ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಸಕ್ತರ ನೆಚ್ಚಿನ ತಾಣ ರಂಗಸ್ಥಳ

ಸುತ್ತಾಣ
Last Updated 26 ಜೂನ್ 2015, 19:30 IST
ಅಕ್ಷರ ಗಾತ್ರ

ನಗರದ ಯಾಂತ್ರಿಕ ಜೀವನದಿಂದ ಸ್ವಲ್ಪ ರಿಲೀಫ್ ಮಾಡಿಕೊಂಡು ಅಭೂತಪೂರ್ವ ವಿಸ್ಮಯ ಪರಿಸರಕ್ಕೆ ಭೇಟಿ ನೀಡಲು ನಗರಿಗರ ಮನವು ಸದಾ ಹಂಬಲಿಸುತ್ತಿರುತ್ತದೆ. ಸಾಲು - ಸಾಲು ಭವ್ಯ ಬೆಟ್ಟಗಳು ಮಧ್ಯದಲ್ಲಿ ಗ್ರಾಮೀಣ ಸೊಗಡು, ಪಕ್ಕಾ ಹಳ್ಳಿ ಲೈಫು, ಫಸಲು ತುಂಬಿಕೊಂಡು ಸೌಂದರ್ಯವತಿಯಾಗಿರುವ ಭೂತಾಯಿ. ಈ ಅದ್ಭುತ ಪ್ರಪಂಚ ಮನಸ್ಸಿಗೆ  ರೋಮಾಂಚನ ನೀಡುವುದರಲ್ಲಿ ಸಂಶಯವಿಲ್ಲ.

ಚಿಕ್ಕಬಳ್ಳಾಪುರ ಜಿಲ್ಲೆಯ ‘ರಂಗಸ್ಥಳ’ ಕಿರು ಪ್ರವಾಸಕ್ಕೆ ಒಂದು ನೆಚ್ಚಿನ ತಾಣ.  ನಗರದ ಕೇಂದ್ರ ಸ್ಥಳದಿಂದ 64 ಕಿ.ಮೀ. ದೂರದಲ್ಲಿರುವ ರಂಗಸ್ಥಳ ತಲುಪಲು ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಕ್ರಮಿಸಿ ಅಲ್ಲಿಂದ ಗೌರಿಬಿದನೂರು ಮಾರ್ಗದ ರಸ್ತೆಯಲ್ಲಿ 6 ಕಿ.ಮೀ ದೂರದ ತಿಪ್ಪನಹಳ್ಳಿಗೆ ಸಾಗಬೇಕು. 

ಈ ದೇವಾಲಯ ಯುಗ – ಯುಗಗಳ ಇತಿಹಾಸ ಹೊಂದಿದೆ, ಇಲ್ಲಿನ ಒಂದೊಂದು ಕಲ್ಲು ಒಂದೊಂದು ಕಥೆಗಳನ್ನ ವಿವರಿಸುತ್ತದೆ. ಈ ದೇವಾಲಯ ತನ್ನಲ್ಲಿ ಶಿಲ್ಪಕಲಾ ಗತವೈಭವವನ್ನೇ ಹೊಂದಿದೆ. ರಂಗಸ್ಥಳದ ಪ್ರಮುಖ ಆಕರ್ಷಣೆ ಇಲ್ಲಿನ ವಾಸ್ತುಶಿಲ್ಪ ಹಾಗೂ ವಿವಿಧ ರಾಜಮನೆತನಗಳ ಕೊಡುಗೆಗಳು. ಭಕ್ತರಿಗೆ ವೈಕುಂಠ, ಕಲಾಸಕ್ತರಿಗೆ ನೆಚ್ಚಿನ ತಾಣ, ಇತಿಹಾಸ ಪ್ರಿಯರಿಗೆ ಅಧ್ಯಯನ ಕೇಂದ್ರ, ಪ್ರವಾಸಿಗರಿಗೆ ಕುತೂಹಲಕಾರಿ ಕ್ಷೇತ್ರ ಇದು.

ದೇವಾಲಯದ ಸುತ್ತಲ್ಲಿರುವ ಬೆಟ್ಟಗಳು, ಕಲ್ಯಾಣಿ, ಹಸಿರು ಪರಿಸರ, ಹಳ್ಳಿ ಜನರ ಭಾವುಕ ಮಾತು, ಕುತೂಹಲ ನೋಟ, ಎಲ್ಲವೂ ನಗರದಿಂದ ವಲಸೆ ಬಂದು ಇಲ್ಲಿಯೇ ನೆಲೆಸೋಣ ಎನ್ನುವಷ್ಟು ಇಷ್ಟವಾಗುತ್ತದೆ.

ಪುರಾಣ ಹಿನ್ನೆಲೆ
ರಾಮನ ಪಟ್ಟಾಭಿಷೇಕದ ಸಂದರ್ಭದಲ್ಲಿ, ವಿಭೀಷಣನಿಗೆ ಶ್ರೀ ರಾಮ ಶಕ್ತಿ ಹಾಗೂ ಸಾಮರ್ಥ್ಯಗಳ ಬಲವರ್ದನೆಗಾಗಿ ರಂಗನಾಥಸ್ವಾಮಿಯನ್ನು ಪೂಜಿಸೆಂದು ಒಂದು ಬಿದಿರಿನ ಬುಟ್ಟಿಯಲ್ಲಿ ರಂಗನಾಥನ ವಿಗ್ರಹವಿಟ್ಟು ಉಡುಗೊರೆ ನೀಡುತ್ತಾನೆ. ಅದರ ಜ್ಞಾಪಕಾರ್ಥವಾಗಿ ಸಪ್ತ ಋಷಿಗಳು ರಂಗಸ್ಥಳದಲ್ಲಿ ರಂಗನಾಥಸ್ವಾಮಿ ದೇಗುಲ ನಿರ್ಮಾಣ ಮಾಡಿದ್ದಾರೆ ಎಂಬ ನಂಬಿಕೆಯಿದೆ.

ಇತಿಹಾಸ: ಹೊಯ್ಸಳರಾದ ಡಂಕಣಾಚಾರಿ ಹಾಗೂ ಟಂಕಣಾಚಾರಿಯರು ರಂಗನಾಥನ ಸೇವೆಯ ಸಲುವಾಗಿ ದೇವಾಲಯದ ಅಭಿವೃದ್ಧಿ ಕಾಂರ್ಯiಮಾಡಿದ್ದಾರೆಂದು, ಇದರ ಸಲುವಾಗಿ ಅನೇಕ ಸ್ತಂಭಗಳನ್ನು ಸಹ ನಿರ್ಮಿಸಿದ್ದಾರೆ ಎಂಬುದು ಉಲ್ಲೇಖ. ಆ ಸ್ತಂಭಗಳಲ್ಲಿ ಹೊಯ್ಸಳರ ಲಾಂಛನವನ್ನು ಸಹ ಕಾಣಬಹುದು. ಹಾಗೂ ನಂತರದ ದಿನಗಳಲ್ಲಿ ಚೋಳರು ಹಾಗೂ ವಿಜಯನಗರ ಸಾಮ್ರಾಜ್ಯದ ರಾಜರು ತಮ್ಮದೆ ಆದ ಕೊಡುಗೆಯನ್ನು ದೇವಾಲಯಕ್ಕೆ ನೀಡಿದ್ದಾರೆ.

ವಾಸ್ತುಶಿಲ್ಪ: ದೇವಾಲಯದ ವಾಸ್ತುಶಿಲ್ಪವು ಹೊಯ್ಸಳ, ಚೋಳ, ವಿಜಯನಗರ  ಮಿಶ್ರಿತ ರೂಪವಾಗಿದ್ದು, ವಿನ್ಯಾಸ ಹಾಗೂ ಶೈಲಿಯಲ್ಲಿ ವೈವಿಧ್ಯ ಹೊಂದಿದೆ. ಈ ದೇಗುಲ ಬಹುತೇಕ ಸ್ತಂಭಗಳಿಂದ ಕೂಡಿದ್ದು, ಪ್ರತಿಯೊಂದು ಕಂಬಗಳಲ್ಲಿ ದೇವರ ವಿಗ್ರಹಗಳು, ನಾಟ್ಯರಾಣಿಯರು, ಕುದುರೆಗಳು, ಆನೆಗಳು, ದ್ವಾರಪಾಲಕರು, ಗರುಡ, ಹನುಮಂತನ ಅವಾತರಗಳು, ವಿಷ್ಣುವಿನ ದಶಾವತರ ಮುಂತಾದ ಕೆಲವು ಪೌರಣಿಕ ಸನ್ನಿವೇಶಗಳ ಕೆತ್ತನೆಗಳಿವೆ.

ಕೋಟಿನಾಗ ಕಿಂಡಿ: ಗರ್ಭಗುಡಿಗೆ ಹೊಂದಿಕೊಂಡಿರುವ ಕಿಂಡಿಯು ವಿಶೇಷವಾದ ಸ್ಥಾನ ಪಡಿದುಕೊಂಡಿದೆ. ಸಂಕ್ರಾಂತಿ ಸೂರ್ಯೋದಯದಂದು ಸೂರ್ಯನ ಕಿರಣಗಳು ರಂಗನಾಥನ  ಪಾದಗಳ ಮೇಲೆ ಬೀಳುತ್ತವೆ. ಇದು ಸೂರ್ಯನಾರಾಯಣರ ರೂಪವೆಂಬ ನಂಬಿಕೆ ದೇಗುಲದಲ್ಲಿದೆ. 

ಗರ್ಭಗುಡಿ: ಗರ್ಭಗುಡಿ ವಿನ್ಯಾಸವು ಬಿದಿರು ಬುಟ್ಟಿಯ ಆಕಾರದಂತಿದ್ದು, ದೇವರ ವಿಗ್ರಹದ ಸುತ್ತ  ಬ್ರಹ್ಮ, ಮಹೇಶ್ವರ, ಅಷ್ಟ ದಿಕ್ಪಾಲಕರು, ಶಂಖ-ಚಕ್ರ, ಸಪ್ತ ಋಷಿಗಳನ್ನು ಸಹ ಪ್ರತಿಷ್ಠಾಪನೆ ಮಾಡಲಾಗಿದೆ. ದೇವರು ವೈಕುಂಠದಲ್ಲಿ ಮಲಗಿರುವಾಗ ಸುತ್ತಲು ಎಲ್ಲರೂ ಪ್ರಾರ್ಥನೆ ಮಾಡುವ ರೀತಿ ಭಾಸವಾಗುವಂತೆ ಕೆತ್ತಲಾಗಿದೆ. ಕೆಳಭಾಗದಲ್ಲಿ ಗರುಡ ಅವನ ಮೇಲೆ ಆದಿಶೇಷನಿದ್ದು ಮಹಾವಿಷ್ಣು ಮಲಗಿರುವ ಹಾಗೂ ದೇವರ ಪಾದದ ಬಳಿ ಭೂದೇವಿ ಹಾಗೂ ದೇವಿಯರ ವಿಗ್ರಹವಿದೆ. ಈ ದೇವರ ವಿಗ್ರಹವು ತ್ರೇತಾಯುಗದ್ದಾಗಿದ್ದು, ಸುಮಾರು 9 ಸಾವಿರ ವರ್ಷಗಳಷ್ಟು ಹಳೆಯದೆಂಬ ಮಾಹಿತಿಯಿದೆ.

ದೇವಾಲಯದ ಹೊರಭಾಗವು 1,000 ವರ್ಷದಷ್ಟು ಹಳೆಯದಾಗಿದೆ. ಗರ್ಭಗುಡಿಯ ಬಲಭಾಗದಲ್ಲಿ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯರ ವಿಗ್ರಹವಿದ್ದು, ಎಡಭಾಗದಲ್ಲಿ ದೇಗುಲದ ದಶ ಸೇವಕರ ವಿಗ್ರಹಗಳಿವೆ.
ರಂಗಸ್ಥಳದ ಮತ್ತೊಂದು ವಿಶೇಷವೆಂದರೆ, “ಆದಿರಂಗ( ಶ್ರೀರಂಗಪಟ್ಟಣ), ಮಧ್ಯರಂಗ(ಪುಲಿವೆಂದುಲ), ಅಂತ್ಯರಂಗ (ಶ್ರೀ ರಂಗಂ) ಹಾಗೂ ರಂಗಸ್ಥಳದಲ್ಲಿರುವ ದೇವಾಲಯಗಳು ಒಂದೇ ಮುಹೂರ್ತದಲ್ಲಿ ಸ್ಥಾಪಸಲಾಗಿದೆ.

ಈ ನಾಲ್ಕು ದೇವಾಲಯಗಳ ದರ್ಶನ ಮಾಡುವುದರಿಂದ ಅಧಿಕ ಪುಣ್ಯ ಪಡೆಯಬಹುದೆಂಬ ನಂಬಿಕೆ ಭಕ್ತರಲ್ಲಿಿದೆ. ಈ ದೇಗುಲ ನಿರ್ಮಾಣ ಮಾಡಿದ್ದ ಋಷಿಗಳು ಸ್ಕಂದಗಿರಿಯಲ್ಲಿ ತಪಸ್ಸು ಮಾಡಿದ್ದರೆಂಬ ಕುರುಹುಗಳಿವೆ ಎಂದು ನಂಬಲಾಗಿದೆ.ನಗರದ ಸಮೀಪವೇ ಇರುವ ಈ ಸ್ಥಳಕ್ಕೆ ಒಂದು ದಿನ ಕುಟುಂಬ ಸಮೇತರಾಗಿ, ಸ್ನೇಹಿತರೊಟ್ಟಿಗೆ ತೆರಳಿ ಸುತ್ತಾಡಿ ಬರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT