ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಶಾಸ್ತ್ರೀಯ ಸಂಗೀತ ಬ್ರಾಹ್ಮಣರಿಗೆ ಸೀಮಿತ

ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ವಿದ್ವಾನ್ ಟಿ.ಎಂ.ಕೃಷ್ಣ ಅಭಿಮತ
Last Updated 6 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಸಾಗರ: ದೇವದಾಸಿ, ನಾಗಸ್ವರ, ಬ್ರಾಹ್ಮಣ ಎಂಬ ಮೂರು ಸ್ತರಗಳಲ್ಲಿ ವಿಸ್ತಾರತೆ  ಪಡೆದುಕೊಂಡಿದ್ದ ಕರ್ನಾ­ಟಕ ಶಾಸ್ತ್ರೀಯ ಸಂಗೀತ ಈಗ ಕೇವಲ ಬ್ರಾಹ್ಮಣ ಸಮುದಾಯಕ್ಕೆ ಸೀಮಿತವಾ­ಗಿದೆ ಎಂದು ಸಂಗೀತ ವಿದ್ವಾಂಸ ಟಿ.ಎಂ.ಕೃಷ್ಣ ಅಭಿಪ್ರಾಯಪಟ್ಟರು. ಸಮೀಪದ ಹೆಗ್ಗೋಡಿನಲ್ಲಿ ನಡೆಯು­ತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಸೋಮವಾರ ‘ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭಾರತೀಯತೆ’ ಎಂಬ ವಿಷಯದ ಮೇಲೆ ಅವರು ಮಾತ­ನಾಡಿದರು.

ಸಂಗೀತದ ವಿಸ್ತಾರ ಸಂಕುಚಿತ­ಗೊಂಡಿ­­ರು­ವುದರಿಂದ ಒಂದೇ ಕೃತಿ­ಯನ್ನು ಹಲವು ಸ್ತರಗಳಲ್ಲಿ ಪ್ರಸ್ತುತ­ಪಡಿಸುವ ಸಾಧ್ಯತೆಯನ್ನು ಕಳೆದು­ಕೊಂ­ಡಿದ್ದು, ಏಕಾಕೃತಿಯ ರೂಪ ಪಡೆದು­ಕೊಂಡಿದೆ ಎಂದು ವಿಶ್ಲೇಷಿಸಿದರು. ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಇತರೆ ಸಮುದಾಯದವರ ಕೊಡುಗೆ ಪ್ರಮುಖವಾಗಿದ್ದರೂ,  ಬ್ರಾಹ್ಮಣ ಸಮು­­ದಾಯ ಇದು ತಮ್ಮದೇ ಕಲೆ ಎನ್ನುವಂತೆ ಸಂಭ್ರಮಿಸುತ್ತಿದೆ. ಕರ್ನಾ­ಟಕ, ತಮಿಳು­ನಾಡು, ಆಂಧ್ರಪ್ರದೇಶ ಈ ಮೂರೂ ರಾಜ್ಯಗಳಲ್ಲಿ ಬ್ರಾಹ್ಮಣರನ್ನು ಹೊರತು­ಪಡಿಸಿ ಇತರ ಸಮುದಾಯದವರು ಯಾಕೆ ನಾನಾ ಸಂಗೀತ ಪ್ರಕಾರಗಳನ್ನು ಕಲಿಯಲು ಮುಂದಾಗುತ್ತಿಲ್ಲ ಎನ್ನುವ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದರು.

ಅಪ್ಪಟ ಸುಳ್ಳು: ‘ನಾಟ್ಯ ಶಾಸ್ತ್ರದಲ್ಲಿ ರಾಗಕ್ಕೆ ಸ್ಥಾನವೇ ಇಲ್ಲ. ಆದರೂ, ಕರ್ನಾಟಕ ಸಂಗೀತಕ್ಕೂ ಭರತ­ಮುನಿಗೂ ಪರಸ್ಪರ ಸಂಬಂಧವಿದೆ ಎಂದು ಅಪ್ಪಟ ಸುಳ್ಳನ್ನು ಹಬ್ಬಿಸಲಾ­ಗು­ತ್ತಿದೆ. ಇದರಿಂದ ಕಲೆ ಮತ್ತು ಕಲಾವಿದ ಹಿಮ್ಮುಖ ಚಲನೆಯನ್ನು ಕಾಣಬೇಕಾ­ಗು­ತ್ತದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಭಕ್ತಿ ಪರಂಪರೆಯೇ ಪ್ರಮುಖ ಹಾಗೂ ಪವಿತ್ರವಾದದ್ದು ಎನ್ನುವ ಭಾವನೆ ನೆಲೆಯೂರಿದೆ. ಈ ಕಾರಣಕ್ಕೆ ಇದನ್ನು ಶಾಬ್ದಿಕ ಅರ್ಥದ ವ್ಯಾಪ್ತಿಯೊಳಗೆ ಹಿಡಿ­ದಿಡುವ ಪ್ರಯತ್ನ ಮಾಡಲಾಗು­ತ್ತಿದೆ. ಇದರಿಂದ ಕಲಾ ಪ್ರಕಾರದ ಅಗಾಧತೆ ಕುಗ್ಗುತ್ತದೆ ಎಂದರು.

ಕಲೆಗೂ, ಹೊಸತನಕ್ಕೂ ನಂಟಿದೆ. ಸೀಮಿತ ಚೌಕಟ್ಟು ಹಾಕದೇ ಹೊಸತನ­ವನ್ನು ತರಬೇಕಿದೆ. ಕೇಳುಗರಿಗೆ ಭಿನ್ನ­ವಾದ ಅನುಭವವನ್ನು ನೀಡುವ­ಲ್ಲಿಯೇ ಸಂಗೀತ ಕಲೆಯ ಸಾರ್ಥಕ್ಯ ಅಡಗಿದೆ ಎಂದು ಬಣ್ಣಿಸಿದರು. ಕಲೆ ಬದುಕಿನ ಅನುಭವಗಳಿಗೆ ಮುಖಾ­ಮುಖಿಯಾಗುವ ಹಾಗೂ ಅನು­ಸಂಧಾನ ನಡೆಸುವ ಒಂದು ಸೃಜನ­ಶೀಲ ಚಟುವಟಿಕೆ. ಕಲಾವಿದ ಕಲೆಯ ಜತೆಗೆ ಸಾಮಾಜಿಕ, ಸಾಂಸ್ಕೃತಿಕ ವಿಷಯ­ಗಳಿಗೆ ಪ್ರತಿಸ್ಪಂದಿಸಬೇಕು ಎಂದರು.

ಇದಕ್ಕೂ ಮುನ್ನ ಭಾನುವಾರ ಮುಂಬೈನ ಗಿಲೋ ಥಿಯೇಟರ್ ತಂಡದಿಂದ ಪ್ರದರ್ಶನಗೊಂಡ ‘ತಾವೂಸ್‌ ಚಮನ್‌ ಕೀ ಮೈನಾ’ ನಾಟಕದ ಕುರಿತು ಚರ್ಚೆ ನಡೆಯಿತು. ನಂತರ ಎನ್‌ಎಚ್‌7. ಡ್ಯಾನ್ಸ್‌ ಟ್ರಯೊ ತಂಡದವರು ಸಮಕಾಲಿನ ನೃತ್ಯವನ್ನು ಪ್ರಸ್ತುತಪಡಿಸಿದರು. ಸಂಜೆ ವಿದ್ವಾನ್ ಟಿ.ಎಂ.ಕೃಷ್ಣ ಅವರಿಂದ ಕರ್ನಾಟಕ ಸಂಗೀತ ಗಾಯನ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT