಬಹುಹಂತದ ಲೆಕ್ಕಪತ್ರ ತಪಾಸಣೆಗೆ ಅವಕಾಶ ಮಾಡಿಕೊಡಲಿದ್ದು, ಆದಾಯ ತೆರಿಗೆಗೆ ಒಳಪಡದ ರೀತಿಯಲ್ಲಿ ಸಂಪತ್ತನ್ನು ಅಡಗಿಸಿ ಇಡುವುದನ್ನು ತಪ್ಪಿಸಲಿದೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ವ್ಯವಸ್ಥೆಯಲ್ಲಿ ತರಲಿರುವ ಸುಧಾರಣೆ ಮತ್ತು ಕಾನೂನು ಸುಧಾರಣಾ ಕ್ರಮಗಳು, ತೆರಿಗೆ ತಪ್ಪಿಸಲು ಕಾನೂನು ಹೋರಾಟ ನಡೆಸುವುದಕ್ಕೆ ತಡೆ ಹಾಕಲಿವೆ.

ಇದೇ ವೇಳೆಗೆ, ಕೇಂದ್ರ ಸರ್ಕಾರದ ಹೊಸ ಚಿಂತನೆಯೊಂದು ಕಪ್ಪು ಹಣದ ಚಲಾವಣೆಯನ್ನೇ ನಿಯಂತ್ರಿಸಲು ಗಮನಾರ್ಹವಾಗಿ ನೆರವಾಗುವ ನಿರೀಕ್ಷೆ ಇದೆ. ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳ ವಹಿವಾಟಿಗೆ ಆದಾಯ ತೆರಿಗೆ ವಿನಾಯ್ತಿ ನೀಡುವ ಕೇಂದ್ರದ ಆಲೋಚನೆ ಈ ನಿಟ್ಟಿನಲ್ಲಿ ನಿರೀಕ್ಷಿತ ಫಲ ನೀಡಬಹುದು. ಸರಕು ಮತ್ತು ಸೇವೆಗಳ ಖರೀದಿದಾರರು ಮತ್ತು ಮಾರಾಟಗಾರರಿಗೂ ಇಲ್ಲಿ ತೆರಿಗೆ ಲಾಭ ದೊರೆಯಲಿರುವುದರಿಂದ ಇದು ಹೆಚ್ಚು ಫಲ ನೀಡುವ ಸಾಧ್ಯತೆ ಇದೆ.

ನಗದು ಹಣದ ಬಳಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿದರೆ ಕಪ್ಪು ಹಣದ ಚಲಾವಣೆ ಸಹಜವಾಗಿಯೇ ನಿಯಂತ್ರಣಕ್ಕೆ ಬರಲಿದೆ. ಕಪ್ಪು ಹಣ ಹೊಂದಿರುವವರಲ್ಲಿ ಭಯ ಬಿತ್ತುವ ಬದಲಿಗೆ, ನಿರ್ದಿಷ್ಟ ಕುಳಗಳನ್ನು ಮಾತ್ರ ಗುರಿಯಾಗಿಟ್ಟುಕೊಳ್ಳದೆ ಸುಧಾರಿತ ಕ್ಷಮಾದಾನ ಯೋಜನೆ ಮತ್ತು ಎಲ್ಲರಿಗೂ ಕ್ಷಮಾದಾನ ಯೋಜನೆ ಜಾರಿಗೆ ತಂದರೆ ಮಾತ್ರ ಹೆಚ್ಚಿನ ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT