ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ವಿದ್ಯಾರ್ಥಿಗಳ ಹೊಸ ಹೆಜ್ಜೆ‌...

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೇ ಕಡಿಮೆ. ಆದಾಯವೂ ಇದಕ್ಕೆ ಹೊಂದಿಕೊಂಡೇ ಇರುತ್ತದೆ. ಅಧ್ಯಾಪಕರಿಗೆ ವೇತನ ನೀಡಲಿಕ್ಕೇ ಪಡಿಪಾಟಲು. ಹೀಗಿರುವಾಗ ಕ್ರೀಡಾ ತರಬೇತಿಗೆ ಸಿಬ್ಬಂದಿ ನೇಮಕ ಮಾಡುವಂತಿಲ್ಲ.

ಇದು ರಾಜ್ಯದ ಕಾನೂನು ಕಾಲೇಜುಗಳಲ್ಲಿ ವರ್ಷಗಳ ಹಿಂದೆ ಕೇಳಿಬರುತ್ತಿದ್ದ ಮಾತು. ಆದರೆ ಈಗ ಕಾಲೇಜುಗಳ ಆಡಳಿತ ವರ್ಗದ ಧೋರಣೆ ಬದಲಾಗಿದೆ. ಕಾನೂನು ವಿಷಯಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆ ಆದ ನಂತರ ಕ್ರೀಡೆಗೆ ನೀಡಿದ ಉತ್ತೇಜನದಿಂದಾಗಿ ಭಾವಿ ವಕೀಲರಿಗೆ ‘ಟಾನಿಕ್‌’ ಸಿಕ್ಕಂತಾಗಿದೆ. ಕೇವಲ ಐದೇ ವರ್ಷಗಳಲ್ಲಿ ಇದರ ಫಲ ಕಾಣತೊಡಗಿದೆ. ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಕಾನೂನು ವಿದ್ಯಾರ್ಥಿಗಳು ಮಿಂಚುತ್ತಿದ್ದಾರೆ.

ಹುಬ್ಬಳ್ಳಿ ಕೇಂದ್ರವಾಗಿರಿಸಿಕೊಂಡು ರಾಜ್ಯ ಕಾನೂನು ವಿಶ್ವವಿದ್ಯಾಲಯ ಆರಂಭಗೊಂಡದ್ದು 2009ರಲ್ಲಿ. ಒಟ್ಟು 92 ಕಾಲೇಜುಗಳು ವಿವಿ ವ್ಯಾಪ್ತಿಗೆ ಸೇರುತ್ತವೆ. ಚಾಮರಾಜನಗರ ಮತ್ತು ಕೊಡಗು ಜಿಲ್ಲೆ ಹೊರತುಪಡಿಸಿದರೆ ಇತರ ಎಲ್ಲ ಜಿಲ್ಲೆಗಳಲ್ಲೂ ಕಾನೂನು ಕಾಲೇಜುಗಳಿವೆ. ಇವೆಲ್ಲವೂ ಹಿಂದೆ ಆಯಾ ಪ್ರದೇಶದ ವಿಶ್ವವಿದ್ಯಾಲಯಗಳ ವ್ಯಾಪ್ತಿಗೆ ಒಳಪಟ್ಟಿದ್ದವು.

ಪಿಯುಸಿ ಮುಗಿಸಿ ನೇರವಾಗಿ ಕಾನೂನು ಕಾಲೇಜಿಗೆ ಬರುವವರ ಸಂಖ್ಯೆ ಕಡಿಮೆ. ಪದವಿ ಮುಗಿಸಿ ಬರುವ ಕೆಲವರು 40 ವರ್ಷ ಆಸುಪಾಸಿನವರು. ಇತರ ವಿವಿಗಳ ಸಣ್ಣ ವಯಸ್ಸಿನವರೊಂದಿಗೆ ಸ್ದರ್ಧಿಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಈಗ ಅವರೆಲ್ಲರೂ ಒಂದೇ ವಿವಿಯಡಿ ಸ್ಪರ್ಧಿಸುತ್ತಾರೆ. ಅಂತರ ವಿವಿ ಸ್ಪರ್ಧೆಗೆ ವಯಸ್ಸಿನ ಮಿತಿ (28 ವರ್ಷ) ಇರುವುದರಿಂದ ಅಲ್ಲಿ ಸ್ಪರ್ಧಿಸಲು ಆಗುವುದಿಲ್ಲ. ಆದರೆ ಅಂತರ ಕಾಲೇಜು ಮಟ್ಟದಲ್ಲಿ ಸ್ಪರ್ಧಿಸಲು ಸಾಧ್ಯವಾದ ಬಗ್ಗೆ ಅವರಿಗೆ ಸಮಾಧಾನವಿದೆ.

ಕಾನೂನು ವಿದ್ಯಾರ್ಥಿಗಳಿಗಾಗಿಯೇ ವಿವಿ ಆರಂಭಗೊಂಡ ಕೂಡಲೇ ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ಲಭಿಸಿತು. ಇದರ ಪರಿಣಾಮವಾಗಿ ಅನೇಕ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ವಿಭಾಗ ತೆರೆದುಕೊಂಡಿತು. ಅದಕ್ಕೊಬ್ಬರು ನಿರ್ದೇಶಕರು ನೇಮಕವಾದರು. ಕ್ರೀಡಾಕೂಟಗಳು ನಡೆದವು. ಅಂತರ ಕಾಲೇಜು ಮಟ್ಟದಿಂದ ಅಂತರ ವಿವಿವರೆಗೂ ವಿದ್ಯಾರ್ಥಿಗಳ ಸಾಮರ್ಥ್ಯ ಹೊಳೆಯತೊಡಗಿತು.

ಟ್ರ್ಯಾಕ್‌ನಲ್ಲಿ ಆಕಾಶ ಬಿ.ನಾಯಕ್‌ (ಮಂಗಳೂರು) ಅವರಂಥ ಓಟಗಾರರು ಮಿಂಚಿದರು. ಇವರು ಎರಡು ವರ್ಷಗಳ ಹಿಂದೆ ನಡೆದ ಅಂತರ ವಿವಿ ಕ್ರೀಡಾಕೂಟದ 100 ಮೀಟರ್ಸ್ ಓಟದಲ್ಲಿ ಮೊದಲ ಹದಿನಾರು ಮಂದಿಯ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದರು. ಕಬಡ್ಡಿ, ವಾಲಿಬಾಲ್‌ನಲ್ಲಿ ರಾಷ್ಟ್ರದ ಪ್ರಮುಖ ವಿವಿಗಳ ಜೊತೆ ಕಾದಾಡಿ ಮೂರು ಸುತ್ತುಗಳ ವರೆಗೂ ತಲುಪಿದ ಹಿರಿಮೆ ಕಾನೂನು ವಿವಿಗೆ ಬಂದಿದೆ. ರಾಷ್ಟ್ರಮಟ್ಟದಲ್ಲಿ ಈಗ ಒಟ್ಟು ಹದಿನಾರು ವಿಭಾಗಗಳಲ್ಲಿ ಕಾನೂನು ವಿದ್ಯಾರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಕಳೆದ ಬಾರಿ ದಕ್ಷಿಣ ವಲಯ ಅಂತರ ವಿವಿ ಚೆಸ್‌ನಲ್ಲಿ ಹತ್ತನೇ ಸ್ಥಾನಗಳಿಸಿ ಸಂಭ್ರಮಪಟ್ಟಿದ್ದಾರೆ. 

ವಿವಿ ವ್ಯಾಪ್ತಿಯಲ್ಲಿ ಐದು ಸರ್ಕಾರಿ ಮತ್ತು ಎಂಟು ಅನುದಾನಿತ ಕಾಲೇಜುಗಳಿವೆ. ರಾಮನಗರ, ಕೋಲಾರ ಮುಂತಾದ ಜಿಲ್ಲೆಗಳ ಸರ್ಕಾರಿ ಕಾಲೇಜುಗಳು ಮೂಲಸೌಲಭ್ಯಗಳ ಕೊರತೆಯ ನಡುವೆಯೂ ಉತ್ತಮ ಕ್ರೀಡಾಪಟುಗಳನ್ನು ತಯಾರು ಮಾಡುತ್ತಿವೆ. ಬರಿಗಾಲಲ್ಲಿ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಕೋಲಾರ ಕಾಲೇಜಿನ ಹುಡುಗರು ಅಥ್ಲೆಟಿಕ್ಸ್ ಜೊತೆಗೆ ಕಬಡ್ಡಿ, ಕ್ರಿಕೆಟ್‌, ವಾಲಿಬಾಲ್‌ನಲ್ಲಿ ಸಾಧನೆ ಮಾಡಿದ್ದಾರೆ. ಸ್ವಂತ ಮೈದಾನ ಕೂಡ ಇಲ್ಲದ ರಾಮನಗರ ಕಾಲೇಜು ವಾಲಿಬಾಲ್‌, ಕಬಡ್ಡಿ, ಕ್ರಾಸ್ ಕಂಟ್ರಿಯಲ್ಲಿ ಉತ್ತಮ ಹೆಸರು ಮಾಡಿದೆ. ಈ ಕಾಲೇಜಿನಲ್ಲಿ ಇಲ್ಲಿಯವರೆಗೆ ಒಟ್ಟು ಹನ್ನೆರಡು ಮಂದಿ ವಿವಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮಧ್ಯಮ ದೂರ ಓಟಗಾರ ರವಿಕುಮಾರ ವಿವಿ ದಾಖಲೆ ಮುರಿದಿದ್ದಾರೆ.

‘ವಿಶ್ವವಿದ್ಯಾಲಯ ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹವೇ ಇಂಥ ಸಾಧನೆಗೆ ಕಾರಣ. ಕ್ರೀಡಾಕೂಟಗಳಲ್ಲಿ ಪಾಲ್ಗೊಂಡ ಕಾಲೇಜುಗಳನ್ನು ಗುರುತಿಸಿ ಕ್ರೀಡಾ ಸಾಮಗ್ರಿಗಳನ್ನು ಬಹುಮಾನವಾಗಿ ನೀಡುವ ಪದ್ಧತಿಯಂಥ ಕ್ರಾಂತಿಕಾರಿ ಪ್ರಯೋಗಗಳು ಕ್ರೀಡಾ ಚಟುವಟಿಕೆ ಗರಿಗೆದರಲು ತುಂಬ ಸಹಕಾರಿ. ಎರಡು ವರ್ಷಗಳ ಹಿಂದೆ ನಮ್ಮ ಕಾಲೇಜಿಗೆ ₨ 1 ಲಕ್ಷದ ಸಾಮಗ್ರಿಗಳು ಸಿಕ್ಕಿವೆ. ಇದು ಇಲ್ಲಿನ ವಿದ್ಯಾರ್ಥಿಗಳಲ್ಲಿ ಹೊಸ ಹುಮ್ಮಸ್ಸು ಮೂಡಲು ಕಾರಣವಾಗಿದೆ’ ಎನ್ನುತ್ತಾರೆ ರಾಮನಗರ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಗಿರೀಶ ಎನ್‌.

‘ನಮ್ಮದು 40 ವರ್ಷಗಳ ಇತಿಹಾಸ ಇರುವ ಕಾಲೇಜು. ಅಷ್ಟು ವರ್ಷಗಳಲ್ಲಿ ಕೇವಲ ಏಳು ಮಂದಿ ಮಾತ್ರ ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆಯಾಗಿದ್ದರು. ಕಳೆದ ಒಂದೇ ವರ್ಷದಲ್ಲಿ ಏಳು ಮಂದಿ ಆಯ್ಕೆಯಾಗಿದ್ದಾರೆ. ಹಿಂದೆ ನಮ್ಮಲ್ಲಿ ದೈಹಿಕ ಶಿಕ್ಷಣ ವಿಭಾಗವೇ ಇರಲಿಲ್ಲ. ಆಸಕ್ತಿ ಇರುವ ಯಾರಾದರೂ ಒಬ್ಬ ಸಿಬ್ಬಂದಿ ಕ್ರೀಡಾಕೂಟವನ್ನು ನಡೆಸುತ್ತಿದ್ದರು. ಈಗ ದೈಹಿಕ ಶಿಕ್ಷಣ ನಿರ್ದೇಶಕರು ಇದ್ದಾರೆ. ವಿದ್ಯಾರ್ಥಿಗಳು ಕೂಡ ಸ್ವಯಂ ಪ್ರೇರಣೆಯಿಂದ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ’ ಎಂಬುದು ಜಿ.ಕೆ.ಕಾನೂನು ಕಾಲೇಜಿನ ಪ್ರಾಚಾರ್ಯೆ ಶಾರದಾ ಜಿ.ಪಾಟೀಲ ಅವರ ಅಭಿಪ್ರಾಯ.

ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಎಲ್ಲ ಕಾಲೇಜುಗಳಲ್ಲೂ ದೈಹಿಕ ಶಿಕ್ಷಕರ ನೇಮಕವನ್ನು ಕಡ್ಡಾಯ ಮಾಡಲಾಗಿದೆ. ಈ ಆದೇಶವನ್ನು ಶೇಕಡಾ 50 ಕಾಲೇಜುಗಳು ಈಗಾಗಲೇ ಪಾಲಿಸಿವೆ. ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳದೇ ಇದ್ದರೆ ಕಾಲೇಜುಗಳಿಗೆ ಮೆಮೋ ನೀಡುವ ಪದ್ಧತಿಯನ್ನು ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ.

ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳು ಒಂದು ವರ್ಷದಲ್ಲಿ ನಡೆದ ಕ್ರೀಡಾಕೂಟದಲ್ಲಿ ಗಳಿಸಿದ ಬಹುಮಾನಗಳು, ಹಮ್ಮಿಕೊಂಡ ಕ್ರೀಡಾಕೂಟಗಳು ಮುಂತಾದವುಗಳ ಆಧಾರದಲ್ಲಿ ಅಂಕಗಳನ್ನು ನೀಡಿ ಕ್ರೀಡಾ ಸಾಮಗ್ರಿ ಖರೀದಿಸಲು ಹಣ ನೀಡಲಾಗುತ್ತಿದೆ. 
ಕ್ರೀಡಾಕೂಟಗಳಲ್ಲಿ ಭಾಗವಹಿಸುವಾಗ ಕ್ರೀಡಾಪಟು ಅಶಿಸ್ತು ತೋರಿದರೆ ಆ ಕಾಲೇಜಿನ ಖಾತೆಯಿಂದ 50 ಅಂಕಗಳನ್ನು ಮತ್ತು ತಂಡದೊಂದಿಗೆ ವ್ಯವಸ್ಥಾಪಕರು ಬಾರದೇ ಇದ್ದರೆ 20 ಅಂಕಗಳನ್ನು ಕಳೆಯುವುದಕ್ಕೂ ಅನುಮತಿ ಬೇಡಲಾಗಿದೆ. ಒಂದು ಕ್ರೀಡಾ ಋತುವಿನಲ್ಲಿ ಪ್ರತಿಯೊಂದು ಕಾಲೇಜು ಕನಿಷ್ಠ ಮೂರು ಗೇಮ್‌ಗಳಲ್ಲಿ ಪಾಲ್ಗೊಳ್ಳುವುದನ್ನೂ ಕಡ್ಡಾಯ ಮಾಡಲಾಗುತ್ತದೆ.

‘ಅಂತರ ಕಾಲೇಜು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವವರಿಂದ ಪ್ರವೇಶ ಶುಲ್ಕ ಪಡೆಯುವುದಿಲ್ಲ. ದಿನಭತ್ಯೆ ನೀಡಲಾಗುತ್ತದೆ. ಅಥ್ಲೆಟಿಕ್‌ ಕೂಟಕ್ಕೆ ವಿಶ್ವವಿದ್ಯಾಲಯವೇ ಪ್ರತಿಬಾರಿ ಆತಿಥ್ಯ ವಹಿಸುತ್ತದೆ. ಅದನ್ನು ಹಬ್ಬದಂತೆ ಆಚರಿಸಲಾಗುತ್ತದೆ. ಈ ಕೂಟಕ್ಕೆ ಬರುವವರಿಗೆ ದಿನಭತ್ಯೆಯ ಜೊತೆಗೆ ಪ್ರಯಾಣ ಭತ್ಯೆಯನ್ನೂ ನೀಡಲಾಗುತ್ತದೆ’ ಎನ್ನುತ್ತಾರೆ ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಖಲೀದ್ ಖಾನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT