ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮತ್‌ಗೆ ಇನ್ಫೋಸಿಸ್ ಹೊಣೆ

Last Updated 30 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಕನ್ನಡಿಗ ಎನ್. ಆರ್. ನಾರಾಯಣಮೂರ್ತಿ ಅವರು ತಮ್ಮ 7 ಮಂದಿ ಸಹವರ್ತಿಗಳ ನೆರವಿನಿಂದ ಕಟ್ಟಿ ಬೆಳೆಸಿರುವ ಸಾಫ್ಟ್‌ವೇರ್ ರಫ್ತು ದೈತ್ಯ ಸಂಸ್ಥೆ ಇನ್ಫೋಸಿಸ್ ಟೆಕ್ನಾಲಜೀಸ್‌ನ ಹೊಸ ಅಧ್ಯಕ್ಷರಾಗಿ ಬ್ಯಾಂಕಿಂಗ್ ಪರಿಣತ ಕೆ. ವಿ. ಕಾಮತ್ (63) ಅವರು ಆಯ್ಕೆಯಾಗಿದ್ದಾರೆ.

ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ ಬ್ಯಾಂಕ್‌ನ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿರುವ ಕಾಮತ್, ಈ ಹೊಸ ಹೊಣೆಗಾರಿಕೆಯನ್ನು ತುಂಬ ವಿಧೇಯತೆಯಿಂದ ಸ್ವೀಕರಿಸುವುದಾಗಿ ನುಡಿದರು.

ಜೆಫ್ರೆ ಎಸ್. ಲೀಮನ್ ನೇತೃತ್ವದ ಆಯ್ಕೆ ಸಮಿತಿಯು ಕಾಮತ್ ಅವರನ್ನು ಸಂಸ್ಥೆಯ ಹೊಸ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದೆ ಎಂದು ನಾರಾಯಣಮೂರ್ತಿ ಅವರು ಶನಿವಾರ ಸಂಜೆ, ಸಂಸ್ಥೆಯ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ಸಂಸ್ಥೆಯ ಪಾಲಿಗೆ ಇದೊಂದು ಐತಿಹಾಸಿಕ ದಿನ ಎಂದು ನುಡಿದರು.

ಸಂಜೆ 5.15ಕ್ಕೆ ನಡೆದ ಸಂಸ್ಥೆಯ ನಿರ್ದೇಶಕ ಮಂಡಳಿ ಸಭೆಯ ನಂತರ ಈ ನಿರ್ಧಾರ ಹೊರ ಬಿದ್ದಿತು. ಸದ್ಯಕ್ಕೆ ಕಾಮತ್ ಅವರು ಇನ್ಫಿಯ ನಿರ್ದೇಶಕ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

ಸಂಸ್ಥೆಯ ಸಹ ಸ್ಥಾಪಕರಾಗಿರುವ ಹಾಲಿ ವ್ಯವಸ್ಥಾಪಕ ನಿರ್ದೇಶಕ ಮತ್ತು ‘ಸಿಇಒ’ ಕ್ರಿಸ್ ಗೋಪಾಲಕೃಷ್ಣ ಅವರು ಕಾರ್ಯನಿರ್ವಾಹಕ ಸಹ ಅಧ್ಯಕ್ಷರಾಗಿ (ಎಕ್ಸಿಕ್ಯುಟಿವ್ ಕೋ- ಚೇರ್ಮನ್) ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಒಒ)   ಎಸ್. ಡಿ. ಶಿಬುಲಾಲ್ ಅವರು ಹೊಸ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮತ್ತು  ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಆಯ್ಕೆಯಾಗಿ ಬಡ್ತಿ ಪಡೆಯಲಿದ್ದಾರೆ.

‘ಈ ಎಲ್ಲ ಹೊಸ ನೇಮಕಗಳನ್ನು ಪ್ರಕಟಿಸಲು ನನಗೆ ಅತೀವ ಸಂತಸವಾಗುತ್ತಿದೆ. ಕಾಮತ್, ಕ್ರಿಸ್ ಮತ್ತು ಶಿಬು ಅವರದ್ದು ಸೂಕ್ತ ತಂಡವಾಗಿದೆ. ನಿವೃತ್ತಿ ನಂತರವೂ ಸಂಸ್ಥೆಗೆ ಸೇವೆ ಸಲ್ಲಿಸಲು ನನಗೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ನಾನು ಸಂಸ್ಥೆಗೆ ಋಣಿಯಾಗಿರುವೆ’ ಎಂದೂ ಮೂರ್ತಿ ನುಡಿದರು.

ಈ ಹೊಸ ಪದಾಧಿಕಾರಿಗಳ ಅಧಿಕಾರವು ಈ ವರ್ಷದ ಆಗಸ್ಟ್ 21ರಿಂದ ಜಾರಿಗೆ ಬರಲಿದೆ. ಮೂರ್ತಿ ಅವರಿಗೆ  ಆಗಸ್ಟ್ 20ರಂದು 65 ವರ್ಷ ತುಂಬುವುದರಿಂದ ಅವರು ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸಲಿದ್ದಾರೆ. ನಿವೃತ್ತಿ ನಂತರ ಮೂರ್ತಿ ಅವರು ಸಂಸ್ಥೆಯ ‘ನಿವೃತ್ತ ಅಧ್ಯಕ್ಷ’ರಾಗಿ  (chairman emeritus) ಮುಂದುವರೆಯಲಿದ್ದಾರೆ ಎಂದು ಕೆ.ವಿ. ಕಾಮತ್ ಪ್ರಕಟಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT