ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಲೇದುರ್ಗ: 237 ಚಿನ್ನದ ನಾಣ್ಯಗಳು ಪತ್ತೆ

Last Updated 19 ಡಿಸೆಂಬರ್ 2015, 19:43 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ತಾಲ್ಲೂಕಿನ ಕವಲೇ ದುರ್ಗದ ಮಾರಿಕಾಂಬ ದೇವಸ್ಥಾನದ ಸುತ್ತ ಶನಿವಾರ ಮಣ್ಣು ತೆಗೆಯುವಾಗ  ತಾಮ್ರದ ಬಿಂದಿಗೆಯಲ್ಲಿ ತುಂಬಿಟ್ಟಿದ್ದ ಬಂಗಾರದ ನಾಣ್ಯಗಳು ಪತ್ತೆಯಾಗಿವೆ.

ತಾಮ್ರದ ಬಿಂದಿಗೆಯಲ್ಲಿ 236 ಚಿಕ್ಕ ಚಿಕ್ಕ ನಾಣ್ಯಗಳು ಹಾಗೂ ಒಂದು ದೊಡ್ಡ ನಾಣ್ಯ ಸಿಕ್ಕಿದ್ದು, ತಹಶೀಲ್ದಾರ್‌ ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾರಿಕಾಂಬಾ ದೇವಸ್ಥಾನದ ಸುತ್ತಲಿನಲ್ಲಿನ ಮಣ್ಣನ್ನು ತೆಗೆದು ಸಮೀಪ ತಿಮ್ಮಣ್ಣನ ಕೆರೆ ದಂಡೆಗೆ ಟ್ರ್ಯಾಕ್ಟರ್‌ನಲ್ಲಿ ಹಾಕುತ್ತಿರುವಾಗ ಮಣ್ಣಿನಲ್ಲಿ ಹುದುಗಿದ್ದ ಬಿಂದಿಗೆ ಪತ್ತೆಯಾಗಿದೆ. ಸ್ಥಳೀಯ ಕಾರಂಜಿ ಪುರುಷೋತ್ತಮ ಅವರು ಕುತೂಹಲದಿಂದ ಬಿಂದಿಗೆಯನ್ನು ಪರಿಶೀಲಿಸಿದಾಗ ಒಳಗೆ ಚಿನ್ನದ ನಾಣ್ಯಗಳು ಇರುವುದು ಕಂಡು ಬಂದಿದೆ.

ಚಿನ್ನದ ನಾಣ್ಯಗಳು ಪತ್ತೆಯಾದ ವಿಷಯವನ್ನು ಸಚಿವ ಕಿಮ್ಮನೆ ರತ್ನಾಕರ ಅವರ ಆಪ್ತ ಸಹಾಯಕ ಈಶ್ವರಪ್ಪ ಗಮನಕ್ಕೆ ಸ್ಥಳೀಯರು ತಂದರು. ನಂತರ ಈಶ್ವರಪ್ಪ ಅವರು ತಹಶೀಲ್ದಾರ್‌ ಲೋಕೇಶಪ್ಪ ಅವರಿಗೆ ಮಾಹಿತಿ ನೀಡಿದರು.

ಬೆಳಿಗ್ಗೆ 9 ಗಂಟೆ ಸುಮಾರಿಗೆ ಚಿನ್ನದ ನಾಣ್ಯಗಳಿದ್ದ ಬಿಂದಿಗೆ ಪತ್ತೆಯಾಗಿದ್ದು, ತಹಶೀಲ್ದಾರ್‌ ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿ ಮಧ್ಯಾಹ್ನ ಅವುಗಳನ್ನು ವಶಪಡಿಸಿಕೊಂಡಿದ್ದಾರೆ. ನಾಣ್ಯಗಳ ಮೇಲೆ ಅರೇಬಿಕ್‌ ಭಾಷೆಯ ಬರವಣಿಗೆಗಳಿದ್ದು, ಚಂದ್ರನ ಮುದ್ರೆಗಳಿವೆ.

ಒಂದೊಂದು ನಾಣ್ಯಗಳೂ ಭಿನ್ನವಾಗಿರುವ ಮುದ್ರೆಗಳನ್ನು ಒಳಗೊಂಡಿದ್ದು, ಟಿಪ್ಪುಸುಲ್ತಾನ್‌ ಕಾಲದ ನಾಣ್ಯಗಳಿರಬಹುದು ಎಂದು ಅಂದಾಜಿಸಲಾಗಿದೆ. ಸುಮಾರು 2 ಕೆ.ಜಿ. ತೂಕದ ಬಿಂದಿಗೆಯಲ್ಲಿ ಸುಮಾರು 7 ರಿಂದ 8 ನೂರು ಗ್ರಾಂ  ತೂಕದ ಚಿನ್ನದ ನಾಣ್ಯಗಳಿರಬಹುದು ಎಂದು ಅಂದಾಜಿಸಲಾಗಿದೆ.

‘ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿ ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. 236 ಚಿಕ್ಕ ಹಾಗೂ 1 ದೊಡ್ಡ ಚಿನ್ನದ ನಾಣ್ಯಗಳಿವೆ. ಸುಮಾರು 700 ರಿಂದ 800 ಗ್ರಾಂ ತೂಕವಿದೆ. ಜಿಲ್ಲಾಧಿಕಾರಿ  ಆದೇಶದ ಮೇರೆಗೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಹಶೀಲ್ದಾರ್‌ ಲೋಕೇಶಪ್ಪ ತಿಳಿಸಿದ್ದಾರೆ.

ಮೊಗಲರ ದಾಳಿಗೆ ಒಳಗಾದ ಕವಲೇದುರ್ಗ ಕಲ್ಲಿನ ಕೋಟೆ ಕೆಳದಿ ರಾಜಮನೆತನದ ಆಳ್ವಿಕೆಗೆ ಒಳಪಟ್ಟಿದ್ದು ಈ ಪ್ರದೇಶದಲ್ಲಿ ಪುರಾತನ ಕಾಲದ ವಸ್ತುಗಳು ಹುದುಗಿವೆ ಎಂಬ ಪ್ರತೀತಿ ಇದೆ. ಪುರಾತತ್ವ ಇಲಾಖೆ ಇಲ್ಲಿನ ಕಲ್ಲಿನ ಕೋಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಸಂರಕ್ಷಣೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಪ್ರಾಮಾಣಿಕತೆ ಮೆರೆದ ಪುರುಷೋತ್ತಮ ಅವರನ್ನು ಸಾರ್ವಜನಿಕರು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT