ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಪ್ರದೇಶದಲ್ಲಿ ರಾಜ್ಯ ಬಂದ್‌ ಯಶಸ್ವಿ

Last Updated 18 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೇಕೆದಾಟು ಯೋಜನೆ ಯನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ‘ಕರ್ನಾಟಕ ಬಂದ್‌’ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತ ವಾಯಿತು.

ಕಾವೇರಿ ನೀರು ಬಳಸುವ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಬಂದ್‌ ಯಶಸ್ವಿಯಾಯಿತು.  ಕಾವೇರಿ ನದಿಯ ಉಗಮ ಸ್ಥಾನವಾದ ಕೊಡಗು ಜಿಲ್ಲೆಯಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಆದರೆ, ಉತ್ತರ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಲ್ಲಿ, ಹೈದರಾಬಾದ್‌ ಕರ್ನಾಟಕ ಹಾಗೂ ಕರಾವಳಿಯ 3 ಜಿಲ್ಲೆಗಳಲ್ಲಿ ಜನ ಬಂದ್‌ಗೆ ಸ್ಪಂದಿಸಿಲ್ಲ.

ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿ ಬಂದ್‌ ಯಶಸ್ವಿಯಾಯಿತು. ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಯಲ್ಲಿ ಬಂದ್‌ಗೆ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಯಿತು.

ಮುಖ್ಯಮಂತ್ರಿಗೆ ಮನವಿ:  ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ  ಕನ್ನಡಪರ ಸಂಘಟನೆಗಳ ಕಾರ್ಯ ಕರ್ತರು ರಾಜಧಾನಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಪ್ರತಿಭಟನಾಕಾರರು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. ‘ಒಂದು ತಿಂಗಳೊಳಗೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರದ ವಿರುದ್ಧವೇ ಪ್ರತಿಭಟನೆ ನಡೆಸಲಾಗುವುದು’ ಎಂದು  ಎಚ್ಚರಿಸಿದರು.

ರಾಜಧಾನಿಯ ಜನಕ್ಕೆ ಬಂದ್‌ ಬಿಸಿ ಜೋರಾಗಿ ತಟ್ಟಿತು. ಅಂಗಡಿ–ಮುಂಗಟ್ಟು ಗಳ ಮಾಲೀಕರು ಸ್ವಯಂಪ್ರೇರಿತರಾಗಿ ವಹಿವಾಟು ಸ್ಥಗಿತಗೊಳಿಸಿದ್ದರು. ಸಂಜೆವರೆಗೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳ ಸಂಚಾರ ಇರಲಿಲ್ಲ. ಬೆಳಿಗ್ಗೆ ಸಾರಿಗೆ ವ್ಯವಸ್ಥೆ ಸ್ತಬ್ಧವಾಗಿದ್ದರಿಂದ ಪರ ಊರುಗಳಿಂದ ಬಂದಿದ್ದ ಅಸಂಖ್ಯಾತ ಪ್ರಯಾಣಿಕರು ಪಡಿಪಾಟಲು ಅನುಭವಿಸಿದರು.

‘ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಟಿಸಿಯ ಬಸ್‌ಗಳು ಬೆಳಿಗ್ಗೆ 6ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಸಂಚಾರ ಸ್ಥಗಿತಗೊಳಿಸಿದ್ದವು.  ಶನಿವಾರ ಶೇ 60ರಷ್ಟು ಬಸ್‌ಗಳು ಸಂಚಾರ ನಡೆಸಿವೆ.  ಆದರೆ, ವಾರಾಂತ್ಯದ ಎಂದಿನ ದಟ್ಟಣೆ ಇರಲಿಲ್ಲ’ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಸಂಗಪ್ಪ ಅವರು ತಿಳಿಸಿದರು.

ಹುಬ್ಬಳ್ಳಿಯಲ್ಲಿ ಬಂದ್‌ಗೆ ವಿರೋಧ

ಹುಬ್ಬಳ್ಳಿ/ಮಂಗಳೂರು: ಹುಬ್ಬಳ್ಳಿ ಮತ್ತು ಧಾರವಾಡ ಹಾಗೂ ಮಂಗಳೂರಿನಲ್ಲಿ ಬಂದ್‌ಗೆ ತೀವ್ರ ವಿರೋಧ ವ್ಯಕ್ತವಾಯಿತು.

‘ಹುಬ್ಬಳ್ಳಿಗೆ ಕುಡಿಯುವ ನೀರು ಒದಗಿಸುವ ಕಳಸಾ ಬಂಡೂರಿ ಯೋಜನೆ ಸೇರಿದಂತೆ ಉತ್ತರ ಕರ್ನಾ ಟಕದ ನೀರಾವರಿ ಯೋಜನೆ ಗಾಗಿ ಈ ಭಾಗದ ಕನ್ನಡಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದಾಗ ದಕ್ಷಿಣ ಕರ್ನಾಟಕದವರು ಸ್ಪಂದಿಸಲಿಲ್ಲ. ಹಾಗಾಗಿ, ಈ ಬಂದ್‌ಗೆ ಯಾವುದೇ ರೀತಿ ಬೆಂಬಲ ಸೂಚಿಸಬಾರದು’ ಎಂದು ಉತ್ತರ ಕರ್ನಾಟಕದ ಕೆಲ ಕನ್ನಡ ಸಂಘಟನೆಗಳು ಆಗ್ರಹಿಸಿದವು.

ಹುಬ್ಬಳ್ಳಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ ಬಣ) ಕಾರ್ಯಕರ್ತರು ಮತ್ತು ಹುಬ್ಬಳ್ಳಿ ಆಟೊ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ಸದಸ್ಯರು ಬಂದ್‌ಗೆ ವಿರೋಧ ವ್ಯಕ್ತಪಡಿಸಿ ಚನ್ನಮ್ಮ ವೃತ್ತದಲ್ಲಿ ಸಾರ್ವಜನಿಕರು ಮತ್ತು ಆಟೊ ಚಾಲಕರಿಗೆ ಗುಲಾಬಿ ಹೂಗಳನ್ನು ನೀಡಿದರು.

ಅದೇ ರೀತಿ ಮಂಗಳೂರಿನಲ್ಲಿ ನೇತ್ರಾವತಿ ಉಳಿಸಿ ಹೋರಾಟ ಸಮಿತಿ ಸೇರಿದಂತೆ ಕೆಲ ಸಂಘಟನೆಗಳು ಬಂದ್‌ ಬೆಂಬಲಿಸದಂತೆ ಕರೆ ನೀಡಿ ದ್ದವು.
ಕರಾವಳಿಯ ಜೀವನದಿಯಾದ ನೇತ್ರಾವತಿಯನ್ನು ತಿರುಗಿಸಲು ರಾಜ್ಯ ಸರ್ಕಾರ ಅವೈಜ್ಞಾನಿಕ ಯೋಜನೆ ರೂಪಿಸಿದೆ. ಇದನ್ನು ವಿರೋಧಿಸಿ 2014 ಮಾರ್ಚ್‌ನಲ್ಲಿ ಕರೆ ನೀಡಿದ್ದ ಬಂದ್‌ ವೇಳೆ ಹೊರ ಜಿಲ್ಲೆಯ ಕನ್ನಡ ಪರ ಸಂಘಟನೆಗಳು ಸ್ಪಂದಿಸಲಿಲ್ಲ. ಆಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಾತ್ರ  ಬಂದ್‌ ಯಶಸ್ವಿ ಯಾಗಿತ್ತು. ಹೀಗಾಗಿ, ಶನಿ ವಾರದ ಬಂದ್‌ ಬೆಂಬಲಿಸಬಾರದು ಎಂದು ಸಂಘಟನೆಗಳು ಹೇಳಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT