ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಗುವ ಮಸ್ಕಿ ಶಿಲಾಯುಗ ಚಿತ್ರ!

ಮಸ್ಕಿಯ ಬೆಟ್ಟಗಳಲ್ಲಿ ಶಿಲಾಯುಗದ ಸಾಂಸ್ಕೃತಿಕ ಕುರುಹುಗಳು ಇರುವ ಬಂಡೆಗಳು
Last Updated 19 ಏಪ್ರಿಲ್ 2015, 14:04 IST
ಅಕ್ಷರ ಗಾತ್ರ

ಮಸ್ಕಿ:  ಪ್ರಾಚೀನ ಕಾಲದ ಕುರುಹುಗಳಿಂದ ಮಸ್ಕಿ ಅನನ್ಯತೆಯನ್ನು ಪಡೆದುಕೊಂಡಿದೆ.  ಸಾಮ್ರಾಟ್ ಅಶೋಕನ ಶಾಸನ ಮೂಲಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸಂಶೋಧಕರ ಗಮನ ಸೆಳೆದ ಮಸ್ಕಿಯಲ್ಲಿ , ಶಿಲಾಯುಗದ ಬಂಡೆಚಿತ್ರಗಳೂ ಇರುವುದು ವಿಶೇಷ.

ಇಲ್ಲಿನ ಬೆಟ್ಟಗಳಲ್ಲಿ ಕಲ್ಲು, ಬಂಡೆಗಳ ಮೇಲೆ ಕೆತ್ತನೆ ಮಾಡಿರುವ ಅನೇಕ ಚಿತ್ರಗಳು ಸಂಶೋಧಕರ  ಗಮನ ಸೆಳೆದಿವೆ.

ಕಲ್ಯಾಣ ಚಾಲುಕ್ಯರು, ಚೋಳರು, ವಿಜಯ ನಗರ ಸಾಮ್ರಾಜ್ಯದ ಶಾಸನಗಳ ಜೊತೆಗೆ ಕೆಲವು ಅರಸು ಮನೆತನಗಳ ಸ್ಮಾರಕಗಳು, ಚಿತ್ರಗಳು ಸಂಶೋಧನೆ ವೇಳೆ ಬೆಳಕಿಗೆ ಬಂದಿವೆ.

ಕ್ರಿ.ಶ. 1888 ರಲ್ಲಿ ರಾಬರ್ಟ್ ಬ್ರೂಸ್‌ ಪೂಟ್, 1915 ರಲ್ಲಿ ಸಿ. ಬಿಡನ್, 1928–29 ರಲ್ಲಿ ಲಿಯೋನಾರ್ಡ್ ಮನ್, 1935–37 ರಲ್ಲಿ ಅಂದಿನ ಹೈದರಾಬಾದ್‌ ನಿಜಾಮನ ಸರ್ಕಾರ ಹಾಗೂ 1940 ಮತ್ತು 1954 ರಲ್ಲಿ ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಯಿಂದ ಬಿ.ಕೆ. ಥಾಮಸ್‌ ಇಲ್ಲಿ ಉತ್ಖನನ ನಡೆಸಿದರು. ರಾಜ್ಯದ ಡಾ. ಅ. ಸುಂದರ ಸೇರಿದಂತೆ ಅನೇಕ ಸಂಶೋಧಕರು ಈ ಭಾಗದಲ್ಲಿ ಸಂಶೋಧನೆ ನಡೆಸಿದರು.

ಇಷ್ಟೆಲ್ಲ ನಡೆದರೂ  ಪ್ರಾಚೀನ ಕಾಲದ ಇನ್ನೂ ಅನೇಕ ಚಿತ್ರಗಳು, ಶಾಸನಗಳು ಈ ಪ್ರದೇಶದ ಬೆಟ್ಟದಲ್ಲಿ ಅಡಗಿವೆ ಎಂದು ಇತಿಹಾಸ ಸಂಶೋಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿ ಅಭಿಪ್ರಾಯ ಪಟ್ಟಿದ್ದಾರೆ.

ಮಸ್ಕಿಯ ಬೆಟ್ಟಗಳ ನಡುವೆ ಇರುವ ಬೃಹತ್‌ ಬಂಡೆಗಳ ಮೇಲೆ ಪ್ರಾಚೀನರು ಕೆತ್ತನೆ ಮಾಡಿದ ಹಾಗೂ ಕುಟ್ಟಿ ರೂಪಿಸಿದ ಗೂಳಿಗಳು, ಸಾರಂಗ, ಆನೆ, ಹುಲಿ, ಮಂಡಲಗಳು, ಆದಿ ಮಾನವರ ಚಿತ್ರಗಳು ಸೇರಿದಂತೆ ಪ್ರಾಗೈತಿಹಾಸಿಕ ಹಿನ್ನೆಲೆಯ ಸಾವಿರಾರು ಚಿತ್ರಗಳು ಇವೆ. ಈ ಚಿತ್ರಗಳ ಸಂಶೋಧನೆಗಾಗಿಯೇ ಅನೇಕ ಯುವ ಸಶೋಧಕರು ಇಲ್ಲಿಗೆ ಬರುತ್ತಿದ್ದಾರೆ. ಆದರೆ, ಕೇಂದ್ರ ಪುರಾತತ್ವ ಇಲಾಖೆಯ ನಿರ್ಲಕ್ಷ್ಯಕ್ಕೆ ಈ ಚಿತ್ರಗಳು, ಶಾಸನಗಳು ಬಲಿಯಾಗಿವೆ. ಕಲ್ಲು ಬಂಡೆಗಳ ಮೇಲೆ ಕೆತ್ತನೆ ಮಾಡಿರುವ ಚಿತ್ರಗಳನ್ನು ದನ ಕಾಯುವ ಹುಡುಗರು ಅಳಿಸಿ ಹಾಕುತ್ತಿದ್ದಾರೆ. ಅದರ ಮೇಲೆ ಮಣ್ಣು ಹಾಕಿ ಕಾಣದಂತೆ ಮಾಡುತ್ತಿದ್ದಾರೆ. 

ಅನೇಕ ಚಿತ್ರಗಳು ಈಗಾಗಲೇ ಕಣ್ಣಿಗೆ ಕಾಣದಂತಾಗಿದ್ದು ಪುರಾತತ್ವ ಇಲಾಖೆಯ ಅಧಿಕಾರಿಗಳು ಇವುಗಳ ರಕ್ಷಣೆಗೆ ಮುಂದಾಗಬೇಕು ಎಂದು ಇಲ್ಲಿಯ ನಾಗರಿಕರು ಒತ್ತಾಯಿಸಿದ್ದಾರೆ.
*
ಮುಖ್ಯಾಂಶಗಳು
* ಪ್ರಾಗೈತಿಹಾಸಿಕ ಕಾಲದ  ಶಿಲಾ ಚಿತ್ರಗಳು

*ಪುರಾತತ್ವ ಇಲಾಖೆ ನಿರ್ಲಕ್ಷ್ಯ, ಹಾನಿಗೊಂಡ ಕಲಾಗಾರಿಕೆ
* ಶಿಲಾಯುಗದ ಜನರ ಕಲೆ ಸಂರಕ್ಷಣೆಗೆ ಜನರ ಆಗ್ರಹ
*
2013ರಲ್ಲಿ ರಾಷ್ಟ್ರೀಯ ಇತಿಹಾಸ ಅಕಾಡೆಮಿ ಸಮ್ಮೇಳನದಲ್ಲಿ ಈ ಬಗ್ಗೆ ಪ್ರಬಂಧ ಮಂಡಿಸಲಾಗಿತ್ತು. ಈ ಚಿತ್ರಗಳ ಬಗ್ಗೆಯೂ ಪ್ರಬಂಧ ಮಂಡಿಸಲಾಗುವುದು
ಡಾ. ಚನ್ನಬಸ್ಸಪ್ಪ ಮಲ್ಕಂದಿನ್ನಿ, ಇತಿಹಾಸ ಸಂಶೋಧಕ, ಮಸ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT