ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದುಕೊಂಡ ಅಸ್ತಿತ್ವ–ಚಹರೆಗಳ ಸಾಂಕೇತಿಕ ಪುನರ್ ಸಂಪಾದನೆ

ವಿಮರ್ಶೆ
Last Updated 23 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು ದರ್ಶನ (ಸಂಪುಟ 1,2 ಹಾಗೂ 3)
ಸಂ:
ಪ್ರೊ.ಎಂ.ಎಚ್. ಕೃಷ್ಣಯ್ಯ ಮತ್ತು ಡಾ. ವಿಜಯಾ
ಪ್ರ: ಉದಯಭಾನು ಕಲಾಸಂಘ (ನೋಂ.), ಗವಿಪುರ ಸಾಲು ಛತ್ರಗಳ ಎದುರು, ರಾಮಕೃಷ್ಣ ಬಡಾವಣೆ, ಕೆಂಪೇಗೌಡನಗರ, ಬೆಂಗಳೂರು– 560019

ಲಂಡನ್ ನಗರವನ್ನು ಕುರಿತು ಪ್ರಕಟವಾಗಿರುವ ಪುಸ್ತಕಗಳ ಸಂಖ್ಯೆ ಇಪ್ಪತ್ತೇಳು ಸಾವಿರ. ಇದು ಹತ್ತು ವರ್ಷದ ಹಿಂದಿನ ಮಾತು. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿರುವ ನಮ್ಮ ಬೆಂಗಳೂರು ಅಮೇರಿಕನ್ನರ ಈರ್ಷ್ಯೆಗೆ ಈಡಾಗಿ, ಗುಣಲಕ್ಷಣವೊಂದರ ಹೆಸರಾಗಿಯೂ ಒದಗಿಬಂದಿದೆ.

ಅಮೇರಿಕನ್ನರ ಕೆಲಸಗಳನ್ನೆಲ್ಲ ಹೊರಗಿನವರು ಕಿತ್ತುಕೊಳ್ಳುವುದನ್ನು  ಚೆನ್ನೈಡು, ಮುಂಬೈಡು ಅಥವ ಡೆಲ್ಲೈಡು ಅನ್ನದೆ ‘ಬ್ಯಾಂಗಲೂರ್ಡ್’ ಎಂದು ಕರೆಯಲಾಗುತ್ತದೆ. ಅಷ್ಟರಮಟ್ಟಿಗೆ ಎಲ್ಲರ ಕಣ್ಣುರಿಯಾಗಿ, ಆ ಕಾರಣದಿಂದಲೇ ಇಲ್ಲಿನವರೂ ದಿನನಿತ್ಯ ಕಣ್ಣುರಿಗೊಳಗಾಗುವಷ್ಟು ಕಿಷ್ಕಿಂಧಾ ನಗರವಾಗಿದೆ. ಒಂದು ಅಂದಾಜಿನ ಪ್ರಕಾರ ಬೆಂಗಳೂರು ಹಾಗೂ ಮೆಕ್ಸಿಕೋ ಇನ್ನು ಐವತ್ತು ವರ್ಷದಲ್ಲಿ ಜನರಹಿತವಾಗುತ್ತವಂತೆ, ನೀರಿನ ಅಭಾವದಿಂದ.

ಕನ್ನಡ ಭಾಷೆಯೂ ಹಾಗೆಯೇ ಬಳಸುವವರಿಲ್ಲದೆ ಇಮರಿಹೋಗುತ್ತದೆ ಎನ್ನುವ ಮತ್ತೊಂದು ಅನುಮಾನಸ್ಪದವಾದ ನಂಬಿಕೆಯೂ ಚಾಲ್ತಿಯಲ್ಲಿದೆ. ಬೆಂಗಳೂರು ಅತಿಯಾದ ಜನರಿಂದಾಗಿ ಬದುಕಲು ಅಸಾಧ್ಯವಾದರೆ, ಕನ್ನಡವು ಬಳಸುವವರಿಲ್ಲದೆ ಉಳಿಯುವುದು ಅಸಾಧ್ಯವಾಗುತ್ತದೆ ಎನ್ನುವ ನಂಬಿಕೆಯದು.

ಇದು ಬೆಂಗಳೂರಿಗೂ ಕನ್ನಡಕ್ಕೂ ಇರುವ ಅವಿನಾಭಾವ ಬಂಧ. ‘ಬೆಂಗಳೂರು ದರ್ಶನ’ ಎಂಬ ಮೂರು ಸಂಪುಟದ ಈ ಪ್ರಕಟಣೆಯ (ಸಂಪಾದಕರು: ಪ್ರೊ. ಎಂ.ಎಚ್. ಕೃಷ್ಣಯ್ಯ ಮತ್ತು ಡಾ. ವಿಜಯಾ) ಅತ್ಯುತ್ತಮ ಸಾಧನೆ ಎಂದರೆ ಈ ನಗರಕ್ಕೂ ಈ ಭಾಷೆಗೂ ನಡುವೆ ಒಂದು ಅನಿರೀಕ್ಷಿತ ಆಶಾವಾದಿ ಸಂವಾದವೊಂದನ್ನು ಸ್ಥಾಪಿಸಿರುವುದು.

ಈಗ ಈ ನಗರಕ್ಕೆ ಭಾಷೆಯಾಗಿ ಹಾಗೂ ಬದುಕಿನ ಶೈಲಿಯಾಗಿ ದೊರಕುತ್ತಿರುವ ‘ಇಂಗ್ಲಿಷ್ ವ್ಯಕ್ತಿತ್ವಕ್ಕೆ’ ಇನ್ನಿಲ್ಲದ ಹದಿವಯಸ್ಸಿನ ಪೊಗರು ಬೇರೆ. ಆದರೂ ಬೆಂಗಳೂರಿನ ಬಹುಮುಖಿ ವ್ಯಕ್ತಿತ್ವವನ್ನು ಹಿಡಿದಿರಿಸಲು ಕೊನೆಗೂ ಈ ಮೂರು ಸಂಪುಟಗಳ ಮೂಲಕ ಕನ್ನಡ ಭಾಷೆಯೇ ಒದಗಿಬರಬೇಕಿತ್ತು.

ಭಾರತೀಯ ಇಂಗ್ಲಿಷ್ ಇಂದಿಗೂ ಈ ಪುಸ್ತಕದ ವಿಸ್ತೀರ್ಣ ಹಾಗೂ ವ್ಯಾಪ್ತಿಯನ್ನು ಒಳಗೊಳ್ಳುವ ಸ್ಥೈರ್ಯ ಪಡೆಯದಿರುವುದಕ್ಕೆ ಕನ್ನಡಕ್ಕೂ ಈ ನಗರಕ್ಕೂ ಗುಪ್ತಗಾಮಿನಿಯಾಗಿಯಾದರೂ ಇರುವ ಅವಿನಾಭಾವ, ಕರುಳಬಳ್ಳಿಯ ಸಂಬಂಧವೇ ಸಾಕ್ಷಿ.

ಬೆಳೆಯುತ್ತಿರುವ ನಗರದ ಅಸಹಜ ವಿಸ್ತಾರಕ್ಕೂ ‘ಬೆಂಗಳೂರು ದರ್ಶನ’ ಪುಸ್ತಕದ ದ್ವಿತೀಯ ಪರಿಷ್ಕೃತ ಮುದ್ರಣ ಎನ್ನುವ ಸಂಪಾದನೆಯ ಭೌತಿಕ ಹಾಗೂ ವಿಷಯಾಧಾರಿತ ವ್ಯಾಪ್ತಿಗೂ ತಾಳೆಹೊಂದುವ ಅನೇಕ ವಿಷಯಗಳಿವೆ. ಎಲ್ಲ ನಗರಗಳಲ್ಲಾಗುವಂತೆ, ಆಯಾ ನಗರವು ಯಾವ ರಾಜ್ಯಕ್ಕೆ ರಾಜಧಾನಿಯಾಗಿ ಉಳಿದಿದೆಯೋ ಅದೇ ರಾಜ್ಯದ ಭಾಷೆಯು ಆ ನಿರ್ದಿಷ್ಟ ನಗರದಲ್ಲಿ ತನ್ನ ಬಹುಮುಖತ್ವವನ್ನು ಮೊದಲು ಕಳೆದುಕೊಂಡು ಸಪಾಟಾಗಿಬಿಡುತ್ತದೆ.

ಈ ಹಿನ್ನೆಲೆಯಲ್ಲಿ ಕೃಷ್ಣಯ್ಯ ಹಾಗೂ ವಿಜಯಾ ಅವರು ಈ ತ್ರಿವಳಿ ಸಂಪುಟಗಳಿಗೆ ಎರಡು ಮಹತ್ವಾಕಾಂಕ್ಷೆಯ ಉದ್ದೇಶಗಳನ್ನು ಅಳವಡಿಸಿದ್ದಾರೆ: ಬೇರೆ ಯಾವ ಭಾಷೆಯೂ ಹಿಡಿದಿರಿಸಲಾರದಂತೆ, ಕನ್ನಡಕ್ಕೆ ಮಾತ್ರ ನಿರ್ದಿಷ್ಟವಾಗುವಂತೆ ಈ ನಗರದ ಪರಿಕಲ್ಪನೆಯನ್ನು ಅದರ ಪೂರ್ವೇತಿಹಾಸ ಹಾಗೂ ಭವಿಷ್ಯದ ಕನಸುಗಳನ್ನು ಎರಡು ತುದಿಗಳಲ್ಲಿಟ್ಟು ಕಟ್ಟಿಕೊಟ್ಟಿದ್ದಾರೆ.

ಮತ್ತು, ನಗರವನ್ನು ‘ಪರಿಕಲ್ಪನೆಗಳಲ್ಲಿ’ ಅಥವ ‘ಸಿಮ್ಯುಲೇಷನ್ನಿನ’ ಮೂಲಕವೇ ಕಟ್ಟಿಕೊಡುವ ಯತ್ನದಲ್ಲಿ ಕನ್ನಡಕ್ಕೂ, ಕನ್ನಡಕ್ಕೇ ಒಂದು ಕಾಯಕಲ್ಪವನ್ನು ಒದಗಿಸಿಕೊಡುವ ಧೀಮಂತ ಯತ್ನವನ್ನು ಇಲ್ಲಿ ಮಾಡಲಾಗಿದೆ. ಆದ್ದರಿಂದ ಈ ಪುಸ್ತಕದಲ್ಲಿ ಬೆಂಗಳೂರಿದೆ, ಬ್ಯಾಂಗಲೂರ್ ಇದೆ, ‘ಕಲ್ಯಾಣನಗರ’ವೂ ಇದೆ.

2010ರಲ್ಲಿ ಪ್ರಕಟಗೊಂಡಿದ್ದ ‘ಬೆಂಗಳೂರು ದರ್ಶನ’ದ ಮೊದಲ ಆವೃತ್ತಿಯ ಎರಡು ಸಂಪುಟಗಳು ಈಗ ಪರಿಷ್ಕರಣಗೊಂಡು, ಮೈದುಂಬಿ ಮೂರು ಸಂಪಟಗಳಾಗಿವೆ, ಆದರೆ ಗಾತ್ರ ಮಾತ್ರ ಅಕ್ಷರಶಃ ಎರಡು ಪಟ್ಟು ಹೆಚ್ಚಾಗಿದೆ. ಇದಕ್ಕೆ ಕಾರಣವೆಂದರೆ ಸ್ವತಃ ಹಿಗ್ಗುತ್ತಿರುವ ಇದರ ವಿಷಯ. ಬೃಹತ್ ಬೆಂಗಳೂರು ದಿನೇ ದಿನೇ ಎಲ್ಲರ ನಿರೀಕ್ಷೆ ಮೀರಿಹೋಗುತ್ತಿದೆ.

‘ಕೈಗಾರೀಕರಣಕ್ಕೆ ಒಳಗಾಗಿ, ಇಲ್ಲವೇ ನಾಶವಾಗಿ’ ಎಂಬ ವಿಶ್ವೇಶ್ವರಯ್ಯನವರ ಹೇಳಿಕೆಯ ಜೊತೆ ಜೊತೆಗೇ ಎಲ್.ಎಸ್. ಶೇಷಗಿರಿರಾವ್ ಅವರ, ‘ಮಿತಿಯಿಲ್ಲದ ಬೆಳವಣಿಗೆ ಊತವಾಗುತ್ತದೆಯಲ್ಲದೆ ಮೈತುಂಬಿಕೊಳ್ಳಲಾಗುವುದಿಲ್ಲ’ ಎಂಬ ಪರಸ್ಪರ ತೀವ್ರ ಸಂವಾದಿ ಹೇಳಿಕೆಗಳು ಅಕ್ಕಪಕ್ಕದಲ್ಲಿವೆ.

ಈ ನಗರದ ಬಗ್ಗೆ ಕೇವಲ ಮೆಚ್ಚುಗೆಯಲ್ಲದೆ – ಎಲ್ಲ ರೀತಿಯ ಔಪಚಾರಿಕ, ಶೈಕ್ಷಣಿಕ ಪರಿಕಲ್ಪನೆಗಳನ್ನೂ ಕನ್ನಡ ಭಾಷೆಯು ಹೇಗೆಲ್ಲ ಒಡೆದು ಪುನರ್ ರೂಪಿಸಬಹುದೋ ಅಂತಹ ಕಟ್ಟೋಣಗಳ ಚಾರ್ವಾಕ ಆಯಾಮವೂ ಈ ಪುಸ್ತಕದಲ್ಲಿ ವಿಪುಲವಾಗಿವೆ.

ಈ ದರ್ಶನದ ಎರಡನೇ ಆವೃತ್ತಿಯ ಒಂದೇ ಕೊರತೆಯೆಂದರೆ ಕೇವಲ ಮೂರು ಸಾವಿರ ರೂಪಾಯಿಗಳಿಗೆ ನಮ್ಮನಿಮ್ಮಂತವರು ಸುಲಭಕ್ಕೆ ಎತ್ತಲಾಗದ ಚೀಲದಲ್ಲಿ ಇವುಗಳನ್ನು ಕೊಂಡೊಯ್ಯಬೇಕಾಗುತ್ತದೆ.

ಇದರ ಹಿಂದೆ ಭಾಷೆಯ ‘ಭಾರ’ವನ್ನು ನಗರದ ‘ವಿಸ್ತಾರ’ದೊಂದಿಗೆ ತಾಳೆಹಾಕುವ ಸಂಪಾದಕರ ತೆಳುವ್ಯಂಗ್ಯೋಕ್ತಿ ಇದ್ದಲ್ಲಿ, ಅದೂ ಸ್ವಾಗತಾರ್ಹವೇ. ನಿರಂತರವಾಗಿ ದಶದಿಕ್ಕುಗಳಲ್ಲಿ ಗುಣಾಕಾರಗೊಳ್ಳುತ್ತಿರುವ ಬೆಂಗಳೂರಿನ ಪ್ರವೃತ್ತಿಗಳನ್ನು ಅದು ಆಗುತ್ತಿರುವಂತೆಯೇ ಹಿಡಿದಿರಿಸುವ ಕನ್ನಡ ಭಾಷೆಯ ಸಾಮರ್ಥ್ಯದ ಒಂದು ಜಲಕ್ ಈ ಪುಸ್ತಕದ ಸೊಬಗನ್ನು ಹೆಚ್ಚಿಸಿದೆ.

ಮೊದಲಿಗೆ ಈ ಪುಸ್ತಕ(ಗಳ) ಒಳಗಿನಿಂದಲೇ ಹೆಕ್ಕಿತೆಗೆದ ವಿಶೇಷ ಅಂಶವೊಂದನ್ನು ಗಮನಿಸಿ: ಈ ಪುಸ್ತಕದ ಈಗಿನ ಮುಖಬೆಲೆಗಿಂತಲೂ ಸ್ವಲ್ಪ ಕಡಿಮೆ ಬೆಲೆಯಲ್ಲಿ ಈ ಪುಸ್ತಕದ ವಿಷಯವಾದ ಬೆಂಗಳೂರು ನಗರವನ್ನು ಕೆಲವೇ ಶತಮಾನಗಳ ಹಿಂದೆ ಒಬ್ಬ ದೊರೆ ಮತ್ತೊಬ್ಬ ರಾಜನಿಗೆ ಮಾರಿಬಿಟ್ಟಿದ್ದ! ಈ ಪುಸ್ತಕದ ವಿಷಯಗಳ ವೈವಿಧ್ಯತೆಯ ಒತ್ತಡಕ್ಕೆ ಸಿಲುಕಿದರೂ ಒಂದು ಶತಮಾನ ಕಾಲದಲ್ಲಿ ಕನ್ನಡವು ಅರಳಿರುವ ಕ್ರಮವನ್ನು ಗಮನಿಸಿದರೆ, ನಗರೀಕರಣವೇ ಭಾಷಾಂಕುರಕ್ಕೆ ಹೊಸ ಜೀವ ನೀಡುವ ಸಾಧ್ಯತೆಗೆ ಈ ಸಂಪುಟಕ್ಕಿಂತಲೂ ಬೇರೆ ಉದಾಹರಣೆ ಹತ್ತಿರದಲ್ಲೆಲ್ಲೂ ದೊರಕಲಾರದು – ವಿಶ್ವವಿದ್ಯಾಲಯಗಳ ಹಾಗೂ ಸರ್ಕಾರಿ ಸಂಸ್ಥೆಗಳ ಪ್ರಕಟಣೆಗಳಲ್ಲಿ.

*** 
ಈ ಪುಸ್ತಕವು ಬೆಂಗಳೂರನ್ನು ಕುರಿತಾದ ‘ರಫ್ ಗೈಡ್’ ಅಲ್ಲ, ‘ಟ್ರಿವಿಯಾ’ ಅಲ್ಲ, ‘ಎನ್‌ಸೈಕ್ಲೋಪೀಡಿಯ’ ಅಲ್ಲ, ಪರಿಚಯಾವಳಿಯಲ್ಲ, ಇತಿಹಾಸದ ದಾಖಲೆಯಲ್ಲ, ಆಲ್ಬಂ ಅಲ್ಲ, ಅಕಡೆಮಿಕ್ ಅಧ್ಯಯನವೂ ಅಲ್ಲ. ಆದರೆ ಇವೆಲ್ಲ ಪ್ರಕಟಣಾ ಪ್ರಕಾರಗಳನ್ನು ವಿಷಯಕ್ಕೆ ಹೊಂದುವಂತೆ ಬಾಗಿಸಿ,

ಯಾವ ನಿದಿಷ್ಟ ವರ್ಗೀಕರಣಕ್ಕೂ ಸುಲಭಕ್ಕೆ ಒಗ್ಗದೆ, ನಗರದ ವ್ಯಕ್ತಿತ್ವದೊಂದಿಗೆ ಭಾಷೆಯು ಸ್ಪರ್ಧಿಸುವ ಒಂದು ಜ್ಞಾನಕೇಂದ್ರೀಯ ಜುಗಲ್‌ಬಂದಿಯ ಹೊಸ ಉತ್ಪಾತದ ಅಧ್ಯಯನಕ್ಕೆ ಒಳ್ಳೆಯ ಆಧಾರ ಈ ಪುಸ್ತಕ. ಎಪಿಕ್ ಅಥವ ಬೃಹತ್ ಪ್ರಯತ್ನಗಳನ್ನು ವಿಮರ್ಶಿಸುವುದು ಸುಲಭವೂ ಅಲ್ಲ, ಸಾಧುವೂ ಅಲ್ಲ.

ಇದೇ ಸಂಪಾದಕ ವರ್ಗವು ‘ನವ ಕರ್ನಾಟಕ’ ಪ್ರಕಾಶನ ಸಂಸ್ಥೆಗೆ ‘ವಿಶ್ವ ಕಲಾಕೋಶ’ವನ್ನು ಅರ್ಧ ದಶಕದ ಹಿಂದೆ ರೂಪಿಸಿಕೊಟ್ಟಿದ್ದಾಗಲೂ ಹೀಗೆಯೇ ಆಗಿತ್ತು. ಒಳ್ಳೆಯ ಕೃತಿಗಳು ಮೊದಲಿಗೆ ಅನುಕರಣೆಕಾರರನ್ನು ಹುಟ್ಟುಹಾಕಿದರೆ, ಮೇರು ಯತ್ನಗಳು ಅನುಕರಣಾತೀತ ಮೆಚ್ಚುಗೆಯನ್ನು ಮೊದಲಿಗೇ ಸೂಚಿಸಿಬಿಡುವಂತೆ ಮಾಡುತ್ತವೆ. ಈ ಪ್ರಕಟಣೆ ಎರಡನೇ ವರ್ಗದ್ದು.

ಇದೊಂದು ಎಪಿಕ್ ಯತ್ನ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಂತೆಯೇ ನಗರಗಳು ಭೌತಿಕವಾಗಿ ಮಾತ್ರ ಅಸ್ತಿತ್ವದಲ್ಲಿಲ್ಲದ ಕಾಲ ಇದು. ಮೂರು ಸಂಪುಟಗಳ, ಸುಮಾರು 21 ಅಧ್ಯಾಯಗಳ ಹಾಗೂ 500 ದೊಡ್ಡ, ಮಧ್ಯಮ ಹಾಗೂ ಸಣ್ಣ ಅಳತೆಯ ಲೇಖನಗಳನ್ನೊಳಗೊಂಡ, ಸುಮಾರು 300 ಲೇಖಕರ ಬರಹ ಶೈಲಿಗಳನ್ನೊಳಗೊಂಡ ಈ ಪುಸ್ತಕವು ಅತ್ತ ಗ್ರಂಥಾಲಯ, ಇತ್ತ ವೈಯಕ್ತಿಕ ಕಪಾಟುಗಳೆರಡರಲ್ಲೂ ಸೇರುವ ಯೋಗ್ಯತೆಯವು.

ಶುದ್ಧಾಂಗರಿಗೆ (ಪ್ಯೂರಿಟಾನ್ಸ್) ಈ ಪುಸ್ತಕಗಳಲ್ಲಿ ಅಷ್ಟೇನೂ ಆಕರ್ಷಕವಾಗಿಲ್ಲದ ಕಪ್ಪುಬಿಳುಪು ಚಿತ್ರಗಳು ಬಣ್ಣಗೆಟ್ಟಂತೆ ಕಾಣಬಹುದು, ಪುಸ್ತಕದ ಅಗಲ ಅತಿಯೆನಿಸಬಹುದು, ಆ ಭಾರಕ್ಕೆ ಮುಖಪುಟಗಳು ತೆಳುವೆನ್ನಿಸಬಹುದು, ಸತ್ವದಲ್ಲಿ ಕಾಳು–ಜೊಳ್ಳು ಒಟ್ಟಿಗೆ ಬಂದುಬಿಟ್ಟಂತೆನಿಸಬಲ್ಲದು,

ವಿನ್ಯಾಸ ತೀರ ಸಾಧಾರಣ ಎನಿಸಿಬಿಡಬಹುದು, ಹೋಲಿಕೆಯಲ್ಲಿ ಕೆಲವು ವಿಷಯಗಳಿಗೆ ಇನ್ನಿತರದೊಂದಿಗಿನ ಅನಗತ್ಯವಾಗಿ ಹೆಚ್ಚುಗಾರಿಕೆ ದೊರಕಿದಂತೆಯೂ ಅನ್ನಿಸಿಬಿಡಬಹುದು.

ಉದಾಹರಣೆಗೆ, ಗಳಗನಾಥರಿರುವ ಹಳೆಯ ಮಾಸಿದ ಛಾಯಾಚಿತ್ರ, ರಾಜ್‌ಕುಮಾರ್ ಕ್ಯಾಮೆರಾಕ್ಕೆ ಬೆನ್ನುಮಾಡಿ ಗೋಕಾಕ್ ಚಳವಳಿಕಾರರಿಗೆ ಕೈಬೀಸುತ್ತಿರುವ ಕಪ್ಪುಬಿಳುಪಿನ ಛಾಯಾಚಿತ್ರಗಳ ಜೊತೆಜೊತೆಗೇ ಹುಚ್ಚ ವೆಂಕಟ್‌ನ ಮಲ್ಟಿಕಲರ್ ಚಿತ್ರವನ್ನು ನೋಡಬೇಕಾಗಿರುವುದು ಸಂಕಟವೆನಿಸಬಹುದು.

ಆದರೆ ಈ ಪುಸ್ತಕದ ಸ್ವಾದವಿರುವುದೇ ಇಲ್ಲಿ: ಈ ನಗರದ ಚರಿತ್ರೆಯಲ್ಲಿ ಯಾರು ಯಾವಾಗ ಇದ್ದರು, ಏನೇನೆಲ್ಲ ನಡೆಯಿತು ಎನ್ನುವ ಮಾಹಿತಿಯ ಜೊತೆಗೆ, ಛಾಯಾಚಿತ್ರಣವು ಈ ನಗರಕ್ಕೆ ಸಂಬಂಧಿಸಿದಂತೆಯೇ ಬೆಳೆದು ಬಂದ ಚರಿತ್ರೆಯ ದಾಖಲೆಯೂ ಹೌದು, ಈ ಪುಸ್ತಕ.
 

ಈ ದೋಷಗಳನ್ನು ಅನಿವಾರ್ಯವೆಂದಾಗಲೀ ಅಥವ ಇಲ್ಲವೆಂದಾಗಲೀ ಕೊಡವಿಕೊಳ್ಳುವ ಅವಶ್ಯಕತೆ ಇಲ್ಲ. ಬದಲಿಗೆ, ದುಪ್ಪಟ್ಟು ಖರ್ಚು ಮಾಡಿದರೂ ಸರ್ಕಾರಗಳು ‘ಉದಯಭಾನು ಕಲಾಸಂಘ’ಗಳಂತಹ ಇಚ್ಛಾಶಕ್ತಿಯನ್ನೇ ಬಂಡವಾಳ ಆಗಿಸಿಕೊಂಡಿರುವ ಸರ್ಕಾರೇತರ ಸಂಸ್ಥೆಗಳ ಮನೋಭಾವವನ್ನು ತಮ್ಮ ಕೃತಿಗಳಲ್ಲಿ ಹೊರತರುವುದು ಅಸಾಧ್ಯ. ಇಚ್ಛಾಶಕ್ತಿಯ ಕೊರತೆ ಇದಕ್ಕೆ ಕಾರಣವಲ್ಲ.

ಬದಲಿಗೆ ಔಪಚಾರಿಕವಾಗಿ ಸ್ಥಾಪಿತ ಸಾಂಸ್ಥೀಕೃತ ಸರ್ಕಾರಿ ವ್ಯವಸ್ಥೆಗಳು ನಗರಗಳನ್ನು ಭಾವಿಸುವಾಗ ಸುಲಭಕ್ಕೆ ನಿರ್ಭಾವುಕವಾಗಿ ನೋಡುವುದು ಅವರ ಪ್ರೋಟೋಕಾಲು–ಕೈಗಳಲ್ಲಿ ಅಸಾಧ್ಯದ ಮಾತೇ ಸರಿ. ಇಲ್ಲಿ ಜನಪ್ರಿಯರ ಜೊತೆ, ಅದರಿಂದ ವಂಚಿತರಾದವರಿದ್ದಾರೆ, ಅಪರೂಪ ಆಗಿರುವುದರಿಂದಲೇ ಅನರ್ಘ್ಯವೆನ್ನಿಸಿಬಿಡುವ ಛಾಯಾಚಿತ್ರಗಳಿವೆ,

ನಾವೇ ಮೆಚ್ಚಿ ಬೆಳೆದವರ ಬಗೆಗಿನ ಬರಹಗಳ ಪಕ್ಕದಲ್ಲೇ ನಮ್ಮಗಳ ಕುರಿತೂ ಚಿತ್ರ–ಬರಹಗಳಿವೆ, ಯಾರನ್ನೂ ಮೆಚ್ಚಿಸುವ ಆತುರವಿಲ್ಲದೆಯೂ ಒಂದು ಸಮ್ಯಕ್ ದರ್ಶನವಿದೆ. ಇಲ್ಲದಿದ್ದರೆ ಸರ್. ಎಂ.ವಿಯವರ ಪ್ರೋತ್ಸಾಹಕರ ಹೇಳಿಕೆಯ ಪಕ್ಕ ಶೇಷಗಿರಿರಾಯರ ಎಚ್ಚರಿಕೆಯ ಮಾತುಗಳನ್ನು ಜೋಡಿಸುವ ಜಾಣತನದ ಸಂಪಾದನೆ ಸುಲಭದ ಮಾತಲ್ಲ.

***
ಈ ಮೂರು ಸಂಪುಟಗಳನ್ನು ಒಮ್ಮೆಲೆ ಓದಲಾಗದು ಎಂಬುದು ಸಹಜ ತಿಳಿವಳಿಕೆ. ಆದರೆ ಇವು ಕೇವಲ ಓದಲು ಮಾತ್ರವಿರುವ ವಸ್ತುಗಳಲ್ಲ, ಪತ್ರಾಗಾರವೂ ಹೌದು. ಇಲ್ಲಿನ ವಿಷಯ ವಿಸ್ತಾರ ಸಹಜವಾಗಿ ಅಗಾಧವಾಗಿದೆ.

ಆದರೆ ಭಿಕ್ಷಾಟನೆಯ ಬಗ್ಗೆ, ಬೆಂಗಳೂರಿನಲ್ಲಿದ್ದ ಈಗ ಕ್ಷೀಣವಾಗಿರುವ ಜ್ಯೂ, ಪಾರ್ಸಿ ಜನಾಂಗಗಳ ಬಗ್ಗೆ, ಗೊರೂರರು 1940ರ ದಶಕದಲ್ಲಿ ಮರಣದಂಡನೆಗೆ ಒಳಗಾದವರ ಜನಿವಾರವನ್ನು ಬದಲಿಸುವ ನೆಪದಲ್ಲಿ ಶಿಕ್ಷೆಗೊಳಗಾದವರ ಹೆಸರನ್ನು ದಾಖಲಿಸುವ ಕುರಿತ ವರದಿ – ಮುಂತಾದ ಅಪರೂಪದಲ್ಲಿ ಅಪರೂಪದ ಅರಿವು ಅಚ್ಚರಿ ಮೂಡಿಸುತ್ತವೆ, ಬೆಚ್ಚಿ ಬೀಳಿಸುತ್ತವೆ.

ಈಗಾಗಲೇ ಓದಿರುವ ಲೇಖನಗಳೂ ಇಲ್ಲಿವೆ, ಅವು ಪರಿಷ್ಕೃತಗೊಂಡಿವೆ, ಆಯಾ ರಂಗಗಳಲ್ಲಿ ನುರಿತ ಲೇಖಕರಿಂದಲೇ ಮೂಡಿಬಂದ ಬರಹಗಳಿವೆ, ಸಂಪಾದನೆಯ ಗಜಗರ್ಭದ ನೋವಿನ ಮುನ್ನುಡಿಯೂ ಇದೆ.

ಒಂದು ಕ್ಷಣ ಕನ್ನಡ ಬಲ್ಲ, ಆದರೆ ಬೆಂಗಳೂರಿಗೆ ಎಂದೂ ಭೇಟಿ ನೀಡದಿರುವವರು ಈ ಪುಸ್ತಕಗಳನ್ನು ಸಾದ್ಯಂತವಾಗಿ ಓದಿದರೆ, ಈ ಪುಸ್ತಕಗಳಲ್ಲಿರುವ ಸಾವಿರಾರು ಛಾಯಾಚಿತ್ರ, ರೇಖಾಚಿತ್ರ, ಭೂನಕ್ಷೆಗಳನ್ನು ಅಕ್ಕಪಕ್ಕ ಇರಿಸಿ ನೋಡಿದರೆ, ಅಲ್ಲಿ ಹೊಸದೊಂದು ಬೆಂಗಳೂರೇ ಸೃಷ್ಟಿಗೊಳ್ಳುತ್ತದೆ. ಅದು ಈಗ ಇರುವ ನಗರಕ್ಕಿಂತಲೂ ಭಿನ್ನವಾಗಿರುತ್ತದೆ, ದೊಡ್ಡದೆನಿಸಿಬಿಡುತ್ತದೆ.

ರೋಮ್ ನಗರವು ದೇಶವೊಂದರ ರಾಜಧಾನಿಯಾಗಿದ್ದು, ಅದರೊಳಗೆ ವ್ಯಾಟಿಕನ್ ಎಂಬ ದೇಶವೇ ಇದೆ. ಬರ್ಲಿನ್ ನಗರವು ಪೂರ್ವ ಜರ್ಮನಿಯಲ್ಲಿದ್ದರೂ, ಆ ನಗರದೊಳಗೇ ಪೂರ್ವ ಹಾಗೂ ಪಶ್ಚಿಮ ಜರ್ಮನಿಗೆ ಸೇರಿದ ಪ್ರದೇಶಗಳಿದ್ದವು. ಬೆಂಗಳೂರು ಮೊದಲಿಗೆ ಮೆಜೆಸ್ಟಿಕ್, ಎಂ.ಜಿ. ರಸ್ತೆಯ ಸುತ್ತಲೇ ಗಿರಕಿ ಹೊಡೆಯುತ್ತಿದ್ದುದು ಈಗ ವಿಕೇಂದ್ರೀಕರಣಗೊಂಡಿದೆ, ಈ ಪುಸ್ತಕದ ಮೂರು ಸಂಪುಟಗಳಂತೆ.

ಪ್ರದೇಶವೊಂದರ ಇತಿಹಾಸ ಬರೆಯಲು ಅದು ಮೂರು ದಶಕವಾದರೂ ಹಳತಾಗಿರಬೇಕೆಂಬ ಸಾಂಪ್ರದಾಯಿಕ ಪರಿಕಲ್ಪನೆಯನ್ನು ಈ ಪುಸ್ತಕವು ನಿರ್ವಚಿಸಿ, ಬೆಂಗಳೂರನ್ನು ವಿಶ್ವರೂಪವನ್ನಾಗಿಸಿದೆ.

ಪ್ರತಿಯೊಂದು ಓದು–ನೋಟಕ್ಕೂ ಈ ಪುಸ್ತಕಗುಚ್ಛವು ವಿಭಿನ್ನ ಬೆಂಗಳೂರಿನ ದರ್ಶನ ಮಾಡಿಸುತ್ತವೆ. ಒಂದು ಬೆಂಗಳೂರು ನಗರವೆಂಬುದು ಅಸಾಧ್ಯ ಎಂಬುದನ್ನು ನಿರೂಪಿಸುತ್ತದೆ ಈ ‘ಕನ್ನಡ-ಪ್ರಣೀತ’ ಬೆಂಗಳೂರು.

ಇನ್ನಿತರೆ ಭಾಷೆಗಳ ಬೆಂಗಳೂರುಗಳ ಸಾಧ್ಯತೆಗಳೂ ಇವೆ. ಆದರೆ ಅದರೆ ಸೂಚನೆ ಈ ಪುಸ್ತಕ–ಗುಚ್ಛದಲ್ಲೇ ಇರುವುದೊಂದು ವಿಶೇಷ. ಹಲವು ಬೆಂಗಳೂರುಗಳು ಇದ್ದಾವೆಂದು ಸಾಕ್ಷಿ ಸಮೇತ ನಿರೂಪಿಸುತ್ತದೆ ಈ ಬರಹಗಳು.

ಈಗಾಗಲೇ ಭೌತಿಕವಾಗಿರುವ ಅಸ್ತಿತ್ವದಲ್ಲಿರುವ ಬೆಂಗಳೂರಿನ ಮೇಲೆ ಮೊದಲೆಲ್ಲಾ ಹಸಿರಿನ ಹೊದಿಕೆಯಿತ್ತು. ಈಗ ಈ ಪುಸ್ತಕವು ಆ ಹೊದಿಕೆಯನ್ನು ಸರಿಸಿ, ನೀವು ಹೇಗೆಲ್ಲಾ ಕಲ್ಪಿಸಿಕೊಂಡಿದ್ದಿರೋ ಅದಾವುದೂ ಅಲ್ಲದ ನಗರವಿದು ಎಂದು ಸೂಚಿಸುತ್ತಿದೆ.

ಬೆಂಗಳೂರು ದರ್ಶನದಂತಹ ಜ್ಞಾನಕೇಂದ್ರಿತ ಹೊದ್ದಿಕೆಗಳು ಬೆಂಗಳೂರನ್ನು ಓಝೋರು ಈ–ಝೋನುಗಳಿಂದ ರಕ್ಷಿಸುವಂತಾಗಲಿ. ನೈಜತೆಯಲ್ಲಿ ಮರಳಿಸಂಪಾದಿಸಲಾಗದ ನಗರವನ್ನು ಕನ್ನಡ ಭಾಷಾಶಾಸ್ತ್ರದ ಉಪಮೆಗಳ ರೂಪದಲ್ಲಾದರೂ ಪುನರ್‌ಶೋಧಿಸಿಕೊಳ್ಳಬಹುದೆಂದು ನಿರೂಪಿಸುವ ಅಮೋಘ ಪ್ರಯತ್ನ ‘ಬೆಂಗಳೂರು ದರ್ಶನ’. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT