ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಕ್ಕೆ ಸವಾಲೆಸೆವ ‘ರಾಮ್ ಫ್ರಂ ತೆನಾಲಿ’

ರಂಗಭೂಮಿ
Last Updated 9 ಫೆಬ್ರುವರಿ 2016, 19:38 IST
ಅಕ್ಷರ ಗಾತ್ರ

ಇತ್ತೀಚೆಗೆ ಕೆ.ಎಚ್. ಕಲಾಸೌಧದಲ್ಲಿ ಪ್ರದರ್ಶಿತವಾದ ‘ಡ್ರಮಾಟ್ರಿಕ್ಸ್’ ತಂಡದ ನಾಟಕ ‘ರಾಮ್‌ ಫ್ರಂ ತೆನಾಲಿ’, ಹಾಸ್ಯ ನಾಟಕಗಳು ಹೇಗಿರಬೇಕೆಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿತ್ತು. ಹಾಸ್ಯದ ಲಘುಧಾಟಿಯಲ್ಲಿ ಸಾಗುತ್ತ ಮನರಂಜನೆ ಒದಗಿಸುವ ಜೊತೆ ಅಂತರ್ಲಯದಲ್ಲಿ ವೈಚಾರಿಕತೆ ಹುದುಗಿಸಿಕೊಂಡು ಅರ್ಥವಿಸ್ತಾರ ಸ್ಫುರಿಸಿದ ನಾಟಕ.

ಬೌದ್ಧಿಕ ವಿಶ್ಲೇಷಣೆಯೊಂದಿಗೆ, ಸ್ವಾರಸ್ಯಕರ ಸಂಭಾಷಣೆ, ವೈವಿಧ್ಯಪೂರ್ಣ ಪಾತ್ರರಚನೆಗಳ ಗಟ್ಟಿ ಹೂರಣವುಳ್ಳ ವಿಭಿನ್ನ ನಾಟಕ ರಚಿಸಿದ ಎನ್.ಸಿ. ಮಹೇಶ್ ಅವರ ಸೃಜನಶಕ್ತಿ ನಾಟಕದ ಯಶಸ್ಸಿಗೆ ಕಾರಣವಾದರೆ, ಅದನ್ನು ರಂಗದ ಮೇಲೆ ಅಷ್ಟೇ ಪರಿಣಾಮಕಾರಿಯಾಗಿ ಸಾಕಾರಗೊಳಿಸಿದ ತಂಡದ ಶ್ರಮ-ಪ್ರಯತ್ನಗಳೂ  ಸಮಪಾಲು ಪಡೆಯುತ್ತವೆ. ನಾಟಕವನ್ನು ಅತ್ಯಂತ ಚುರುಕಾಗಿ ಉತ್ತಮವಾಗಿ ನಿರ್ದೇಶಿಸಿದವರು ಲಿಂಗರಾಜ್ ಇತಿಹಾಸ.

ತಾನು 16ನೇ ಶತಮಾನದ ತೆನಾಲಿರಾಮನ ಪುನರವತಾರವೆಂದು ಪ್ರತಿಘಟ್ಟದಲ್ಲೂ ಇತಿಹಾಸದ ಹಿಂದಿನ ನೆನಪುಗಳು, ಘಟನೆಗಳನ್ನು ಒರೆಗೆ ಹಚ್ಚುತ್ತ, ಪ್ರಸ್ತುತ ಬದುಕಿನ ಸಮಸ್ಯೆಗಳನ್ನು ತನ್ನ ಬುದ್ಧಿಮತ್ತೆ, ಸಮಯಸ್ಫೂರ್ತಿಯ ಜಾಣ್ಮೆಯಿಂದ ನಿಭಾಯಿಸುವ ಚತುರ ಯುವಕ ರಾಮ್.  ವಾಸಕ್ಕೆ ಕೋಣೆ ಮತ್ತು ಉದ್ಯೋಗವನ್ನು ಗಿಟ್ಟಿಸಿಕೊಳ್ಳುವ ಘಟನಾವಳಿಯ ಸುತ್ತ ಆಸಕ್ತಿಕರವಾಗಿ ನೇಯ್ದ ನಾಟಕವಿದು. ಎಲ್ಲ ವಿಷಯಗಳನ್ನೂ ವಿರೋಧಿಸುವುದೇ ಕ್ರಾಂತಿಯೆಂದು ಭ್ರಮಿಸಿ ಬಡಬಡಿಸುವ ಪ್ರಕಾಶ, ಅವನಿಗೆ ಕುಮ್ಮಕ್ಕಾಗಿ ನಿಂತ ರಾಗ-ತಾಳಗಳಂತಿದ್ದ ಸಂಗೀತ ಮತ್ತು ನೃತ್ಯಾಭ್ಯಾಸಿಗಳಾದ ಸೇನ್ ಮತ್ತು ಧ್ರುವ್, ಮೂವರೂ ಮಿಲಿಟರಿ ಅನಂತ ಪದ್ಮನಾಭನ ಮನೆಯಲ್ಲಿ ಕೋಣೆ ಬಾಡಿಗೆಗೆ ಪಡೆದು ನಡೆಸುವ ಗದ್ದಲಗಳಿಂದ ಮನೆ ಮಾಲೀಕ ಪೇಚಿಗೆ ಸಿಲುಕುತ್ತಾನೆ.

ಪಕ್ಕದಮನೆಯ ಲಯನ್ ಶ್ರೀಪಾದರಾವ್ ಇದರಿಂದ ಐ.ಎ.ಎಸ್.ಗೆ ತಯಾರಿ ನಡೆಸುತ್ತಿರುವ ತನ್ನ ಮಗಳ ಓದಿಗೆ ಭಂಗ ಬರುತ್ತಿದೆಯೆಂದು ಗಲಾಟೆ ಮಾಡುತ್ತಾನೆ. ಇದೇ ವೇಳೆ ಕೋಣೆ ಹುಡುಕಿಕೊಂಡು ಅಲ್ಲಿಗೆ ಬಂದ ರಾಮ್ ತನ್ನ ವಾಕ್ಚಾತುರ್‍ಯದಿಂದ ಹುಡುಗರ ಮನಸ್ಸುಗಳನ್ನು ಗೆದ್ದು ಅಲ್ಲೇ ಠಿಕಾಣಿ ಹೂಡುತ್ತಾನೆ. ಹಾಗಯೇ ‘ಭುವನವಿಜಯ’ ಎಂಬ ಕಂಪೆನಿ ಚೇರ್ಮನ್‌ ಕೆ.ದೇವರಾಯನ ಮನವೊಲಿಸಿ ಕೆಲಸವನ್ನೂ ಗಿಟ್ಟಿಸಿಕೊಳ್ಳುತ್ತಾನೆ. ಕಡೆಗೆ ಜಗಳಕ್ಕೆ ಬಂದ ಶ್ರೀಪಾದರಾವ್ ಅವರ ಕೋಪವನ್ನು ಶಮನಗೊಳಿಸಿ ಅವರ ಮಗಳಾದ ನಿಧಿಯ ಪ್ರೀತಿಯನ್ನೂ ಸಂಪಾದಿಸಿಕೊಳ್ಳುವುದು ನಾಟಕದ ಸ್ಥೂಲಕಥೆ.

ನಾಟಕದಲ್ಲಿ ರಾಮ್, ತನ್ನ ಪ್ರತಿಮಾತಿನಲ್ಲೂ, ಪೂರ್ವಾಶ್ರಮದ ಅಂದರೆ ‘ಭುವನವಿಜಯದ ಕೃಷ್ಣದೇವರಾಯ’ನ ಕಾಲದಲ್ಲಿ ನಡೆದುಹೋದ ಘಟನೆಗಳನ್ನು ಕೆದಕುತ್ತ, ವಿಶ್ಲೇಷಿಸುತ್ತ, ತನ್ನ ಸುತ್ತಲಿನ ಪಾತ್ರಗಳನ್ನೂ ಅಂದಿನ ಕಥೆಯ ಪಾತ್ರಧಾರಿಗಳಂತೆ ಬಿಂಬಿಸುತ್ತ ಅವರನ್ನು ಸಾಕಷ್ಟು ಗೊಂದಲದಲ್ಲಿ ಬೀಳಿಸುತ್ತಾನೆ. ಅವರೆಲ್ಲ ಗೊತ್ತಿದ್ದೋ ಗೊತ್ತಿಲ್ಲದೆಯೋ ಅವನ ಕಥೆಯ ಭಾಗವಾಗಿ ಬಿಡುತ್ತಾರೆ. ಈ ನೆಲೆಯ ಸನ್ನಿವೇಶಗಳಲ್ಲಿ ಸ್ವಾರಸ್ಯ ಘನಿಸುತ್ತ ಕುತೂಹಲ ಕೆನೆಗಟ್ಟುತ್ತದೆ. ಕಡೆಗೆ ಇತಿಹಾಸದಲ್ಲಿ ‘ರಾಮಕೃಷ್ಣ’ ಎಂಬ ವ್ಯಕ್ತಿ ಇದ್ದನೇ ಇಲ್ಲವೇ ಎಂಬ ಜಿಜ್ಞಾಸೆ ಹುಟ್ಟಿದಾಗ ರಾಮ್ ಕೊಡುವ ಉತ್ತರ ಮಾರ್ಮಿಕವಾಗಿದೆ. ಜನಮಾನಸದಲ್ಲಿ ನೆಲೆ ನಿಲ್ಲುವುದೇ ನಿಜವಾದ ಇತಿಹಾಸ.

ಜನರಿಗೆ ಇತಿಹಾಸದ ಒಣ ದಾಖಲಾತಿ ಬೇಕಿಲ್ಲ, ಜನಜನಿತ ಸ್ಥಾಪಿತ ಕಥೆಯ ಆವರಣದೊಳಗೆ ಪ್ರಭಾವಿತರಾದವರ ದೃಷ್ಟಿಯಲ್ಲಿ ತೆನಾಲಿರಾಮ ಎಂಬುವವನು ರಂಜನೆ ಮತ್ತು ಬುದ್ಧಿವಂತಿಕೆಯ ಸಮ್ಮಿಶ್ರಣವಾಗಿ ಮಾತ್ರ ಕಂಡುಬರುತ್ತಾನೆ. ಈ ಒಂದು ಸೂಕ್ಷ್ಮ ಎಳೆಯನ್ನು ಹಿಡಿದುಕೊಂಡು ನಾಟಕಕಾರರು ಆ ಕಾಲದ ದಾಖಲೆಗಳ ನೆರಳಿನಲ್ಲೇ ತಮ್ಮ ಕಲ್ಪನಾಲಹರಿಯಲ್ಲಿ ಪ್ರಸಕ್ತ ಸಮಾಜದ ಪ್ರತಿಬಿಂಬವಾಗಿ ರಾಮನನ್ನು ಅರಳಿಸಿದ್ದಾರೆ.

ಹಾಸ್ಯ ಸ್ವಭಾವ, ಕುಶಾಗ್ರಮತಿಗೆ ರೂಪಕವಾಗಿ ನಿಲ್ಲುವ ಈ ರಾಮ್, ತನ್ನ ಸುತ್ತ ಸಂತಸ-ತಮಾಷೆಯ ಅಲೆಗಳನ್ನು ಹರಡುತ್ತ, ಇತರರಿಗೆ  ತೊಂದರೆ ಕೊಡದೆ ತನ್ನ ಬದುಕನ್ನು ಸುಗಮವಾಗಿಸಿಕೊಳ್ಳುವ ಕಿಲಾಡಿಯಾಗಿ ರೂಪ ತಳೆಯುತ್ತ ಆಪ್ತನಾಗುತ್ತಾನೆ. ಚರಿತ್ರೆಯಲ್ಲಿನ ‘ರಾಮಲಿಂಗ’ ಪರಿಸ್ಥಿತಿಯ ಒತ್ತಡದಿಂದ ‘ರಾಮಕೃಷ್ಣ’ನಾಗಿರಬಹುದಾದ ಸಾಧ್ಯತೆಗಳ ಹಿನ್ನಲೆಯ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ, ಮಾಹಿತಿ ಕಲೆಹಾಕಿ ನಾಟಕ ರಚಿಸಿರುವ ಮಹೇಶ್, ಸಾರ್ವಕಾಲಿಕ ಅವತಾರ ತಾಳಬಲ್ಲ ರಾಮನ ಪ್ರತಿಮೆಯನ್ನು ಸಶಕ್ತವಾಗಿ ಕಡೆದಿರಿಸಿದ್ದಾರೆ.

ಇತಿಹಾಸದ ಕೆಲ ಪ್ರಕರಣಗಳ ಬಗ್ಗೆ ತೆನಾಲಿರಾಮನಿಗೆ ಪಶ್ಚಾತ್ತಾಪವಿದೆ, ಅದನ್ನು ನೇರ್ಪಡಿಸಿಕೊಳ್ಳುವ ದಿಸೆಯಲ್ಲಿ-‘ಕಾಲದ ಗತಿ ಮತ್ತು ಚಲನೆಯೇ ಇಲ್ಲಿ ಪ್ರತಿಭಟನೆಯ ರೂಪ ಪಡ್ಕೊಳ್ತಿವೆ’ ಎಂಬ ಈ ರಾಮನ ಮಾತುಗಳು ಪ್ರಸಕ್ತ ಸಂದರ್ಭದ ಕೆಲ ವಿರೋಧಿ ಧ್ವನಿಗಳಿಗೆ ಸಾಂತ್ವನದ ಉತ್ತರ ಕೊಡುವಂತಿವೆ. ನಾಟಕದ ಅಂತ್ಯದಲ್ಲಿ ಚರಿತ್ರಕಾರ ಹೇಳುವಂತೆ ತೆನಾಲಿ ರಾಮನಿದ್ದನೋ ಬಿಟ್ಟನೋ ಎಂಬ ಸಂಶಯದ ನಿಲುವಿನೊಂದಿಗೆ, ಇವನು ನಕಲಿ ಎಂಬ ಆಕ್ಷೇಪಣೆಯ ಕೂಗು ಕೂಡ ಕೇಳಿಬರುತ್ತದೆ. ‘ನಾನು ಎಲ್ಲ ಕಾಲದ ಟೈಮ್ಲೀ ಇಂಟೆಲಿಜೆನ್ಸ್... ಟೈಮ್ಲೀ ವಿಟ್... ಕಾಲ ಮತ್ತು ನಾನು ಪ್ರತಿಸ್ಪರ್ಧಿಗಳು’ ಎಂಬ ಅವನ ಸಮಜಾಯಿಷಿ ಅರ್ಥವತ್ತಾಗಿದೆ. ಇಲ್ಲಿ ಇವನು ಎಲ್ಲ ಕಾಲಕ್ಕೂ ಸಲ್ಲುವ ‘ರಾಮ್’ನ ಪ್ರತಿಮೆಯಾಗಿ ನಿಲ್ಲುತ್ತಾನೆ.

ನಾಟಕದಲ್ಲಿ ಚಿತ್ರಿತವಾಗಿರುವ ವೈವಿಧ್ಯಮಯ ಪಾತ್ರಗಳನ್ನು ನಿರ್ದೇಶಕರು ಅಷ್ಟೇ ವಿಭಿನ್ನ ವ್ಯಕ್ತಿತ್ವದ ಮೂಸೆಯೊಳಗೆ ಕಡೆದಿರಿಸಿದ್ದಾರೆ. ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ವಿಶಿಷ್ಟ ‘ಮ್ಯಾನರಿಸಂ’, ಮಾತಿನ ವೈಖರಿ, ಚಲನೆಗಳಿರುವುದರಿಂದ ನಾಟಕ ಪರಿಣಾಮಕಾರಿ ಅನುಭವಗಳನ್ನು ಕಟ್ಟಿಕೊಡುವುದರ ಜೊತೆಗೆ ಹಾಸ್ಯಪೂರ್ಣವಾಗಿದೆ. ಪ್ರತಿ ದೃಶ್ಯಾಂತ್ಯದಲ್ಲೂ ‘ಫ್ರೀಜ್’ ಆಗುವಂತೆ ಸೃಜಿಸಿರುವ ಚಿತ್ರವತ್ತಾದ ‘ಬ್ಲಾಕಿಂಗ್’ಗಳು ವಿಶಿಷ್ಟವಾಗಿವೆ. ಹಿನ್ನೆಲೆ ಸಂಗೀತ (ತೇಜಸ್ವೀ ಹರಿದಾಸ್ ಮತ್ತು ಅರ್ಜುನ್ ರಾಮು) ಮನತುಂಬುತ್ತದೆ. ಪ್ರತಿಯೊಬ್ಬರೂ ಅನುಭವಿಸಿ ಪಾತ್ರಗಳನ್ನು ನಿರ್ವಹಿಸಿರುವ ಕಾರಣ ಸಹಜತೆಯ ಮೆರುಗು ವೃದ್ಧಿಸಿದೆ. ಲಯನ್ ಶ್ರೀಪಾದರಾವ್ ಆಗಿ ಬಾಷ್ ರಾಘವೇಂದ್ರ, ಮನೆ ಮಾಲೀಕನಾಗಿ ಸತೀಶ್ ಐತಾಳ್ ಲೀಲಾಜಾಲ ಉತ್ತಮ ಅಭಿನಯ, ಆಂಗಿಕ ಶೈಲಿಯಿಂದ ನೋಡುಗರ ಮನಸ್ಸಿನಲ್ಲಿ ನೆಲೆಗೊಳ್ಳುತ್ತಾರೆ.

ತೆನಾಲಿ ರಾಮನಾಗಿ ವಿಜಯೀಂದ್ರ ಜೋಡಿದಾರ್ ಮತ್ತು ದೇವರಾಯನಾಗಿ ರಾಘೂ ರಾಮನಕೊಪ್ಪ ತಮ್ಮ ಚೂಟಿಯಾದ, ‘ಸ್ಟೈಲೈಸ್ಡ್ ನಟನೆ’ಯಿಂದ, ಸೊಗಸಾದ ಅಭಿನಯದಿಂದ ಸೆಳೆಯುತ್ತಾರೆ. ಆಚಾರ್ಯನಾಗಿ ಸುಬ್ಬು ತಮ್ಮದೇ ಆದ ಹಾಸ್ಯವೈಖರಿಯಿಂದ ಗಮನಾರ್ಹರಾದರೆ, ವಾಸುದೇವ್, ರಘುವೀರ್, ಲಕ್ಷ್ಮಣ್ ಪೂಜಾರಿ, ವಿಕಾಸ್, ಶ್ರೀನಾಥ್ ಮತ್ತು ಅಂಜನಾ ದೇಶಪಾಂಡೆ ತಮ್ಮ ಚೆಂದದ ನಟನೆಯಿಂದ ನಾಟಕವನ್ನು ಸುಗಮವಾಗಿ ನಡೆಸಿಕೊಂಡು ಹೋದರು. ಕನ್ನಡದಲ್ಲಿ ಅಸಲಿ ಹಾಸ್ಯನಾಟಕಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ನಾಟಕಕಾರ     ಎನ್.ಸಿ.ಮಹೇಶ್ ಅವರ ಕೊಡುಗೆ ಮೆಚ್ಚುಗೆ ಪಡೆದರೆ, ಪ್ರತಿಭಾವಂತ ನಿರ್ದೇಶಕ ಲಿಂಗರಾಜ್ ಅವರ ಸೃಜನಶೀಲತೆ ಖುಷಿ ನೀಡುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT