ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತವ್ಯಲೋಪ; ಅಧಿಕಾರಿಗಳ ಅಮಾನತು ಎಚ್ಚರಿಕೆ

Last Updated 10 ಅಕ್ಟೋಬರ್ 2015, 8:33 IST
ಅಕ್ಷರ ಗಾತ್ರ

ಚಳ್ಳಕೆರೆ: ಗ್ರಾಮೀಣ ಭಾಗದ ವಸತಿ ಯೋಜನೆಯಡಿ ನೀಡಲಾಗುತ್ತಿರುವ ಮನೆಗಳು ಪ್ರಭಾವಿಗಳ ಪಾಲಾಗುತ್ತಿದ್ದು, ಲೋಪಗಳನ್ನು ಸರಿಪಡಿಸಿ ಅರ್ಹ ಫಲಾನುಭವಿಗಳಿಗೆ ನೀಡಬೇಕೆಂದು ಶಾಸಕ ಎಸ್‌.ತಿಪ್ಪೇಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ತಾಲ್ಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಶುಕ್ರವಾರ ಕರೆಯಲಾಗಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರು ವಿವಿಧ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವಂತ ಪರಿಸ್ಥಿತಿ ಬಂದೊದಗಿದೆ. ಇದಕ್ಕೆ ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯ್ತಿ ಪಿಡಿಒಗಳು ನೇರ ಹೊಣೆಯಾಗ ಬೇಕಾಗುತ್ತದೆ. ಗ್ರಾಮಗಳಲ್ಲಿ ಸ್ವಚ್ಛತೆ ಹಾಗೂ ಶುದ್ಧ ಕುಡಿಯುವ ನೀರು ಒದಗಿಸಲು ಅಧಿಕಾರಿಗಳು ಶ್ರಮವಹಿಸಿ ದುಡಿಯಬೇಕು. ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಇಂತಹ ಕಡೆ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸಬೇಕು. ನೀರಿನಲ್ಲಿ ಫ್ಲೋರೈಡ್‌ ಅಂಶ ಕಂಡು ಬಂದರೆ ಅಂತಹ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಬೇಕು ಎಂತು ತಾಕೀತು ಮಾಡಿದರು.

ಗಡಿ ಗ್ರಾಮಗಳ ಶಾಲೆಗಳಿಗೆ ಶಿಕ್ಷಕರು ಸರಿಯಾದ ಸಮಯಕ್ಕೆ ಹಾಜರಾಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಇಂತಹ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಶಿಕ್ಷಕರು ಪದೇಪದೇ ಬೇಜವಾಬ್ದಾರಿಯಿಂದ ವರ್ತಿಸಿದರೆ ಅಮಾನತು ಆದೇಶ ಹೊರಡಿಸಲು ಮುಂದಾಗಬೇಕು ಎಂದು ಬಿಇಒ ಪಿ.ರಾಜಣ್ಣರವರಿಗೆ ಸೂಚಿಸಿದರು.

ಪ್ರತಿ ಗ್ರಾಮಗಳಲ್ಲಿ ಪಿಡಿಒಗಳು ಪಕ್ಷಾತೀತವಾಗಿ ಕರ್ತವ್ಯ ನಿರ್ವಹಿಸಿದಾಗ ಯಾವುದೇ ಸಮಸ್ಯೆಗಳು ಉದ್ಭವಿಸು ವುದಿಲ್ಲ. ಅನಗತ್ಯ ಕಾಲಹರಣ ಮಾಡಿದಾಗ ಮಾತ್ರ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಪಿಡಿಒಗಳು ಪ್ರತಿ ಗ್ರಾಮಗಳಿಗೆ ತೆರಳಿ ಕಾರ್ಯನಿರ್ವಹಿಸ ಬೇಕು, ಇಲ್ಲದೆ ಹೋದಲ್ಲಿ ಮನೆಗೆ ಹೋಗಿ ಎಂದು ಎಚ್ಚರಿಕೆ ನೀಡಿದ ಅವರು, ಕರ್ತವ್ಯ ಲೋಪ ಎಸಗುವ ಅಧಿಕಾರಿಗಳನ್ನು ಅಮಾನತುಗೊಳಿಸಿ ಎಂದು ಮೇಲಧಿಕಾರಿಗಳಿಗೆ ಆದೇಶಿಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಗೋವಿಂದರಾಜು, ಉಪಾಧ್ಯಕ್ಷೆ ಲಕ್ಷ್ಮೀ, ತಹಶೀಲ್ದಾರ್‌ ಶ್ರೀಧರಮೂರ್ತಿ ಎಸ್‌. ಪಂಡಿತ್‌, ತಾಲ್ಲೂಕು ಪಂಚಾಯ್ತಿ ಇಒ ಪ್ರಕಾಶ್‌, ಟಿಎಚ್‌ಒ ಡಾ.ಪ್ರೇಮಸುಧಾ, ತೋಟಗಾರಿಕೆ ಅಧಿಕಾರಿ ಡಾ.ರವಿ. ಸಹಾಯಕ ಕೃಷಿ ನಿರ್ದೇಶಕಿ ಡಾ.ಜಿ.ಯು.ಭಾರತಿ, ಪಶು ಇಲಾಖೆ ವೈದ್ಯಾಧಿಕಾರಿ ಡಾ.ಹನುಮಣ್ಣ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT