ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕವೇ ಕರ್ಮಯೋಗ

ಭ್ರಮಾ ಬದುಕು ಅಡವಿ ಮೂಲದ ಪತಂಜಲಿಯನ್ನು ವ್ಯಾಪಾರ ವಸ್ತುವಾಗಿಸುತ್ತಿದೆ
Last Updated 22 ಜೂನ್ 2016, 19:30 IST
ಅಕ್ಷರ ಗಾತ್ರ

ಹೋದ ವರ್ಷ ದಿಲ್ಲಿ, ಈ ವರ್ಷ ಹರಿಯಾಣ. ಅದು ಅಂತರರಾಷ್ಟ್ರೀಯ ಯೋಗ ದಿನಾಚರಣೆ. ಪ್ರಧಾನಿ ನೇತೃತ್ವದಲ್ಲಿ ದೇಶದ ಬಗ್ಗೆ ಧ್ಯಾನ. ‘ಯೋಗವೆಂದರೆ ಒಂದುಗೂಡಿಸುವುದು ಎಂದರ್ಥ’ ಎಂದು ವಿವೇಕಾನಂದರು ಹೇಳುವಾಗ, ‘ಯೋಗವು ಭೌತಿಕ ಪ್ರಪಂಚವನ್ನು ಹೇಗೆ ನಮ್ಮ ಅಡಿಯಾಳು ಮಾಡಿಕೊಳ್ಳಬಹುದು ಎಂಬುದನ್ನು ಬೋಧಿಸುತ್ತದೆ’ ಎಂದು ವಿವರಣೆ ನೀಡುತ್ತಾರೆ.

ಹೌದು, ಇಂದು ಇಡೀ ಜಗತ್ತು ಭಾರತ ಮೂಲದ ಯೋಗದ ಕಡೆಗೆ ನೋಡುತ್ತಿದೆ. ಚರ್ಚ್‌ ಒಳಗಿನ ಧ್ಯಾನ, ಮಸೀದಿಯೊಳಗಿನ ನಮಾಜು ಧ್ಯಾನ, ಬುದ್ಧನ ಜಗದರಿವಿನ ಧ್ಯಾನ ಇವೆಲ್ಲವೂ ಜಗದೊಳಗಿನ ಬಡವ ಬಲ್ಲಿದರೆಲ್ಲರನ್ನೂ ಒಂದುಗೂಡಿಸಿಕೊಂಡು ಚಲಿಸುವ ಒಂದು ಸ್ಥಿತಿ.

‘ದೇವರ ಆಸ್ತಿಯ ಧರ್ಮದರ್ಶಿಯಂತೆ ದೇಹದ ಬಗ್ಗೆ ಎಚ್ಚರವಹಿಸಿ; ಅದನ್ನು ಕೊಬ್ಬಿಸಬೇಡಿ. ಅದರಲ್ಲಿ ಕೊಳೆಯನ್ನು ತುಂಬಬೇಡಿ’ ಎಂದು ಮಹಾತ್ಮ ಗಾಂಧಿ ಹೇಳುವಾಗ, ದೇಹ ಮತ್ತು ಮನಸ್ಸುಗಳ ಮೇಳದ ಧ್ಯಾನವೂ ಇದೆ. ಅದು ಅವರಲ್ಲಿ ಪ್ರಾಯೋಗಿಕವಾಗಿತ್ತು. ಪುರಾತನ ಯೋಗಗಳ ವಿಕಾಸವಾದವನ್ನು ಆಧುನಿಕ ಸಂಶೋಧನೆಯ ಬೆಳಕಿನಲ್ಲಿ ಚೆನ್ನಾಗಿ ತಿಳಿದುಕೊಳ್ಳು ವುದು ಯೋಗ ಎಂಬ ತತ್ವದಲ್ಲಿರಬೇಕು.

ಪತಂಜಲಿಯ ಯೋಗ ಸಿದ್ಧಾಂತವು ಸಾಂಖ್ಯ ಸಿದ್ಧಾಂತದ ಮೇಲೆ ನಿಂತಿದೆ. ಅದು ಕಪಿಲನ ತತ್ವ. ಅದರಲ್ಲಿ ಈಶ್ವರನಿಗೆ ಸ್ಥಾನವಿಲ್ಲ. ಆದರೆ ಯೋಗದಲ್ಲಿ ಈಶ್ವರನಿಗೆ ಸ್ಥಾನವಿದೆ. ಇದು ಆಸ್ತಿಕವಾದ ಮತ್ತು ನಾಸ್ತಿಕವಾದಗಳೆರಡನ್ನೂ ಎದುರು ಬದುರಾಗಿಸುತ್ತದೆ. ಈ ಸೂಕ್ಷ್ಮಗಳೆಲ್ಲವನ್ನೂ ಇಂದಿನ ಭಾರತ ಅರಿತು ನಡೆಯಬೇಕಾಗುತ್ತದೆ. ಅದೇ ಪ್ರಕೃತಿಯೊಳಗಿನ ತತ್ವ.

ಪಾಶ್ಚಾತ್ಯರ ವಿಚಾರವೇ ಬೇರೆ. ಅದು ಆಧುನಿಕತೆಯ ತುತ್ತತುದಿ. ಭಾರತ ಅದರೆಲ್ಲದರ ಬಾಲವಾಗಬಾರದು ಎಂದು ಯೋಗಾಭ್ಯಾಸದ ಹಿನ್ನೆಲೆಗಿರಬೇಕು. ಈ ದೇಶ ಕೃಷಿ ಪ್ರಧಾನ ದೇಶ. ಕೃಷಿ ಕಳಚಿಕೊಳ್ಳುತ್ತಾ ನಗರ ಪೇಟೆಗಳ ದಿಕ್ಕಿಗೆ ತಲೆ ಹಾಕಿ ಕೃಷಿ ಎಂಬುದು ಹೀನವೃತ್ತಿಯೇ ಎಂಬಂತೆ ಅವಮಾನದ ದಿಕ್ಕಿಗೆ ಚಲಿಸುತ್ತಿರುವ ಸಂದರ್ಭ. ಎಲ್ಲಾ ಒಳಿತಿನ ಲಾಭಗಳನ್ನು ಸ್ವೀಕರಿಸುವ ಪಶ್ಚಿಮ ಜಗತ್ತು, ಯೋಗವೆಂಬ ಅಡವಿ ಜ್ಞಾನವನ್ನು ಸ್ವೀಕರಿಸಲು ಈ ದೇಶದ ಎಲ್ಲಾ ಹಂತದ ಸಹಕಾರ ಲಭಿಸುತ್ತಿದೆ.

ವಿಶ್ವವಿದ್ಯಾಲಯ ಮಟ್ಟಗಳಲ್ಲಿಯೂ ಸೇರಿದಂತೆ ಯೋಗ ಪಾಠ ಇಂದು ವ್ಯಾಪಾರದ ಪಾಠ. ಬೆಂಗಳೂರು ಒಂದರಲ್ಲೆ ಈಗ ಅಂತರರಾಷ್ಟ್ರೀಯ ಮಟ್ಟದ ಹಲವಾರು ಯೋಗ ಕೇಂದ್ರಗಳು ಪ್ರಾರಂಭವಾಗಿವೆ. ಹಲವಾರು ಗುರುಗಳು ಸನ್ಯಾಸ ಪಂಥವನ್ನು ಸಂಸಾರ ಪಂಥಕ್ಕೆ ಹೊಂದಾಣಿಕೆ ಮಾಡುತ್ತಿದ್ದಾರೆ. ಇದು ತಪ್ಪಲ್ಲದಿರಬಹುದು. ಆದರೆ ಬಡವ ಬಲ್ಲಿದರ ಅಂತರ ಪುನಃ ಎಲ್ಲಾ ರಂಗಗಳಲ್ಲಿಯೂ ಆವರಿಸುತ್ತಿದೆ.

ಇಲ್ಲಿವರೆಗೆ ಯೋಗದ ಅಭ್ಯಾಸವು ಗುರು ಮುಖೇನ ಗುರುಕುಲದ ಮಾದರಿಯಲ್ಲಿ ದೇಶಿ ಸರಳತೆಯಲ್ಲಿ ನಡೆ ಯುತ್ತಿತ್ತು. ಅದೀಗ ವ್ಯಾಪಾರದ ಕೇಂದ್ರವಾಗುವ ಎಲ್ಲಾ ಜೀವಕಳೆ ತುಂಬಿಕೊಂಡಿರುವುದು ಸುಳ್ಳಲ್ಲ. ಮೈಸೂರಿನ ಒಂಟಿ ಕೊಪ್ಪಲಿರಬಹುದು, ಬೆಂಗಳೂರಿನ ಪ್ರಧಾನ ಬಡಾವಣೆಗಳಿರಬಹುದು,  ಯೋಗ ಕಲಿಸುವ ಕೇಂದ್ರ ಗಳಾಗುವಲ್ಲಿ ಸರಳತೆಯನ್ನು ಬಿಟ್ಟು ನಡೆಯುತ್ತಿವೆ. ಈ ಭ್ರಮಾ ಬದುಕು ಅಡವಿ ಮೂಲದ ಪತಂಜಲಿಯನ್ನು ವ್ಯಾಪಾರ ವಸ್ತುವಾಗಿಸಿಬಿಡುತ್ತದೆ.

ಗಾಂಧೀಜಿ ಹೇಳಿದಂತೆ ದೇಹವನ್ನು ಕೊಬ್ಬಿಸಬಾರದು ನಿಜ. ಆದರೆ ಅದನ್ನು ಕರಗಿಸುವಾಗ ಮನುಷ್ಯ ಮನುಷ್ಯರ ಅಂತರದ ಪ್ರದರ್ಶನವೂ ಆಗಬಾರದು. ನಮಾಜಿನೊಳಗಿನ ಧ್ಯಾನವಾಗಲೀ, ಚರ್ಚಿನೊಳಗಿನ ಸಮಾನತೆಯಾಗಲೀ ಈ ಅಭಿವೃದ್ಧಿ ಹೊಂದುತ್ತಿರುವ ಭಾರತೀಯ ಯೋಗಾಭ್ಯಾಸದಲ್ಲಿ ಸಲ್ಲುತ್ತಿಲ್ಲ. ಅದು ಹಿಂದೂವೆಂಬ ಏಕತೆಯನ್ನು ಹರಿದು ಹಂಚಿಬಿಡುವತ್ತ ಸಾಗಿಬಿಡುತ್ತಿದೆ.

ಆಗ ಅದು ಪತಂಜಲಿಯ ಕಪಿಲನ ಸರಳತೆಯಾಗಿ ಭಾರತೀಯ ದೇಶಿ ಮಾದರಿಯಾಗಿ ಉಳಿಯುವುದಿಲ್ಲ. ಈ ನೆಲದ ಬಾಸುಮತಿ ಅಕ್ಕಿ ಅಥವಾ ಅರಿಶಿಣವನ್ನು ನಮ್ಮ ಪೇಟೆಂಟ್‌ ಆಗಿ ಉಳಿಸಿಕೊಳ್ಳಲು ಹೋರಾಡುವ ಮಾದರಿಯಾಗಿಬಿಡುತ್ತದೆ. ಇಲ್ಲವೆ ರಾಜಕೀಯ ಲೇಪಿತ ಯೋಗ ಮಾದರಿಯಾಗುತ್ತದೆ.

‘ನೇಗಿಲಯೋಗಿಯ ನೋಡಲ್ಲಿ...’ ಎಂದು ಕುವೆಂಪು ಒಂಟಿಕೊಪ್ಪಲಿನ ಅವರ ಮನೆ ‘ಉದಯ ರವಿ’ ಮುಂದೆ ನಿಂತು ರೈತನಲ್ಲಿ ಯೋಗದ ಅರಿವನ್ನು ಕಾವ್ಯವಾಗಿಸಿದ್ದರು. ಅದೇ ರೈತನ ಬೆನ್ನಮೇಲೆ ಮೂರು ಲೋಕದ ಭಾರ ಬಿದ್ದು ಕೊರಗುವುದನ್ನು ಸಹಾ ಅರಿತಿದ್ದರು. ಮೂಲೋಕದಲ್ಲಿ ಹಾಯ್ದು ಹೋಗುವ ಶಿವ ಪಾರ್ವತಿಯರು ರೈತನ–ಬಡವನ ನರಳುವಿಕೆಯನ್ನು ಗಮನಿಸುತ್ತಾರೆಂಬುದು ಜನಪದೀಯ ನಂಬಿಕೆ.

ಅದನ್ನು  ಶಮನ ಮಾಡುವ ರೀತಿ ಭಾರತ ರಾಜಕೀಯಕ್ಕೆ ಬೇಕಾಗಿದೆ. ನಮ್ಮದು ನೆಲ ನಂಬಿರುವ ದೇಶ. ಕಾಯಕವೇ ಕರ್ಮಯೋಗ. ಅದೇ ಈ ದೇಶದ ರಾಜಯೋಗ. ಈ ಕೃಷಿ ಯೋಗಿಗೆ ಪತಂಜಲಿಯ ಯೋಗವು ಅಡವಿಜ್ಞಾನದೊಳಗೆ ಬಸಿದು ನೆಲದ ಜ್ಞಾನಕ್ಕೆ ಜಾರಿ ನೇಗಿಲ ಕುಳದಲ್ಲಿ ಕೃಷಿಕನಿಗೆ ದಕ್ಕಿದೆ.

ಆ ದಕ್ಕಿರುವ ಕಾಯಕಕ್ಕೆ ಈಗಿನ ಪ್ರಜಾಪ್ರಭುತ್ವದ ನೆರವು ದಕ್ಕಬೇಕು. ಕೊಬ್ಬು ಇಳಿಸಲಾರದ, ಕೊಳೆ ತುಂಬಿದ ಪ್ರಜೆಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಹೊಟ್ಟೆ ಬೆನ್ನಿಗೆ ಹತ್ತಿರುವ ಬಡವರ ಬಗ್ಗೆ ಇಡೀ ದೇಶ ಎಚ್ಚರದಿಂದಿರಬೇಕಾಗುತ್ತದೆ.

ಕೈಕಾಲುಗಳಿಗೆ ಕೆಲಸ ನೀಡುವುದು ಯೋಗಾಭ್ಯಾಸದ ಒಂದು ಭಾಗ. ಅದಕ್ಕೆ ರಾಜಕೀಯ ಪ್ರಬಲ ನೆರವು ಬೇಕು. ಅಂದರೆ ರೈತನಿಗೆ, ಕಾರ್ಮಿಕನಿಗೆ, ಬಡವನಿಗೆ ಶಾಸಕಾಂಗ ಕಾರ್ಯಾಂಗಗಳೆಲ್ಲವೂ ನೆರವಾಗಬೇಕು. ಈಗ ಕೇಂದ್ರ– ರಾಜ್ಯಗಳೆಲ್ಲವೂ ವಿಶ್ವ ಯೋಗಕ್ಕೆ ಸ್ಪಂದಿಸಬೇಕು ನಿಜ. ಇದು ಸರ್ವಜನಾಂಗದ ಆರೋಗ್ಯಕ್ಕೆ ಯೋಗದ ಕವಚವಾಗಬೇಕು. ದುಡಿವ ದೇಹ ಹಾಗೂ ಮನಸ್ಸು ಬಯಸುವ ಆಸರೆಗೆ ದೇಶ ನಿಲ್ಲಬೇಕು.

ಇಂದು ಕೃಷಿ ಚಂಚಲಗೊಂಡಿದೆ. ಅದು ಹಸಿರು ಕ್ರಾಂತಿಯಿಂದ ಗಾಯ ಮಾಡಿಕೊಂಡಿದೆ. ಅದಕ್ಕೆ ಯೋಗದ ಮುದ್ರೆಯನ್ನು ಯಾವ ರೀತಿ  ನೀಡಬೇಕೆಂಬುದು ಅಂತರರಾಷ್ಟ್ರೀಯ ಯೋಗ ದಿನದ ಉಪಚಾರವಾಗ ಬೇಕಿದೆ. ಅದು ದೇಶದ ಪ್ರಭುಗಳಲ್ಲಿ ಉದಿಸಬೇಕು. ಇದಲ್ಲದೆ ಕಾಯಕನಿರತರ ಮುಂದೆ ಕಾಯಕ ಹೊರತಿನ ಜನಸಮೂಹ ನಿಂತು ಕೆಣಕುವಿಕೆಯಾಗಬಾರದು.

ಇಂದು ರಾಜಗುರುಗಳು; ಮೇಲು ವರ್ಗಗಳು ಶ್ರಮಜೀವಿಗಳನ್ನು ನೆಲದ ಮೇಲೆ ಬಿಟ್ಟು ಗಾರೆ ನೆಲದ ಮೇಲೆ ಮೆತ್ತನೆ ಹಾಸುಗಳಲ್ಲಿ ನಿಂತು ನೆಲ ಮುಗಿಲನ್ನು ಪ್ರಾರ್ಥಿಸುವಾಗ ಆ ಪ್ರಾರ್ಥನೆ ಸಮಜೀವಿಗಳಿಗೂ ದಕ್ಕಬೇಕೆಂಬುದು ಈ ದೇಶದ ಅಡವಿಜ್ಞಾನದ ತಿಳಿವಳಿಕೆ. ದೇಹವೆಂಬುದು ಪಂಚಭೂತಗಳ ನಿರ್ಮಾಣ. ಈ ದೇಹಕ್ಕೆ ಸಹಜ ಕೃಷಿಯ ಆಹಾರ, ಸಹಜ ನೀರು, ಸಹಜ ಗಾಳಿಗಳೆಲ್ಲವೂ ಸಮಭಾಜಿತ್ವದಲ್ಲಿರಬೇಕು.

ಕೊಬ್ಬಿದ ದೇಹಿಗಳ ಕೊಳೆ ತೊಳೆಯಲು ಈ ಭೌತಿಕ ಪ್ರಪಂಚದ ನೆರವೇ ಪ್ರಮುಖ. ಇಂಥಾ ಪ್ರಪಂಚಕ್ಕೆ ಕಾಯಕಗಳ ಯೋಗ ಮರ್ಯಾದೆಯೇ ದೇಶಕ್ಕೊಂದು ಗೌರವ. ಅಂಥಾದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಪಾದಿಸುವುದು ಈ ದೇಶದ ನೇತಾರರ ಹಾಗೂ ಎಲ್ಲರ ಕರ್ತವ್ಯ. ಅದೇ ಯೋಗವೆಂಬುದರ ತತ್ವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT