ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ನರ್ಸಿಂಗ್‌ ಕಾಲೇಜಿನಲ್ಲಿ ರ‍್ಯಾಗಿಂಗ್‌ ನಡೆದಿಲ್ಲ

ತನಿಖಾ ಸಮಿತಿ ಮುಂದೆ ಪ್ರಾಂಶುಪಾಲೆ ಎಸ್ತರ್‌ ರಾಣಿ ಹೇಳಿಕೆ
Last Updated 29 ಜೂನ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕಲಬುರ್ಗಿಯ ಅಲ್‌ ಖಮರ್‌ ನರ್ಸಿಂಗ್‌ ಕಾಲೇಜಿನ ವಸತಿ ನಿಲಯದಲ್ಲಿ ಯಾವುದೇ ರ್‍ಯಾಗಿಂಗ್‌ ನಡೆದಿಲ್ಲ’ ಎಂದು ಕಾಲೇಜಿನ ಪ್ರಾಂಶುಪಾಲೆ ಎಸ್ತರ್‌ ರಾಣಿ ಅವರು ತನಿಖಾ ಸಮಿತಿಯ ಸದಸ್ಯರ ಮುಂದೆ ಹೇಳಿಕೆ ನೀಡಿದ್ದಾರೆ.

ತನಿಖಾ ಸಮಿತಿಯ ಸದಸ್ಯರಾದ ಕಲಬುರ್ಗಿಯ ಇಎಸ್‌ಐ ವೈದ್ಯಕೀಯ ಕಾಲೇಜಿನ ಡೀನ್‌ ಡಾ.ಎಂ.ಆರ್‌. ಚಂದ್ರಶೇಖರ್‌ ಹಾಗೂ ಖಾಜಾ ಬಂದೇ ನವಾಜ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಇಮ್ತಿಯಾಜ್‌ ಉಲ್‌ ಹಕ್‌ ಅವರ ಮುಂದೆ ಎಸ್ತರ್‌ ಅವರು ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.
ಈ ಕುರಿತು ತನಿಖಾ ಸಮಿತಿಯು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವರಿಗೆ ವರದಿ ಸಲ್ಲಿಸಿದೆ.

ವರದಿಯಲ್ಲಿ ಏನಿದೆ?: ‘ರ್‍ಯಾಗಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್‌ 22 ರಂದು ಸಂಜೆ 4.30ರಲ್ಲಿ ಕಲಬುರ್ಗಿಯ ಅಲ್‌ ಖಮರ್‌ ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲೆ ಎಸ್ತರ್‌ ರಾಣಿ ಅವರನ್ನು ಅವರ ಕೊಠಡಿಯಲ್ಲೇ ವಿಚಾರಣೆ ನಡೆಸಿದ್ದೇವೆ.

ಎಸ್ತರ್‌ ಅವರು, ‘ನಮ್ಮ ಕಾಲೇಜಿನಲ್ಲಿ ಮೇ 9ರಂದು ಯಾವುದೇ ರ್‍್ಯಾಗಿಂಗ್‌ ಘಟನೆ ನಡೆದಿಲ್ಲ. ಮೊದಲನೇ ವರ್ಷದ ನರ್ಸಿಂಗ್‌ ವಿದ್ಯಾರ್ಥಿನಿ ಅಶ್ವತಿ ಮೇ 9ರಂದು ರಾತ್ರಿ 9ರಿಂದ 9.30ರ ಅವಧಿಯಲ್ಲಿ ಶೌಚಾಲಯ ಶುಚಿಕಾರಕವನ್ನು ಸೇವಿಸಿದ್ದಳು. ಹಿರಿಯ ಸಹಪಾಠಿಗಳು ಆಕೆಯನ್ನು ಬಹಮನಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆಸ್ಪತ್ರೆಯವರು ಆಕೆಯನ್ನು ದಾಖಲಿಸಿಕೊಳ್ಳಲಿಲ್ಲ. ಹೀಗಾಗಿ ರಾತ್ರಿ 10ರ ಸುಮಾರಿನಲ್ಲಿ ಎಂ.ಆರ್‌. ವೈದ್ಯಕೀಯ ಕಾಲೇಜಿನ ಬಸವೇಶ್ವರ ತರಬೇತಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಶ್ವತಿ ಮೇ 11ರಂದು ಬೆಳಿಗ್ಗೆ 11 ಗಂಟೆಗೆ ಬಸವೇಶ್ವರ ಆಸ್ಪತ್ರೆಯಿಂದ ತೆರಳಿದ್ದಾಳೆ’ ಎಂದು ತಿಳಿಸಿದ್ದಾರೆ.

ಎಸ್ತರ್‌ ಹೇಳಿದ ಅಂಶಗಳನ್ನೇ ಉಪ ಪ್ರಾಂಶುಪಾಲೆ ಬುಶ್ರಾ ಸುಲ್ತಾನಾ ಸಹ  ಹೇಳಿದ್ದಾರೆ. ವಸತಿ ನಿಲಯವು ಕಾಲೇಜಿನಿಂದ 6 ಕಿ.ಮೀ. ದೂರದಲ್ಲಿದೆ. ನರ್ಸಿಂಗ್‌ ಕಾಲೇಜು ಕೇವಲ ಕೊಠಡಿಗಳನ್ನು ಮಾತ್ರ ಒದಗಿಸಿದೆ. ಊಟದ ವ್ಯವಸ್ಥೆ ಕಲ್ಪಿಸಿಲ್ಲ. ನಿಲಯದಲ್ಲಿ 24 ಕೊಠಡಿಗಳಿದ್ದು, ವಿವಿಧ ರಾಜ್ಯಗಳ 29 ವಿದ್ಯಾರ್ಥಿನಿಯರು ಉಳಿದುಕೊಂಡಿದ್ದಾರೆ. ಕೆಲ ಕೊಠಡಿಗಳಲ್ಲಿ 2–3 ವಿದ್ಯಾರ್ಥಿನಿಯರಿದ್ದಾರೆ. ಅಶ್ವತಿ ಅವರ ಜತೆ ಇದ್ದ ಕೇರಳದ ಸೈನಿಹಿತಾ ಅವರ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ಅಶ್ವತಿ  ಜತೆಯಲ್ಲೇ ಸೈನಿಹಿತಾ ಸಹ ಕೇರಳಕ್ಕೆ ತೆರಳಿದ್ದಾರೆ.

ವಸತಿ ನಿಲಯದ ವಿದ್ಯಾರ್ಥಿನಿಯರಾದ ಮಳಿವಾಡ್‌ ಸೆಜಾಲ್‌ ರಾಮಾಭಾಯಿ ಹಾಗೂ ಮನಿಷಾ ಪ್ರವೀಣ್‌ ಸಿಂಗ್‌ ಅವರನ್ನು ವಿಚಾರಿಸಿದ್ದು, ‘ಕಾಲೇಜು ಹಾಗೂ ವಸತಿ ನಿಲಯದಲ್ಲಿ ರ್‍ಯಾಗಿಂಗ್‌ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ರ್‍ಯಾಗಿಂಗ್‌ ಸಾಬೀತಾದರೆ ಕ್ರಮ
‘ರ್‍ಯಾಗಿಂಗ್‌ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರ ವರದಿಯಲ್ಲಿ ರ್‍ಯಾಗಿಂಗ್‌ ನಡೆದಿರುವುದು ಸಾಬೀತಾದರೆ ಈ ಕುರಿತು ಸಿಂಡಿಕೇಟ್‌ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ 

ಡಾ.ಕೆ. ಎಸ್. ರವೀಂದ್ರನಾಥ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ರ್‍ಯಾಗಿಂಗ್‌ ತಡೆಗೆ ಕಾಲೇಜುಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸುವ ಚಿಂತನೆ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT