ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾದಂಬರಿ ಬರೆಯುವುದು ತುಂಬ ಕಠಿಣ

ಕತೆಗಾರ ವಿವೇಕ ಶಾನಭಾಗ ಅಭಿಮತ
Last Updated 8 ಫೆಬ್ರುವರಿ 2015, 20:05 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮಲ್ಲಿ ಕಾದಂಬರಿ ಎಂದರೆ ದೊಡ್ಡ ಕತೆ ಎನ್ನುವ ತಪ್ಪು ಕಲ್ಪನೆ ಇದೆ. ಆದರೆ, ಕಾದಂಬರಿಯ ವಿಶೇಷ ಇರುವುದು ಅದರ ಆಳದಲ್ಲಿ. ಜೀವನ ಕುರಿತಾದ ಆಳವಾದ ನೋಟ ಕಾದಂಬರಿಯಲ್ಲಿ ಮಾತ್ರ ಸಿಗುತ್ತದೆ’ 
– ಹೀಗೆ ಹೇಳಿದ್ದು ಕತೆಗಾರ ವಿವೇಕ ಶಾನಭಾಗ.
ಸಂದರ್ಭ: ಅಕ್ಷರ ಪ್ರಕಾಶನ ನಗರದ ‘ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್ ಕಲ್ಚರ್‌’ನಲ್ಲಿ ಭಾನುವಾರ ಆಯೋಜಿಸಿದ್ದ  ಸಮಾರಂಭ.

ತಮ್ಮ ‘ಊರು ಭಂಗ’ ಕಾದಂಬರಿಯ ಬಿಡುಗಡೆ ನಂತರ ಸಾಹಿತಿ ಜಯಂತ ಕಾಯ್ಕಿಣಿ ಅವರೊಂದಿಗೆ ಆಪ್ತ ಸಂವಾದದಲ್ಲಿ ಭಾಗವಹಿಸಿದ್ದ ವಿವೇಕ  ಅವರು ತಮ್ಮ ಮನದಾಳ ತೆರೆದಿಟ್ಟರು.

ವಿವೇಕ ಮತ್ತು ಜಯಂತ ಅವರ ನಡುವೆ ನಡೆದ ಮಾತಿನ ಜುಗಲ್‌ಬಂದಿಯ ಆಯ್ದ ಸಾರಾಂಶ ಇಲ್ಲಿದೆ...
*ಜಯಂತ ಕಾಯ್ಕಿಣಿ (ಜ.ಕಾ): ಕಾದಂಬರಿ ಬರೆಯುವುದರಲ್ಲಿ ನೀನು ಕಂಡುಕೊಂಡಿದ್ದು ಏನು?
ವಿವೇಕ ಶಾನಭಾಗ (ವಿ.ಶಾ): ನಾನು ಕಾದಂಬರಿ ಬರೆಯಲು ಆರಂಭಿಸಿದಾಗ ಕತೆಗಿಂತ ಅದು ಬಹಳ ವಿಶಾಲವಾದ ಜಾಗ ಎನಿಸಿತು. ಸಣ್ಣ ಮಾಧ್ಯಮವಾದ ಕತೆಯಲ್ಲಿ ಎಲ್ಲವನ್ನೂ ಹೇಳಬೇಕು ಎಂಬ ಕಾರಣಕ್ಕೆ ಅದರಲ್ಲಿ ನಾವು ಕುಶಲತೆ ತರುತ್ತೇವೆ.
ಕಾದಂಬರಿ ಎಂದರೆ ಮನಸ್ಸಿಗೆ ಬಂದದ್ದೆಲ್ಲವನ್ನು ಹೇಳುವುದು, ಬೇಕಾದ್ದೆಲ್ಲವನ್ನು ಬರೆಯುವುದಲ್ಲ. ಕಾದಂಬರಿ ಬರೆಯುವುದು ತುಂಬ ಕಠಿಣವಾದ ಕೆಲಸ.   ಸಣ್ಣ ಕತೆಗೆ ಬೇಕಾದ ಕುಶಲತೆಯೇ ಕಾದಂಬರಿ ರಚನೆಯಲ್ಲಿಯೂ ಅಗತ್ಯ.
ಪ್ರತಿ ಕಾದಂಬರಿ ಓದಿದಾಗಲೂ ಓದುಗನಲ್ಲಿ ಅದು ಒಂದು ಅತೃಪ್ತಿ ಹುಟ್ಟು ಹಾಕಿ ಆ ಮೂಲಕ ಅದಕ್ಕಿರುವ ಇನ್ನಷ್ಟು ಸಂಬಂಧಗಳನ್ನು ಹುಡುಕಲು ಮನಸ್ಸಿಗೆ ಉದ್ರೇಕಿಸಬೇಕು. ಇಲ್ಲದಿದ್ದರೆ ಅದು ಒಳ್ಳೆಯ ಕಾದಂಬರಿಯಾಗಲಾರದು.

*ಜ.ಕಾ: ಅನುಭವ, ಆತ್ಮಕತೆ ಮತ್ತು ಕಾದಂಬರಿ ಈ ಮೂರನ್ನು ಕುರಿತು ನಿನಗೆ ಏನನಿಸುತ್ತೆ?
ವಿ.ಶಾ: ಒಂದು ಕೃತಿಗೆ ಅನುಭವ ಎನ್ನುವುದು ತುಂಬಾ ಮುಖ್ಯ. ನಾನು ಕತೆ, ಕಾದಂಬರಿ ಬರೆದಾಗ ಅವುಗಳ ಒಳಗೆ ಇರುವುದೆಲ್ಲ ನಿಮ್ಮ ಅನುಭವವೇ ಎಂದು ತುಂಬ ಜನ ನನ್ನನ್ನು ಕೇಳುತ್ತಾರೆ. ಆದರೆ, ಕತೆ, ಕಾದಂಬರಿ ಬರೆದ ಮೇಲೆ ಅದು ನನ್ನ ಅನುಭವವೇ. ಯಾಕೆಂದರೆ, ಅದು ಬರೆಯುವ ಮುಂಚೆಯೇ ನನ್ನ ಅನುಭವವಾಗಿರುತ್ತದೆ. ಅದರಿಂದಲೇ ನಾನು ಬರೆಯುತ್ತೇನೆ.

*ಜ.ಕಾ: ನಿಮ್ಮ ಕಾದಂಬರಿಯಲ್ಲಿ ಶೃಂಗಾರ ಪುಟಗಳೇ ಅಧಿಕವಾಗಿವೆ. ಇದ್ದಕ್ಕಿದ್ದಂತೆ ಕಾಣುವ ಮುಕ್ತವಾದ ಈ   ಹೊಸ ವಿವೇಕ ನಿಮಗೆ ವಿರುದ್ಧವಾದದ್ದು ಅಲ್ಲವೆ?
ವಿ.ಶಾ: ಕಾದಂಬರಿಯಲ್ಲಿ ನಾನು ಶೃಂಗಾರ­ವನ್ನು ಉದ್ದೇಶಪೂರ್ವಕವಾಗಿ ತಂದಿಲ್ಲ. ಬಹುಶಃ ಕಾದಂಬರಿಯ ವಸ್ತುವಿಗೆ ಅಗತ್ಯವಾಗಿ ಅದು ಕಾಣಿಸಿಕೊಂಡಿದೆ. ಬರೆಯುವಾಗ ನನಗೆ ಬಹಳ ಸೂಕ್ತವಾದದ್ದನ್ನೆ ಬರೆಯಬೇಕು ಎನಿಸುತ್ತದೆ.

*ಜ.ಕಾ: ‘ದೇಶಕಾಲ’ ಪತ್ರಿಕೆ ಸಂಪಾದಕನಾಗಿ ನೀನು ಮಾಡಿಸಿದ ಅನುವಾದ ಕೆಲಸದಿಂದ ಕಲಿತ ಹೊಸತೇನಾದರೂ ಪಾಠ.
ವಿ.ಶಾ: ‘ದೇಶಕಾಲ’ ಪತ್ರಿಕೆಗಾಗಿ ಭಾರತದ ಬೇರೆ ಭಾಷೆಗಳ ಆಯ್ದ ಕತೆ, ಕವಿತೆ, ಕಾದಂಬರಿ ಕನ್ನಡಕ್ಕೆ ಅನುವಾದ ಮಾಡಿಸುವ ಕೆಲಸ ಮಾಡಿದೆ. ಇದು ನನಗೆ ತುಂಬ ಸಮಾಧಾನ ನೀಡಿ, ನನ್ನನ್ನು ಸಮೃದ್ಧವಾಗಿ ಬೆಳೆಸುವ ಜತೆಗೆ ಅಗಾಧ ಅನುಭವ ನೀಡಿತು.
ಇದರಿಂದ ನನಗೆ ಬೇರೆ ಭಾಷೆಯಲ್ಲಿರುವ ಶ್ರೀಮಂತ ಸಾಹಿತ್ಯದ ಸಣ್ಣ ತಿಳಿವಳಿಕೆ ಬಂತು.  ಭಾರತೀಯ ಭಾಷೆಗಳಲ್ಲಿ ಪ್ರಸ್ತುತ ಏನು ನಡೆಯುತ್ತಿದೆ ಎನ್ನುವ ಜ್ಞಾನ ನಮಗಿಲ್ಲ ಎನ್ನುವುದು ಮನದಟ್ಟಾಯಿತು.


*ಜ.ಕಾ: ದೇವನೂರ ಮಹಾದೇವ ಮತ್ತು ನಿನ್ನ ಸ್ನೇಹ ಬಹಳ ಆಪ್ತವಾದದ್ದು. ಅಮೆರಿಕದಲ್ಲಿ ಅವರೊಂದಿಗೆ ನೀನು ಕಳೆದ ಅನುಭವ ಹೇಳು..
ವಿ.ಶಾ: ಅದೊಂದು ಆಕಸ್ಮಿಕ ಭೇಟಿಯ ವಿಶೇಷ ಅನುಭವ. ಸೃಜನಶೀಲ ಲೇಖನಗಳ ಯೋಜನೆಯೊಂದರಲ್ಲಿ ಭಾಗವಹಿಸಲು ದೇವನೂರ ಅವರು ಅಮೆರಿಕಕ್ಕೆ ಆಗಮಿಸಿದ್ದರು. ಅಲ್ಲಿ ನಾವಿಬ್ಬರೂ ಒಂದೇ ಕೋಣೆಯಲ್ಲಿ ಇದ್ದೆವು. ಆಗಲೇ ನಾನು ಅವರನ್ನು ತುಂಬ ಹತ್ತಿರದಿಂದ ನೋಡಲು ಸಾಧ್ಯವಾಯಿತು.

ದಿನಾಲೂ ಅವರೇ ನನಗೆ ಟೀ ಕಾಯಿಸಿ ಕೊಟ್ಟು, ಅಡುಗೆ ಮಾಡಿ ಬಡಿಸುತ್ತ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಿತ್ಯ ಬೇಳೆ ಹುಳಿ ಮಾಡಿ ಬಡಿಸುತ್ತಿದ್ದ ಅವರನ್ನೊಮ್ಮೆ ಪುಳಿಚಾರು ಬ್ರಾಹ್ಮಣರು ಎಂದು ರೇಗಿಸಿ ನಾನ್‌ವೆಜ್‌ ಮಾಡಿಕೊಡಿ ಎಂದೆ. ಅವರು ನಾನ್‌ವೆಜ್‌ ಕೂಡ ಮಾಡಿಕೊಟ್ಟಿದ್ದರು.

ಅಮೆರಿಕಕ್ಕೆ ಮಹಾದೇವ ಅವರೊಂದಿಗೆ ಬಂದಿದ್ದ ಅನ್ಯಭಾಷೆಯ 20 ಲೇಖಕರನ್ನು ನಾವಿಬ್ಬರೂ ಸೇರಿ ಸಂದರ್ಶನ ಮಾಡಿದ್ದೆವು. ದುರದೃಷ್ಟವಶಾತ್‌, ನಾನು ಭಾರತಕ್ಕೆ ವಾಪಸ್‌ ಬರುವಾಗ ಬ್ಯಾಗ್‌ನಲ್ಲಿದ್ದ ಸಂದರ್ಶನದ ಮುದ್ರಿತ ಟೇಪುಗಳು ವಿಮಾನ ನಿಲ್ದಾಣದಲ್ಲಿ ಕಳುವಾದವು.

ಕಾರ್ಯಕ್ರಮದಲ್ಲಿ ಕವಯತ್ರಿ ಪ್ರತಿಭಾ ನಂದಕುಮಾರ ಅವರು ‘ಊರು ಭಂಗ’ ಕಾದಂಬರಿಯ ಆಯ್ದ ಭಾಗಗಳನ್ನು ಓದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT