ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಕಲೆ ನಿವಾರಣೆಗೆ ಹೊಸ ಕ್ರೀಂ!

ಕ್ಯಾಂಪಸ್‌ ಕಥೆ
Last Updated 20 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಇದು ನಾವು ಕಾಲೇಜು ದಿನಗಳಲ್ಲಿ ಇದ್ದಾಗ ಮಾಡಿದ ತುಂಟಾಟದ ಕಥನ. ಎಲ್ಲರಂತೆ ತಾನೂ ಮಾಡರ್ನ್ ಆಗಿ ಕಾಣಬೇಕು ಎಂಬ ಉದ್ದೇಶದಿಂದ ಸೌಂದರ್ಯವರ್ಧಕ ಜಾಹೀರಾತುಗಳನ್ನು ನೋಡಿ ತರಹೇವಾರಿ ಕ್ರೀಂ ಹಚ್ಚುತ್ತಿದ್ದ ನನ್ನ ಗೆಳತಿಯ ಹೆಸರು ಸುಶ್ಮಿತಾ. ನಾನೂ ನನ್ನ ಇನ್ನೊಬ್ಬಳು ಗೆಳತಿ ರಶ್ಮಿಯೂ ಸೇರಿ ಸ್ವತಃ ತಯಾರಿಸಿದ ಕ್ರೀಂ ಹಚ್ಚಿಸಿ, ಸುಶ್ಮಿತಾಳ ಮುಖದ ಕಲೆ ವಾಸಿ ಮಾಡಿಸಿದ ರೋಚಕ ಘಟನೆ ಇಲ್ಲಿದೆ.

ಅದೊಂದು ಮಧ್ಯಾಹ್ನ. ಊಟದ ಸಮಯ. ಕಾಲೇಜು ದಿನಾಚರಣೆಗೆ ಇನ್ನು ಎರಡು ವಾರ ಇದ್ದುದರಿಂದ ನಾವೆಲ್ಲ ಆ ದಿನ ಧರಿಸಬೇಕಾದ ಸೀರೆ ಬಗ್ಗೆ ಚರ್ಚಿಸುತ್ತಿದ್ದೆವು. ಹೀಗೆ ಗೆಳತಿಯರ ಗುಂಪಿನಲ್ಲಿ ಚರ್ಚೆ ನಡೆಯುತ್ತಿದ್ದಾಗ ಗೆಳತಿ ಸುಶ್ಮಿತಾ ಬಂದು ‘ಹೇ ರಶ್ಮಿ, ನನ್ನ ಮುಖದಲ್ಲಿ ಕಪ್ಪು ಕಲೆ ಇದೆ. ಯಾವ ಕ್ರೀಂ ಹಚ್ಚಿದ್ರೂ ಕಡಿಮೇನೆ ಆಗ್ತಿಲ್ಲ ಕಣೇ. ಯಾವುದಾದರೂ ಕ್ರೀಂ ಗೊತ್ತಾ?’ ಕೇಳಿದಳು.

ಅದಕ್ಕೆ ರಶ್ಮಿ, ‘‘ನನಗೊಂದು ಕ್ರೀಂ ಗೊತ್ತಿದೆ. ಅದರ ಹೆಸರು `ಮಿರಾಕಲ್ ಕ್ಯೂರ್. ಅದನ್ನು ಹಚ್ಚಿ ನೋಡು ’’ಎಂದು ಯಾವುದೋ ಹೊಸ ಹೆಸರನ್ನು ಇಂಗ್ಲಿಷ್‌ನಲ್ಲಿ ಬರೆದುಕೊಟ್ಟಳು. ಅದನ್ನು ನಂಬಿದ ಸುಶ್ಮಿತಾ ಪಕ್ಕದ ನಾಲ್ಕೈದು ಮೆಡಿಕಲ್ ಸ್ಟೋರ್‌ಗಳಲ್ಲಿ ಆ ಕ್ರೀಂ ಕೇಳಿದಾಗ ಎಲ್ಲರೂ ‘ಇಲ್ಲ’ ಎಂದು ಉತ್ತರಿಸಿದರು.

ಅವಳು ಮತ್ತೆ ರಶ್ಮಿಯ ಬಳಿ ಬಂದು ‘ಎಷ್ಟು ಹಣವಾದರೂ ಪರವಾಗಿಲ್ಲ, ಕ್ರೀಂ ತರಿಸಿಕೊಡೇ’ ಎಂದು ಬೇಡಿಕೊಂಡಳು. ರಶ್ಮಿ  ‘200 ರೂಪಾಯಿ ಕೊಡೇ, ತಂದುಕೊಡ್ತಿನಿ’ ಅಂತ ಹೇಳಿ ದುಡ್ಡು ಪಡೆದುಕೊಂಡಳು. ಆ ದುಡ್ಡಿನಿಂದ ನಾನೂ ನನ್ನ ಗೆಳತಿಯೂ ಐಸ್‌ಕ್ರಿಂ ತಿಂದಿದ್ದೂ ಆಯಿತು.

ಎರಡು-ಮೂರು ದಿನಗಳಾದರೂ ಸುಶ್ಮಿತಾಳ ಎದುರು ಕ್ರೀಂ ಸುದ್ದಿಯೇ ಎತ್ತದಿದ್ದಾಗ ಅವಳು ‘ಹೇ ದುಡ್ಡು ತಗೊಂಡು ಮೋಸ ಮಾಡಿದ್ಯೇನೇ?’ ಎಂದು ಅನುಮಾನ ವ್ಯಕ್ತಪಡಿಸಲು ಶುರು ಮಾಡಿದಳು. ಆದರೆ ರಶ್ಮಿ ಮಾತ್ರ ‘ಇರೇ, ತಂದುಕೊಡ್ತೀನಿ. ಆ ಕ್ರೀಂ ಇಲ್ಲೇಲ್ಲೂ ಸಿಗಲ್ಲ ಕಣೇ. ನನ್ನ ಅಣ್ಣ ಊರಿನಿಂದ ತಗೊಂಡು ಬರ್ತಾನೆ’ ಎಂದು ರೈಲು ಹತ್ತಿಸುತ್ತಲೇ ಇದ್ದಳು.

ನಾವು ಹಾಸ್ಟೆಲ್‌ನಲ್ಲಿ ಇದ್ದುದರಿಂದ ರಾತ್ರಿ ಊಟವಾದ ನಂತರ ಅಕ್ಕಪಕ್ಕದ ರೂಂಗಳಲ್ಲಿನ ಗೆಳತಿಯರ ಜೊತೆ ಹರಟೆಗೆ ಕೂಡುವುದು ದಿನಚರಿಯ ಭಾಗ. ಆದರೆ ಅದ್ಯಾಕೋ ಆ ದಿನ ರಾತ್ರಿ ರಶ್ಮಿ ನಮ್ಮ ಹರಟೆಗೆ ಗೈರು ಹಾಜರಾಗಿದ್ದಳು. ಯಾಕಿರಬಹುದು ಎಂಬ ಕುತೂಹಲದಲ್ಲಿ ಅವಳ ರೂಂಗೆ ಹೋದರೆ ಯಾವುದೋ ಪುಟ್ಟ ಬಾಟಲ್ ತೆಗೆದುಕೊಂಡು ಲೇಬಲ್ ಅಂಟಿಸುವ ತಯಾರಿಯಲ್ಲಿ ನಿರತಳಾಗಿದ್ದಳು.

ಸ್ಟಿಕ್ಕರ್ ತಯಾರಿ ಮಾಡಲು ಲೋಗೊ, ಬಾರ್‌ಕೋಡ್, ಔಷಧಿಯನ್ನು ಬಳಸಬೇಕಾದ ವಿಧಾನ ಎಲ್ಲವನ್ನೂ ಅಂತರ್ಜಾಲದಿಂದ ಡೌನ್‌ಲೋಡ್‌ ಮಾಡಿಟ್ಟಿದ್ದಳು. ‘ಸರ್ ಯಾವುದಾದ್ರೂ ಅಸೈನ್‌ಮೆಂಟ್ ಕೊಟ್ಟದ್ದಾರೇನೇ?’ ಎಂದು ಕೇಳಿದರೆ ‘ಇಲ್ಲ ಕಣೆ.. ಯಾರಿಗೂ ಹೇಳ್ಬೇಡ’ ಎಂದು ಅವಳ ಪ್ಲಾನ್ ಹೇಳಿದಳು.

ಸರಿ ಅಂತ ಅದಕ್ಕೊಪ್ಪಿ ನಾನೂ ಅವಳ ಜೊತೆ ಕೈಜೋಡಿಸಿದೆ. ಬಾಟಲ್‌ ಒಳಗೆ ಗ್ರೀಸ್ ತುಂಬಿಸೋಣ ಏನೂ ಸೈಡ್‍ಎಫೆಕ್ಟ್ ಆಗಲ್ಲ’ ಎಂದು ಯೋಜಿಸಿ ಕಾರ್ಯರೂಪಕ್ಕೂ ತಂದೆವು. ಮರುದಿನ ಬಾಟಲಿಯನ್ನು ಸುಶ್ಮಿತಾ ಕೈಗೊಪ್ಪಿಸಿ ‘ರಾತ್ರಿ ಮಲಗುವ ಮುನ್ನ ಪ್ರತಿದಿನ ಹಚ್ಚಿಕೋ’ ಎಂಬ ಸಲಹೆಯನ್ನೂ ಕೊಟ್ಟೆವು.

ಒಂದು ತಿಂಗಳೂ ಕಳೆದು ಇಂಟರ್ನಲ್ ಎಕ್ಸಾಂ ತಯಾರಿ ನಡೆಸುತ್ತಿದ್ದಾಗ ಸುಶ್ಮಿತಾ ನಮ್ಮ ಹತ್ತಿರ ಬಂದು ಖುಷಿಯಿಂದ ‘`ಆ ಕ್ರೀಂ ಖಾಲಿ ಆಗಿದೆ. ನನ್ನ ಮುಖದ ಕಲೆನೂ ವಾಸಿ ಆಗಿದೆ ಕಣೆ. ಕ್ರೀಂ ತುಂಬಾ ಚೆನ್ನಾಗಿದೆ. ಮತ್ತೊಂದು ಬಾಟಲಿ ತಂದು ಕೊಡೆ’ ಎಂದಾಗ ನಮಗೇ ಆಶ್ಚರ್ಯ. ನಮಗೆ ಅಲ್ಲಿಯವರೆಗೆ ತನಕ ಅವಳು ಪ್ರತಿದಿನ ಮುಖಕ್ಕೆ ಕ್ರೀಂ ಹಚ್ಚುತ್ತಿದ್ದಾಳೆ ಎಂಬುದೇ ತಿಳಿದಿರಲಿಲ್ಲ!ನಗುವೋ ನಗು.

ಆದರೆ ಬಿಟ್ಟಿಯಾಗಿ ಸಿಗುವ ಹಣವನ್ನು ಬಿಟ್ಟುಕೊಡಲು ನಮಗೂ ಮನಸ್ಸಾಗಲಿಲ್ಲ. ಅವಳ ಬೇಡಿಕೆಗೆ ಸಮ್ಮತಿಸಿ ಈ ಸಲ ₹ 150 ಪಡೆದುಕೊಂಡು ಸಿಲೆಬಸ್ ಝೆರಾಕ್ಸ್ ಮಾಡಿಸಿಕೊಂಡೆವು. ಈಗ ಎಕ್ಸಾಂ ಗಡಿಬಿಡಿಯಲ್ಲಿ ಕ್ರೀಂ ತಯಾರಿಸುವುದೇ ಒಂದು ಚಿಂತೆ ನಮಗೆ. ಹಾಸ್ಟೆಲ್‌ನಲ್ಲಿ ಎಲ್ಲರೂ ಓದಿಕೊಳ್ತಾ ಇದ್ದಾರೆ ಅಂದುಕೊಂಡು ನಾನೂ ನನ್ನ ಗೆಳತಿಯೂ ಕ್ರೀಂ ಲೇಬಲ್ ತಯಾರಿಸಿ ಕಲರ್‌ ಪ್ರಿಂಟ್‌ ತೆಗೆದು ಬಾಟಲ್‌ಗೆ ಅಂಟಿಸಿದೆವು.

ಈ ಸಲ ಬಾಟಲ್ ಒಳಗಡೆ ಏನು ತುಂಬಿಸೋದು? ಎಂದು ಚಿಂತಿಸುತ್ತಿದ್ದೆವು. ಮೈದಾ ಮತ್ತು ಬೇರೇನಾದರೂ ಮಿಕ್ಸ್ ಮಾಡಿ ತುಂಬಿಸೋಣ ಎಂದು ತಯಾರಾಗಿದ್ದೆವು. ನಮ್ಮ ಹಾಸ್ಟೆಲ್‌ನಲ್ಲಿಯೇ ಇರುವ ಸುಶ್ಮಿತಾಳ ಆತ್ಮೀಯ ಗೆಳತಿ ನೇತ್ರಾ ನಮ್ಮ ಮಾತುಕತೆಯನ್ನೆಲ್ಲ ಕೇಳಿಸಿಕೊಂಡುಬಿಟ್ಟಿದ್ದಳು. ಮರುದಿನ ಸುಶ್ಮಿತಾಳಲ್ಲಿ ನಮ್ಮ ‘ಕ್ರೀಂ ಮಿರಾಕಲ್ ಕ್ಯೂರ್’ನ ಫಾರ್ಮುಲಾವನ್ನು ವಿವರಿಸಿದ್ದಳು. ಆ ದಿನದಿಂದ ಸುಶ್ಮಿತಾ ಒಂದುವಾರ ಕ್ಲಾಸ್‌ಗೂ ಬರಲಿಲ್ಲ.

ಎಲ್ಲಿ ಅವಳ ಪೇರೆಂಟ್ಸ್ ಬಂದು ನಮ್ಮ ಮೇಲೆ ಪ್ರಿನ್ಸಿಪಾಲರ ಬಳಿ ಕಂಪ್ಲೆಂಟ್ ಕೊಡ್ತಾರೋ ಅನ್ನೋ ಭಯದಿಂದ ನಾವೂ ಕಾಲೇಜ್‌ಗೆ ಹೋಗಲು ಹೆದರುವ ಹಾಗೆ ಮಾಡಿದ್ದಳು. ಅಲ್ಲಿಯ ತನಕ ಅಸೈನ್‌ಮೆಂಟ್ ಮಾಡದಿದ್ದರೂ ನಾವು ಅಷ್ಟು ಭಯಪಟ್ಟುಕೊಂಡಿರಲಿಲ್ಲ. ಆಮೇಲೆ ತರಗತಿಯವರಿಗೆಲ್ಲ ಈ ವಿಷಯ ತಿಳಿದು ನಮ್ಮಿಬ್ಬರಿಗೆ ‘`ಕ್ರೀಂ’ ಎಂದು ಹೆಸರಿಟ್ಟಿದ್ದೂ ಆಯ್ತು.

ಕಾಲೇಜು ಬಿಡೋ ತನಕ ಅದೇ ಹೆಸರಿನಿಂದ ನಾವು ಕರೆಸಿಕೊಂಡಿದ್ದೇವೆ. ಆದರೆ ಆ ಗುಟ್ಟು ತಿಳಿದ ದಿನ ಸುಶ್ಮಿತಾ ಅಳುತ್ತಿದ್ದದ್ದನ್ನು ನೆನೆಸಿಕೊಂಡರೆ ನಾವು ತಪ್ಪು ಮಾಡಿದೆವೆನೋ ಎಂದು ಅನಿಸಿದ್ದು ಮಾತ್ರ ಸುಳ್ಳಲ್ಲ. ಈಗಲೂ ಯಾರಾದರೂ ಮುಖದಲ್ಲಿ ಕಪ್ಪು ಕಲೆ ಎಂದು ಹೇಳಿದಾಗ ಈ ಘಟನೆ ನೆನಪಾಗುತ್ತದೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT