ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ ‘ಧ್ಯಾನ’ದಲ್ಲಿ ಮಣ್ಣಿನ ಮಕ್ಕಳು...

Last Updated 14 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮೇಷ್ಟ್ರು ಮೈದಾನದಲ್ಲಿ ನಿಂತು ಸೀಟಿ ಊದಿದರೆ ಸಾಕು, ಓಡಿ ಬಂದು ಶ್ರದ್ಧೆಯಿಂದ ಅಂಕಣ ಸಿದ್ಧಪಡಿಸಿ ಕೊಂಡು, ತಾಲೀಮು ನಡೆಸಿ ಆಟಕ್ಕೆ ಅಣಿಯಾಗುತ್ತಾರೆ ಈ ಮಣ್ಣಿನ ಮಕ್ಕಳು. ಮೋಜು, ಮನರಂಜನೆ, ವ್ಯಾಯಾಮ, ಶ್ರದ್ಧೆ, ನೋವು, ಗೆಲುವು ಎಲ್ಲವನ್ನೂ ಆಟದಲ್ಲಿ ಕಂಡುಕೊಂಡಿರುವ ಇವರು ಕಬಡ್ಡಿ ಧ್ಯಾನದಲ್ಲಿ ಮುಳುಗಿದ್ದಾರೆ.

ತುಮಕೂರಿನಲ್ಲಿರುವ ಜೀತಲಾಲ್ ಚವ್ಹಾಣ್, ಬಸವರಾಜ್ ಪೂಜಾರ್, ಅಜಯ್ ಉಪ್ಪಾರ, ದೇವೇಂದ್ರಪ್ಪ ಗೊಲ್ಲರ್ ಎಲ್ಲರೂ ಹೈದರಾಬಾದ್ ಕರ್ನಾಟಕ ಭಾಗದ ಕೃಷಿ ಕೂಲಿ ಕಾರ್ಮಿಕರ ಮಕ್ಕಳು. ಈಗಾಗಲೇ ರಾಜ್ಯ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಪಾಲ್ಗೊಂಡು ತುಮಕೂರು ಜಿಲ್ಲೆಗೆ ಹೆಮ್ಮೆ ಮೂಡಿಸಿದ್ದಾರೆ. ಇವರಂತೆ ಆಗಲು ಪುಟಾಣಿ ಹುಡುಗರು ನಿತ್ಯ ಕಬಡ್ಡಿಯನ್ನು ಧ್ಯಾನಿಸುತ್ತಿದ್ದಾರೆ. ಇವರನ್ನೆಲ್ಲ ಸಿದ್ಧಗೊಳಿಸಲು ಸ್ಥಳೀಯ ಕಬಡ್ಡಿ ತರಬೇತುದಾರರು ಅಣಿಯಾಗಿದ್ದಾರೆ. ಇದಕ್ಕೆಲ್ಲ ಕಾರಣ ಈಚೆಗೆ ದೇಶಾದ್ಯಂತ ಯಶಸ್ಸು ಕಂಡ ವೃತ್ತಿಪರ ಆಟಗಾರರ ಕಬಡ್ಡಿ ಲೀಗ್.

ಸಿದ್ದಗಂಗಾ ಮಠದಲ್ಲಿ ಒಂದು ತಿಂಗಳಿನಿಂದ 150 ವಿದ್ಯಾರ್ಥಿಗಳಿಗೆ ಕಬಡ್ಡಿ ತರಬೇತಿ ಶಿಬಿರ ನಡೆಯುತ್ತಿದೆ. ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ಶಾಲೆ ವಿಭಾಗದ ವಿದ್ಯಾರ್ಥಿಗಳು ನುರಿತ ಕಬಡ್ಡಿ ತರಬೇತುದಾರರಿಂದ ನೂತನ ಕೌಶಲಗಳನ್ನು ಕಲಿಯುತ್ತಿದ್ದಾರೆ. ಇವರಿಗಾಗಿ ಮಠದ ವತಿಯಿಂದ ವಿಶೇಷ ಆಹಾರ ಕೂಡ ನೀಡಲಾಗುತ್ತಿದೆ.

ಹತ್ತು ಮಂದಿ ತರಬೇತುದಾರರು ಆಟದ ಕುರಿತು ಕೌಶಲ ಹೇಳಿ ಕೊಡುತ್ತಿದ್ದಾರೆ. ಮೊದಲು ಕೇವಲ ದೈಹಿಕ ಸಾಮರ್ಥ್ಯದ ಆಟ ಎಂದು ತಿಳಿದುಕೊಂಡಿದ್ದ ಮಕ್ಕಳು, ಇತ್ತೀಚೆಗೆ ಕಬಡ್ಡಿಗಾಗಿ ಜಿಮ್ನಾಸ್ಟಿಕ್, ಯೋಗ ಕೂಡಾ ಕಲಿಯುತ್ತಾ ಪಾರಂಗತರಾಗಲು ಶ್ರಮಿಸುತ್ತಿದ್ದಾರೆ.
ವಿಜಾಪುರದ ಕಮರವಾಡಿಯ ಬಸವರಾಜು, ಬೀದರ್‌ ಜಿಲ್ಲೆಯ ಮಸ್ಕಲ್‌ ಗ್ರಾಮದ ಅಜಯ್‌, ಗಂಗಾವತಿಯ ಗೋದಾಳ ಕ್ಯಾಂಪ್‌ನ ದೇವೇಂದ್ರಪ್ಪ ಗೊಲ್ಲರ್‌, ಯಾದಗಿರಿಯ ಯರಗೋಳ ಗ್ರಾಮದ ಲಕ್ಷ್ಮೀಕಾಂತ್‌, ರಾಯಚೂರಿನ ಲಿಂಗಸೂರು ತಾಂಡಾದ ಸಿದ್ದಪ್ಪ ಅವರೆಲ್ಲರಿಗೂ ಈಗ ‘ವೃತ್ತಿಪರ ಕಬಡ್ಡಿ ಲೀಗ್‌’ ಸ್ಫೂರ್ತಿಯಾಗಿದೆ. ಮಠದಲ್ಲಿ ಲೀಗ್‌ ಪಂದ್ಯಾವಳಿ ಕಬಡ್ಡಿ ವೀಕ್ಷಣೆಗೂ ಅವಕಾಶ ಕೂಡಾ ನೀಡಲಾಗಿತ್ತು. 

ಭಾರತೀಯ ಕಬಡ್ಡಿ ತಂಡದ ನಾಯಕ ರಾಕೇಶ್‌ ಕುಮಾರ್‌, ದೀಪಕ್‌ ನಿವಾಸ್‌, ಅನೂಪ್‌ ಕುಮಾರ್, ಥಲ್‌ವಿರ್‌ ಸಿಂಗ್‌,  ಮಣಿಂದರ್‌ ಸಿಂಗ್,  ಸುಖವೀರ್‌ ಸಿಂಗ್‌, ಸುನಿಲ್‌ ಹನುಮಂತಪ್ಪ, ಇರಾನ್‌ ಆಟಗಾರ ಪರ್ಹಾದ್‌ ಕಮಾಲ್‌ ಘರೀಬಿ, ಮನ್‌ಜಿತ್‌ ಚಿಲಾರಾ, ಮೋಹಿತಾ ಚಿಲಾರಾ ಅಂಥ ಆಟಗಾರರ ಕೌಶಲಗಳನ್ನು ಟೆಲಿವಿಷನ್‌ನಲ್ಲಿ ಸೂಕ್ಷ್ಮವಾಗಿ ಗಮನಿಸುತ್ತಾ ಕಲಿಯುತ್ತಿದ್ದಾರೆ. ಯೋಗದಂತೆಯೇ ಜಿಮ್ನಾಸ್ಟಿಕ್‌ ಕೂಡಾ ಕಬಡ್ಡಿ ತರಬೇತಿ ಶಿಬಿರದಲ್ಲಿ ಹೇಳಿಕೊಡಲಾಗುತ್ತದೆ. 

ಬಳ್ಳಿಯಂತೆ ಬಳಕುವ ದೇಹ ಕೂಡ ಕಬಡ್ಡಿ ಆಟಕ್ಕೆ ಸಹಕಾರಿಯಾಗುತ್ತದೆ. ಅದಕ್ಕಾಗಿಯೇ ಆಸಕ್ತ ಕಬಡ್ಡಿ ಆಟಗಾರರಿಗೆ ಜಿಮ್ನಾಸ್ಟಿಕ್‌ ಕೂಡಾ ಕಲಿಸಲಾಗುತ್ತಿದೆ. ‘ಕಬಡ್ಡಿ ಮೈ, ಕೈಯೊಡ್ಡುವ ಆಟವಾಗಿರುವುದರಿಂದ ದೇಹ ನೋವಿಗೆ ಒಳಗಾಗುವುದು ಸಹಜ. ಈ ಸಂದರ್ಭದಲ್ಲಿ ಎದುರಾಳಿ ಗಳ ಮೇಲೆ ಕೋಪ, ಆಕ್ರೋಶ ಹತೋಟಿಯಲ್ಲಿಡುವುದೇ ನಿಜವಾದ ಆಟಗಾರನ ಲಕ್ಷಣ. ಇದಕ್ಕಾಗಿಯೇ ತರಬೇತಿ ಶಿಬಿರದಲ್ಲಿ ಯೋಗ ಹೇಳಿಕೊಡಲಾಗುತ್ತಿದೆ. ಪ್ರಾಣಾಯಾಮ ಹಾಗೂ ಯೋಗಾಸನದಿಂದ ವ್ಯಕ್ತಿ ಅರಿಷಡ್ವರ್ಗಗಳನ್ನು ಗೆಲ್ಲಬಹುದು ಎನ್ನುವುದು ಕ್ರೀಡಾ ತರಬೇತುದಾರ ಪ್ರದೀಪ್ ಅನಿಸಿಕೆ.

‘ಒರಟು ಆಟವಾಗಿರುವ ಕಬಡ್ಡಿ ಕಲಿಯಲು ನಗರದ, ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಅಷ್ಟಾಗಿ ಮುಂದೆ ಬರುವುದಿಲ್ಲ. ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೆಲ್ಲರೂ ಗ್ರಾಮೀಣ ಭಾಗದವರು, ನೋವಾದರೂ ಸಹಿಸಿಕೊಂಡು ಮರುದಿನ ತರಬೇತಿಗೆ ಬರುತ್ತಾರೆ’ ಎಂದು ಸಂತೋಷದಿಂದ ಹೇಳಿದರು ತರಬೇತುದಾರ ಮಹ್ಮದ್ ಇಸ್ಮಾಯಿಲ್.  ಇವರ ಜತೆಯಲ್ಲಿ ತರಬೇತುದಾರರಾದ ಚನ್ನೇಗೌಡ, ಎಂ.ಗಣೇಶ್, ಪರಮೇಶ್, ಶಂಕರ್, ಸುನೀಲ್‌ಕುಮಾರ್, ಮಹಾದೇವಯ್ಯ, ಕೃಷ್ಣಮೂರ್ತಿ ಭಟ್, ರವಿ, ಬೆಳ್ಳಾವಯ್ಯ, ಸಿದ್ದಪ್ಪ, ಮುನಿರಾಜು ಕೈಜೋಡಿಸಿದ್ದಾರೆ. 

ಅಂದು ಸಮಯ ಕಳೆಯಲು ಆಟ
ಊರಿನಲ್ಲಿ ಬಿಡುವಿದ್ದಾಗ ಕಬಡ್ಡಿ ಆಟವಾಡುತ್ತಿದ್ದೆವು. ತುಮಕೂರಿಗೆ ಬಂದ ಮೇಲೆ ಆಟವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಜಿಲ್ಲೆಯ ಕ್ರೀಡಾಸಾಧನೆಯಲ್ಲಿ ನಾನು ಭಾಗಿ ಎನ್ನುವುದೇ ಹೆಮ್ಮೆಯ ವಿಚಾರ. ಅಂದು ಸಮಯ ಕಳೆಯಲು ಆಡಿದ ಆಟ ಈಗ ಕೆಲವರು ನನ್ನನ್ನೂ ಗುರುತಿಸಿ ಹುರಿದುಂಬಿಸುವಂತೆ ಮಾಡಿದೆ. ಈ ಬಗ್ಗೆ ತಂದೆ, ತಾಯಿಗೆ ಹೇಳಿದಾಗ ಹೆಮ್ಮೆ ಪಟ್ಟರು.
–ಜೀತಲಾಲ್‌, ೧೦ನೇ ತರಗತಿ ವಿದ್ಯಾರ್ಥಿ

ಪಠಣದಿಂದ ಉಸಿರಾಟ
ಕಬಡ್ಡಿ.. ಕಬಡ್ಡಿ... ಎಂಬ ಪಠಣದಿಂದ ಆಟಗಾರರ ಉಸಿರಾಟವು ಸರಾಗವಾಗುತ್ತದೆ. ಪ್ರಾಣಾಯಾಮದಿಂದಾಗುವ ಅನುಕೂಲಗಳು ಈ ಆಟದಲ್ಲೂ ಇವೆ. ಕಬಡ್ಡಿ, ಕಬಡ್ಡಿ ಎನ್ನುವಾಗ ಹೊರಡುವ ಶಬ್ಧ ಹಾಗೂ ಉಸಿರಾಟದ ಮೇಲಿನ ನಿಯಂತ್ರಣವು ನಮ್ಮ ಬುದ್ಧಿ, ಭಾವ ಹಾಗೂ ಆತ್ಮ ಎಲ್ಲವೂ ಶುದ್ಧಗೊಳಿಸುತ್ತದೆ. ಈ ಹಿನ್ನೆಲೆಯಲ್ಲಿ ಕಬಡ್ಡಿ ಹಾಗೂ ಯೋಗಕ್ಕೂ ನಿಕಟ ಸಂಬಂಧವಿದೆ.
–ಎಂ.ಜೆ.ಸುಂದರ್ ರಾಮ್, ತರಬೇತುದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT