ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ಪ್ರಕರಣ ಸಿಬಿಐಗೆ ಒಪ್ಪಿಸಲು ಜೋಶಿ ಆಗ್ರಹ

ಪ್ರಜಾವಾಣಿ ವಾರ್ತೆ
Last Updated 2 ಡಿಸೆಂಬರ್ 2015, 5:08 IST
ಅಕ್ಷರ ಗಾತ್ರ

ನವದೆಹಲಿ: ಖ್ಯಾತ ಚಿಂತಕ ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆ ಹಿಂದೆ ಯಾರ ಕೈವಾಡವಿದೆ ಎಂಬ ಸತ್ಯ ಹೊರಬರಬೇಕಾದರೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಬಿಜೆಪಿ ಸದಸ್ಯ ಪ್ರಹ್ಲಾದ ಜೋಶಿ ಮಂಗಳವಾರ ಲೋಕಸಭೆಯಲ್ಲಿ ಒತ್ತಾಯ ಮಾಡಿದರು.

ಅಸಹಿಷ್ಣುತೆ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಹರಿಹಾಯ್ದ ಬಳಿಕ, ಮಾತಿನ ಸರದಿ ಜೋಶಿ ಅವರದಿತ್ತು.  ತಮಗೆ ಸಿಕ್ಕ ಅವಕಾಶವನ್ನು  ಬಳಸಿಕೊಂಡು, ಸಿದ್ದರಾಮಯ್ಯ  ಸರ್ಕಾರದ ವಿರುದ್ಧ ಅವರು ಭಾರಿ ಟೀಕಾಪ್ರಹಾರ ಮಾಡಿದರು.

‘ಕಲಬುರ್ಗಿ ಧಾರವಾಡದವರು. ಅದು ನನ್ನ ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದೆ. ಹಿರಿಯ ಚಿಂತಕನ ಹತ್ಯೆಯಾಗಿ 93 ದಿನಗಳು ಕಳೆದರೂ ಯಾರನ್ನೂ ಬಂಧಿಸಿಲ್ಲ. ಈ ಪ್ರಕರಣದ ಹಿಂದೆ ಯಾರ ಕೈವಾಡವಿದೆ ಎನ್ನುವ ಸತ್ಯ ಹೊರಬರಲು ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಮನವಿ ಮಾಡುತ್ತೇನೆ’ ಎಂದು ಜೋಶಿ ಹೇಳಿದರು.

‘ನನ್ನ ಮತ್ತು ಕಲಬುರ್ಗಿ ಅವರ ನಡುವೆ ಉತ್ತಮ ಸ್ನೇಹವಿತ್ತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರೂ ಸದನದಲ್ಲಿದ್ದಾರೆ. ಅವರೂ ಕಲಬುರ್ಗಿ ಅವರ ಜತೆ ಒಳ್ಳೆ ಸಂಬಂಧ ಹೊಂದಿದ್ದರು. ನಮ್ಮ ಪಕ್ಷದ ಜತೆಗೂ ಅವರಿಗೆ ಸಂಪರ್ಕವಿತ್ತು. ಲೋಕಸಭೆಯ ಚುನಾವಣೆಯಲ್ಲಿ ಅವರು ನನಗೆ ಬೆಂಬಲ ಕೊಟ್ಟಿದ್ದರು’ ಎಂದರು.

‘ನಾನು ಕಲಬುರ್ಗಿ ಹತ್ಯೆ ವಿಷಯ ತಿಳಿಯುತ್ತಿದ್ದಂತೆ ಅವರ ಮನೆಗೆ ಮತ್ತು ಆಸ್ಪತ್ರೆಗೆ ಹೋಗಿದ್ದೆ. ಪ್ರಕರಣ ಕುರಿತು ಗಂಭೀರ ತನಿಖೆ ನಡೆಸುವಂತೆ ಅಂದೇ ಆಗ್ರಹಪಡಿಸಿದೆ. ಘಟನೆ ನಡೆದು 93 ದಿನ ಕಳೆದರೂ ಇದುವರೆಗೆ ಒಬ್ಬರನ್ನೂ ಬಂಧಿಸಿಲ್ಲ’ ಎಂದು ನೆನಪಿಸಿದರು.

ಕಡತಕ್ಕೆ ಹೋಗದ ಮಾತು: ‘ಕರ್ನಾಟಕದಲ್ಲಿ 2000 ಇಸ್ವಿಯಲ್ಲಿ ಚರ್ಚ್‌ಗಳ ಮೇಲೆ ದಾಳಿ ನಡೆಯಿತು. ಇದಕ್ಕೆ ಆರ್‌ಎಸ್‌ಎಸ್‌ ಕಾರಣ ಎಂದು ರಾಜ್ಯದ ಆಗಿನ ಸಚಿವರೊಬ್ಬರು  ದೂಷಿಸಿದರು. ಆದರೆ ತನಿಖೆ ನಡೆಸಿದ ಪೊಲೀಸರು, ದೀನದಯಾಳ್‌ ಅಂಜುಮನ್‌ ಮತ್ತು ಸಿಮಿ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿದರು. ಅನಂತರ ಅವರಿಗೆ ಶಿಕ್ಷೆ ಆಯಿತು’ ಎಂದರು. ಆಗ ಖರ್ಗೆ ಮಾತನಾಡಲು ಎದ್ದು ನಿಂತರು. ಆದರೆ, ಅವರಿಗೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವಕಾಶ ಕೊಡಲಿಲ್ಲ. ‘ಇದ್ಯಾವುದೂ ದಾಖಲೆಗೆ ಹೋಗುವುದಿಲ್ಲ.

ದಯವಿಟ್ಟು ಕುಳಿತುಕೊಳ್ಳಿ’ ಹೇಳಿದರು. ಆ ವೇಳೆಗೆ ಮೈಕುಗಳು ಆಫ್‌ ಆಗಿದ್ದರಿಂದ ಯಾರು ಏನು ಮಾತನಾಡಿದರು ಎಂಬುದು ಪತ್ರಕರ್ತರ ಗ್ಯಾಲರಿಯಲ್ಲಿ ಕೇಳಿಸಲಿಲ್ಲ.

ಸಿಐಡಿಗೆ ಅನುದಾನ ಕೊಡುತ್ತಿಲ್ಲ
ಕಲಬುರ್ಗಿ ಪ್ರಕರಣದ ತನಿಖೆಯನ್ನು ಸಿಐಡಿ ಸ್ಥಗಿತಗೊಳಿಸಿದೆ. ಅನುದಾನದ ಕೊರತೆಯಿಂದ  ತನಿಖೆ ನಿಂತಿದೆ. ರಾಜ್ಯ ಸರ್ಕಾರ ಸಿಐಡಿಗೆ ಹಣಕಾಸು ನೀಡುತ್ತಿಲ್ಲ. ಇಡೀ ಸದನಕ್ಕೆ ವಾಸ್ತವವೇನೆಂದು ಗೊತ್ತಾಗಬೇಕು ಎನ್ನುವ ಕಾರಣಕ್ಕೆ ಈ ಸಂಗತಿ ಬಹಿರಂಗಪಡಿಸುತ್ತಿದ್ದೇನೆ’ ಎಂದು ಪ್ರಹ್ಲಾದ ಜೋಶಿ ವಿವರಣೆ ನೀಡಿದರು.

‘ಸಿಐಡಿ ಎಡಿಜಿಪಿ ಅವರನ್ನು ನಾನು ಭೇಟಿ ಮಾಡಿ ಚರ್ಚಿಸಿದೆ. ತನಿಖೆಯಲ್ಲಿ ಏನಾದರೂ ಪ್ರಗತಿ ಆಗಿದೆಯೇ,  ಕೊಲೆಗಾರರ ಬಗ್ಗೆ ಏನಾದರೂ ಸುಳಿವು ಸಿಕ್ಕಿದೆಯೇ ಎಂದು ಕೇಳಿದೆ. ಅವರು ಇಲ್ಲ ಎಂದು ಹೇಳಿದ್ದಾರೆ. ಅಪರಾಧಿಗಳ ಸುಳಿವೇ ಇಲ್ಲದಿದ್ದರೂ ಬಲಪಂಥೀಯ ಸಂಘಟನೆಗಳ ಮೇಲೆ ಗೂಬೆ ಕೂರಿಸುತ್ತಿದ್ದಾರೆ’ ಎಂದು ಅವರು ಎದುರಾಳಿಗಳನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT