ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳಬೇಟೆಯಿಂದ ಕುತ್ತು

ಹುಲಿ ಸಂರಕ್ಷಣೆ ಸವಾಲು
Last Updated 13 ಆಗಸ್ಟ್ 2016, 4:50 IST
ಅಕ್ಷರ ಗಾತ್ರ

ಕಾಡಿಗೆ ಹೋದಾಗ ಆನೆ, ಚಿರತೆ, ಕರಡಿ ಕಂಡರೂ ಪಟ್ಟೆ ಹುಲಿ ಕಾಣದಿದ್ದರೆ ಪ್ರವಾಸಿಗರು ಬೇಸರ ಮಾಡಿಕೊಂಡು, ‘ಹುಲಿ ಬಾಲವನ್ನಾದರೂ ತೋರಿಸಿ’ ಎಂದು ಗೈಡ್‌ಗೆ ದುಂಬಾಲು ಬೀಳುವುದನ್ನು ಕಂಡಿದ್ದೇನೆ. ಕೆಲವೊಮ್ಮೆ ಹಲವು ಸಲ ಕಾಡು ಸುತ್ತಿದರೂ ವ್ಯಾಘ್ರನ ದರ್ಶನ ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ಹುಲಿ ಸಂಖ್ಯೆ ಬಗ್ಗೆ ಅನುಮಾನ ಮೂಡುತ್ತದೆ.

ಭಾರತದ ಕಾಡುಗಳಲ್ಲಿ 2,226 ಹುಲಿಗಳಿವೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಎಂದು ಕೇಂದ್ರ ಸರ್ಕಾರ ಬೀಗುತ್ತಿದೆ. ಆದರೆ, ಈ ಅಂಕಿಯನ್ನು ಕೆಲ ಸರ್ಕಾರೇತರ ಸಂಸ್ಥೆಗಳು  ಅಲ್ಲಗಳೆದು, ಲೆಕ್ಕಾಚಾರದಲ್ಲೇ ತಪ್ಪಾಗಿದೆ ಎಂದು ವಾದಿಸುತ್ತಿವೆ. ಅದೇನೆ ಇದ್ದರೂ, ‘ಅಂತರರಾಷ್ಟ್ರೀಯ ಮಟ್ಟದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರೂ, ಕಾಡಿನ ಗುಣಮಟ್ಟ ಕುಸಿತ, ರಸ್ತೆ ನಿರ್ಮಾಣ ಸೇರಿದಂತೆ ಮರ ಕಡಿತದಂತಹ ಅನೇಕ ಕಾರಣಗಳಿಂದ ಕಾಡಿನಿಂದ ಹೊರಬರುತ್ತಿರುವ ಹುಲಿಗಳು ಅಪಾಯ ಎದುರಿಸುತ್ತಿವೆ’ ಎಂದು ಅಂತರರಾಷ್ಟ್ರೀಯ ನಿಸರ್ಗ ಸಂರಕ್ಷಣಾ ಸಂಸ್ಥೆ (ಐಯುಸಿಎನ್‌) ಎಚ್ಚರಿಕೆ ನೀಡಿದೆ.

ಇದಕ್ಕೆ ಪೂರಕವಾಗಿ, ಈ ವರ್ಷವೇ 77 ಹುಲಿಗಳು ಸತ್ತಿವೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಪ್ರಕಾರ ಹುಲಿ ಕಣ್ಮರೆಗೆ ಕಳ್ಳಬೇಟೆ, ಮಾನವ– ಹುಲಿ ಸಂಘರ್ಷ, ಕಿರಿದಾಗುತ್ತಿರುವ ಅರಣ್ಯ, ಅರಣ್ಯಗಳ ನಡುವಿನ ಕಾರಿಡಾರ್‌ ನಾಶ ಕಾರಣ. ಇದರ ಜೊತೆಯಲ್ಲಿ ಪ್ರದೇಶ ಪ್ರಾಬಲ್ಯಕ್ಕಾಗಿ ಹುಲಿಗಳ ನಡುವೆ ನಡೆಯುವ ಹೋರಾಟವೂ ಅವುಗಳ ಸಾವಿಗೆ ಕಾರಣ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಹೇಳುವುದಾದರೆ ಚೀನಾದ ಪಾರಂಪರಿಕ ಔಷಧ ಮಾರುಕಟ್ಟೆಯಲ್ಲಿರುವ ಬೇಡಿಕೆಯಿಂದಾಗಿ ದೊಡ್ಡ ಮಟ್ಟದಲ್ಲಿ ಹುಲಿ ಬೇಟೆ ನಡೆಯುತ್ತಿದೆ. 1993ರಲ್ಲಿ ಹುಲಿಯ ವಹಿವಾಟಿಗೆ ಚೀನಾ ನಿಷೇಧ ಹೇರಿದ್ದರೂ ಕಳ್ಳಮಾರ್ಗದಲ್ಲಿ ವಹಿವಾಟು ನಡೆಯುತ್ತಿದೆ. ಮುಂಗುಸಿಯ ಕೂದಲು, ಹಾವಿನ ಚರ್ಮ, ಘೇಂಡಾಮೃಗದ ಕೊಂಬು, ಹುಲಿ ಮತ್ತು ಚಿರತೆ ಚರ್ಮ, ಉಗುರು, ಆಮೆ ಚಿಪ್ಪು, ಆನೆ, ಜಿಂಕೆಯ ಕೊಂಬಿನ ಸಂಘಟಿತ ಅಕ್ರಮ ವಹಿವಾಟೇ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದೆ. ಈ ವಹಿವಾಟು ಭಾರತದಲ್ಲಿ ಅಕ್ರಮ. ಇಲ್ಲಿಂದ ನೇಪಾಳ, ಬಾಂಗ್ಲಾ ಕಳ್ಳಮಾರ್ಗದ ಮೂಲಕ ಅನ್ಯರಾಷ್ಟ್ರಗಳನ್ನು ತಲುಪಿ ಅಲ್ಲಿಂದ ಚೀನಾ ಸೇರುತ್ತವೆ.

ಇಂತಹ ಪ್ರಾಣಿಜನ್ಯ ವಸ್ತುಗಳಿಗೆ ಚೀನಾ ಬೃಹತ್‌ ಮಾರುಕಟ್ಟೆಯಾಗಿದೆ. ಹುಲಿಯ ಪ್ರತಿ ಅಂಗಕ್ಕೂ ಕಳ್ಳ ಮಾರುಕಟ್ಟೆಯಲ್ಲಿ  ಚಿನ್ನದ ಬೆಲೆಯಿದೆ. ಕೀಲುನೋವು, ಮೂರ್ಛೆರೋಗ ನಿವಾರಕ ಹಾಗೂ ಪುರುಷಶಕ್ತಿವರ್ಧಕವಾಗಿ ಪರಿಣಾಮಕಾರಿ ಎನ್ನುವ ನಂಬಿಕೆಯಿಂದ ಹುಲಿ ಮೂಳೆ ಬಳಕೆಯಾಗುತ್ತಿದೆ. ಹುಲಿ ಚರ್ಮವನ್ನು ಆಲಂಕಾರಿಕವಾಗಿ ಬಳಸಲಾಗುತ್ತದೆ. ಈ ನಂಬಿಕೆಗಳೇ ಹುಲಿಯಂತಹ ಪ್ರಾಣಿಗಳು ಅವನತಿಯತ್ತ ತಲುಪಲು ಕಾರಣ ಎನ್ನಬಹುದು. ನೂರು ವರ್ಷಗಳ ಹಿಂದೆ ಜಗತ್ತಿನಲ್ಲಿ ಒಂದು ಲಕ್ಷದಷ್ಟಿದ್ದ ಹುಲಿಗಳ ಸಂಖ್ಯೆ ಇದೀಗ 3,890ಕ್ಕೆ ಇಳಿದಿದೆ.

ದಕ್ಷಿಣ ಭಾರತದಲ್ಲಿ ಹುಲಿ ಕಳ್ಳಬೇಟೆಯಲ್ಲಿ ತೊಡಗಿರುವ ಸಂಘಟಿತ ಗುಂಪುಗಳಿಲ್ಲ. ಉತ್ತರ ಭಾರತದಲ್ಲಿ ಸಕ್ರಿಯವಾಗಿದ್ದ ಗುಂಪುಗಳು ಇದೀಗ ಛಿದ್ರವಾಗಿವೆ. ಕಳ್ಳಬೇಟೆ ಮತ್ತು ಸಾಗಣೆಯಲ್ಲಿ ತೊಡಗಿದ್ದ ಸಂಸಾರ್‌ಚಂದ್‌ 2014ರಲ್ಲಿ ಹತನಾದ. ಈತ ‘ಉತ್ತರ ಭಾರತದ ವೀರಪ್ಪನ್‌’ ಎಂದೇ ಕುಖ್ಯಾತ. ಈತನ ಮಗ ಆಕಾಶ್‌ನನ್ನು 2016ರ ಜುಲೈನಲ್ಲಿ ದೆಹಲಿ ಅಪರಾಧ ದಳವು ದಕ್ಷಿಣ ದೆಹಲಿಯಲ್ಲಿ ಬಂಧಿಸಿತು.

ನಾಗರಹೊಳೆಯ ಡಿ.ಬಿ.ಕುಪ್ಪೆ ವಲಯದಲ್ಲಿ 2001ರಲ್ಲಿ ‘ಜಾ ಟ್ರಾಪ್‌’ ಪ್ರಕರಣ ಪತ್ತೆಯಾಯಿತು. ಮುಂಗಾಲಿಗೆ ಜಾ ಟ್ರಾಪ್‌ ಸಿಕ್ಕಿಹಾಕಿಕೊಂಡಿದ್ದ ಭಾರಿ ಹುಲಿ ಟ್ರಾಪ್‌ ಎಳೆದುಕೊಂಡು ಓಡಾಡುತ್ತಿತ್ತು. ಹುಲಿಗೆ ಅರಿವಳಿಕೆ ನೀಡಿ ಮೈಸೂರು ಮೃಗಾಲಯಕ್ಕೆ ರವಾನಿಸಲಾಯಿತು. ಇದರ ತನಿಖೆ ನಡೆದಾಗ ಉತ್ತರ ಭಾರತದ ಖಟ್ನಿ ಬುಡಕಟ್ಟು ಗುಂಪು ಇದರ ಹಿಂದೆ ಇತ್ತು ಎನ್ನುವುದು ಪತ್ತೆಯಾಯಿತು. ಅರಣ್ಯದ ಅಂಚಿನಲ್ಲಿ ತಾತ್ಕಾಲಿಕ ಗುಡಿಸಲು ಹಾಕಿಕೊಂಡು ಗಿಡಮೂಲಿಕೆ ಔಷಧ, ಪ್ಲಾಸ್ಟಿಕ್‌ ಹೂ ಮಾರುವ ಸೋಗಿನಲ್ಲಿ ಇರುವ ಬುಡಕಟ್ಟು ಜನ, ಸ್ಥಳೀಯ ಅರಣ್ಯದಂಚಿನ ನಿವಾಸಿಗಳ ಜೊತೆ ಸ್ನೇಹ ಬೆಳೆಸಿ ಹುಲಿ ಓಡಾಟದ ಮಾಹಿತಿ ಪಡೆಯುತ್ತಿದ್ದರು. ನಂತರ ಜಾ ಟ್ರಾಪ್‌ ಅಳವಡಿಸುತ್ತಿದ್ದರು. ಪ್ರಕರಣದಲ್ಲಿ 8 ಜನರ ಬಂಧನವಾಗಿತ್ತು.

ಇದೇ ರೀತಿಯ ಜಾ ಟ್ರಾಪ್‌ ಅಳವಡಿಕೆ ಪ್ರಕರಣ 2012ರಲ್ಲಿ ಬಿಳಿಗಿರಿರಂಗನ ಬೆಟ್ಟದ ಗುಂಡಾಲ್‌ ಪ್ರದೇಶದಲ್ಲಿ ನಡೆಯಿತು. ಇದರಲ್ಲಿ ಹರಿಯಾಣದ ಗುಂಪು  ಭಾಗಿಯಾಗಿತ್ತು. ಗುಂಪಿನ ಮಹಿಳೆಯರು ವ್ಯಾಪಾರದ ಸೋಗಿನಲ್ಲಿ ಅರಣ್ಯದಂಚಿನಲ್ಲಿ ತಂಗಿದ್ದರೆ, ಒಬ್ಬ ಪುರುಷ ದಟ್ಟ ಕಾಡಿಗೆ ನುಗ್ಗಿ ಹುಲಿ ಓಡಾಡುವ ಜಾಗದಲ್ಲೇ ಸರಿಯಾಗಿ ಟ್ರಾಪ್‌ ಅಳವಡಿಸಿದ್ದ. ಆತ ಅದೆಷ್ಟು ನಿಖರವಾಗಿ ಟ್ರಾಪ್‌ ಹಾಕಿದ್ದ ಎಂದರೆ, ಟ್ರಾಪ್‌ನ ಹಿಂದೆ ದಾರಿಗೆ ಅಡ್ಡಲಾಗಿ ಕಡ್ಡಿಯಿಟ್ಟಿದ್ದ. ಸಾಮಾನ್ಯವಾಗಿ ಹುಲಿ ಇಂತಹ ಕಡ್ಡಿ ತುಳಿದು ಸದ್ದಾಗಲು ಅವಕಾಶ ನೀಡುವುದಿಲ್ಲ. ಅದನ್ನು ದಾಟಿ ಮುಂದೆ ಕಾಲಿಟ್ಟರೆ ಹುಲಿ ಟ್ರಾಪ್‌ಗೆ ಬೀಳುತ್ತಿತ್ತು.

ಟ್ರಾಪ್‌ಗೆ ಸಿಕ್ಕಿದ ಹುಲಿಯ ಬಾಯಿಗೆ ಚೂಪಾದ ಬೆರ್ಜಿ ಚುಚ್ಚಿ ಅಮಾನುಷವಾಗಿ ಸಾಯಿಸುತ್ತಿದ್ದರು. ಆದರೆ ಟ್ರಾಪ್ ಅನ್ನು ಆನೆಯೊಂದು ತುಳಿದು ಹಾಳು ಮಾಡಿತ್ತು. ಅದನ್ನು ಸರಿಪಡಿಸಲು ವಾಪಸ್‌ ಕಾಡಿನಂಚಿಗೆ ಬಂದಾಗ ಮಾಹಿತಿ ಆಧರಿಸಿ, ಅಂದು ವಲಯ ಅರಣ್ಯಾಧಿಕಾರಿಯಾಗಿದ್ದ ಕೆ.ಟಿ.ಬೋರಯ್ಯ ಮತ್ತು ತಂಡ ಆರು ಜನರನ್ನು ಬಂಧಿಸಿತ್ತು. ಅವರಿಗೆ 3 ವರ್ಷ ಜೈಲು ಶಿಕ್ಷೆಯಾಗಿತ್ತು ಎಂದು ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಲಿಂಗರಾಜು ಜ್ಞಾಪಿಸಿಕೊಳ್ಳುತ್ತಾರೆ.
ಕೆಲ ವರ್ಷಗಳ ಹಿಂದೆ ನಾಗರಹೊಳೆಯ ಡಿ.ಬಿ.ಕುಪ್ಪೆ ಅಂಚಿನಲ್ಲಿ ವಿಷಪ್ರಾಶನದಿಂದ ಹುಲಿ ಸತ್ತ ಘಟನೆ ಇನ್ನೂ ಸಿಐಡಿ ತನಿಖಾ ಹಂತದಲ್ಲೇ ಇದೆ. ಎನ್‌ಟಿಸಿಎ ಮಾಹಿತಿ ಪ್ರಕಾರ, ಈ ವರ್ಷ ಆಗಸ್ಟ್ 3ವರೆಗೆ ಎಂಟು ಹುಲಿ ಸಾವು ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ. ಇವುಗಳ ಪೈಕಿ ಮೂರು ಪ್ರಕರಣಗಳ ತನಿಖೆ ಪೂರ್ಣವಾಗಿಲ್ಲ. ಉಳಿದವು ನೈಸರ್ಗಿಕ ಸಾವು.

ಇದುವರೆಗೆ ಹಣ ಮಾಡುವ ಉದ್ದೇಶದಿಂದ ನಡೆಯುತ್ತಿದ್ದ ವ್ಯಾಘ್ರನ ಹತ್ಯೆ, ಇದೀಗ ಹೆಸರು ಮಾಡುವ ಉದ್ದೇಶದಿಂದಲೂ ನಡೆದಿರುವ ಅಂಶ ಬೆಳಕಿಗೆ ಬಂದಿದೆ. 2015ರ ಅಕ್ಟೋಬರ್‌ನಲ್ಲಿ ಖಚಿತ ಮಾಹಿತಿಯ ಮೇಲೆ ತಮಿಳುನಾಡಿನ ಸತ್ಯಮಂಗಲದಿಂದ ಚಾಮರಾಜನಗರದ ಪುಣಜೂರು ಕಡೆ ಬರುತ್ತಿದ್ದ ನಾಲ್ವರಿಂದ ಆರು ಕೆ.ಜಿ ಹುಲಿ ಮೂಳೆ ಮತ್ತು ಹಸಿ ಮಾಂಸವನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದರು. ಇವರನ್ನು ವಿಚಾರಣೆಗೆ ಗುರಿಪಡಿಸಿದಾಗ, ತಮಿಳುನಾಡಿನ ವನ್ಯಜೀವಿ ಸಂಘಟನೆಯ ಸದಸ್ಯನೊಬ್ಬ ಹಣ ನೀಡಿ ಹುಲಿ ಹತ್ಯೆ ಮಾಡಲು ಇವರಿಗೆ ಪ್ರಚೋದನೆ ನೀಡಿದ್ದ  ಎನ್ನುವ ಮಾಹಿತಿ ದೊರಕಿತ್ತು.

ಗುತ್ತಿಗೆ ನೌಕರರೇ ತುಂಬಿರುವ ಕೆಳಹಂತದ ಸಿಬ್ಬಂದಿ, ವಾಹನ ಮತ್ತು ಬಂದೂಕು ಕೊರತೆ ಅರಣ್ಯ ಇಲಾಖೆಯನ್ನು ಕಾಡುತ್ತಿದೆ. ರಾಜ್ಯ ಸರ್ಕಾರ ಅತಿ ಕಡಿಮೆ ಅನುದಾನ ನೀಡುವ ಇಲಾಖೆಯಲ್ಲಿ ಅರಣ್ಯವೂ ಒಂದು. ಇಂತಹ ಸ್ಥಿತಿಯಲ್ಲೂ ಸಂರಕ್ಷಣಾ ಕಾರ್ಯ ನಡೆಯುತ್ತಿದೆ. ರಾಜ್ಯದಲ್ಲಿ ಹುಲಿಗಳ ಸಂಖ್ಯೆ ದೇಶದಲ್ಲೇ ಅತಿ ಹೆಚ್ಚಿದೆ. ಕಾಡಿನ ಸಂರಕ್ಷಣೆಯಾದರೆ ವನ್ಯಜೀವಿಗಳ ಸಂರಕ್ಷಣೆಯಾಗುತ್ತದೆ. ಮಾಂಸಾಹಾರಿ ಪ್ರಾಣಿಗಳ ಸಂಖ್ಯೆ ಹೆಚ್ಚಾದರೆ ಬಲಿ ಪ್ರಾಣಿಗಳು ಹೆಚ್ಚಾಗಿವೆ ಎಂದರ್ಥ. ಸಂರಕ್ಷಣೆ ಮತ್ತಷ್ಟು ಸಮರ್ಪಕವಾಗಿ ನಡೆಯಲು ಸರ್ಕಾರದ ಜೊತೆ ಖಾಸಗಿ ಅನುದಾನವೂ ದೊರಕಬೇಕು.
*
ದಕ್ಷಿಣ ಭಾರತದಲ್ಲಿ ಇಲ್ಲ
ಕಳ್ಳವ್ಯಾಪಾರಕ್ಕಾಗಿ ಹುಲಿಗಳನ್ನು ಕೊಲ್ಲುವ ಯಾವುದೇ ಪ್ರಕರಣ ದಕ್ಷಿಣ ಭಾರತದಲ್ಲಿ ದಾಖಲಾಗಿಲ್ಲ. ಆದರೆ ಹುಲಿ ಕಾಡಿನಿಂದ ಹೊರಹೋದಾಗ ವಿವಿಧ ಕಾರಣಗಳಿಂದ ಹತ್ಯೆಗಳು ನಡೆದಿವೆ.
ಪಿ.ಎಸ್.ಸೋಮಶೇಖರ್‌,
ಐಜಿ, ದಕ್ಷಿಣ ವಲಯ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT