ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಿಯರ ದಂಡಿಗೆ ಹಿರಿಯನ ಸವಾಲು

Last Updated 28 ಜೂನ್ 2015, 19:30 IST
ಅಕ್ಷರ ಗಾತ್ರ

ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಸೇರಿದಂತೆ ಕಿರಿಯ ಪ್ರತಿಭಾವಂತ ಚೆಸ್‌ ಆಟಗಾರರಿಗೆ ಸೂಕ್ತ ರೀತಿಯಲ್ಲಿ ಪೈಪೋಟಿ ನೀಡುತ್ತಿರುವ ಬೆರಳೆಣಿಕೆಯ ಹಿರಿಯ ಆಟಗಾರರಲ್ಲಿ ಭಾರತದ  ವಿಶ್ವನಾಥನ್‌ ಆನಂದ್‌  ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ತಮ್ಮನ್ನು ಕಡೆಗಣಿಸುವಂತಿಲ್ಲ ಎನ್ನುವ ರೀತಿಯಲ್ಲಿ ಭಾರತದ ಈ ಚತುರ ಆಟಗಾರ ಯುವ ಆಟಗಾರರಿಗೆ ಸೆಡ್ಡು ಹೊಡೆಯುತ್ತಿದ್ದಾರೆ.

ನಾರ್ವೆಯ ಕಾರ್ಲ್‌ಸನ್‌, ಇಟಲಿಯ ಫ್ಯಾಬಿಯಾನೊ ಕರುವಾನಾ, ಅಮೆರಿಕದ ಹಿರಾಕು ನಕಮುರಾ, ನೆದರ್‌ಲ್ಯಾಂಡ್ಸ್‌ನ ಅನಿಶ್‌ ಗಿರಿ, ನಾರ್ವೆಯ ಜಾನ್‌ ಲುಡ್ವಿಗ್‌ ಹ್ಯಾಮರ್‌.... ಇವರೆಲ್ಲ 25 ವರ್ಷದ ಆಸುಪಾಸಿನಲ್ಲಿರುವವರು. ವಾಸ್ತವದಲ್ಲಿ ಈ ಕಿರಿಯರೆಲ್ಲ ಹುಟ್ಟುವ ಮೊದಲೇ ಆನಂದ್‌ ಗ್ರ್ಯಾಂಡ್‌ಮಾಸ್ಟರ್‌ ಪಟ್ಟ ಪಡೆದಾಗಿತ್ತು.  ಆನಂದ್‌ ಅವರ ಸಮಕಾಲೀನರಲ್ಲಿ ಇಬ್ಬರು ಮಾತ್ರ ಸಕ್ರಿಯರಾಗಿದ್ದಾರೆ. 10 ವರ್ಷ ಹಿಂದೆ ವಿಶ್ವ ಚಾಂಪಿಯನ್‌ ಆಗಿದ್ದ ವ್ಯಾಸೆಲಿನ್‌ ಟೊಪಾಲೊವ್‌ ಅವರಿಗೆ 40 ವರ್ಷ. ರಷ್ಯದ ವ್ಲಾದಿಮಿರ್‌ ಕ್ರಾಮ್ನಿಕ್‌ ಅವರಿಗೂ 40 ವರ್ಷ. ಆದರೆ ಇವರಿಬ್ಬರಿಗಿಂತ ಐದು ವರ್ಷ ದೊಡ್ಡವರು ಆನಂದ್‌.

ಅಮೋಘ ಚೇತರಿಕೆ
ಆನಂದ್ ಅವರ ಆಟದ ಸಾಮರ್ಥ್ಯ ಕಡಿಮೆಯಾಗುತ್ತಿದೆಯೇ–  ಹೀಗೊಂದು ಪ್ರಶ್ನೆ ಎರಡು ವರ್ಷಗಳ ಕೆಳಗೆ ಎದ್ದಿತ್ತು. 2013ರ ಡಿಸೆಂಬರ್‌ನಲ್ಲಿ ಅವರು ಮೊದಲ ಬಾರಿಯ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ನಾರ್ವೆಯ ಪ್ರತಿಭಾವಂತ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರಿಗೆ ಸೋತ ರೀತಿ ಇಂಥ ಸಂದೇಹ ಮೂಡಲು ಕಾರಣವಾಗಿತ್ತು. ಸಾರಾಸಗಟು ನಾಲ್ಕು ಪಂದ್ಯಗಳನ್ನು ಸೋತಿದ್ದರು.      

ನಂತರದ ಎರಡು– ಮೂರು ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಅವರ ನಿರ್ವಹಣೆ  ಗಮನಾರ್ಹ ಮಟ್ಟದಲ್ಲಿ ಇಲ್ಲದ್ದು ಇಂಥ ಆತಂಕಕ್ಕೆ ಕಾರಣವಾಗಿತ್ತು. ಅವರ ಆಟದ ಮೇಲೆ ವಯಸ್ಸು ಪರಿಣಾಮ ಬೀರುತ್ತಿದೆಯೇ ಎಂಬ ಅನುಮಾನವೂ ಮೂಡತೊಡಗಿತ್ತು. ಆದರೆ ಅವರು ಅಮೋಘವಾಗಿ ಚೇತರಿಸಿಕೊಂಡಿದ್ದಾರೆ. ತಮ್ಮಲ್ಲಿ ಇನ್ನೂ ಸಾಕಷ್ಟು ಚೆಸ್‌ ಉಳಿದಿದೆ ಎಂಬ ರೀತಿಯಲ್ಲಿ ಆಡತೊಡದ್ದಾರೆ.

ಕಳೆದ ವರ್ಷ, ‘ಲಂಡನ್‌ ಕ್ಲಾಸಿಕ್‌ ಟೂರ್ನಿ’, ಕ್ಯಾಂಡಿಡೇಟ್ಸ್‌ ಟೂರ್ನಿ (ವಿಶ್ವ ಚಾಂಪಿಯನ್‌ಗೆ ಸವಾಲು ಹಾಕುವ ಆಟಗಾರನನ್ನು ನಿರ್ಧರಿಸುವ ಪಂದ್ಯಾವಳಿ) ಸೇರಿದಂತೆ ಮೂರು ಪ್ರಮುಖ ಟೂರ್ನಿಗಳಲ್ಲಿ ಅವರು ವಿಜೇತರಾದರು. ಎರಡನೇ ಬಾರಿ ವಿಶ್ವ ಚೆಸ್ ಪಟ್ಟಕ್ಕಾಗಿ ಕಾರ್ಲ್‌ಸನ್‌ ಎದುರು ಸೋತರೂ ಸಾಕಷ್ಟು ಪೈಪೋಟಿ ನೀಡಿದ್ದರು.

ಈ ವರ್ಷ ಅವರು ಉತ್ತಮ ಸಾಧನೆ ತೋರತೊಡಗಿರುವುದು ಅಂಕಿ ಅಂಶಗಳಿಂದ ವೇದ್ಯವಾಗುತ್ತದೆ. ಫೆಬ್ರುವರಿ ನಂತರ ಅವರು ಯಾವುದೇ ಪಂದ್ಯ ಸೋತಿಲ್ಲ. ಎಳೆಯರ ಪೈಪೋಟಿಯ ನಡುವೆಯೂ ಪ್ರಸಕ್ತ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವುದು ಭಾರತೀಯ ಆಟಗಾರನ ಹೆಗ್ಗಳಿಕೆ. ಪ್ರಸ್ತುತ ಫಿಡೆ ರ್‍ಯಾಂಕಿಂಗ್‌ ಪಟ್ಟಿಯಲ್ಲಿನ ವಿಶ್ವ ಚಾಂಪಿಯನ್‌ ಕಾರ್ಲ್‌ಸನ್‌ ಮೊದಲ ಕ್ರಮಾಂಕದಲ್ಲಿದ್ದರೆ,  ಅಮೆರಿಕ ಮೂಲದ ಇಟಲಿ ಆಟಗಾರ ಕರುವಾನಾ ಎರಡನೇ ಸ್ಥಾನದಲ್ಲಿದ್ದಾರೆ.

ಮೆಚ್ಚುಗೆಯ ನಿರ್ವಹಣೆ
ಪ್ರಸಕ್ತ ‘ಗ್ರ್ಯಾಂಡ್‌ ಚೆಸ್ ಟೂರ್‌‘ (ಮೂರು ಪ್ರಮುಖ ಟೂರ್ನಿಗಳ ಸರಣಿ)ನ ಮೊದಲನೆಯ ಭಾಗವಾದ ನಾರ್ವೆಯ  ಸ್ಟಾವೆಂಜರ್‌ ಟೂರ್ನಿಯಲ್ಲಿ ಅವರ ಪ್ರದರ್ಶನ ಗಮನ ಸೆಳೆದಿದೆ. ವಿಶ್ವದ ಪ್ರತಿಭಾವಂತ ಆಟಗಾರರ ಎದುರು ಒಂಭತ್ತು ಸುತ್ತುಗಳಿಂದ ಆರು ಪಾಯಿಂಟ್ಸ್ ಸಂಗ್ರಹಿಸಿ ಎರಡನೇ ಸ್ಥಾನ ಪಡೆದಿರುವುದು ಕಡಿಮೆ ಸಾಧನೆಯೇನಲ್ಲ. ಅದೂ ಈ ಟೂರ್ನಿಯಲ್ಲಿ ಅವರದ್ದು ಅಜೇಯ ಸಾಧನೆ. ಆರು ಡ್ರಾ. ಮೂರು ಗೆಲುವು! ಅಂತಿಮ ಸುತ್ತಿನವರೆಗೂ ಅವರೂ ಪ್ರಶಸ್ತಿಯ ಪೈಪೋಟಿಯಲ್ಲಿದ್ದರು. ಕೊನೆಯಲ್ಲಿ ವಿಜೇತರಾದ ಟೊಪಾಲೊವ್‌ ಜೊತೆ ಅವರು 9ನೇ ಸುತ್ತನ್ನು ಡ್ರಾ ಮಾಡಿಕೊಂಡಿದ್ದರಿಂದ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ನಾರ್ವೆಯಲ್ಲಿ ಅವರು ಅಲ್ಲಿನವರೇ ಆದ ವಿಶ್ವ ಚಾಂಪಿಯನ್‌ ಕಾರ್ಲ್‌ಸನ್‌ ಮೇಲೂ ಜಯಗಳಿಸಿದ್ದು ಉಲ್ಲೇಖನೀಯ. ಕಪ್ಪು ಕಾಯಿಗಳಲ್ಲಿ ಆಡುವ ಸರದಿ ಬಂದಾಗ ಅವರು ತಮ್ಮ ಸಾಮರ್ಥ್ಯ ಎಂಥಹದ್ದು ಎಂಬುದನ್ನೂ ಅವರು ಟೂರ್ನಿಯಲ್ಲಿ ತೋರಿಸಿಕೊಟ್ಟರು.

ಮಹತ್ವದ ಸರಣಿ
ಹಾಲಿ ಪ್ರಬಲ ಆಟಗಾರರನ್ನು ಒಳಗೊಂಡ ಗ್ರ್ಯಾಂಡ್‌ ಚೆಸ್‌ ಟೂರ್‌ನ ಮುಂದಿನ ಹಂತವಾಗಿಸಿಂಕ್ವೆಫೀಲ್ಡ್‌ ಕಪ್‌ (ಅಮೆರಿಕದ ಸೇಂಟ್‌ ಲೂಯಿ, ಆಗಸ್ಟ್‌ 21ರಿಂದ ಸೆಪ್ಟೆಂಬರ್‌ 3) ಮತ್ತು ಲಂಡನ್‌ ಚೆಸ್‌ ಕ್ಲಾಸಿಕ್‌ ಟೂರ್ನಿ (ಡಿಸೆಂಬರ್‌ 3 ರಿಂದ 14) ನಿಗದಿಯಾಗಿದೆ. ಕಿರಿಯರು ಬೇರೂರಲು ಪ್ರಯತ್ನಿಸುತ್ತಿರುವ ಈ ದಿನಗಳಲ್ಲಿ ಆನಂದ್‌ ಅವರಿಗೆ ತಮ್ಮ ಸಾಮರ್ಥ್ಯ ತೋರಲು ಈ ಸರಣಿ  ಮಹತ್ವದ ಅವಕಾಶವಾಗಿದೆ. ಈ ಪ್ರವಾಸದಲ್ಲಿ ಅವರು ಉತ್ತಮ ಆರಂಭವನ್ನಂತೂ ಮಾಡಿದ್ದಾರೆ.

ಈ ವರ್ಷ ಆನಂದ್‌ ನಿರ್ವಹಣೆ
* 2015 ಫೆಬ್ರುವರಿ:
ಗ್ರೆಂಕೆ ಚೆಸ್‌ ಕ್ಲಾಸಿಕ್‌, ಜರ್ಮನಿ:
1 ಗೆಲುವು, 3 ಡ್ರಾ, 3 ಸೋಲು
* 2015 ಫೆಬ್ರುವರಿ:
ಜ್ಯೂರಿಕ್‌ ಚೆಸ್‌ ಚಾಲೆಂಜ್‌:
2 ಗೆಲುವು, 3 ಡ್ರಾ,

*2015 ಏಪ್ರಿಲ್‌:
ಶಮ್‌ಕೀರ್‌ ಚೆಸ್‌ ಟೂರ್ನಿ, ಇಸ್ರೇಲ್‌
3 ಗೆಲುವು, 6 ಡ್ರಾ.
* 2015 ಜೂನ್‌:
ಸ್ಟಾವೆಂಜರ್‌ ಚೆಸ್‌, ನಾರ್ವೆ
3 ಗೆಲುವು, 6 ಡ್ರಾ
(ಆನಂದ್‌, ಈ ವರ್ಷದ ಫೆಬ್ರವರಿ 14ರ ನಂತರ, ಅಂದರೆ ಆಡಿದ ಕೊನೆಯ 23 ಪಂದ್ಯಗಳಲ್ಲಿ ಅಜೇಯರಾಗಿದ್ದಾರೆ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT