ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ತುಳಿತ: ಮೃತ­­ಪಟ್ಟ ರೈತ

Last Updated 26 ನವೆಂಬರ್ 2014, 20:10 IST
ಅಕ್ಷರ ಗಾತ್ರ

ಸಕಲೇಶಪುರ: ಕಾಡಾನೆ ತುಳಿತಕ್ಕೆ ರೈತ ಮೃತ­­ಪಟ್ಟ ಘಟನೆ ಹೆಗ್ಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಸೇರು­ಮನೆ ಗ್ರಾಮದಲ್ಲಿ ಮಂಗಳ­ವಾರ ರಾತ್ರಿ ನಡೆದಿದೆ. ಆಲು­ವಳ್ಳಿ ಸಮೀಪದ ಹೊಸಗದ್ದೆ ಗ್ರಾಮದ  ವೀರಾಜ್‌ (40) ಮೃತಪಟ್ಟ ವ್ಯಕ್ತಿ. ಇವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ವೀರಾಜ್‌ ಜತೆಗಿದ್ದ ಮಂಜಯ್ಯ ಸಹ ಕಾಡಾನೆ ದಾಳಿಯಿಂದ ಗಾಯ­ಗೊಂಡಿದ್ದು, ಹಾಸ­ನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ವೀರಾಜ್‌, ನಾನು ಹಸು­­ಗ­ಳನ್ನು ಹುಡುಕಲು ಕಾಡಿಗೆ ಹೋಗಿ­ದ್ದಾಗ ಒಂಟಿ ಸಲಗ ನಮ್ಮ ಮೇಲೆ ದಾಳಿ ನಡೆ­ಸಿತು. ಆನೆ ವೀರಾಜ್‌ ಅವ­­ರನ್ನು ಸೊಂಡಿಲಿಂದ ಎತ್ತಿ ಎಸೆದು, ಬಳಿಕ ಅವರ ತಲೆಯನ್ನು ಕಾಲಿನಿಂದ ತುಳಿ­ದಿದೆ’ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ­ಯುತ್ತಿರುವ ಮಂಜಯ್ಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೇಳಿಕೆ ನೀಡಿ­ದ್ದಾರೆ. ಸ್ಥಳಕ್ಕೆ ಎಸಿಎಫ್‌ ರಮೆಶ್‌ಬಾಬು, ವಲಯ ಅರಣ್ಯ ಅಧಿಕಾರಿ ಸುದರ್ಶನ್‌ ಹಾಗೂ­ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೆದ್ದಾರಿ ಬಂದ್‌: ಮೃತ­ಪಟ್ಟ ವೀರಾಜ್‌ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರ­ಹಿಸಿ ಬುಧವಾರ ಸಂಜೆ ಸುಮಾರು ಒಂದು ಗಂಟೆ ಕಾಲ ಗ್ರಾಮಸ್ಥರು ಬೆಂಗ­ಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾ­ರಿಯಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಜಾತಳ್ಳಿ ಪುಟ್ಟ­ಸ್ವಾಮಿ­ಗೌಡ, ಬಿಜೆಪಿ ಜಿಲ್ಲಾ ಕಾರ್ಯ­ದರ್ಶಿ ಜೈಮಾರುತಿ ದೇವ­ರಾಜ್‌, ಜಿಲ್ಲಾ ಬೆಳೆಗಾರರ ಸಂಘದ ಕಾರ್ಯದರ್ಶಿ ಹೆಬ್ಬಸಾಲೆ ಪ್ರಕಾಶ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕಾಡಾನೆಗಳ ದಾಳಿ: ಅಡಿಕೆ, ಬಾಳೆ ಬೆಳೆ ನಾಶ
ಮುಂಡಗೋಡ (ಉತ್ತರ ಕನ್ನಡ):
ತಾಲ್ಲೂಕಿನ ಚವ­ಡಳ್ಳಿ­­­­ಯಲ್ಲಿ ಮಂಗಳವಾರ ರಾತ್ರಿ ತೋಟ–ಗದ್ದೆಗಳಿಗೆ ನುಗ್ಗಿದ ಕಾಡಾನೆಗಳು ಅಡಿಕೆ, ಬಾಳೆ ಬೆಳೆಗಳನ್ನು ನಾಶಪಡಿಸಿವೆ.

ವಿವಿಧೆಡೆ ಭತ್ತದ ಬಣವಿ ಹಾಗೂ 3–4 ಎಕರೆಯಲ್ಲಿನ ಅಡಿಕೆ ಮತ್ತು ಬಾಳೆ ಬೆಳೆ ಕಾಡಾನೆಗಳ ಪಾಲಾಗಿದೆ. ಸುಮಾರು 20ಕ್ಕೂ ಹೆಚ್ಚು ಕಾಡಾನೆಗಳು ಕಳೆದ ಒಂದು ತಿಂಗಳಿಂದ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಸಂಚರಿಸುತ್ತಿದ್ದು ತೋಟ ಮತ್ತು ಗದ್ದೆಗಳಿಗೆ ನುಗ್ಗುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕಾತೂರ, ಮುಂಡಗೋಡ ಅರಣ್ಯ ವಲಯದ ವ್ಯಾಪ್ತಿ­ಯಲ್ಲಿ ಕಾಡಾನೆಗಳ ದಾಳಿಯಿಂದ ಇಲ್ಲಿಯವರೆಗೆ ಸುಮಾರು ₨5ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಬೆಳೆ ಹಾನಿ­ಯಾಗಿದೆ ಎಂದು ಅಂದಾಜಿಸಲಾಗಿದೆ. ಗುಂಜಾವತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾಗೂ ಮಳಗಿ, ಗೊಟಗೋಡಿ ಭಾಗದಲ್ಲಿ ಗಜಪಡೆಯು ರಾಜ್ಯ ಹೆದ್ದಾರಿ ಮೇಲೆ ಪ್ರತ್ಯಕ್ಷ­-ವಾಗುತ್ತಿದ್ದು, ರೈತರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ಗವ್ವಾಳಿ, ದೇಗಾಂವ್‌ ಬಳಿ ಕಾಣಿಸಿಕೊಂಡ ಹುಲಿ
ಖಾನಾಪುರ (ಬೆಳಗಾವಿ ಜಿಲ್ಲೆ):
ಭೀಮಗಡ ವನ್ಯಧಾಮ ವ್ಯಾಪ್ತಿಯ ಗವ್ವಾಳಿ ಮತ್ತು ದೇಗಾಂವ್‌ ಬಳಿ ಬುಧ­ವಾರ ಹುಲಿ ಕಾಣಿಸಿಕೊಂಡಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಹೊಲದಿಂದ ಮನೆಗೆ ಮರಳುತ್ತಿದ್ದ ಗವ್ವಾಳಿ ಗ್ರಾಮದ ಭಾರತಿ ಪಾಟೀಲ ಎಂಬ ಮಹಿಳೆಗೆ ಬುಧವಾರ  ಸಂಜೆ 7 ಗಂಟೆಯ ಸುಮಾರಿಗೆ ಈ ಹುಲಿ ಕಾಣಿಸಿ­­ಕೊಂಡಿದೆ. ಆಗ ಭಯದಿಂದ ಕಿರುಚುತ್ತ ಓಡುತ್ತಿ­ದ್ದಾಗ, ಭಾರತಿ ಕಾಲು ಜಾರಿ ಬಿದ್ದು ಗಾಯ­ಗೊಂಡಿ­ದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಯು ಮಹಿಳೆ­ಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ಕಿರುಚಿಕೊಂಡಾಗ, ಜನರು ಸೇರಿದ್ದಾರೆ. ಮೊದಲು ಮಹಿಳೆಯನ್ನು ಬೆನ್ನಟ್ಟಿದ್ದ ಹುಲಿ, ನಂತರ ಜನ ಸೇರುತ್ತಿರುವುದನ್ನು ಕಂಡು ಓಡಿ ಹೋಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT