ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪುಹಣ: ಬಿಜೆಪಿ ಕ್ಷಮೆಗೆ ಒತ್ತಾಯ

ಸಂಸತ್‌ನಲ್ಲಿ ತೀವ್ರ ವಾಗ್ದಾಳಿ
Last Updated 26 ನವೆಂಬರ್ 2014, 20:03 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿದೇಶಗಳಲ್ಲಿನ ಕಪ್ಪುಹಣವನ್ನು ದೇಶಕ್ಕೆ ವಾಪಸ್‌ ತರುವ ಬಗ್ಗೆ ಚುನಾವಣಾ ಪ್ರಚಾರದ ವೇಳೆ ವೀರಾವೇಶದ ಮಾತು­ಗಳನ್ನು ಆಡಿದ್ದ ಬಿಜೆಪಿ ಅಧಿಕಾರಕ್ಕೆ ಬರು­ತ್ತಿದ್ದಂತೆಯೇ, ಈ ವಿಷಯದಲ್ಲಿ ದೇಶದ ಜನರ ದಿಕ್ಕು­ತಪ್ಪಿ­ಸುತ್ತಿದೆ ಎಂದು ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್‌ ಬುಧ­ವಾರ ಸಂಸತ್ತಿನಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತು.

ರಾಜಕೀಯ ಲಾಭಕ್ಕೋಸ್ಕರ ಈ ವಿಷಯ ಬಳಸಿಕೊ­ಳ್ಳುತ್ತಿರುವ ಬಿಜೆಪಿ ಜನರ ಕ್ಷಮೆ ಯಾಚಿಸಬೇಕು ಎಂದು ಎರಡೂ ಸದನಗಳಲ್ಲಿ ಅದು ಒತ್ತಾ­ಯಿಸಿತು. ಲೋಕಸಭೆಯಲ್ಲಿ ಪ್ರತಿಪಕ್ಷ ನಾಯ­ಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಈ ಕುರಿತ ಚರ್ಚೆಗೆ ಚಾಲನೆ ನೀಡಿ­ದರು.

ನರೇಂದ್ರ ಮೋದಿ ಅವರು ಚುನಾ­ವಣಾ ಪ್ರಚಾರದ ವೇಳೆ ಕಪ್ಪು­ಹಣದ ಬಗ್ಗೆ ಪ್ರಸ್ತಾಪಿಸಿ ಜನರ ಭಾವನೆ­ಗಳ ಜತೆ ಆಟವಾಡಿದ್ದರು. ವಿದೇಶಗ­ಳಲ್ಲಿರುವ ಕಪ್ಪುಹಣವನ್ನೆಲ್ಲಾ ವಾಪಸ್‌ ತರಿಸಿ­ಕೊಂಡ ಮೇಲೆ ಪ್ರತಿಯೊಬ್ಬ ಭಾರತೀ­ಯನಿಗೂ ₨ 15 ಲಕ್ಷ ಸಿಗುತ್ತದೆ ಎಂದಿ­ದ್ದರು. ಅಲ್ಲದೇ ಅಧಿಕಾರಕ್ಕೆ ಬಂದರೆ 100 ದಿನಗಳೊಳಗೆ ಗಡಿಯಾ­ಚೆಗಿ­ರುವ ಎಲ್ಲಾ ಕಪ್ಪುಹಣವನ್ನು ದೇಶಕ್ಕೆ ತರಿಸಿ­ಕೊಳ್ಳುವ ಮಾತುಗಳನ್ನು ಆಡಿದ್ದರು. ಆದರೆ, ಅಧಿಕಾರಕ್ಕೆ ಬಂದು 6 ತಿಂಗಳಾದರೂ ನಯಾಪೈಸೆ­ಯನ್ನೂ ತರಿಸಿಕೊಂಡಿಲ್ಲ ಎಂದು ಚುಚ್ಚಿದರು.

ಎನ್‌ಡಿಎ ಸರ್ಕಾರ ಶಂಕಿತ ಕಪ್ಪುಹಣ ಖಾತೆದಾರರ ಹೆಸರು­ಗಳನ್ನು ಬಹಿರಂಗಗೊಳಿಸಲು ಸಾಧ್ಯವಾಗದು ಎಂದು ಸುಪ್ರೀಂಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಿದೆ. ಅಂದರೆ, ಹಿಂದಿನ ಯುಪಿಎ ಸರ್ಕಾರ ಯಾವ ನಿಲುವು ಹೊಂದಿತ್ತೋ ಈಗಿನ ಸರ್ಕಾ­ರದ ನಿಲುವೂ ಅದೇ ಆಗಿದೆ ಎಂದರು.

‘ಈ ವಿಷಯದಲ್ಲಿ ನೀವು (ಬಿಜೆಪಿ) ಏಕೆ ಯುಪಿಎ ಸರ್ಕಾರದ ಮೇಲೆ ಗೂಬೆ ಕೂರಿಸುತ್ತೀರಿ. ಮಾಡಿದ ತಪ್ಪನ್ನು ಒಪ್ಪಿಕೊಂಡು ಜನರ ಕ್ಷಮೆಯಾಚಿಸುವ ಅವಕಾಶ ನಿಮಗೆ ಇಂದು ಒದಗಿಬಂದಿದೆ’ ಎಂದರು.

ಆದರೆ, ಬಿಜೆಪಿ ಸದಸ್ಯ ಅನುರಾಗ್‌ ಠಾಕೂರ್‌ ಅವರು ಸರ್ಕಾರದ ನಡೆ­ಯನ್ನು ಸಮರ್ಥಿಸಿಕೊಂಡರು. ‘ಕಾಂಗ್ರೆಸ್‌ ಸರ್ಕಾರವು ವಿದೇಶಗಳಲ್ಲಿ ಕಪ್ಪುಹಣ ಖಾತೆ ಹೊಂದಿರುವವರನ್ನು ಪಾರು ಮಾಡಲು ಪ್ರಯತ್ನಿಸಿತು. ಆದರೆ ಬಿಜೆಪಿ ನೇತೃತ್ವದ ಈಗಿನ ಸರ್ಕಾರವು ಮೊದಲ ಸಂಪುಟ ಸಭೆಯಲ್ಲೇ ಕಪ್ಪುಹಣ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿತು. ಕಾಂಗ್ರೆಸ್‌ ಅಧಿಕಾರದಲ್ಲಿದ್ದಷ್ಟೂ ಕಾಲವೂ ತನಿಖಾ ತಂಡವನ್ನೇ ರಚಿಸಲಿಲ್ಲ’ ಎಂದರು.

ನಮ್ಮ ಸರ್ಕಾರವು ವಿದೇಶಿ ಬ್ಯಾಂಕ್‌­ಗಳಲ್ಲಿ ಖಾತೆ ಹೊಂದಿರುವವರ ಹೆಸ­ರನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ. ಆಸ್ಟ್ರೇಲಿಯಾದಲ್ಲಿ ಈಚೆಗೆ ನಡೆದ ‘ಜಿ–20’ ಸಮಾವೇಶದಲ್ಲಿ ಕಪ್ಪುಹಣ ಪಿಡು­ಗಿನ ವಿರುದ್ಧ ಮೊತ್ತಮೊದಲಿಗೆ ಧ್ವನಿ ಎತ್ತಿದವರು ನರೇಂದ್ರ ಮೋದಿ ಅವರೇ ಎಂದರು.
ನಿಮಗೆ (ಕಾಂಗ್ರೆಸ್‌ಗೆ) ಅಧಿಕಾರದಲ್ಲಿ­ದ್ದಾಗಲೂ ಕಪ್ಪುಹಣ ವಾಪಸ್‌ ತರಿಸಿ­ಕೊಳ್ಳುವ ಕಾಳಜಿ ಇರಲಿಲ್ಲ. ಈಗ ವಿರೋಧ ಪಕ್ಷವಾಗಿಯೂ ನಿಮಗೆ ಈ ಬಗ್ಗೆ ಕಾಳಜಿ ಇಲ್ಲ ಎಂದು ಠಾಕೂರ್‌ ಕುಟುಕಿದರು.

ಇದೇ ವಿಷಯದಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷವನ್ನೂ ವ್ಯಂಗ್ಯವಾಡಿದ ಅವರು, ‘ಕಪ್ಪುಹಣ ಸಂಪಾದಿಸಿರು­ವವರು ಸದನದಲ್ಲಿ ಕಪ್ಪು ಛತ್ರಿ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದರು.

427 ಕಪ್ಪುಹಣ ಖಾತೆದಾರರ ಪತ್ತೆ: ಜೇಟ್ಲಿ
ಜಿನಿವಾದ ಎಚ್‌ಎಸ್‌ಬಿಸಿ ಬ್ಯಾಂಕ್‌­ನಲ್ಲಿ ಕಪ್ಪುಹಣ ಖಾತೆ ಹೊಂದಿರುವ 627 ಜನರ ಪೈಕಿ 427 ಖಾತೆದಾ­ರರನ್ನು ಪತ್ತೆಹಚ್ಚಲಾಗಿದೆ. ಇವರಲ್ಲಿ 250 ಜನ ತಾವು ಖಾತೆ ಹೊಂದಿ­ರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದರು.

ರಾಜ್ಯಸಭೆಯಲ್ಲಿ ಕಪ್ಪುಹಣ ಕುರಿತು ನಡೆದ ಚರ್ಚೆಯ ವೇಳೆಯಲ್ಲಿ, ಈ ಸಂಬಂಧ ಸರ್ಕಾರ ಕೈಗೊಂಡಿರುವ ಕ್ರಮ­ಗಳನ್ನು ಸಮರ್ಥಿಸಿಕೊಂಡ ಸಂದರ್ಭ­ದಲ್ಲಿ ಈ ವಿಷಯ ತಿಳಿಸಿದರು.

ಸರ್ಕಾರವು ಕಪ್ಪುಹಣ ಖಾತೆದಾರರ ಬೆನ್ನುಹತ್ತಲಿದೆ. ಎಲ್ಲಾ ಖಾತೆದಾರರು ಪತ್ತೆಯಾಗುವ ತನಕ ವಿರಮಿಸುವುದಿಲ್ಲ. ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಕಪ್ಪುಹಣ ವಾಪಸ್‌ ತರುವ ಭರವಸೆ­ಯನ್ನು ಈಡೇರಿಸುವಲ್ಲಿ ಸರ್ಕಾರ ವಿಫಲ­ವಾಗಿದೆ ಎಂಬ ಪ್ರತಿಪಕ್ಷಗಳ ಪ್ರಹಾರಕ್ಕೆ ಉತ್ತರಿಸುತ್ತಾ ಜೇಟ್ಲಿ ಹೀಗೆ ಹೇಳಿದರು.

‘ಕಪ್ಪುಹಣವನ್ನು 100 ದಿನಗಳೊಳಗೆ ವಾಪಸ್‌ ತರಿಸಿಕೊಂಡು ಪ್ರತಿಯೊಬ್ಬ ಭಾರತೀಯನ  ಖಾತೆಗೂ ₨ 15 ಲಕ್ಷ ಹಾಕಲಾಗುವುದು’ ಎಂದು ಮೋದಿ ಅವರು ನೀಡಿದ್ದ ಭರವಸೆ ಬಗ್ಗೆ ಜೇಟ್ಲಿ ಅವರು ಏನನ್ನೂ ಪ್ರಸ್ತಾಪಿಸಲಿಲ್ಲ.

ಹೊರನಡೆದ ಪಕ್ಷಗಳು: ಜೇಟ್ಲಿ ಅವರ ಉತ್ತರದಿಂದ ಸಮಾಧಾನಗೊಳ್ಳದ ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌, ಜೆಡಿಯು, ಸಮಾಜವಾದಿ ಪಕ್ಷ ಮತ್ತು ಸಿಪಿಎಂ ಸದಸ್ಯರು ಅವರು ಉತ್ತರ ಕೊನೆಗೊಳಿಸುವ ಮುನ್ನವೇ ಸದನದಿಂದ ಹೊರನಡೆದರು.

‘ಹಿಂದಿನ ಸರ್ಕಾರಗಳು 100 ದಿನ­ಗಳಲ್ಲಿ ಏನು ಮಾಡಿದ್ದವೋ ಅದಕ್ಕಿಂತ ಹೆಚ್ಚಿನದನ್ನು ನಾವು ಮಾಡಿದ್ದೇವೆ’ ಎಂದು ಜೇಟ್ಲಿ ಅವರು ಸಮರ್ಥಿಸಿ­ಕೊಂಡರು.

ಆದರೆ ವಿವಿಧ ರಾಷ್ಟ್ರಗಳೊಂದಿಗೆ ಏರ್ಪಟ್ಟಿರುವ ಒಪ್ಪಂದಗಳ ಗೋಪ್ಯತಾ ಕರಾರುಗಳ ಪ್ರಕಾರ ನ್ಯಾಯಾಲ­ಯದಲ್ಲಿ ವಿಚಾರಣೆ ಆರಂಭವಾಗದ ಹೊರತು ಕಪ್ಪುಹಣ ಖಾತೆದಾರರ ಹೆಸರು ಬಹಿರಂಗಗೊಳಿಸುವಂತಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT