ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಾಟಿಪುರದಿಂದ ವಿಶ್ವಸಂಸ್ಥೆಗೆ

ದೇವದಾಸಿ ಮಗಳ ಯಶೋಗಾಥೆ
Last Updated 28 ನವೆಂಬರ್ 2014, 19:30 IST
ಅಕ್ಷರ ಗಾತ್ರ

‘ಕೋಣೆಯೊಳಗೆ ಕುಳಿತು ಓದುತ್ತಿದ್ದ ನನಗೆ, ಮನೆಯ ಅಕ್ಕಪಕ್ಕದಲ್ಲಿ ನಿತ್ಯ ಕೇಳಿಸುತ್ತಿದ್ದ ವೇಶ್ಯೆಯರ ಚೀರಾಟ, ಕೆಟ್ಟ ಬೈಗಳ, ಆರ್ತನಾದ ಹಾಗೂ ಕುಡುಕ ಗಂಡಂದಿರ ಜತೆಗಿನ ಜಗಳ ಇವೆಂದೂ ನನ್ನ ಗುರಿಯನ್ನು ಹಿಮ್ಮೆಟ್ಟಿಸಲಿಲ್ಲ. ಕಾಮ ಕೂಪದಲ್ಲಿದ್ದರೂ ಮನಸ್ಸು ಮಿಡಿಯುತ್ತಿದ್ದದು ಹೆಚ್ಚು ಓದಿ ನನ್ನ ಸುತ್ತಲಿನ ಈ ಪ್ರಪಂಚದ ಪರಿಧಿಯನ್ನು ದಾಟಿ ಏನಾದರೂ ಸಾಧಿಸಬೇಕೆಂಬುದರ ಬಗ್ಗೆ....’
ದೇವದಾಸಿ ಮಗಳಾಗಿ ಹುಟ್ಟಿ ಮುಂಬೈನ ಕಾಮಾಟಿಪುರದಲ್ಲಿ ಬೆಳೆದು, ವಿಶ್ವಸಂಸ್ಥೆಯ ಪ್ರತಿಷ್ಠಿತ 2014ನೇ ‘ಯುನೈಟೆಡ್ ನೇಷನ್ಸ್ ಯೂತ್ ಕರೇಜ್ ಅವಾರ್ಡ್’ಗೆ ಪಾತ್ರಳಾದ 19 ವರ್ಷದ ಅಸ್ಪೃಶ್ಯ ಹುಡುಗಿ ಶ್ವೇತಾ ಕತ್ತಿಯ ಮಾತುಗಳಿವು.

ಬಡತನ ಮತ್ತು ನಿಂದನೆಯ ಮಾತುಗಳಲ್ಲೇ ಬೆಂದ ಶ್ವೇತಾ, ನ್ಯೂಯಾರ್ಕ್‌ನಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಾಗತಿಕ ಶಿಕ್ಷಣದ ವಿಶ್ವಸಂಸ್ಥೆಯ ವಿಶೇಷ ರಾಯಭಾರಿ ಹಾಗೂ ಬ್ರಿಟನ್‌ನ ಮಾಜಿ ಪ್ರಧಾನಿಯೂ ಆಗಿರುವ ಗಾರ್ಡನ್ ಬ್ರೌನ್ ಅವರಿಂದ ‘ಯುನೈಟೆಡ್ ನೇಷನ್ಸ್ ಯೂತ್ ಕರೇಜ್ ಅವಾರ್ಡ್’ ಪ್ರಶಸ್ತಿ ಸ್ವೀಕರಿಸಿದರು. ಪಾಕಿಸ್ತಾನದ ಮಲಾಲಾ ಯೂಸುಫ್‌ಝೈ ಜನ್ಮದಿನದ ಅಂಗವಾಗಿ 2013ರಿಂದ ನೀಡಲಾಗುತ್ತಿರುವ ಈ ಪ್ರಶಸ್ತಿಗೆ, ಈ ಬಾರಿ ಜಗತ್ತಿನ ಆರು ಸಾಧಕರು ಪಾತ್ರರಾಗಿದ್ದರು. ಈ ಪೈಕಿ ತನ್ನ ಸಾಧನೆ ಮತ್ತು ಹಿನ್ನೆಲೆಯಿಂದಾಗಿ ಶ್ವೇತಾ ಕತ್ತಿ ಎಲ್ಲರ ಗಮನ ಸೆಳೆದದ್ದು ವಿಶೇಷವಾಗಿತ್ತು.

ಬೆಳಗಾವಿ ಮೂಲದವರು
ಶ್ವೇತಾ ಕತ್ತಿ ಅವರ ಕುಟುಂಬದ ಮೂಲ ನೆಲೆ ರಾಜ್ಯದ ಬೆಳಗಾವಿ ಜಿಲ್ಲೆಯ ಒಂದು ಪುಟ್ಟ ಹಳ್ಳಿ. ದಲಿತರಲ್ಲೇ ಅಸ್ಪೃಶ್ಯರಾಗಿದ್ದ ಕುಟುಂಬಕ್ಕೆ ಈ ಭಾಗದಲ್ಲಿ ಆಚರಣೆಯಲ್ಲಿದ್ದ ‘ದೇವದಾಸಿ’ಯಂತಹ ಮೂಢ ಆಚರಣೆ ಇವರ ಕುಟುಂಬಕ್ಕೂ ಅಂಟಿಕೊಂಡಿತ್ತು. ಊರಿನ ದೇವಸ್ಥಾನದಲ್ಲಿ ಶ್ವೇತಾ ಅವರ ಅಜ್ಜಿ ದೇವದಾಸಿಯಾಗಿದ್ದರು. ಅವರ ಪತಿ ದುಶ್ಚಟಗಳ ವ್ಯಸನಿಯಾಗಿ­ ಕೊನೆಯುಸಿರೆಳೆದಿದ್ದರು. ವಿಧಿಯಿಲ್ಲದೆ, ವೇಶ್ಯೆಯಾಗಿಯೇ ಜೀವನ ಪೊರೆದ ಅಜ್ಜಿ ಅದರಲ್ಲೇ ತಮ್ಮ ಅಂತ್ಯ ಕಂಡರು. ಇದಕ್ಕೂ ಮುನ್ನ ತಮ್ಮ ಮಗಳಾದ ವಂದನಾ ಅವರನ್ನು ‘ದೇವದಾಸಿ’ಯ ಅನಿಷ್ಟಕ್ಕೆ ದೂಡಿದ್ದರು. ಮುಂದೆ ವಂದನಾ ಕುಟುಂಬ ಬದುಕು ಅರಸಿ ಮುಂಬೈಗೆ ಬಂತು.

‘ನನ್ನ ತಾಯಿಯನ್ನು ಎಲ್ಲರೂ ವೇಶ್ಯೆಯಂತೆಯೇ ಕಾಣುತ್ತಾರೆ. ಆದರೆ, ನನ್ನಮ್ಮ ನನಗೆ ಹೇಳಿದಂತೆ, ಆಕೆ ವೇಶ್ಯೆಯಲ್ಲ, ಬದಲಿಗೆ ದೇವಸ್ಥಾನದಲ್ಲಿ ದೇವರ ಸೇವೆಗೆ ತನ್ನ ಬದುಕನ್ನ ಮುಡಿಪಾಗಿಟ್ಟ ದೇವದಾಸಿ. ಇಂತಹ ಸೇವೆಗೆ ದೂಡುವವರು ವೇಶ್ಯೆಯರಾಗಿಯೂ ಕೆಲಸ ಮಾಡುತ್ತಾರೆ. ಆದರೆ ನನ್ನಮ್ಮ ಎಂದೂ ಅಂತಹ ಕೆಲಸಕ್ಕೆ ಇಳಿದಿಲ್ಲ.  ಮುಂಬೈನ ಕಾಮಾಟಿಪುರಕ್ಕೆ ಬಂದ ನಂತರ ನನ್ನನ್ನು ಶಾಲೆಗೆ ಕಳುಹಿಸಿ ಬೆಳಿಗ್ಗೆ  ಫ್ಯಾಕ್ಟರಿಯೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಅಮ್ಮ ಬರುತ್ತಿದ್ದೇ ಸಂಜೆ. ಮಲತಂದೆ ಮತ್ತು ಸಹೋದರರ ಆಲಸ್ಯ ಮತ್ತು ಲೈಂಗಿಕ ನಿಂದನೆಗೆ ಸದಾ ಒಳಗಾಗುತ್ತಿದ್ದ ನನಗೆ ನನ್ನಮ್ಮನೇ ಸ್ಫೂರ್ತಿ. ನನಗಾಗಿ ಅವಳು ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದಾಳೆ. ಅವಳೇ ಈ ಸಾಧನೆಗೆ ಕಾರಣ’ ಎಂದು ಶ್ವೇತಾ ಹೇಳುತ್ತಾರೆ.

ಬೆಳಕಿಗೆ ತಂದ ‘ಮುಂಬೈ– ಅಮೆರಿಕ ಯಾತ್ರೆ’
ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ಕಾಲೇಜಿನಲ್ಲಿ 12ನೇ ತರಗತಿ ಮುಗಿಸಿದ್ದ ಶ್ವೇತಾ ಕತ್ತಿ, ಕಾಮಾಟಿಪುರದಂತಹ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳ  ಸ್ವಾವಲಂಬನೆಗಾಗಿ ಕಾರ್ಯನಿರ್ವಹಿಸುತ್ತಿರುವ ‘ಕ್ರಾಂತಿ’ ಎಂಬ ಸರ್ಕಾರೇತರ ಸಂಸ್ಥೆ ಸಂಪರ್ಕಕ್ಕೆ ಬಂದರು. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಬೇಕೆಂಬ ಶ್ವೇತಾ ಅವರ ಕನಸಿಗೆ ತಿರುವು ಕೊಟ್ಟಿದ್ದೆ ಈ ‘ಕ್ರಾಂತಿ’.

ಶ್ವೇತಾ ಅವರ ಹಿನ್ನೆಲೆ, ಶೈಕ್ಷಣಿಕ ಸಾಧನೆ ಗಮನಿಸಿದ ‘ಕ್ರಾಂತಿ’, ಅವರ ಕುಟುಂಬದ ವಾಸ್ತ್ಯವ್ಯವನ್ನು ಕಾಮಾಟಿಪುರದಿಂದ ಕಂದಿವಿಲಿ ಎಂಬಲ್ಲಿಗೆ ಬದಲಿಸಿತು. ಶ್ವೇತಾ ಅವರಿಗೆ ಕೌನ್ಸೆಲಿಂಗ್ ನೀಡಿ, ಆತ್ಮವಿಶ್ವಾಸ ಹೆಚ್ಚಿಸಿತು. ಜತೆಗೆ ಆಂಗ್ಲಭಾಷಾ ದೇಶಗಳಲ್ಲಿ ವಿಧ್ಯಾಭ್ಯಾಸ ಮಾಡುವುದಕ್ಕಾಗಿ ಶ್ವೇತಾ ಅವರಿಗೆ ‘ಟಿಒಇಎಫ್‌ಎಲ್‌’ (ಟೆಸ್ಟ್ ಆಫ್ ಇಂಗ್ಲಿಷ್ ಆ್ಯಸ್ ಆ ಫಾರಿನ್ ಲಾಂಗ್ವೆಜ್– ವಿದೇಶದಲ್ಲಿ ಇಂಗ್ಲಿಷ್ ಭಾಷಾ ಪರೀಕ್ಷೆ) ಪರೀಕ್ಷೆ ಜತೆಗೆ ಪೂರ್ಣ ಟ್ಯೂಷನ್ ಸ್ಕಾಲರ್‌ಶಿಪ್‌ ಕೊಡಿಸುವಲ್ಲಿ ‘ಕ್ರಾಂತಿ’ ಯಶಸ್ವಿಯಾಯಿತು.

ಅಂದುಕೊಂಡಂತೆ  ‘ಟಿಒಇಎಫ್‌ಎಲ್‌’ ಪರೀಕ್ಷೆ ಪಾಸು ಮಾಡಿದ ಶ್ವೇತಾ ಅವರಿಗೆ, ಅಮೆರಿಕದ ನ್ಯೂಯಾರ್ಕ್‌ನ ಪ್ರತಿಷ್ಠಿತ ಬಾರ್ಡ್ ಕಾಲೇಜಿನಲ್ಲಿ  ತನ್ನಿಷ್ಟದ ಸೈಕಾಲಜಿ ವಿಷಯ ಓದುವ ಅವಕಾಶ ಒದಗಿ ಬಂತು. ಅಲ್ಲದೆ, ಶ್ವೇತಾ ವಿಧ್ಯಾಭ್ಯಾಸಕ್ಕೆ ಸರ್ಕಾರವೂ ಸ್ಕಾಲರ್‌ಶಿಪ್‌ ನೀಡಿತು. ಹೀಗೆ ವಿದೇಶದಲ್ಲಿ ವಿಧ್ಯಾಭ್ಯಾಸ ಮಾಡುವ ಅವಕಾಶ ಗಳಿಸಿ ಮುಂಬೈನಿಂದ ಅಮೆರಿಕಕ್ಕೆ ತೆರಳಿದ ಕಾಮಾಟಿಪುರದ ಮೊದಲ ಹುಡುಗಿ ಎಂಬ ಹೆಮ್ಮೆಗೆ ಶ್ವೇತಾ ಅವರು ಪಾತ್ರರಾದರು.

‘ಯಂಗ್ ವುಮನ್ ಟು ವಾಚ್’ನಲ್ಲಿ ಶ್ವೇತಾ
ಶ್ವೇತಾ ಕತ್ತಿ ಅವರ ಸಾಧನೆಯೇ ಅವರನ್ನು ನ್ಯೂಸ್‌ವೀಕ್ಸ್‌ನ ಈ ವರ್ಷದ ‘25 ಯಂಗ್ ವುಮನ್ ಟು ವಾಚ್’ ಮಂದಿಯ ಪಟ್ಟಿಯಲ್ಲಿ ಸೇರಿಸಿತು, ಈ ಪಟ್ಟಿಯಲ್ಲಿ ಪಾಕಿಸ್ತಾನದ ಮಕ್ಕಳ ಹಕ್ಕು ಹೋರಾಟಗಾರ್ತಿ ಮಲಾಲ ಯೂಸಫ್ ಕೂಡ ಇದ್ದಾಳೆ ಎಂಬುದು ಗಮನಾರ್ಹ.
ಕೌನ್ಸೆಲಿಂಗ್ ಕೇಂದ್ರ ತೆರೆಯುವ ಕನಸು

‘ನನ್ನ ನೆಲೆ ಮತ್ತು ಹಿನ್ನೆಲೆ ಬಗ್ಗೆ ಎಂದಿಗೂ ಕೀಳರಿಮೆ ಇಲ್ಲ. ಕಾಮಾಟಿಪುರದಲ್ಲಿ ಬೆಳೆದ ನನಗೆ ಅಲ್ಲಿನ ವೇಶ್ಯೆಯರೇ ಸಂಗಾತಿಗಳು. ಕೌ ಡಂಗ್ (ಹಸುವಿನ ಸಗಣಿ), ಬ್ಲ್ಯಾಕ್ ಬಂಬೂ (ಕಪ್ಪು ಬಿದಿರು) ಎಂದು ಬೀದಿಯಲ್ಲಿ ನನ್ನನ್ನು ಹೀಯಾಳಿಸಿ ಕರೆಯುವಾಗ, ಕನಿಕರ, ಪ್ರೀತಿ ಹಾಗೂ ಸಾಂತ್ವನ ಹೇಳುತ್ತಿದ್ದವರೂ ಅವರೆ.

ಅಲ್ಲದೆ, ನನಗೆ ಈ ಪ್ರಪಂಚದಿಂದ ಹೊರಹೋಗುವ ಕನಸನ್ನು ನನ್ನಲ್ಲಿ ಬಿತ್ತಿದವಳೂ ಒಬ್ಬ ವೇಶ್ಯೆಯೆ. ಹಾಗಾಗಿ ವಿದೇಶದಲ್ಲಿ ನನ್ನ ವಿದ್ಯಾಭ್ಯಾಸ ಮುಗಿದ ನಂತರ ನೇರವಾಗಿ ಕಾಮಾಟಿಪುರಕ್ಕೆ ಬಂದು, ಇಲ್ಲಿನ ವೇಶ್ಯೆಯರು ಮತ್ತು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ಹೊರಜಗತ್ತಿಗೆ ಪರಿಚಯಿಸುವ ಸಲುವಾಗಿ ‘ಕೌನ್ಸೆಲಿಂಗ್ ಕೇಂದ್ರ’ವೊಂದನ್ನು ತೆರೆಯುತ್ತೇನೆ’ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶ್ವೇತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT