ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ನಾಡಿನ 'ಕಾರು'ಬಾರು

Last Updated 26 ಜನವರಿ 2015, 19:30 IST
ಅಕ್ಷರ ಗಾತ್ರ

ಆಸ್ಟಿನ್‌ ಆಫ್‌ ಇಂಗ್ಲೆಂಡ್‌, ಫೋರ್ಡ್‌ ಎ,  ಫೋರ್ಡ್‌ ಪಾಪುಲರ್‌, ಮೋರಿಸ್‌ ಮೈನರ್, ಟ್ರಿಂಫ್ ಮೇಫ್ಲವರ್‌, ಲ್ಯಾಂಡ್‌ ಮಾಸ್ಟರ್‌...
ಇವೆಲ್ಲ ಯಾವುದರ ಹೆಸರುಗಳು ಎಂದು ಅಚ್ಚರಿಯಾಯಿತೆ? ಇವೆಲ್ಲ 70-80 ದಶಕಗಳಷ್ಟು ಹಳೆಯದಾಗಿರುವ ಕಾರುಗಳು. ಇವೆಲ್ಲ ದೇಶ, ವಿದೇಶಗಳಲ್ಲಿ ಸುತ್ತಾಡಿ ಬಂದು ಇಲ್ಲಿ ವಿಶ್ರಾಂತಿ ಪಡೆಯುತ್ತಿವೆ. ಜಗತ್ತಿನ ಪ್ರಸಿದ್ಧ ಕಂಪೆನಿಗಳಿಂದ ನಿರ್ಮಿತಗೊಂಡು ಗತವೈಭವವನ್ನು ಸಾರುತ್ತ ನಿಂತಿವೆ!

ಇಂಥ ಅಪರೂಪದ ಕಾರು ಸಂಗ್ರಹಾಲಯ ಇರುವುದು ಕೊಡಗಿನ ಕಾಫಿ ತೋಟದ ನಡುವೆ. ಕೊಡಗಿನ ಸಿದ್ದಾಪುರದಿಂದ ಮೂರು ಕಿ.ಮೀ ದೂರದ ಅಭ್ಯತ್ಮಂಗಲದಲ್ಲಿದೆ ಈ ಸಂಗ್ರಹಾಲಯ. ಇಷ್ಟು ಹಳೆಯ ಕಾರುಗಳಾಗಿದ್ದರೂ ಇವುಗಳತ್ತ ಮುಪ್ಪು ಸುಳಿದಿಲ್ಲ. ಹಲವು ಇನ್ನೂ ಓಡಿಸಲು ಶಕ್ಯವಾಗಿವೆ. ಇವುಗಳಿಗೆ ನಿತ್ಯ ಯೌವನದ ಬಿಂಕ. ಈಗಷ್ಟೇ ತಾಲೀಮು ನಡೆಸಿದ ಶಿಸ್ತಿನ ಸಿಪಾಯಿಗಳಂತೆ ನಿಂತಿವೆ. ಒನಪು ವಯ್ಯಾರದೊಂದಿಗೆ ನೂತನ ತಂತ್ರಜ್ಞಾನದ ಕಾರುಗಳಿಗೆ ಸಡ್ಡು ಹೊಡೆಯುವಂತೆ ಕಂಗೊಳಿಸುತ್ತಿವೆ. ಮಾನವನಿಗೆ ಕಾರಿನ ಕಲ್ಪನೆ ಬಂದಾಗಿನಿಂದ ಹಿಡಿದು ಇತ್ತೀಚಿನ ದಿನಗಳವರೆಗೂ ಜನರನ್ನು ಆಕರ್ಷಿಸುತ್ತಾ ಸೆಳೆಯುತ್ತಿರುವ ಕಾರುಗಳ ಸಂಗ್ರಹ ಇಲ್ಲಿರುವುದು ವಿಶೇಷ.

ಏಕವ್ಯಕ್ತಿಯ ಶ್ರಮ
ಅಂದಹಾಗೆ ಈ ಕಾರುಗಳನ್ನು ನಿರ್ಮಿಸಿರುವುದು ಯಾವುದೋ ಸಂಘ ಸಂಸ್ಥೆಯಲ್ಲ. ಬದಲಿಗೆ ಇದು ವ್ಯಕ್ತಿಯೊಬ್ಬರ ಶ್ರಮದ ಫಲ. ಸಿದ್ದಾಪುರ ಗ್ರಾಮ ನಿವಾಸಿ ಪಿ.ಸಿ. ಅಹಮದ್‌ ಕುಟ್ಟಿ ಹಾಜಿ ಎಂಬುವವರ ಹವ್ಯಾಸದ ಪ್ರತೀಕ ಇದು.

ವಾಹನವೊಂದು ಹಳೆಯದಾದಷ್ಟೂ ಅದರ ಬೇಡಿಕೆ ಪ್ರಮಾಣ ಏರುತ್ತದೆ ಎಂಬುದಕ್ಕೆ ಈ ಸಂಗ್ರಹಾಲಯವೇ ಸಾಕ್ಷಿಯಂತಿದೆ. ರಸ್ತೆಯಲ್ಲಿ ಅದರ ಸಂಚಾರ ನಿಂತು ವರ್ಷಗಳು  ಉರುಳಿದರೂ ಕೆಲವು ಮಾಲೀಕರು ಅದರ ಮೇಲಿನ ಮೋಹವನ್ನು ಬಿಡಲಾರರು. ಮಾಲೀಕರು ಮೋಹ ತೊರೆದು ಅದನ್ನು ಬದಿಗೆ ತಳ್ಳಿದರೂ ಅಪರೂಪದ ವಾಹನಗಳಾಗಿದ್ದರೆ ಅದು ಎಂದೆಂದಿಗೂ ವಾಹನ ಪ್ರಿಯರನ್ನು ಸೆಳೆಯಬಲ್ಲವು ಎಂಬುದಕ್ಕೆ ಇಲ್ಲಿ ಉತ್ತರ ಸಿಗುತ್ತದೆ.

ವೃತ್ತಿಯಲ್ಲಿ ಮೆಕ್ಯಾನಿಕ್‌ ಆಗಿದ್ದ ಅಹಮದ್‌ ಅವರಿಗೆ ವಾಹನಗಳೆಂದರೆ ಅತೀವ ಪ್ರೀತಿ. ಹಳೆಯ ಕಾರುಗಳೆಲ್ಲ ನೆನಪಿನಂಗಳದಿಂದ ಮರೆಯಾಗುತ್ತಿರುವುದನ್ನು ಕಂಡು ಅವರಿಗೆ ಬೇಸರವಾಯಿತು. ಆದ್ದರಿಂದ ಅದನ್ನೆಲ್ಲ ಸಂಗ್ರಹಿಸಿ ಇಡಬೇಕು ಎಂದುಕೊಂಡರು. ಪರಿಚಯಸ್ಥರ ಬಳಿ ಈ ವಿಷಯ ತಿಳಿಸಿ ಒಂದೊಂದೇ ಕಾರು, ಬೈಕು ಸಂಗ್ರಹಿಸತೊಡಗಿದರು. ಅದರ ಫಲವಾಗಿ ಇಂದು ಅವರ ಸಂಗ್ರಹಾಲಯದಲ್ಲಿ 90ಕ್ಕೂ ಅಧಿಕ ಕಾರುಗಳಿವೆ. ಇದರಿಂದಾಗಿ ಇವರು ಈಗ ಎಲ್ಲರ ಬಾಯಲ್ಲಿ ‘ಪುರಾತನ ಕಾರುಗಳ ಸರದಾರ’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.

1927ರ ಇಸವಿಯ ನಂತರ ತಯಾರಾದ ಕಾರುಗಳಿಂದ ಇತ್ತೀಚಿನವರೆಗೆ ರಸ್ತೆಯಿಂದ ಮರೆಯಾದ ಕಾರುಗಳು, ಈಗಷ್ಟೇ ತಯಾರಾಗಿ ಓಡಲು ಸಿದ್ಧಗೊಂಡಂತೆ ಇಲ್ಲಿ ಸ್ವಾಗತ ಕೋರುತ್ತಿವೆ.  ಅಷ್ಟಕ್ಕೂ ಇಲ್ಲಿರುವುದು ನಾವು ಇನ್ನು ಎಂದೆಂದೂ ನೋಡಲು ಅಸಾಧ್ಯವಾದ, ನಮ್ಮ ಸ್ಮೃತಿಯಿಂದ ವಿದಾಯ ಹೇಳಿದ ವಿವಿಧ ನಮೂನೆಯ, ಬಗ್ಗೆ ಬಗ್ಗೆಯ ಶೈಲಿಯ ದೇಶ ವಿದೇಶಗಳಲ್ಲಿ ನಿರ್ಮಾಣ ಗೊಂಡ  ಪ್ರತಿಷ್ಠಿತ ಕಾರು ತಯಾರಿಕಾ ಸಂಸ್ಥೆಗಳ  ಕಾರುಗಳು.

1927ರಲ್ಲಿ ತಯಾರಾದ ಇಂಗ್ಲೆಂಡಿನ ಫೋರ್ಡ್‌ ಕಂಪೆನಿಯ ಕಾರುಗಳಿಂದ ಹಿಡಿದು ಮೊನ್ನೆ ಮೊನ್ನೆವರೆಗೂ ರಸ್ತೆಯಲ್ಲಿ ಸಂಚರಿಸಿದ ಡಾಲ್ಫಿನ್‌, ಅಂಬಾಸೆಡರ್‌ ಕಾರುಗಳ ಸಂಗ್ರಹ ಇಲ್ಲಿ ಗಮನ ಸೆಳೆಯುತ್ತವೆ. ಇಲ್ಲಿ ವಿಂಟೇಜ್‌ ಕಾರುಗಳು ಮೆರವಣಿಗೆಗೆ ಸಿದ್ಧಗೊಂಡಂತೆ ನಿಂತಿವೆ. ವಿಂಟೇಜ್‌ ಕಾರುಗಳ ಅಧ್ಯಯನ ಕೇಂದ್ರದಂತಿದೆ.

ಆಟೊಮೊಬೈಲ್‌ ಇತಿಹಾಸದಲ್ಲಿ ವಿಂಟೇಜ್‌ ಕಾರುಗಳು ತನ್ನದೇ ಆದ ಪ್ರಾಧಾನ್ಯ ಹೊಂದಿದೆ. ಪ್ರಸ್ತುತ ಆಟೊಮೊಬೈಲ್‌ ವ್ಯವಸ್ಥೆಯಲ್ಲಿ, ಅದರ ಆವಿಷ್ಕಾರದಲ್ಲಿ, ತಂತ್ರಜ್ಞಾನದಲ್ಲಿ ಉಂಟಾಗಿರುವ ಕ್ರಾಂತಿ ಅಸಾಧಾರಣವಾದದು. ಆದರೆ 1885ರ ಆಸುಪಾಸಿನಲ್ಲಿ ಜೀವ ಪಡೆದುಕೊಂಡ ವಿಂಟೇಜ್‌ ಕಾರುಗಳು ಪ್ರಸ್ತುತ ಅದ್ಭುತ ಎನಿಸುವ ಕಾರುಗಳ ಸಾಲಿನಲ್ಲಿ ನಿಂತಿದೆ. ಈಗ ವಿಂಟೇಜ್‌ ಕಾರುಗಳು ಕಾಣಸಿಗುವುದು ವಿರಳವಾದರೂ ಅಹಮದ್‌ ಕುಟ್ಟಿ ಹಾಜಿಯವರ ಸಂಗ್ರಹದಲ್ಲಿ ಇಂತಹ ಅನೇಕ ಕಾರುಗಳಿವೆ.

1946ರಲ್ಲಿ ತಯಾರಾದ ‘ಆಸ್ಟಿನ್‌ ಆಫ್‌ ಇಂಗ್ಲೆಂಡ್‌’ ಕಾರುಗಳು, 1927 ‘ಫೋರ್ಡ್‌ ಎ’,  ಫೋರ್ಡ್‌ ಪಾಪ್ಯುಲರ್‌, 1936ರಲ್ಲಿ ತಯಾರಾದ ‘ಮೋರಿಸ್‌ ಮೈನರ್’ ಕಾರುಗಳು 1951ರಲ್ಲಿ ತಯಾರಾದ ‘ಟ್ರಿಂಫ್ ಮೇಫ್ಲವರ್‌ ಕಾರುಗಳು ಇತ್ತೀಚೆಗೆ ತಯಾರಾಗಿ ನಿಂತಿದೆಯೇನೋ ಎಂಬಂತೆ ಕಾಣಿಸುತ್ತಿದೆ. 

1936ರ ಫೋರ್ಡ್‌– ವೈ, 1949ರ ಫೋರ್ಡ್‌ ಮತ್ತು ಫೋರ್ಡ್‌ನ ಲೋ ಬ್ಯಾನೆಟ್ ಜೀಪುಗಳು, 1976ರಲ್ಲಿ ತಯಾರಾದ ಫೋಕ್ಸ್‌ ವೇಗನ್‌ ಬೀಟೆಲ್‌, ಡಾಟ್‌ಸನ್‌, ಮರದಿಂದ ಕವಚ ತಯಾರಿಸಲಾದ ಲ್ಯಾಂಡ್‌ ಮಾಸ್ಟರ್‌, ಸ್ಟ್ಯಾಂಡರ್ಡ್‌ ಕಂಪೆನಿಯ ವಿವಿಧ ನಮೂನೆಯ ಕಾರುಗಳು, ಫಿಯಟ್‌ ಸಂಸ್ಥೆಯ ಕಾರುಗಳು ನಿತ್ಯ ತಮ್ಮ ಗತ ವೈಭವವನ್ನು ಸಾರುತ್ತಿದೆ. ಕಾರುಗಳೊಂದಿಗೆ ಹಳೆಯ ದ್ವಿ ಚಕ್ರ ವಾಹನಗಳು, ಮೊಪೆಡ್‌ಗಳು, 1780ರ ಜಟಕಾ ಬಂಡಿ ಗಮನ ಸೆಳೆಯುತ್ತಿವೆ. ಈಗಾಗಲೇ ಹಲವು ಪ್ರದರ್ಶನಗಳು ನಡೆದಿದ್ದು, ವಿದೇಶಿಗರ ಗಮನವನ್ನೂ ಸೆಳೆದಿದೆ. ಹೆಚ್ಚಿನ ಮಾಹಿತಿಗೆ: 08274–267476.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT