ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದುಹೋದ ರೈತರ ಕೊಂಡಿ

ಚರ್ಚೆ
Last Updated 10 ಜುಲೈ 2015, 19:30 IST
ಅಕ್ಷರ ಗಾತ್ರ

ವಿಧಾನ ಮಂಡಲದ ಅಧಿವೇಶನದಲ್ಲಿ ಅಂಕಿಅಂಶ ಕೊಟ್ಟು ‘ಹಿಂದಿಗಿಂತ ಈಗ ಆತ್ಮಹತ್ಯೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ’ ಎಂದು ಹೇಳಿಕೊಂಡಿರುವುದನ್ನು ನೋಡಿದರೆ ಸರ್ಕಾರದ ಮಟ್ಟಿಗೆ ರೈತರ ಜೀವಗಳು ಲೆಕ್ಕಾಚಾರ ಪುಸ್ತಕದ ಸಂಖ್ಯೆಗಳು ಮಾತ್ರವೇ ಎಂಬ ಸಂಶಯ ಬರುವಂತಿದೆ. ಆತ್ಮಹತ್ಯೆಗಳು ಕಡಿಮೆಯಾಗಿವೆ ಎಂದು ಹೇಳಿಕೊಳ್ಳುವುದು ಯಾವ ಸರ್ಕಾರಕ್ಕೂ ಶೋಭೆ ತರುವಂತಹದ್ದಲ್ಲ. ಒಂದು ಸಾವು ಕೂಡ ಆಗದಂತೆ ನೋಡಿಕೊಳ್ಳುವುದು ಅದರ ಕರ್ತವ್ಯ.

ರೈತರ ಆತ್ಮಹತ್ಯೆ ಹೊಸದಲ್ಲ ನಿಜ. ವಿದರ್ಭದಿಂದ ಹಿಡಿದು ಅನೇಕ ಕಡೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಯಾವ ಸರ್ಕಾರವೂ ಯಶಸ್ವಿಯಾಗಿಲ್ಲ. ತಕ್ಷಣಕ್ಕೆ ಕರ್ನಾಟಕ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ರೈತರ ಸಮಸ್ಯೆಗೆ ಭಿನ್ನವಾಗಿ ಪ್ರತಿಕ್ರಿಯಿಸುವ ಜರೂರತ್ತು ಈಗ ಇದೆ ಎನಿಸುತ್ತದೆ. ರೈತರ ಆತ್ಮಹತ್ಯೆಯ ಬಗ್ಗೆ ಗಂಭೀರ ಚಿಂತನೆಗಳು ನಡೆದು, ಸರ್ಕಾರ ಈಗಾಗಲೇ ತಜ್ಞರ ಸಮಿತಿ ರಚಿಸಲು ನಿರ್ಧರಿಸಿದೆ.

ಇದಲ್ಲದೆ ಒಟ್ಟಾರೆ ಕೃಷಿ ಕ್ಷೇತ್ರದ ಬಗ್ಗೆ ದೀರ್ಘಕಾಲೀನ ಪರಿಹಾರ ಸೂಚಿಸಲು ಕೃಷಿತಜ್ಞ ಎಂ.ಎಸ್.ಸ್ವಾಮಿನಾಥನ್ ಅವರ ನೇತೃತ್ವದಲ್ಲಿ ಮತ್ತೊಂದು  ತಜ್ಞರ ಸಮಿತಿ ರಚಿಸಲು ತೀರ್ಮಾನಿಸಿದೆ. ಆತ್ಮಹತ್ಯೆಯ ಕುರಿತ ತಜ್ಞರ ಸಮಿತಿಯು ಪರಿಹಾರ ಕಂಡುಹಿಡಿಯುವ ಕೆಲಸ ಒಂದುಕಡೆ ಸಾಗಲಿ.  ಅದರ ಜೊತೆಗೆ ರೈತರು ಪ್ರಾಣ ಕಳೆದುಕೊಳ್ಳುವುದನ್ನು ತಪ್ಪಿಸಲು ತಕ್ಷಣದ ಪರಿಹಾರವಾಗಿ ಇನ್ನೊಂದು ಬಗೆಯಲ್ಲಿ ಯತ್ನಿಸುವ ಅವಶ್ಯಕತೆಯಿದೆ ಎಂದು  ತೋರುತ್ತದೆ.

ಮಂಡ್ಯ ಮತ್ತು ಬಳ್ಳಾರಿಯಲ್ಲಿ ರೈತರು ಬೆಳೆದು ನಿಂತ ಕಬ್ಬಿನ ಪೈರಿಗೆ ಕೊಳ್ಳಿ ಇಡುವ ಮಟ್ಟಿಗೆ ಹೋಗಿರುವುದು, ಮತ್ತೆ ಏಳು ರೈತರು ಮಂಗಳವಾರ ಜೀವತೆತ್ತಿದ್ದು, ಬುಧವಾರ ನಾಲ್ಕು ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿದ್ದು ಸಮಸ್ಯೆಯ ತೀವ್ರತೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಸುಮಾರು ಮೂರು ದಶಕಗಳಿಗೂ ಹಿಂದೆ ಪ್ರತಿ ನಾಲ್ಕಾರು ಗ್ರಾಮಗಳಿಗೊಬ್ಬರಂತೆ ಗ್ರಾಮ ಸೇವಕರೆಂದು ಕರೆಯಲ್ಪಡುವ ಕೃಷಿ ಇಲಾಖೆಗೆ ಸೇರಿದ ನೌಕರರಿದ್ದರು.  ಸರ್ಕಾರ ಮತ್ತು ರೈತರ ಮಧ್ಯೆ ಅವರು ಕೊಂಡಿಯಾಗಿದ್ದರು.

ಒಂದು ಲೆಕ್ಕದಲ್ಲಿ ಸರ್ಕಾರಕ್ಕೆ ಪ್ರತೀ ರೈತ ಕುಟುಂಬದ ಬಗ್ಗೆ ಮಾಹಿತಿ ಇರುತ್ತಿತ್ತು. ನನ್ನ ತಂದೆ ಒಬ್ಬ ಗ್ರಾಮಸೇವಕರಾಗಿ ಸೇವೆ ಸಲ್ಲಿಸಿದ್ದರು. ಅವರ ಕ್ಷೇತ್ರದ ಪ್ರತಿಯೊಬ್ಬ ರೈತರ ಗದ್ದೆ ಎಲ್ಲಿದೆ, ಏನು ಬೆಳೆ, ಏನು ಸಮಸ್ಯೆ ಎಂಬುದು ಅವರಿಗೆ ಗೊತ್ತಿತ್ತು. ದಿನವೂ ಅನೇಕ ರೈತರು ಮನೆಗೆ ಬಂದು ನನ್ನ ತಂದೆಯನ್ನು ಕಂಡು ಮಾತನಾಡಿಸುತ್ತಿದ್ದರು, ಕಷ್ಟ–ಸುಖ ಹಂಚಿಕೊಳ್ಳುತ್ತಿದ್ದರು. ಈಗ ಕೃಷಿ ಇಲಾಖೆ ಸೊರಗಿ ಸೊರಗಿ ಇಂತಹ ವ್ಯವಸ್ಥೆ ಇಲ್ಲದಾಗಿದೆ. ಕೊಂಡಿ ಕಳಚಿದೆ. ಹಿಂದೆ ತಾಲ್ಲೂಕಿಗೆ 50-60 ಗ್ರಾಮ ಸೇವಕರಿರುವಲ್ಲಿ ಈಗ ಕೇವಲ ಏಳೆಂಟು ಸಹಾಯಕ ಕೃಷಿ ಅಧಿಕಾರಿಗಳಿದ್ದಾರೆ.

ಇನ್ನೊಂದು ರೂಪದಲ್ಲಿ ಈ ಕೊಂಡಿಯ ಪುನರ್‌ ಸ್ಥಾಪನೆ ಮಾಡುವುದು ಸದ್ಯದ ಅಗತ್ಯ. ಗ್ರಾಮಸೇವಕರ ಹುದ್ದೆ ಮರುಸ್ಥಾಪನೆ ಕಾರ್ಯಸಾಧುವಲ್ಲ. ಆದರೆ ಅಲ್ಪ ಸಂಭಾವನೆಯ ಸ್ವಯಂಸೇವಕರ ಪಡೆಯೊಂದನ್ನು ನಿಯೋಜಿಸುವುದನ್ನು ಸರ್ಕಾರ ಪರಿಗಣಿಸಬಹುದು. ಜೊತೆಗೆ ಪ್ರತ್ಯೇಕ ಸಹಾಯವಾಣಿಯೊಂದನ್ನು ಸ್ಥಾಪಿಸಬಹುದು. ಎಲ್ಲೇ ಆಗಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇರುವುದನ್ನು ಪತ್ತೆ ಹಚ್ಚಿ ಅದನ್ನು ತಡೆಯುವಂತಹ ಸ್ಥಿತಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಒಂದು ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗಬಹುದು.

ಮಾನಸಿಕ ತಜ್ಞರ ಪ್ರಕಾರ ಯಾರೇ ಆಗಲಿ ಆತ್ಮಹತ್ಯೆಗೊಳಗಾಗುವ ಮುನ್ನ ಖಿನ್ನತೆಗೊಳಗಾಗುತ್ತಾರೆ.  ಹತ್ತಿರದವರನ್ನು ಮಾತನಾಡಿಸುವುದನ್ನು ಕಡಿಮೆಗೊಳಿಸುತ್ತಾ ತಮ್ಮೊಳಗೇ ಮುದುಡುತ್ತಾ ಹೋಗುತ್ತಾರೆ. ಈ ಲಕ್ಷಣಗಳನ್ನು ಗುರುತಿಸಿ ತಕ್ಷಣ ಅವರಿಗೆ ಸಹಾಯ ಕೊಟ್ಟರೆ ಕೆಲವು ಜೀವಗಳನ್ನು ಉಳಿಸಬಹುದಲ್ಲವೆ?ಇದನ್ನು ಸಾಧ್ಯಗೊಳಿಸಲು  ಸರ್ಕಾರ ಕೂಡಲೆ ರೈತರ ಸಂಘಟನೆಗಳು, ಇತರ ಸಂಘಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಕೃಷಿ ವಿಶ್ವವಿದ್ಯಾಲಯಗಳನ್ನು ಒಂದೇ ಛಾವಣಿಯಡಿ ತಂದು ಮೊದಲು ಈ ಕಾರ್ಯಕ್ರಮದ ರೂಪರೇಷೆ ಸಿದ್ಧಪಡಿಸಬೇಕು.

ಈ ಕಾರ್ಯಕ್ರಮ ಹೀಗಿರಬಹುದು: ಮೊದಲ ಹಂತದಲ್ಲಿ ಅಂದರೆ ಕೃಷಿ ಸಾಲ ಅಥವಾ ಇತರ ತೊಂದರೆಯಿಂದ ಖಿನ್ನತೆಗೊಳಗಾಗಿರುವ ರೈತರನ್ನು ಗುರುತಿಸುವ ಸರಳ ತರಬೇತಿ ಪಠ್ಯವನ್ನು ಸಿದ್ಧಗೊಳಿಸಬೇಕು. ನಿಮ್ಹಾನ್ಸ್‌ನಂತಹ ಸಂಸ್ಥೆಗಳು ಇದನ್ನು ನಿಭಾಯಿಸಬಲ್ಲವು. ಖಿನ್ನತೆಗ್ರಸ್ತರನ್ನು, ಆತ್ಮಹತ್ಯೆಗೆ ಒಳಗಾಗಬಹುದಾದವರನ್ನು  ಗುರುತಿಸುವ ಮತ್ತು ಇದರಲ್ಲಿರುವ ಸೂಕ್ಷ್ಮತೆಗಳನ್ನು ಬಲ್ಲ ಈ ಸಂಸ್ಥೆಯನ್ನು ಆರಂಭದ ಹಂತದ ತರಬೇತು ಶಾಲೆಯನ್ನಾಗಿಯೂ ಗುರುತಿಸಬಹುದು.

ಮುಂದಿನ ಹಂತದಲ್ಲಿ ಸೂಕ್ತ ಸಂಭಾವನೆ ಘೋಷಿಸಿ ಆಸಕ್ತರನ್ನು ಕರೆದು ತರಬೇತುದಾರರನ್ನು ಸಿದ್ಧಪಡಿಸಬೇಕು. ಹೀಗೆ ತರಬೇತಿ ಪಡೆದವರು ಮುಂದೆ, ಸ್ವಇಚ್ಛೆಯಿಂದ ಸೀಮಿತ ಸಂಭಾವನೆಗೆ ಕೆಲಸ ಮಾಡಲು ಮುಂದೆ ಬರುವವರನ್ನು, ಹಳ್ಳಿಗರನ್ನು, ಸ್ವಯಂಸೇವಾ ಕಾರ್ಯಕರ್ತರನ್ನು ಅಲ್ಲದೆ ಖಾಸಗಿ ವಲಯ ಅಥವಾ ಸರ್ಕಾರಿ ಸೇವೆಯಿಂದ ನಿವೃತ್ತರಾದ ಹಿರಿಯರನ್ನು ಇದೇ ತರಬೇತಿಗೆ ಒಳಪಡಿಸಬಹುದು. ಹೀಗೆ ತರಬೇತಿಗೊಂಡವರು ತಮ್ಮತಮ್ಮ ಕ್ಷೇತ್ರಗಳಿಗೆ ತೆರಳಿ ಹಿಂದೆ ಇದ್ದ ಗ್ರಾಮಸೇವಕರ ಸ್ಥಾನ ತುಂಬಿ, ಆರಂಭದಲ್ಲಿ ರೈತರ ಆತ್ಮಹತ್ಯೆ ನಿಗ್ರಹಕ್ಕೆ ಬೇಕಾದ ಕೆಲಸ ನಿರ್ವಹಿಸಬಹುದು. ಇವರಿಗೂ ಸಂಭಾವನೆ ನಿಗದಿಗೊಳಿಸಬೇಕಾಗುತ್ತದೆ.

ರಾಜ್ಯವ್ಯಾಪಿಯಾಗಿ ಇಂತಹ ಪಡೆಯನ್ನು ಸನ್ನದ್ಧಗೊಳಿಸಿ ಹಳ್ಳಿಹಳ್ಳಿಗಳಲ್ಲಿ ಅವರನ್ನು ನಿಯೋಜಿಸಲು ಸಾಧ್ಯವಾದರೆ ಅತ್ಯುತ್ತಮ. ಇಲ್ಲವಾದಲ್ಲಿ ಸಮಸ್ಯೆ ತೀವ್ರವಾಗಿರುವಲ್ಲಿ ಅವರನ್ನು ನಿಯೋಜಿಸಬೇಕು. ಹೀಗೆ ವ್ಯವಸ್ಥಿತ ಜಾಲವೊಂದು ಸಿದ್ಧಗೊಳ್ಳುವಷ್ಟರಲ್ಲಿ ಸರ್ಕಾರ  ಆಯ್ದ ಜಿಲ್ಲೆ, ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಪ್ರತ್ಯೇಕ ನಿಯಂತ್ರಣ ಕೊಠಡಿ ತೆರೆದು ಒಂದೆರಡು ದೂರವಾಣಿಗಳನ್ನು ಕೊಟ್ಟರೆ ರೈತರ ಸಹಾಯವಾಣಿ ಸೇವೆಗೆ ಲಭ್ಯವಾಗುತ್ತದೆ. ಇಲ್ಲಿ ರೈತರ ಸಹಾಯಕ್ಕೆ ಹೊರಡಲು ಸದಾ ಸಿದ್ಧವಿರುವ, ಆತ್ಮಹತ್ಯೆ ತಡೆಯಬಲ್ಲ ಪರಿಣತರ ತಂಡದ ಪಟ್ಟಿ ತಯಾರಿರಬೇಕು.

ರಾಜ್ಯವ್ಯಾಪಿ ಅಥವಾ ನಿಶ್ಚಿತ ಕ್ಷೇತ್ರಗಳಲ್ಲಿರುವ ನಿಯೋಜಿತ ವ್ಯಕ್ತಿಗಳು ಗ್ರಾಮಗಳಲ್ಲಿ ತಿಳಿವಳಿಕೆ ಕೊಟ್ಟು  ಆತ್ಮಹತ್ಯೆಯ ಲಕ್ಷಣಗಳನ್ನು ಗುರುತಿಸುವುದನ್ನು ಹೇಳಿಕೊಡಬಹುದು. ಆ ಲಕ್ಷಣಗಳು ಕಂಡಬಂದ ತಕ್ಷಣ ಸಹಾಯವಾಣಿ ಮೂಲಕ ತಜ್ಞರ ಸಹಾಯದಿಂದ ಪರಿಸ್ಥಿತಿ ಕೈಮೀರದಂತೆ ತಡೆಯಬಹುದು. ಆಧುನಿಕ ಗ್ರಾಮಸೇವಕರ ನಿರಂತರ ನೇಮಕ, ತರಬೇತಿ ಒಂದು ಕಡೆ ನಡೆಯುತ್ತಿದ್ದರೆ, ಮುಂದಿನ ದಿನಗಳಲ್ಲಿ ಈ ಹೊಸ ಜಾಲವನ್ನು ಸರ್ಕಾರ ಇತರೆ ಕೃಷಿ ಸಂಬಂಧಿ ಕೆಲಸಗಳಿಗೆ, ರೈತರ ಬಾಳು ಹೆಚ್ಚು ಸುಸ್ಥಿರಗೊಳ್ಳಲು ಬಳಸಿಕೊಳ್ಳಬಹುದು.

ಕೃಷಿ ವಿಶ್ವವಿದ್ಯಾಲಯಗಳು ಮಾಡಿದ ಯಶಸ್ವಿ ಹೊಸ ಪ್ರಯೋಗಗಳನ್ನು ಪ್ರಯೋಗಶಾಲೆಗಳಿಂದ ರೈತರ ಗದ್ದೆಗಳಿಗೆ ತಲುಪಿಸಲು ಇವರು ಸಹಾಯ ಮಾಡಬಹುದು. ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಿದರೆ ಇದು ಕಾರ್ಯಸಾಧುವಾಗಬಲ್ಲದು ಎನ್ನಿಸುತ್ತದೆ. ರಾಜ್ಯದ, ದೇಶದ ರೈತರ ಬಾಳು ಹಸನಾಗಿಸುವ ಆಧುನಿಕ ಗ್ರಾಮಸೇವಕರು ಮತ್ತು ಪರಿಣಾಮಕಾರಿಯಾದ ಸಹಾಯವಾಣಿ ಈ ಕ್ಷಣದ ನಿರೀಕ್ಷೆ. ಈ ಯೋಜನೆಗಳು ಭಿನ್ನ ಸವಾಲುಗಳನ್ನು ಎದುರಿಸಬಹುದು.  ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡು ಗುರಿ ಮುಟ್ಟಬಹುದು. ಜೊತೆಗೆ ಸ್ವಾಮಿನಾಥನ್‌ ಅವರು ಸೂಚಿಸಬಹುದಾದ ದೀರ್ಘಕಾಲೀನ ಹೆಜ್ಜೆಗಳನ್ನೂ ನಿರೀಕ್ಷಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT