ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬೀರನಿಗೆ ಹಾಡುಗಳ ಮುನ್ನುಡಿ

Last Updated 5 ಮೇ 2016, 19:30 IST
ಅಕ್ಷರ ಗಾತ್ರ

ಭಾರತದ ಮಹಾನ್‌ ಮಾನವತಾವಾದಿಗಳಲ್ಲಿ ಒಬ್ಬರಾದ ಸಂತ ಕಬೀರನ ಕುರಿತ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ‘ಕಬಡ್ಡಿ’ ಚಿತ್ರದ ಮೂಲಕ ಚಿತ್ರರಸಿಕರ ಮನಗೆದ್ದಿದ್ದ ನಿರ್ದೇಶಕ ಇಂದ್ರ ಬಾಬು, ಕಬೀರನ ಬದುಕನ್ನು ತೋರಿಸಲು ಮುಂದಾಗಿದ್ದಾರೆ.

ಇನ್ನೇನು, ಕೆಲವೇ ದಿನಗಳಲ್ಲಿ ‘ಸಂತೆಯಲ್ಲಿ ನಿಂತ ಕಬೀರ’ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಹಾಡುಗಳ ಸಿ.ಡಿ. ಅದ್ದೂರಿಯಾಗಿ ಬಿಡುಗಡೆಯಾಗಿದೆ. ‘ಶಿವರಾಜಕುಮಾರ್ ಕಬೀರನಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆ ಹೇಳುವುದಕ್ಕಿಂತ ಶಿವಣ್ಣ ಅಂದ್ರೆ ಕಬೀರ; ಕಬೀರ ಅಂದ್ರೆ ಶಿವಣ್ಣ ಎಂಬಂತಾಗಿದೆ’ ಎಂದರು ಇಂದ್ರ ಬಾಬು.

ಕಬೀರನ ಜೀವನವನ್ನು ಚಿತ್ರರೂಪಕ್ಕೆ ತರಲು ನಿರ್ಧರಿಸಿದಾಗ, ಅವರನ್ನು ಹುರಿದುಂಬಿಸಿದ್ದು ನಿರ್ಮಾಪಕ ಕುಮಾರಸ್ವಾಮಿ. ತುಸು ಅದ್ದೂರಿಯಾಗಿ ಸಿನಿಮಾ ಮಾಡಬೇಕು ಎಂಬ ಬಾಬು ಅವರ ಆಸೆಗೆ ಸಾಥ್ ನೀಡಿರುವ ಕುಮಾರಸ್ವಾಮಿ, ಸಿನಿಮಾಕ್ಕೆ ಬಜೆಟ್ ಮಿತಿ ಹಾಕಿಲ್ಲ. ‘ಶಿವಣ್ಣನ ವೇಷಭೂಷಣ ಹಾಗೂ ಅಭಿನಯ ನೋಡಿದವರಿಗೆ ಕಬೀರನ ದಿನಗಳನ್ನು ಕಲ್ಪಿಸಿಕೊಳ್ಳಲು ಸುಲಭವಾಗುತ್ತದೆ’ ಎಂದು ಬಾಬು ಬಣ್ಣಿಸಿದರು.

‘ವಿಭಿನ್ನವಾದ ಸಿನಿಮಾ ಮಾಡುವುದು ಈಗಿನ ದಿನಗಳಲ್ಲಿ ಕಷ್ಟ. ಅದರಲ್ಲೂ ಇಸ್ಮಾಯಿಲ್ ದರ್ಬಾರ್ ಅವರಿಂದ ಸಂಗೀತ ಸಂಯೋಜನೆ ಮಾಡಿಸುವುದೆಂದರೆ ಅದಕ್ಕಿಂತ ಖುಷಿ ಇನ್ನೊಂದಿಲ್ಲ. ಕಬೀರನಾಗಿ ನಾನು ಚೆನ್ನಾಗಿ ಕಾಣುತ್ತೇನೆ ಅಂತ ಸಾಕಷ್ಟು ಜನರು ಹೇಳಿದ್ದಾರೆ.

ಮೇಕಪ್ ಮಾಡಿದವರ ಶ್ರಮ ಅದರ ಹಿಂದಿದೆ’ ಎಂದು ಶಿವರಾಜಕುಮಾರ್ ಹೇಳಿದರು. ಶಿವಣ್ಣ ಅವರೊಂದಿಗೆ ಒಂದು ಸಿನಿಮಾ ಮಾಡುವ ಆಸೆ ಈಡೇರಿದೆ ಎಂದು ಸಂತಸಪಟ್ಟ ನಿರ್ಮಾಪಕ ಕುಮಾರಸ್ವಾಮಿ ಪತ್ತಿಕೊಂಡ, ‘ಅಂದು ರಾಜಕುಮಾರ್ ಮಾಡಿದ ಪಾತ್ರವನ್ನು ಈಗ ಅವರ ಮಗ ಮಾಡುತ್ತಿದ್ದಾರೆ. ಈ ಚಿತ್ರದ ನಿರ್ಮಾಪಕನಾದ ಹೆಮ್ಮೆ ನನ್ನದು’ ಎಂದರು.

ಭೀಷ್ಮ ಸಹಾನಿ ಅವರ ‘ಕಬೀರ್ ಖಡಾ ಬಾಝಾರ್‌ ಮೇ’ ನಾಟಕವನ್ನು ಹಿರಿಯ ಪತ್ರಕರ್ತ ಗೋಪಾಲ ವಾಜಪೇಯಿ ‘ಸಂತ್ಯಾಗ ನಿಂತಾನ ಕಬೀರ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದರು. ಅದೇ ಈಗ ಸಿನಿಮಾ ಆಗುತ್ತಿದ್ದು, ಇದರ ಹಾಡುಗಳು ಹಾಗೂ ಸಂಭಾಷಣೆ ವಾಜಪೇಯಿ ಅವರದೇ. ‘ಸರಳತೆಯನ್ನು ಪ್ರತಿಪಾದಿಸಿದ್ದ ಕಬೀರ. ನೇರ ಹಾಗೂ ನಿಷ್ಠುರ ನುಡಿಯಿಂದ ಪ್ರಸಿದ್ಧ. ಆತನ ದೋಹೆಗಳನ್ನು ಇಸ್ಮಾಯಿಲ್ ದರ್ಬಾರ್ ಹಾಕಿಕೊಟ್ಟ ಟ್ಯೂನ್‌ಗಳಿಗೆ ತಕ್ಕಂತೆ ಅನುವಾದಿಸಿದ್ದೇನೆ’ ಎಂದು ವಾಜಪೇಯಿ ಹೇಳಿದರು.

ನಟರಾದ ಮುರಳಿ, ಯಶ್, ನಿರ್ದೇಶಕ ಸೂರಿ, ನಿರ್ಮಾಪಕ ವಿಜಯಕುಮಾರ್, ಉಮೇಶ ಬಣಕಾರ್ ಹಾಡುಗಳನ್ನು ಬಿಡುಗಡೆ ಮಾಡಿದರು. ನಾಯಕಿ ಸನುಷಾ, ಸಂಜನಾ ಹಾಗೂ ವೈಶಾಲಿ ದೀಪಕ್ ಚಿತ್ರೀಕರಣದ ಅನುಭವ ಹಂಚಿಕೊಂಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT