ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಮೊದಲ ಆದ್ಯತೆ

ಕೈ ಪಾಳೆಯದತ್ತ ಜೆಡಿಎಸ್‌ ಶಾಸಕರ ಒಲವು l ಬಿಜೆಪಿಯಲ್ಲಿ ಹೆಚ್ಚಿದ ಆತಂಕ
Last Updated 31 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪಾಲಿಕೆಯಲ್ಲಿ ರಾಜಕೀಯ ಮೈತ್ರಿ ವಿಚಾರದಲ್ಲಿ ನಮ್ಮ ಮೊದಲ ಆದ್ಯತೆ ಕಾಂಗ್ರೆಸ್‌’ ಎನ್ನುವ ಮೂಲಕ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು, ತಮ್ಮ ಪಕ್ಷ ಕಾಂಗ್ರೆಸ್ ಜೊತೆ ಮೈತ್ರಿಗೆ ಸಿದ್ಧವಾಗಿದೆ ಎಂಬ ಸಂದೇಶ ನೀಡಿದರು.

ಚಾಮರಾಜಪೇಟೆ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಅವರ ಗೆಸ್ಟ್‌ ಹೌಸ್‌ನಲ್ಲಿ ಸೋಮವಾರ ಸಂಜೆ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಭೆ ಸೇರಿದ ಜೆಡಿಎಸ್‌ ಶಾಸಕರು, ಸುದೀರ್ಘ ಸಮಾಲೋಚನೆ ನಡೆಸಿದರು. ಕಾಂಗ್ರೆಸ್‌ ಜತೆ ಹೋಗಲು ಬಹುತೇಕ ಶಾಸಕರು ಒಲವು ವ್ಯಕ್ತಪಡಿಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ, ‘ಬೆಂಗಳೂರನ್ನು ಉಳಿಸುವುದು, ಮುಂದೆ ಇಲ್ಲಿ ಆಗಬಹುದಾದ ಅನಾಹುತ ತಪ್ಪಿಸುವುದು ಕಾಂಗ್ರೆಸ್ಸಿಗರ ಆದ್ಯತೆ ಆಗಿದ್ದರೆ ನಮ್ಮ ಜೊತೆ ಮಾತುಕತೆ ನಡೆಸಬಹುದು’ ಎಂದು ಹೇಳಿದರು. ‘ಚೆಂಡು ಈಗ ಕಾಂಗ್ರೆಸ್ ಅಂಗಳದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ನಮ್ಮ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಜೊತೆ ಚರ್ಚಿಸಬಹುದು’ ಎಂದು ಆಹ್ವಾನಿಸಿದರು.

ಬಿಜೆಪಿ ಆಡಳಿತ ಅವಧಿಯಲ್ಲಿ ಪಾಲಿಕೆಯ ಮೇಲೆ ₹ 9,600 ಕೋಟಿ ಹೊರೆ ಬಿದ್ದಿದೆ. ರಾಜ್ಯ ಸರ್ಕಾರದ ಸಹಕಾರ ಇಲ್ಲದಿದ್ದರೆ ಇದನ್ನು ಸರಿಪಡಿಸಲು ಆಗದು. ನಗರದಲ್ಲಿ ಆಗಿರುವ ಅನಾಹುತ ಸರಿಪಡಿಸಲು ಯಾರು ಸಹಕಾರ ನೀಡುತ್ತಾರೋ, ಅವರ ಜೊತೆ ಮೈತ್ರಿ ಎಂದು ಹೇಳಿದರು. ರಾಜ್ಯ ಸರ್ಕಾರದ ಸಹಕಾರ ಇಲ್ಲದಿದ್ದರೆ ನಗರಕ್ಕೆ ದೊಡ್ಡ ಅನಾಹುತ ಕಾದಿದೆ ಎಂದು ಎಚ್ಚರಿಸಿದರು. 

ಪ್ರಪಂಚ ಮುಳುಗುವುದಿಲ್ಲ: ‘ನಮ್ಮ ಪಕ್ಷದ ಕಾರ್ಪೊರೇಟರ್‌ಗಳು ಕೇರಳಕ್ಕೆ ಹೋಗಿದ್ದು ನನ್ನ ಗಮನಕ್ಕೆ ಬಂದಿರಲಿಲ್ಲ. ವಾಪಸ್ ಬರುವಂತೆ ಅವರಿಗೆ ಹೇಳಿದ್ದೆ. ಆದರೆ, ಐದಾರು ದಿನ ಅವರು ಅಲ್ಲಿ ಇದ್ದು ಬಂದರೆ ಪ್ರಪಂಚ ಮುಳುಗುವುದಿಲ್ಲ ಎಂದು ವರಿಷ್ಠರು ಹೇಳಿದರು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪಕ್ಷದ ಮುಖಂಡರಾದ ಬಂಡೆಪ್ಪ ಕಾಶಂಪುರ, ಜಮೀರ್ ಅಹಮದ್ ಖಾನ್, ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ಅಖಂಡ ಶ್ರೀನಿವಾಮೂರ್ತಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಆತಂಕದ ಅಲೆ: ಸಭೆ ಬಳಿಕ ಜೆಡಿಎಸ್‌ ಶಾಸಕರು ಸಿದ್ದರಾಮಯ್ಯ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು. ಈ ಬೆಳವಣಿಗೆ ಬಿಜೆಪಿ ವಲಯದಲ್ಲಿ ಆತಂಕದ ಅಲೆ ಎಬ್ಬಿಸಿದೆ.

ಮೊಬೈಲ್‌ನಲ್ಲಿ ಮಾತುಕತೆ: ಮೇಯರ್‌ ಚುನಾವಣೆಗೆ ಬೆಂಬಲ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರ ಜತೆ ಮೊಬೈಲ್‌ ಕರೆಮಾಡಿ ಮಾತನಾಡಿದ್ದು, ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಂಬಂಧ ಸಕಾರಾತ್ಮಕ ಭರವಸೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

ಈ ಬೆಳವಣಿಗೆ ನಂತರವೇ ಕಾಂಗ್ರೆಸ್‌ ಶಾಸಕರು ಪಕ್ಷೇತರ ಸದಸ್ಯರನ್ನು ತಮ್ಮ ‘ವಶ’ಕ್ಕೆ ಪಡೆದು ಕೇರಳ ಪ್ರವಾಸಕ್ಕೆ ಕರೆದೊಯ್ದರು. ಇದಕ್ಕೆ ನಗರದ ಜೆಡಿಎಸ್‌ ಶಾಸಕರು ಕೂಡ ಬೆಂಬಲ ಸೂಚಿಸಿದ್ದರು. ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಿದ ಜಮೀರ್‌ ಅಹ್ಮದ್‌ ಖಾನ್‌ ಅವರೇ ತಮ್ಮ ಮೊಬೈಲ್‌ ಮೂಲಕ ಮುಖ್ಯಮಂತ್ರಿ ಅವರಿಂದ ಕುಮಾರಸ್ವಾಮಿ ಅವರ ಜತೆ ಮಾತನಾಡಿಸಿದರು ಎಂದು ಆ ಮೂಲಗಳು ಸ್ಪಷ್ಟಪಡಿಸಿವೆ.

ದೇವೇಗೌಡರ ಜತೆ ಮಾತುಕತೆ ನಡೆಸುವಂತೆಯೂ ಮುಖ್ಯಮಂತ್ರಿ ಅವರು ಕುಮಾರಸ್ವಾಮಿ ಅವರಿಗೆ ಸೂಚಿಸಿದರು ಎನ್ನಲಾಗಿದೆ. ‘ಗೌಡರು ಏನಾದರು ತಕರಾರು ತೆಗೆದರೆ ಅದನ್ನು ತಿಳಿಸಬೇಕು. ನೀವು ಬೆಂಬಲ ಕೊಟ್ಟರೆ ಮಾತ್ರ ನಾವು ಮುಂದಡಿ ಇಡುತ್ತೇವೆ’ ಎಂದು ಮುಖ್ಯಮಂತ್ರಿ ಸ್ಪಷ್ಟವಾಗಿಯೇ ತಿಳಿಸಿದರು ಎಂದು ಹೇಳಲಾಗಿದೆ.

*
ಇಂದು ಅಧಿಕೃತ ಪ್ರಸ್ತಾವ?
ಬಿಬಿಎಂಪಿಯಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಮೈತ್ರಿ ಬಯಸಿ ಕಾಂಗ್ರೆಸ್‌ ಮುಖಂಡರು ಮಂಗಳವಾರ ಜೆಡಿಎಸ್‌ಗೆ ಅಧಿಕೃತ ಪ್ರಸ್ತಾವ ಸಲ್ಲಿಸುವ ನಿರೀಕ್ಷೆ ಇದೆ. ನವದೆಹಲಿಗೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ವರಿಷ್ಠರ ಜತೆ ಸಮಾಲೋಚನೆ ನಡೆಸಿದ್ದು, ಜೆಡಿಎಸ್‌ಗೆ ಆಹ್ವಾನ ನೀಡಲು ಸಮ್ಮತಿ ಪಡೆದು ಬಂದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮೂಲಕ ಪ್ರಸ್ತಾವ ಕಳುಹಿಸಿ, ಬಳಿಕ ಗೌಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್‌ ಅವರು ಸಮಾಲೋಚನೆ ನಡೆಸಲು ಉದ್ದೇಶಿಸಿದ್ದಾರೆ ಎಂದು ಆ ಮೂಲಗಳು ಸ್ಪಷ್ಟಪಡಿಸಿವೆ.


*
ರಾಜ್ಯ ಹಾಗೂ ಪಾಲಿಕೆಯಲ್ಲಿ ಬಿಜೆಪಿ ಆಡಳಿತವೇ ಇದ್ದಾಗ ಪಾಲಿಕೆಗೆ ದೊಡ್ಡ ಆರ್ಥಿಕ ನೆರವು ದೊರೆಯಲಿಲ್ಲ. ಇನ್ನು ಕಾಂಗ್ರೆಸ್ ಸರ್ಕಾರ ಇರುವಾಗ ಬಿಜೆಪಿಗೆ ಬೆಂಬಲ ಕೊಟ್ಟರೆ ಏನಾಗಬಹುದು?
-ಎಚ್.ಡಿ. ಕುಮಾರಸ್ವಾಮಿ,
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ


*
ಮೇಯರ್‌ ಚುನಾವಣಾ ವಿಚಾರದಲ್ಲಿ ಜೆಡಿಎಸ್‌ ಬೆಂಬಲ ಕೊಟ್ಟರೆ ಒಳ್ಳೆಯದು. ಒಂದು ವೇಳೆ ತಟಸ್ಥವಾಗಿ ಉಳಿಯುತ್ತೇವೆ ಅಂದರೆ ನಾವು ಕೂಡ ವಿರೋಧ ಪಕ್ಷದಲ್ಲಿ ಕೂರುತ್ತೇವೆ
-ರಾಮಲಿಂಗಾರೆಡ್ಡಿ,
ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT