ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾದಂಬರಿಯಾಗಿಯೂ ಕಾಡುವ ಹರಪ್ಪಾ!

Last Updated 28 ಮೇ 2016, 19:30 IST
ಅಕ್ಷರ ಗಾತ್ರ

ಭಾರತೀಯ ಸಂಸ್ಕೃತಿಯ ಚಿಂತಕರನ್ನು ತಾನು ಬೆಳಕಿಗೆ ಬಂದ ದಿನದಿಂದ ಈವರೆಗೂ ಹರಪ್ಪಾ ಒಂದಲ್ಲ ಒಂದು ರೀತಿ ಕಾಡುತ್ತಲೇ ಇದೆ. ಅದು ಪುರಾತತ್ತ್ವಜ್ಞರಿಗೆ ಮತ್ತು ಇತಿಹಾಸಕಾರರಿಗೆ ಮಾತ್ರ ಸಂಬಂಧಿಸಿದ್ದು ಎಂದು ಯಾರೂ ಭಾವಿಸುವಂತಿಲ್ಲ. ಮಾನವ ಬದುಕಿನ ಬೆಳವಣಿಗೆಯನ್ನು ತಿಳಿಯಲು ಹರಪ್ಪಾ ಸಂಸ್ಕೃತಿ ದಾರಿ ಮಾಡಿಕೊಡುತ್ತದೆ.

ಹರಪ್ಪಾ ಸಂಸ್ಕೃತಿಯ ಬದುಕು ಪೂರ್ಣ ಅನಾವರಣಗೊಂಡಿದೆ ಎಂದು ಇತಿಹಾಸಕಾರರು ಒಪ್ಪಿಲ್ಲ. ಅಲ್ಲಿನ ಸರ್ವೇಕ್ಷಣೆ ಮತ್ತು ಉತ್ಖನನಗಳಲ್ಲಿ ದೊರೆತ ಪುರಾತತ್ತ್ವ ವಸ್ತುಗಳನ್ನು ಆಧರಿಸಿ ಗೃಹೀತವಾದ ವಿಚಾರಗಳಿಂದ ಮಾತ್ರ ಹರಪ್ಪಾದ ಬದುಕಿನ ಈವರೆಗಿನ ತಿಳಿವು. ಅಲ್ಲಿ ದೊರೆತಿರುವ ಮುದ್ರೆಗಳ ಮೇಲಿನ ಬರಹಗಳನ್ನು ಎಲ್ಲರೂ ಒಪ್ಪುವಂತೆ ಓದಿದ ನಂತರ ಮಾತ್ರ ಆ ಭಾಗದ ಮತ್ತು ಕಾಲಘಟ್ಟದ ಸಂಪೂರ್ಣ ಪರಿಚಯ ಆಗುತ್ತದೆ ಎಂಬ ಅಭಿಪ್ರಾಯ ಬಹುತೇಕ ಇತಿಹಾಸಕಾರರದು.

ಮುಂದಿನ ತಿಳಿವು ಏನೇ ಆಗಿರಲಿ, ಈವರೆಗಿನ ತಿಳಿವಿನಿಂದ ನಾವು ಸಂಭ್ರಮಿಸುತ್ತಿರುವದು ನಿಜ. ಭಾರತದ ಪ್ರಾಚೀನತೆಯ ಬಗ್ಗೆ ಚರ್ಚಿಸುವ ಸಂದರ್ಭದಲ್ಲಿ ಹರಪ್ಪಾ – ಮೊಹೆಂಜೊದಾರೋಗಳ ಜೊತೆಗೆ ವೇದ ಹಾಗೂ ಉಪನಿಷತ್ತುಗಳನ್ನು ನೆರವಿಗೆ ಪಡೆಯುವುದು ಸಹಜ.

ಇತಿಹಾಸಕ್ಕೆ ಬರಹದ ದಾಖಲೆಯೇ ಮುಖ್ಯ ಎಂಬ ವಾದವನ್ನೇ ಮುಂದುವರಿಸಿದರೆ, ಹರಪ್ಪಾ ಇನ್ನೂ ಇತಿಹಾಸದ ಆವರಣ ಪ್ರವೇಶಿಸಿಲ್ಲ. ಆದರೆ, ಪುರಾತತ್ತ್ವ ವಸ್ತುಗಳ ಮೂಲಕ ನಿರೂಪಿತವಾಗಿರುವ ತಿಳಿವಳಿಕೆಯನ್ನು ಉಪೇಕ್ಷಿಸುವಂತಿಲ್ಲ. ಆ ನಿಟ್ಟಿನಲ್ಲಿ ಹರಪ್ಪಾ ಇತಿಹಾಸಕ್ಕೆ ದೂರವಲ್ಲ. ನೇರವಾಗಿ ಆ ಕಾಲದ್ದು ಎಂದು ಹೇಳಲಾಗದಿದ್ದರೂ, ವೇದ ಮತ್ತು ಉಪನಿಷತ್ಕಾಲೀನ ಸಾಹಿತ್ಯವೂ ಹರಪ್ಪಾ ಬಗ್ಗೆ ಮಸಕುಮಸಕಾಗಿಯಾದರೂ ತಿಳಿಸುತ್ತದೆ ಎಂದು ಭಾವಿಸಲಾಗಿದೆ.

ಹರಪ್ಪಾದ ಬದುಕಿನಲ್ಲಿ ಯಾಗ, ಯಜ್ಞಗಳ ಪಾತ್ರವೂ ಇತ್ತು ಎಂಬುದು ಒಂದು ತಿಳಿವಳಿಕೆ. ಅದನ್ನು ಖಚಿತಪಡಿಸಲು ಹರಪ್ಪಾಕಾಲೀನ ಬರವಣಿಗೆಯ ಕೀಲಿಕೈ ಸಿಗಬೇಕು.

ಅಂದಿನ ಬರವಣಿಗೆ ಸ್ಪಷ್ಟವಾದಾಗ, ಕಾಡುತ್ತಿರುವ ಪ್ರಾಚೀನ ಭಾರತೀಯ ಬದುಕಿನ ಅದೆಷ್ಟೋ ವಿಚಾರಗಳು ತಿಳಿಯುತ್ತವೆ. ಅಲ್ಲಿಯವರೆಗೆ ಪುರಾತತ್ತ್ವ ಸಾಮಗ್ರಿಗಳನ್ನು ಆಧರಿಸಿದ ಮತ್ತು ಹರಪ್ಪಾ ಸಮಕಾಲೀನ ಎಂದು ಭಾವಿಸಲಾಗಿರುವ ವೇದಕಾಲೀನ ಸಾಹಿತ್ಯದ ಮೂಲಕ ಮಾತ್ರ ಆ ಬದುಕನ್ನು ಅಸ್ಪಷ್ಟವಾಗಿಯಾದರೂ ತಿಳಿಯಬಹುದು.

ಹರಪ್ಪಾ ಸಂಸ್ಕೃತಿಯ ಹರಹು ವಿಸ್ತಾರವಾದದ್ದು. ಅದು ವಾಯುವ್ಯ ಭಾರತಕ್ಕೆ ಮಾತ್ರ ಸೀಮಿತವಲ್ಲ ಎಂಬುದು ಸರ್ವೇಕ್ಷಣೆ ಮತ್ತು ಉತ್ಖನನಗಳಿಂದ ಸ್ಪಷ್ಟವಾಗಿದೆ. ಈಗಲೂ ಆ ಸಂಸ್ಕೃತಿಯ ಸುಳಿವುಗಳಿಗಾಗಿ ಹುಡುಕಾಟ ಮುಂದುವರಿದಿದೆ. ಕೆಲವು ವರ್ಷಗಳಿಂದೀಚೆಗೆ ಸರಸ್ವತಿ ನದಿಯೂ ಭಾರತೀಯ ಸಂಸ್ಕೃತಿ ಸಂಶೋಧಕರ ನಿದ್ದೆಗೆಡಿಸಿದೆ. ಹೀಗೆ ಇನ್ನೂ ಹಲವು ಗುಟ್ಟುಗಳನ್ನು ತನ್ನೊಳಗೇ ಅಡಗಿಸಿಟ್ಟುಕೊಂಡಿರುವ ಹರಪ್ಪಾ ಸಂಸ್ಕೃತಿಯ ಬಗ್ಗೆ ಆಲೋಚಿಸುವಾಗ ಆರ್ಯರೂ ಚರ್ಚೆಗೆ ಗ್ರಾಸವಾಗುತ್ತಾರೆ.

ಆರ್ಯರು ಹೊರಗಿನಿಂದ ಬಂದವರು ಅಥವಾ ಇಲ್ಲಿಯ ಮೂಲನಿವಾಸಿಗಳು ಎಂಬ ಚರ್ಚೆಯೂ ಇದೆ. ಇಷ್ಟಾದರೂ ಹರಪ್ಪಾ ಸಂಸ್ಕೃತಿಯನ್ನು ವೇದಕಾಲೀನ ಸಂಸ್ಕೃತಿಯ ಜೊತೆಗೆ ಸಮೀಕರಿಸುವ ಕೆಲಸವೂ ನಿರಂತರವಾಗಿ ಆಗುತ್ತಿದೆ. ಈ ನಿಟ್ಟಿನಲ್ಲಿ ಇತಿಹಾಸಕಾರರ, ಪುರಾತತ್ತ್ವ ಶಾಸ್ತ್ರಜ್ಞರ ಚರ್ಚೆಗಳು ಮುಂದುವರಿದಿರುವಂತೆಯೇ ಕೆಲವು ಚಿಂತಕರು ಮತ್ತು ಕಾದಂಬರಿಕಾರರು ತಮ್ಮ ಕೃತಿಗಳ ಮೂಲಕ ಹರಪ್ಪಾದ ನೆನಪು ಹಸಿರಾಗಿರುವಂತೆ ನೋಡಿಕೊಂಡಿದ್ದಾರೆ.

‘ವೋಲ್ಗಾ-ಗಂಗಾ’, ‘ದಿವೋದಾಸ’, ‘ಅವಧೇಶ್ವರಿ’, ‘ಹರಿಯೂಪಿಯಾ’ ಕಾದಂಬರಿಗಳು ಹರಪ್ಪಾ ಮತ್ತು ವೇದಕಾಲೀನ ಸಂಸ್ಕೃತಿಯ ನೆನಪನ್ನು ಉಳಿಸಿವೆ. ಈಗ ಆ ಕೆಲಸವನ್ನು ವೃತ್ತಿಯಿಂದ ವೈದ್ಯರಾದ ಡಾ. ಶಂಕರ್ ಎನ್. ಕಶ್ಯಪ್ ಅವರ ‘ಕಲ್ಪತರು ಸೋಮ’ ಮಾಡಿದೆ.

‘ಮೊದಲ ಮಾತು’ಗಳಲ್ಲಿ ಮೂಲ ಲೇಖಕರು ಕಾದಂಬರಿಯ ಕಥಾವಸ್ತು, ಕಾಲ, ದೇಶಗಳ ವಿವರಗಳನ್ನು ನೀಡುವುದರ ಮೂಲಕ ಓದುಗನಿಗೆ ಒಂದು ನೆಲೆಗಟ್ಟನ್ನು ಒದಗಿಸಿದ್ದಾರೆ. ಈವರೆಗೆ ಹರಪ್ಪಾ ಕುರಿತಂತೆ ಆಗಿರುವ ಅಧ್ಯಯನಗಳ ಸ್ಥೂಲ ಪರಿಚಯವೂ ಅವರಿಗಿದೆ. ಈ ಬಗೆಗಿನ ವಿವಾದಗಳ ಅರಿವೂ ಇದೆ. ಆದ್ದರಿಂದ ಹರಪ್ಪಾ ಇತಿಹಾಸ ಕುರಿತಂತೆ ಲಭ್ಯವಿರುವ ಮಾಹಿತಿಯನ್ನು ಆಧರಿಸಿಯೇ ಲೇಖಕರು ಕಾದಂಬರಿ ರಚನೆಗೆ ತೊಡಗಿದ್ದಾರೆ.

ಹರಪ್ಪಾ ಇತಿಹಾಸ ಕುರಿತಂತೆ, ವೇದಗಳ ರಚನೆಯ ಕಾಲಕ್ಕೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳನ್ನು ಚರ್ಚಿಸುವ ಮತ್ತು ತೀರ್ಮಾನಕ್ಕೆ ಬರುವ ಸ್ವಾತಂತ್ರ್ಯ ಇತಿಹಾಸಕಾರರದು. ಅದಕ್ಕೂ ಕಾದಂಬರಿಕಾರರ ಸೃಜನಾತ್ಮಕತೆಗೂ ನೇರ ಸಂಬಂಧವಿಲ್ಲ. ಆದರೆ, ಇತಿಹಾಸದ ಪುಟಗಳಿಗೆ ಧಕ್ಕೆ ಬಾರದಂತೆ, ಸರಳ ತರ್ಕಕ್ಕೆ ಒಪ್ಪಿತವಾಗುವಂತೆಯಾದರೂ ಐತಿಹಾಸಿಕ ಕಾದಂಬರಿಯನ್ನು ರಚಿಸುವುದರಿಂದ ಇತಿಹಾಸದ ನೆನಪು ಉಳಿಯುತ್ತದೆ. ಈ ನಿಟ್ಟಿನಲ್ಲಿ ‘ಕಲ್ಪತರು ಸೋಮ’ ಯಶ್ವಸಿಯಾಗಿದೆ.

ಕಾದಂಬರಿಕಾರರು ಈ ಕಾದಂಬರಿಯ ರಚನೆಗೆ ಹಲವು ಕೃತಿಗಳ ಅಧ್ಯಯನ ಮಾಡಿರುವುದರಿಂದ ತಾವು ಹೇಳಲಿರುವ ಕಥೆಯ ಸ್ಪಷ್ಟ ಅರಿವು ಹೊಂದಿದ್ದಾರೆ. ವೇದಗಳ ರಚನೆಯ ಕಾಲದ ಬಗ್ಗೆ ಏನೇ ಚರ್ಚೆಗಳಾಗಿದ್ದರೂ, ಕಾದಂಬರಿಕಾರರು ಅದನ್ನು ಕಿ.ಪೂ. ೩೦೦೦ ದಿಂದ ೧೯೦೦ ಎಂದು ಸ್ವೀಕರಿಸಿ, ಅದಕ್ಕೆ ತಕ್ಕಂತೆ ತಮ್ಮ ಕಾದಂಬರಿಯ ಕಥಾಹಂದರವನ್ನು ಸಿದ್ಧಮಾಡಿಕೊಂಡಿದ್ದಾರೆ.

ಐತಿಹಾಸಿಕ ಕಾದಂಬರಿಗಳಲ್ಲಿ ಕಥಾವಿನ್ಯಾಸಕ್ಕೆ ಹೊಂದಿಕೊಂಡಂತಿರುವ ಒಬ್ಬ ಅದೇ ಕಾಲಘಟ್ಟದ ನಿರೂಪಕ ಇರುವುದರಿಂದ ಅನುಕೂಲಗಳು ಹೆಚ್ಚು. ಘಟನೆಗಳನ್ನು ಹೆಚ್ಚು ಆಪ್ತವಾಗಿ ಮತ್ತು ಕಣ್ಣಿಗೆ ಕಂಡಂತೆ ಅಥವಾ ಕೇಳಿ ತಿಳಿದಂತೆ ವಿವರಿಸುವುದು ಸಾಧ್ಯ. ವೃತ್ತಿಯಿಂದ ವೈದ್ಯರಾದ ಕಾದಂಬರಿಕಾರರು ಆಯ್ದುಕೊಂಡಿರುವ ನಿರೂಪಕ ಆಚಾರ್ಯ ಉಪಾಸ್ (ಉಪಶಾಂತ) ಕೂಡ ಒಬ್ಬ ವೈದ್ಯ. ಇವನು ಹರಪ್ಪಾದ (ಹೇಮಾಪಟ್ಟಣ) ಕಪಿಲಾ ಆಂಗೀರಸರ ಮಗ.

ಹರಪ್ಪಾದಲ್ಲಿ ಸಂಭವಿಸಿದ ಭೂಕಂಪದ ಸಂದರ್ಭದಿಂದ ಕಥೆ ಪ್ರಾರಂಭವಾಗುತ್ತದೆ. ಧನ್ವಂತರಿಗಳ ಅನುಪಸ್ಥಿತಿಯಲ್ಲಿ ವೈದ್ಯಶಾಲೆಯ ನಿರ್ವಹಣೆಯ ಹೊಣೆ ಹೊತ್ತ ಉಪಶಾಂತ, ಭೂಕಂಪದ ಪರಿಣಾಮವಾಗಿ ಕುಸಿದ ನಗರದ ಕೋಟೆಯ ಉತ್ತರ ಭಾಗದ ಗೋಡೆಯ ಪಕ್ಕದ ಮನೆಗಳ ಅವಶೇಷಗಳ ಕೆಳಗೆ ಸಿಕ್ಕಿಕೊಂಡಿದ್ದವರನ್ನು ರಕ್ಷಿಸುವ ಸಂದರ್ಭದಲ್ಲಿ ಬಿದ್ದು ಹಾಳು ಸುರಿಯುತ್ತಿದ್ದ ತನ್ನ ಪ್ರೀತಿಯ ಹೇಮಾಪಟ್ಟಣದ ನೆನಪು ಮಾಡಿಕೊಳ್ಳುತ್ತಾನೆ. ಆ ನೆನಪುಗಳು ಓದುಗರಿಗೆ ಹರಪ್ಪಾದ ಪರಿಚಯ ಮಾಡುತ್ತವೆ.

ಅಲ್ಲಿನ ಕೋಟೆ, ಕೊತ್ತಳ, ಪಹರೆಯ ಜನ, ದ್ವಾರಪಾಲಕರು, ದಕ್ಷಿಣಕ್ಕೆ ಹರಿಯುವ ಪರುಶ್ನಿ ನದಿ, ಅದರೊಳಗೆ ಸಂಚರಿಸುವ ದೋಣಿಗಳು, ಪಟ್ಟಣವನ್ನು ಸುತ್ತುವರಿದ ಪ್ರಾಕಾರ, ನಡುವಿನ ಭವ್ಯ ದೇಗುಲ, ಪುರೋಹಿತರು ವಾಸಿಸುವ ಮೇಲ್‌ನಗರ, ಅಧಿಕಾರಿಗಳು ಮತ್ತು ಶ್ರೀಮಂತರು ವಾಸಿಸುವ ಮಧ್ಯನಗರ ಮತ್ತು ಕೆಳವರ್ಗದವರು ವಾಸಿಸುವ ಸಣ್ಣಸಣ್ಣ ಮನೆಗಳಿರುವ ಕೆಳನಗರ, ಪೂರ್ವದ್ವಾರಕ್ಕೆ ಸಮೀಪವಾಗುವ ಗೊಂಡಾರಣ್ಯ ಇತ್ಯಾದಿ ವಿವರಗಳು ಹರಪ್ಪಾ ಪಟ್ಟಣದ ಪರಿಚಯ ಮಾಡುತ್ತವೆ.

ಹರಪ್ಪಾ ಪಟ್ಟಣದ ಪಶ್ಚಿಮ ದ್ವಾರದ ಬಳಿ ಉಪಶಾಂತ ಕಂಡ, ಸಾರಸ್ವತ ನಗರದ, ಬಹುಭಾಷಾ ಪಂಡಿತ ಅವಿಸ್ತುವಿನ ಮಗಳು ಲೋಪಾಳ ಪರಿಚಯ ಆಗುತ್ತದೆ. ಈ ಕಥೆ ನಡೆಯುವ ಹೊತ್ತಿಗೆ ದಸ್ಯುಗಳು ಮತ್ತು ಅವರ ದ್ರಾವಿಡ ಭಾಷೆ ಹರಪ್ಪಾಗೆ ಪರಿಚಿತವಾಗಿತ್ತು ಎನ್ನುವ ಸೂಚನೆಯನ್ನು ಕಾದಂಬರಿ ನೀಡುತ್ತದೆ.

ಹರಪ್ಪಾ ಪ್ರದೇಶದಲ್ಲಿ ಸಂಭವಿಸಿದ ಭೂಕಂಪ ಮತ್ತು ಅದರಿಂದಾದ ಹಾನಿಯ ವಿಷಯವಾಗಿ ಚರ್ಚಿಸಲು ಸೇರಿದ್ದ ಮಹಾಪರಿಷನ್ಮಂಡಳಿಯ ಸಭೆಯ ಕಲಾಪಗಳು ಹರಪ್ಪಾ ಮತ್ತು ನೆರೆಯ ಎಲ್ಲಾ ಪ್ರಾಂತಗಳ ಮತ್ತು ಅಲ್ಲಿನ ಜನರ ಪರಿಚಯ ಮಾಡುತ್ತವೆ. ಹರಪ್ಪಾಕ್ಕೆ ಬರುತ್ತಿದ್ದ ಇತರ ಪ್ರದೇಶದ ವ್ಯಾಪಾರಿಗಳು, ಅವರ ವ್ಯಾಪಾರ ವಹಿವಾಟು, ಎಲ್ಲ ಪ್ರದೇಶಗಳ ಕೃಷಿ, ಫಸಲಿನ ಉಗ್ರಾಣಗಳು, ವಿವಿಧ ಲೋಹಗಳ ಗಣಿಗಳು ಇತ್ಯಾದಿ ವಿವರಗಳನ್ನು ಕಾದಂಬರಿಕಾರರು ಸಂಗ್ರಹಿಸಿ ಕೊಟ್ಟಿದ್ದಾರೆ.

ಭೂಕಂಪದಿಂದ ಆದ ಹಾನಿಯ ನಿವಾರಣೆಗಾಗಿ ಮತ್ತು ಮುಂದೆ ಆಗಬಹುದಾದ ಹಾನಿಯನ್ನು ತಡೆಯುವ ಸಲುವಾಗಿ ಕೈಗೊಂಡ ಪರಿಹಾರ ಕಾರ್ಯಗಳ ಬಗ್ಗೆ ಇರುವ ವಿವರಣೆಗಳು ಆ ಕಾಲಘಟ್ಟದ ಸೇವಾವ್ಯವಸ್ಥೆಯ ಪರಿಚಯ ಮಾಡುತ್ತವೆ. ವೈದ್ಯಕೀಯ ನೆರವಿನ ವಿಚಾರದಲ್ಲಿ, ಗಾಯಾಳುಗಳಿಗೆ ಶುಶ್ರೂಷೆ, ಮುರಿದ ಕಾಲಿಗೆ ಕಟ್ಟುವ ಬಿದಿರಿನ ದಬ್ಬೆ, ಶುಶ್ರೂಷಕರ ನೆರವು ಇತ್ಯಾದಿ ವಿಚಾರಗಳು ಸನ್ನಿವೇಶದ ಗಾಂಭೀರ್ಯವನ್ನು ತೆರೆದಿಡುತ್ತವೆ.

ಆಗ ಹರಪ್ಪಾದವರ ನೆರವಿಗೆ ಬಂದವನು ಏಲಾಮಿನ ರಾಜಕುಮಾರ ಶುಶಾನ್. ಆ ಕಾಲಘಟ್ಟದಲ್ಲಿ ಬೇರೆಬೇರೆಡೆ ಇದ್ದ ವೈದ್ಯಕೀಯ ವ್ಯವಸ್ಥೆಯ ಪರಿಚಯ ಓದುಗರಿಗೆ ಆಗುತ್ತದೆ. ಜೊತೆಗೆ ಸಮಕಾಲೀನ ನಾಗರಿಕ ದೇಶಗಳ ನಡುವೆ ಇದ್ದ ಪರಸ್ಪರ ಅರಿವು ಸ್ಪಷ್ಟವಾಗುತ್ತದೆ.

ಹರಪ್ಪಾದಲ್ಲಿ ಭೂಕಂಪವಾದ ವಿಷಯ ತಿಳಿಯುತ್ತಿದ್ದಂತೆಯೇ ಸಾರಸ್ವತದಿಂದ ಹರಪ್ಪಾಕ್ಕೆ ಹೊರಟಿದ್ದ ಮಂತ್ರವಾದಿ ಮಾತ್ರಿಯಾ ಕುತೂಹಲದ ಪಾತ್ರವಾಗಿ ನಂತರದ ಕಥೆಯನ್ನು ನಡೆಸುತ್ತಾನೆ. ಮಾತ್ರಿಯಾ ಮಗುವಾಗಿದ್ದಾಗಲೇ ನವನದಿಗಳು ಬತ್ತಲು ಆರಂಭಿಸಿ, ಉಳುಮೆಗೂ ಕಷ್ಟವಾಗಿದ್ದ ದಿನಗಳು ಎದುರಾಗಿವೆ. ‘ಗಂಡನ ಕಳೇಬರದ ಗಾಡಿಯನ್ನು ಮಗ ಮುಂದಕ್ಕೆ ಎಳೆಯುತ್ತಿದ್ದರೆ, ತಾಯಿ ಹಿಂದೆ ಹೆಣದ ಗಾಡಿ ಹಿಡಿದು ನಡೆಯುತ್ತಿದ್ದಳು’ ಎಂಬ ಮಾತ್ರಿಯಾ ಮತ್ತು ಅವನ ತಾಯಿಯ ದಾರುಣ ಅನುಭವವೇ ಮುಂದೆ ಮಾತ್ರಿಯಾನ ಘೋರ ಪ್ರತಿಜ್ಞೆಗೆ ಕಾರಣವಾಗಿದೆ.

‘ಬದುಕು ನರಕ ಮಾಡಿದ ಬಂಜರುತನವನ್ನು ತೊಳೆದು, ಇಡೀ ದೇಶ ಸುಖ–ಶಾಂತಿ, ಸಿರಿ–ಸಂಪತ್ತಿನಿಂದ ತುಂಬಿ ಸ್ವರ್ಗಕ್ಕೆ ಸಮಾನವೆನ್ನಿಸುವಂತೆ’ ಮಾಡುವ ಪ್ರತಿಜ್ಞೆಯದು. ಅದನ್ನು ಈಡೇರಿಸಲು  ಅವನು ಅನುಸರಿಸುವ ಮಾರ್ಗಗಳ ಕಥನವೇ ‘ಕಲ್ಪತರು ಸೋಮ’.

ಪ್ರಕೃತಿಯ ಮೇಲೆ ಹಿಡಿತ ಸಾಧಿಸಿ, ಸಿಂಧೂ ನದಿಯ ದಿಕ್ಕನ್ನೇ ಬದಲಾಯಿಸುವ ಆಲೋಚನೆಯಿಂದ ಮಂತ್ರವಿದ್ಯೆ ಕಲಿತ ಮಾತ್ರಿಯಾನ ತಾಮಸ ಸಾಹಸಗಳು ಕಾದಂಬರಿಯಲ್ಲಿವೆ. ಇದಕ್ಕೆ ತಡೆಯಾಗುವ ಉಪಶಾಂತನ ಸಾತ್ವಿಕ ಸಾಹಸಗಳು, ಉಪಶಾಂತನ ರಕ್ಷಣೆಗೆ ಹರಪ್ಪಾದ ಹಿರಿಯರು ತೆಗೆದುಕೊಳ್ಳುವ ಕ್ರಮ, ಪ್ರವಾಸಿಗಳನ್ನು ದೋಚುವ ಅವಸ್ಥೀಯರು, ಸಿಂಧೂ ಪಟ್ಟಣದಲ್ಲಿ ಉಪಶಾಂತ ಕಂಡ ವಿಶ್ವಾಮಿತ್ರರು,

ಹರಪ್ಪಾಕ್ಕೆ ತೊಂದರೆಯಾಗಲೆಂದೇ ನಡೆಸಿ ವಿಫಲವಾದ ಯಜ್ಞ, ಅದರ ಕುರುಹಾದ ಭೂಕಂಪ, ಮಂತ್ರವಾದಿಗೆ ನೆರವಾದ ಮಾರೀಚ ಮತ್ತು ಇತರರು, ಕಲ್ಪತರು ಸೋಮದ ಹುಡುಕಾಟ, ಅದಕ್ಕಾಗಿ ಕಲ್ಪತರು ಸೋಮ ಬೆಳೆಯುವ ಮುಜಾವಂತಾ  ಪರ್ವತಗಳಿಗೆ ಹುಡುಕಾಟ, ಸೋಮದ ಗುಟ್ಟನ್ನು ತಿಳಿಯಲು ಮಾಡುವ ಪ್ರಯತ್ನಗಳು, ಯಜ್ಞ ಕಾರ್ಯಕ್ಕೆ ಮಾಡಿಕೊಂಡ ಸಿದ್ಧತೆಗಳು, ಅಹೋಮಾದ ಅಲಭ್ಯತೆ ಇತ್ಯಾದಿ ವಿವರಗಳು ಕಥೆಯ ಓಟಕ್ಕೆ ಅಗತ್ಯವಾದ ಶಿಸ್ತು ಮತ್ತು ವೇಗವನ್ನು ತಂದುಕೊಟ್ಟಿವೆ.

ಸೋಮರಸದ ತಯಾರಿಕೆಗೆ ನಡೆಸಿದ ಮಹಾಯಜ್ಞ ಮತ್ತು ಅದರ ವೈಫಲ್ಯಗಳನ್ನು ಕಾದಂಬರಿಕಾರರು ದಟ್ಟ ವಿವರಗಳಲ್ಲಿ ನೀಡಿದ್ದಾರೆ. ಯಾವುದೇ ಅಡೆತಡೆ ಇಲ್ಲದೆ ಓದಿಸಿಕೊಂಡು ಹೋಗುವ ಶಕ್ತಿ ಕಥನಕ್ರಮದಲ್ಲಿದೆ. ಜನಾಂಗೀಯ ಘರ್ಷಣೆಗಳು, ಪ್ರಕೃತಿಯ ವಿರುದ್ಧದ ಸೆಣಸಾಟ, ದ್ವೇಷದ ಪರಿಣಾಮಗಳನ್ನು ಮನಮುಟ್ಟುವಂತೆ ಪರಿಶೀಲಿಸುವ ಕೆಲಸವನ್ನು ಕಾದಂಬರಿಕಾರರು ಯಶಸ್ವಿಯಾಗಿ ಮಾಡಿದ್ದಾರೆ.

ಕಾದಂಬರಿಯಾಗಿ ‘ಕಲ್ಪತರು ಸೋಮ’ ಒಂದು ಸ್ವಾಗತಾರ್ಹ ಕೃತಿ. ಹರಪ್ಪಾ ಸರಣಿ ಕಾದಂಬರಿಗಳನ್ನು ಬರೆಯಲು ಉದ್ದೇಶಿಸಿರುವಂತಿರುವ ಲೇಖಕರು ಅದಕ್ಕಾಗಿ ಸಾಕಷ್ಟು ಅಧ್ಯಯನ ಮಾಡಿರುವ ಸೂಚನೆಗಳು ಕೃತಿಯಲ್ಲಿವೆ. ಇತಿಹಾಸಕಾರರು ಮತ್ತು ಸಂಸ್ಕೃತಿ ಚಿಂತಕರನ್ನು ಕಾಡುವ ಹರಪ್ಪಾ ಈಗ ಕಾದಂಬರಿ ರೂಪದಲ್ಲಿ ಓದುಗರನ್ನು ಕಾಡುವಂತಿದೆ.

ಇಂಗ್ಲಿಷ್‌ನ ಮೂಲಕೃತಿಯನ್ನು ಸಿ. ಅರುಣಾ ಕನ್ನಡಕ್ಕೆ ಅಚ್ಚುಕಟ್ಟಾಗಿ ಅನುವಾದಿಸಿದ್ದಾರೆ. ಮೂಲಕ್ಕೆ ಎಲ್ಲೂ ಧಕ್ಕೆಯಾಗದಂತೆ ಕಾದಂಬರಿ ಕನ್ನಡಕ್ಕೆ ಅನುವಾದಗೊಂಡಿದೆ. ಈ ಕೃತಿಯು ಕನ್ನಡ ಓದುಗರಿಗೆ ಒಳ್ಳೆಯ ಕೊಡುಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT