ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಂ ನೌಕರರನ್ನಾಗಿ ನೇಮಿಸಿಕೊಳ್ಳಿ

ಜಿಲ್ಲಾಧಿಕಾರಿ ಘೋಷ್‌ಗೆ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರ ಮನವಿ
Last Updated 23 ಸೆಪ್ಟೆಂಬರ್ 2015, 9:04 IST
ಅಕ್ಷರ ಗಾತ್ರ

ಕಾರವಾರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ಕಾಯಂ ಅಥವಾ ದಿನಗೂಲಿ ನೌಕರರನ್ನಾಗಿ ನೇಮಕ ಮಾಡುವಂತೆ ಒತ್ತಾಯಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಜಿಲ್ಲಾ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್‌ ಘೋಷ್‌ ಅವರಿಗೆ ಮನವಿ ಸಲ್ಲಿಸಿದರು.

ಕಳೆದ 8–9 ವರ್ಷಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ವಿವಿಧ ಕೆಲಸಗಳನ್ನು ನಿರ್ವಹಿಸುತ್ತಾ ಬಂದಿದ್ದೇವೆ. ಆದರೆ ಈಗ ನಮ್ಮನ್ನು ತೆಗೆದು ನೇರ ನೇಮಕಾತಿ ಮೂಲಕ ಹೊಸಬರನ್ನು ಆಯ್ಕೆ ಮಾಡಿ ಕೊಳ್ಳುವ ಮಾತುಗಳು ಇಲಾಖೆಯಲ್ಲಿ ಕೇಳಿಬರುತ್ತಿದ್ದು, ಹಲವು ವರ್ಷಗಳಿಂದ ಕಡಿಮೆ ವೇತನದಲ್ಲಿ ದುಡಿಯುತ್ತಿದ್ದ  350ಕ್ಕೂ ಹೆಚ್ಚು ಹೊರ ಗುತ್ತಿಗೆ ಸಿಬ್ಬಂದಿ ನಿರ್ಗತಿಕರಾಗುವಂ­ತಾಗಿದೆ ಎಂದು ಅಳಲು ತೋಡಿಕೊಂಡರು. 

‘ನಮ್ಮಲ್ಲಿರುವ ಅನೇಕ ಸಿಬ್ಬಂದಿ 38ರ ಆಸುಪಾಸಿನಲ್ಲಿದ್ದಾರೆ. ಅವರಿಗೆ ಈ ಕೆಲಸದಿಂದ ತೆಗೆದು ಹಾಕಿದಲ್ಲಿ ಸರ್ಕಾರಿ ಇಲಾಖೆಯಲ್ಲಾಗಲಿ ಅಥವಾ ಬೇರೆ ಯಾವುದೇ ಕಡೆಗಳಲ್ಲಿ ಕೆಲಸ ಸಿಗುವುದಿಲ್ಲ. ಇದರಿಂದ ನಮ್ಮನ್ನೇ ನಂಬಿದ ಕುಟುಂಬವು ಜೀವನ ಸಾಗಿಸುವುದು ದುಸ್ತರವಾಗಲಿದೆ. ಅಲ್ಲದೇ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವ ನಮಗೆ ವೇತನವನ್ನೂ ಸರಿಯಾಗಿ ನೀಡುತ್ತಿಲ್ಲ. ಅಕ್ಟೋಬರ್‌, ಏಪ್ರಿಲ್‌ ಹಾಗೂ ಮೇ ತಿಂಗಳ ವೇತನವನ್ನು ಕಡಿತಗೊಳಿ ಸಲಾಗುತ್ತಿದೆ’ ಎಂದು ದೂರಿದರು.

ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಮ್ಮನ್ನು ನೇರವಾಗಿ ಅಥವಾ ವರ್ಷವಾರು ಅಂಕ ನೀಡಿ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲದೇ ತಿಂಗಳ 10ನೇ ತಾರೀಖಿನ ಒಳಗಾಗಿ ವೇತನ ನೀಡಬೇಕು. ಸಿಬ್ಬಂದಿಗೆ ರಜೆ ಸರಿಯಾಗಿ ಸಿಗದ ಕಾರಣ ವಾರದಲ್ಲಿ ಒಂದು ದಿನ ಹೊಂದಾಣಿಕೆ ಆಧಾರದ ಮೇಲೆ ರಜೆ ತೆಗೆದುಕೊಳ್ಳಲು ಅನುಮತಿ ನೀಡಬೇಕು. ವರ್ಷದ ಎಲ್ಲ ತಿಂಗಳ ವೇತನವನ್ನು ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಂಘದ ರವಿಕುಮಾರ್‌ ಎನ್‌. ನಾಯ್ಕ, ಯೋಗಿತಾ ಎಂ. ಗಾವಡಿ, ಉದಯ ಡಿ. ನಾಯ್ಕ, ಹೇಮಾ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
*
ನೇರ ನೇಮಕಾತಿ ಮೂಲಕ ಹೊಸಬರನ್ನು ಆಯ್ಕೆ ಮಾಡಿಕೊಂಡಲ್ಲಿ ನಮಗೆ ಅನ್ಯಾಯವಾಗಲಿದೆ
- ಗಂಗಾಧರ ಕೆ. ಆಗೇರ,
ಜಿಲ್ಲಾ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT