ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಕೃತಿಯಂತಹ ಮುರುಕು ಮನೆ!

Last Updated 14 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಈ ಮನೆ ಹೇಗಿದೆ ನೋಡಿ! ಇದರ ಗೋಡೆ- ಕಂಬಗಳು ಅರ್ಧಕ್ಕರ್ಧ ಮುರಿದು ಹೋಗಿವೆ. ಗಾಳಿಯಲ್ಲಿ ತೇಲಾ ಡುತ್ತಿರುವಂತೆ ಇರುವ ಈ ಕಟ್ಟಡ ಭೂಮಿಯನ್ನು ಸೋಕಿಸಿ ಕೊಳ್ಳುವುದಿಲ್ಲ ಎಂದು ಮಡಿವಂತಿಕೆಯಿಂದ ನಿಂತಿರು ವಂತಿದೆ!

ಇದನ್ನು ನೋಡಿದವರೆಲ್ಲ ಅತ್ಯದ್ಭುತ ಎಂಬ ಉದ್ಗಾರವನ್ನು ಹೊರಡಿಸುತ್ತಾರೆ.  ಇದೇನೂ ಭೂಕಂಪ, ಸುನಾಮಿ ಮೊದ ಲಾದ ಪ್ರಕೃತಿ ವಿಕೋಪಗಳಿಂದಾಗಿ ಛಿದ್ರವಾಗಿ ಈ ರೂಪ ಪಡೆದಿಲ್ಲ.  ಇದು ಶಿಥಿಲಗೊಂಡು ಮುರಿದುಬಿದ್ದಿರುವ ಹಳೆಯ ಕಾಲದ ಮನೆಯೂ ಅಲ್ಲ.  ಹೊಚ್ಚ ಹೊಸ ಮನೆ. ಈ ಮನೆಯ ವಿನ್ಯಾಸವೇ ಹೀಗಿದೆ!

ಅಲೆಕ್ಸ್‌ ಸೆನೆಕ್‌ ಎಂಬ ಆರ್ಕಿಟೆಕ್ಟ್‌ (ವಾಸ್ತುಶಿಲ್ಪಿ) ವಿಶೇಷ ರೀತಿಯಲ್ಲಿ ಆಲೋಚಿಸಿ ಕಲಾಕೃತಿಯಂತಹ ಈ ಕಟ್ಟಡವನ್ನು ನಿರ್ಮಿಸಿದ್ದಾರೆ.  ಲಂಡನ್‌ನ ಕಾವೆಂಟ ಗಾರ್ಡನ್‌ನಲ್ಲಿರುವ ಈ ಮುರುಕು ಮನೆ, ಆ ಮಾರ್ಗದಲ್ಲಿ ಹಾಯ್ದು ಹೋಗುವ ಎಲ್ಲರ ಗಮನವನ್ನೂ ಸೂಜಿಗಲ್ಲಿನಂತೆ ತನ್ನತ್ತ ಸೆಳೆದುಕೊಳ್ಳುತ್ತಿದೆ. ಎಲ್ಲರೂ ಕೆಲ ಹೊತ್ತು ಅಲ್ಲಿ ನಿಂತು ಈ ವಿಸ್ಮಯವನ್ನು ನೋಡಿಯೇ ಹೋಗುತ್ತಾರೆ.  ಇದು ಭೂಸ್ಪರ್ಶವಿಲ್ಲದೇ ಹೇಗೆ ನಿಂತುಕೊಂಡಿದೆ ಎಂಬುದೇ ಎಲ್ಲರ ಕುತೂಹಲಕ್ಕೆ ಕಾರಣ. 

ಈ ಮನೆ ಅಂಥದೊಂದು ಭ್ರಮೆಯನ್ನು ನೋಡುಗರಲ್ಲಿ ಉಂಟು ಮಾಡುತ್ತಿದೆ.  ಇದೊಂದು ಮಾಂತ್ರಿಕ ತಂತ್ರವಲ್ಲ, ವಿಶಿಷ್ಟ ವಾಸ್ತುಶಿಲ್ಪಿಯೊಬ್ಬರ ಅದ್ಭುತ ಕಲಾಭಿವ್ಯಕ್ತಿಯ ರೂಪ. 

ಈ ಕಟ್ಟಡವೇನೂ ಸೆನೆಕ್‌ ಅವರ ಮೊದಲ ಕಲಾಕೃತಿ ಅಲ್ಲ. ಈ ಹಿಂದೆ ಈತ ದಕ್ಷಿಣ ಲಂಡನ್‌ನಲ್ಲಿ ತಲೆಕೆಳಗಾದ ಮನೆಯೊಂದನ್ನು ನಿರ್ಮಿಸಿ ಪ್ರಖ್ಯಾತರಾಗಿದ್ದರು.  ಇಂಥ ಅದ್ಭುತಗಳನ್ನು ಸೃಜಿಸುವುದು ಅವರ ಹವ್ಯಾಸ.

ಈ ಮನೆ ಭೂಮಿಗಿಂತ ಮೇಲೆ ಆಧಾರವಿಲ್ಲದೇ ನಿಂತಂತೆ ಕಾಣುತ್ತಿದ್ದರೂ ಅದುವೇ ಸತ್ಯವಲ್ಲ. ವಾಸ್ತವವಾಗಿ ಈ ಇಡೀ ಕಟ್ಟಡವನ್ನು ಒಂದು ಬೃಹತ್ ತೊಲೆ ಹೊತ್ತುಕೊಂಡಿದೆ.  ಆ ತೊಲೆ ಇದೇ ಮನೆಯ ಹಿಂಭಾಗದಲ್ಲಿರುವ ಗ್ರೀನ್‌ ಮಾರ್ಕೆಟ್ ಕಟ್ಟಡದಲ್ಲಿ ಭದ್ರವಾಗಿ ಸೇರಿಕೊಂಡಿದೆ.  ಹೀಗಾಗಿ ಅದು ಯಾರಿಗೂ ತಕ್ಷಣಕ್ಕೆ ಕಾಣುವುದಿಲ್ಲ. ಅದನ್ನು ಹೇವಿ ಕೌಂಟರ್ ವೇಟ್ ಬ್ಯಾಲೆನ್ಸ್‌ ಎಂದು ಕರೆಯುತ್ತಾರೆ. 

ಈ ತಂತ್ರವನ್ನು ಸೆನೆಕ್‌್‌ ಅವರು ಚೆನ್ನಾಗಿ ಬಳಸಿಕೊಂಡು ಕಟ್ಟಡವನ್ನು ಗಾಳಿಯಲ್ಲಿ ತೇಲುತ್ತಿರುವಂತೆ ಮಾಡಿದ್ದಾರೆ. 4 ಟನ್ನಗಳಷ್ಟು ಪರ್ಯಾಯ ಭಾರವನ್ನು ಹಿಂದೆ ಇರುವ ಕಟ್ಟಡ ಸಮರ್ಥವಾಗಿ ಹೊತ್ತುಕೊಂಡಿದೆ. 12 ಮೀಟರ್‌ ಉದ್ದದ ಈ ಕಟ್ಟಡವನ್ನು ಉಕ್ಕಿನ ಚೌಕಟ್ಟಿನಲ್ಲಿ ನಿರ್ಮಿಸಲಾಗಿದೆ. ಇದಕ್ಕೆ ವಿಶೇಷ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ಬಣ್ಣ ಹಚ್ಚಲಾಗಿದೆ. ಈ ಬಣ್ಣ ಕಟ್ಟಡದ ಅರೆಕೊರೆಗಳನ್ನು ಮುಚ್ಚುವ ಬದಲಿಗೆ, ಮುರಿದ ಕಂಬಗಳು, ಬಿದ್ದ ಗೋಡೆಗಳು ಇನ್ನಷ್ಟು ಎದ್ದು ಕಾಣುವಂತೆ  ಮಾಡಿದೆ. ಇಂತಹ ವಿಚಿತ್ರ ಕಟ್ಟಡದ ನಿರ್ಮಾಣ ಸೆನೆಕ್‌ ಅವರಿಗೆ ಸುಲಭದ ಕೆಲಸವೇನೂ ಆಗಿರಲಿಲ್ಲ. ಇದನ್ನು ಸಾಧ್ಯವಾಗಿಸಲು 500 ಗಂಟೆಗಳಷ್ಟು ಸಮಯ ಹಿಡಿಯಿತು ಎನ್ನುತ್ತಾರೆ ಈ ವಿಶಿಷ್ಟ ವಾಸ್ತುಶಿಲ್ಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT