ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾತ್ಮಕ ಕುಟೀರ

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬಂಡಿಯ ಚಕ್ರಗಳನ್ನು ಬಳಸಿ ವಿನ್ಯಾಸಗೊಳಿಸಿದ ಪ್ರವೇಶದ್ವಾರ, ಉದ್ಯಾನದಲ್ಲಿ ಅರಳಿ ನಿಂತ ಫಲಪುಷ್ಪ, ಕಲಾಕೃತಿಗಳು, ಮನೆಯೊಳಗಿನ ನಿಸರ್ಗಮಯ ಚಿತ್ರಕೃತಿಗಳು ಮನಸ್ಸಿಗೆ ನೀಡುವ ಮುದ, ಹೆಜ್ಜೆ ಹೆಜ್ಜೆಗೂ ಗಮನ ಸೆಳೆಯುವ ಕಲಾ ಹಂದರ...

ಇದರ ವರ್ಣನೆ ನೋಡಿ, ಆರ್ಟ್‌ ಮ್ಯೂಸಿಯಂ ಎಂದು ಭಾವಿಸಬಹುದು. ಆದರೆ, ಇದು ಕಲಾಶಾಲೆಯನ್ನೂ ಮೀರಿಸುವ ಮಾದರಿಯಲ್ಲಿ ಕಲಾ ದಂಪತಿಯೊಬ್ಬರು ತಮ್ಮದೇ ಪರಿಕಲ್ಪನೆಯಲ್ಲಿ ಕಟ್ಟಿಕೊಂಡಿರುವ ಕನಸಿನ ಮನೆ ‘ಕೌಸ್ತುಭ ಧಾಮ’.

ಹೌದು, ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತರಾದ ಆಶಾರಾಣಿ ಮತ್ತು ಬಾಬುರಾವ ನಡೋಣಿ ದಂಪತಿ ಬೆಳಗಾವಿ ಜಿಲ್ಲೆ ರಾಯಬಾಗ ಪಟ್ಟಣದಲ್ಲಿ ಕಟ್ಟಿಕೊಂಡಿರುವ ಕನಸಿನ ಮನೆ ಕಲೆಯ ಕುಟೀರದಂತೆ ರೂಪುಗೊಂಡಿದೆ. ಈ ಪರಿಸರ ಸ್ನೇಹಿ ಮನೆಯ ಒಳಗೆ ಮತ್ತು ಹೊರಗೆ ಪ್ರಕೃತಿಯ ಪ್ರತಿಬಿಂಬದ ಸೊಬಗು ಮನಸೂರೆಗೊಳ್ಳುತ್ತದೆ, ಮನೆಯ ಇಂಚಿಂಚಿನಲ್ಲೂ ಕಲೆ ಮೈದಳೆದಿದೆ.

ಕಲಾತ್ಮಕ ಮನೆ
ಲಭ್ಯವಿದ್ದಷ್ಟು ದುಡ್ಡು ಮಾತ್ರವಲ್ಲ, ಸಾಲ ಮಾಡಿಯಾದರೂ ಅದ್ದೂರಿ ಮನೆಯನ್ನು ಕಟ್ಟಿಕೊಳ್ಳುವುದು ಪ್ರತಿಯೊಬ್ಬರ ಸಹಜ ಆಸೆ. ಆದರೆ, ನಡೋಣಿ ದಂಪತಿಯ ಆಸೆ ಕೊಂಚ ಭಿನ್ನ. ತಮ್ಮ ಮನೆ ಕಲೆ ಮತ್ತು ನಿಸರ್ಗದ ಛಾಯೆಯನ್ನು ಮೇಳೈಸಿಕೊಂಡ ಅಪರೂಪದ ಮಾದರಿಯಾಗಬೇಕು, ಮನೆಯಲ್ಲಿ ನೈಸರ್ಗಿಕ ಪರಿಸರದ ಅನುಭವವಾಗಬೇಕು ಎಂಬ ಬಯಕೆ. ಅಂತೆಯೇ ಮನೆಯ ಆವರಣ ಗೋಡೆ, ಕಂಬ, ಕಿಟಕಿ, ಬಾಗಿಲು, ಕೊಠಡಿಗಳು ಹೀಗೆ ಪ್ರತಿ ವಸ್ತುವಿನಲ್ಲೂ ತಮ್ಮದೇ ಆದ ಕಲಾ ಲಹರಿಯಲ್ಲಿಯೇ ಯೋಚಿಸಿ, ಯೋಜಿಸಿ ಮನೆಯನ್ನು ಕಲಾಕೃತಿಯಂತೆಯೇ ಕಟ್ಟಿಕೊಂಡಿದ್ದಾರೆ.

ಮನೆಯ ಗೋಡೆಯ ಮೇಲೆ ನಿಸರ್ಗಮಯ ಚಿತ್ರಕೃತಿಗಳನ್ನು, ಮನ ಸೆಳೆಯುವ ಶಿಲ್ಪ ಮತ್ತು ಸಿಮೆಂಟಿನಿಂದ ಸಿದ್ಧಪಡಿಸಿದ ಕಲಾಕೃತಿಗಳನ್ನು ಜೋಡಿಸಿದ್ದಾರೆ.

ಮೆಟ್ಟಿಲುಗಳನ್ನೂ ಬಿದಿರಿನ ಬೊಂಬುಗಳಂತೆ ವಿನ್ಯಾಸಗೊಳಿಸಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಕಾಷ್ಠದಲ್ಲಿ ಕಾಣುವ ಆಕರ್ಷಕ ಆಕಾರಗಳನ್ನು ಜೋಡಿಸಿಟ್ಟಿದ್ದಾರೆ. ಮನೆಯ ಒಳಗೆ ಮತ್ತು ಹೊರಗೆ ಅದ್ಬುತವಾದ ಕಲಾಕೃತಿಗಳು ತುಂಬಿಕೊಂಡಿವೆ.  ಮನೆಯಲ್ಲಿ ಕಲಾಕೃತಿಗಳು ಮಾತ್ರವಲ್ಲ, ಹಾರ್ಮೋನಿಯಂ, ತಬಲಾ, ವೀಣೆ, ಕೊಳಲು ಹೀಗೆ ಸಂಗೀತ ಪರಿಕರಗಳೂ ಇವೆ. ಅವನ್ನೇನೂ ಶೋಕಿಗಾಗಿ ಇಟ್ಟುಕೊಂಡಿಲ್ಲ, ಅವುಗಳನ್ನು ಮನೆಮಂದಿ ನುಡಿಸುತ್ತಾರೆ.

ನಿಸರ್ಗಸ್ನೇಹಿ ನಿವಾಸ
‘ಕಲಾವಿದರಾದ ನಾವು ನಮ್ಮ ಮನೆಯೂ ಕಲಾತ್ಮಕ ಹಾಗೂ ಪರಿಸರ ಸ್ನೇಹಿಯಾಗಿರಬೇಕು ಎಂಬ ಮಹದಾಸೆಯೊಂದಿಗೆ ನಿರ್ಮಿಸಿಕೊಂಡಿದ್ದೇವೆ. ಮಹಾರಾಷ್ಟ್ರದ ಅಂಬೋಲಿ ಪರಿಸರದ ಲೆಟ್‌ರೈಸ್‌ ಸ್ಟೋನ್‌ (ಕೆಂಪು ಕಲ್ಲು)ಗಳಿಂದ ಗೋಡೆ ನಿರ್ಮಿಸಿದ್ದು, ಉಳಿದೆಲ್ಲವೂ ಸ್ಥಳೀಯ ಸಂಪನ್ಮೂಲವೇ’ ಎನ್ನುತ್ತಾರೆ ನಡೋಣಿ ದಂಪತಿ.

ಕಲಾಕತ್ಮವಾಗಿ ಕಟ್ಟಿರುವ ಈ ಮನೆಯ ಸೊಗಸು, ಸೌಂದರ್ಯ ಪಕ್ಕದಲ್ಲಿ ಹಾಯ್ದು ಹೋಗುವ ಯಾರನ್ನಾಗಲೀ ಆಕರ್ಷಿಸದೇ ಇರದು. ಮನೆಯಂಗಳದಲ್ಲಿ ಅರಳಿ ನಿಂತಿರುವ ಉದ್ಯಾನವಂತೂ ಆಕರ್ಷಕ. ಇಲ್ಲಿ ಪುಷ್ಪದ ಸುವಾಸನೆಯೊಂದಿಗೆ ಕಲೆಯ ಘಮಲೂ ಆವರಿಸಿದೆ. ಮನೆಯ ಒಳಗೆ ಮತ್ತು ಹೊರಗೆ ಕಲಾಕೃತಿಗಳನ್ನು ಖುದ್ದು ನಡೋಣಿ ದಂಪತಿ ತಮ್ಮದೇ ಆದ ಪರಿಕಲ್ಪನೆಯಲ್ಲಿ ರಚಿಸಿದ್ದಾರೆ. ಉದ್ಯಾನದಲ್ಲಿ ಕಬ್ಬಿನ ರವದಿಯನ್ನು ಬಳಸಿ ಕುಟೀರ ಕಟ್ಟಿಕೊಂಡಿದ್ದಾರೆ. ಹಸಿರು ಹುಲ್ಲು ನಳನಳಿಸುತ್ತಿದೆ.

ಬಣ್ಣಬಣ್ಣದ ಪುಷ್ಪಗಳು ಮನಮುದಗೊಳಿಸುತ್ತವೆ. ಮಾತ್ರವಲ್ಲ, ಇಲ್ಲಿ ಔಷಧೀಯ ಸಸಿಗಳೂ ಬೆಳೆಯುತ್ತಿವೆ. ಬಾಳೆ, ಪಪ್ಪಾಯಿ ಗಿಡಗಳೂ ಇವೆ. ಬುದ್ಧನ ಮೂರ್ತಿ, ಇನ್ನೊಂದೆಡೆ ಬಾಬುರಾವ್ ನಡೋಣಿ ಅವರ ತಂದೆತಾಯಿ ಅವರ ಮೂರ್ತಿಗಳಿವೆ. ಒಡೆದ ಕಲ್ಲು ಹಾಸುಗಳೂ ಇಲ್ಲಿ ಕಲಾಕೃತಿಯಂತೆ ರೂಪುಗೊಂಡಿವೆ. ಮೊಟ್ಟೆಯ ತೊಗಟೆಗೆ ಬಣ್ಣ ಬಳಿದು ಗಿಡಬಳ್ಳಿಗೆ ಅಳವಡಿಸಿ ಅಂದಗೊಳಿಸಿದ್ದಾರೆ. ಬಿದಿರಿನ ಚಿಕ್ಕ ಬುಟ್ಟಿಗಳನ್ನೇ ಬಳಸಿ ಮನೆಯ ಹೊರಗೆ ವಿನ್ಯಾಸಗೊಳಿಸಿದ್ದಾರೆ. ಮನೆಯ ಹೊಸ್ತಿಲಲ್ಲಿ ಕಾಲಿಂಗ್ ಬೆಲ್‌ ಬದಲಿಗೆ ಗಂಟೆ ಅಳವಡಿಸಿರುವುದು ಇನ್ನೂ ವಿಶೇಷ. 

ಕಲಾ ಕುಟುಂಬ..!
ರಾಯಬಾಗ ಪಟ್ಟಣದ ವಿವೇಕಾನಂದ ಕಾಲೇಜಿನಲ್ಲಿ ಚಿತ್ರಕಲಾ ಉಪನ್ಯಾಸಕರಾಗಿರುವ ಬಾಬುರಾವ ನಡೋಣಿ ಪೋರ್ಟ್‌ ರೈಟ್‌ ರಚಿಸುವಲ್ಲಿ ಎತ್ತಿದ ಕೈ. ಅವರಿಗೆ ಎರಡು ಬಾರಿ ರಾಷ್ಟ್ರಮಟ್ಟದ ಪ್ರಶಸ್ತಿಗಳು ಒಲಿದಿವೆ. ಅವರ ಪತ್ನಿ ಆಶಾರಾಣಿ ಕೂಡ ರಾಷ್ಟ್ರಮಟ್ಟದ ಕಲಾವಿದೆಯೇ. ರಾಯಬಾಗ ತಾಲ್ಲೂಕಿನ ಹಾಲಶಿರಗೂರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಇವರಿಗೂ ಮೂರು ಬಾರಿ ರಾಷ್ಟ್ರಮಟ್ಟದ ಪ್ರಶಸ್ತಿಗಳು ಸಂದಿವೆ. ಅಂದ ಹಾಗೆ ನಡೋಣಿ ದಂಪತಿಯ ಮೂರು ಜನ ಹೆಣ್ಣು ಮಕ್ಕಳೂ ಕಲೆಯಲ್ಲಿ ತೊಡಗಿಕೊಂಡಿದ್ದಾರೆ. ಪಿಯುಸಿ ಓದುತ್ತಿರುವ ಮೊದಲ ಮಗಳು ಸಂಸ್ಕೃತಿ, ಚಿತ್ರಕಲೆ ಮತ್ತು ಸಂಗೀತದಲ್ಲಿ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಐದನೇ ತರಗತಿಯಲ್ಲಿ ಓದುತ್ತಿರುವ ನಿನಾದ ಮತ್ತು ಮೂರನೇ ಮಗಳು ಚೈತನ್ಯ ಭರತನಾಟ್ಯ ಅಭ್ಯಸಿಸುತ್ತಿದ್ದಾರೆ. ಈ ಮೂವರು ಮಕ್ಕಳು ‘ಪ್ರಜಾವಾಣಿ’ ದಿನಪತ್ರಿಕೆ ನಡೆಸುವ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾರೆ.  
ಸಂಪರ್ಕಕ್ಕೆ: 9448237722.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT