ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರುತೆರೆ – ಬೆಳ್ಳಿತೆರೆ ನಡುವೆ ಮೀನಾಕ್ಷಿ ‘ಅಮ್ಮ’

Last Updated 3 ಸೆಪ್ಟೆಂಬರ್ 2015, 19:32 IST
ಅಕ್ಷರ ಗಾತ್ರ

ಸಿನಿಮಾಗಳಲ್ಲಿ ಹಾಸ್ಯನಟರಿಗಿಂತಲೂ ಬೇಡಿಕೆ ಇರುವುದು ಅಮ್ಮನ ಪಾತ್ರಧಾರಿಗಳಿಗೆ. ಚಿತ್ರರಂಗದಲ್ಲಿ ಕಾಯಂ ಅಮ್ಮಂದಿರ ಪಟ್ಟಿಯೇ ಇದೆ. ‘ಅಮ್ಮ’ನ ಪಾತ್ರಗಳಲ್ಲಿ ಏನೋ ಒಂದು ಖುಷಿ ಇದೆ’ ಎನ್ನುತ್ತಾರೆ ನಟಿ ಮೀನಾಕ್ಷಿ. ಪಾರು ವೈಫ್ ಆಫ್‌ ದೇವದಾಸ್‌’, ‘ಕೈದಿ’, ‘ಮರಿ ಟೈಗರ್‌’, ‘ಕಟ್ಟೆ’, ‘ಮತ್ತೆ ಬಂದ ವೀರಪ್ಪನ್‌’, ‘ಸವಾಲ್‌’, ‘ಪ್ರೇಮ ಪಲ್ಲಕ್ಕಿ’ ಹೀಗೆ ಮೀನಾಕ್ಷಿ ಅವರು ನಟಿಸಿರುವ 82 ಸಿನಿಮಾಗಳ ಪೈಕಿ ಅವರು ನಾಯಕ ಅಥವಾ ನಾಯಕಿಗೆ ತಾಯಿಯಾಗಿ ಕಾಣಿಸಿಕೊಂಡ ಪಾತ್ರಗಳೇ ಹೆಚ್ಚು.


ಮೈಸೂರಿನವರಾದ ಮೀನಾಕ್ಷಿ ಅವರಿಗೆ ತೆರೆಯ ಮೇಲೆ ಕಾಣಿಸಿಕೊಳ್ಳಬೇಕೆನ್ನುವುದು ಬಾಲ್ಯದ ಕನಸು. ಚಿಕ್ಕಂದಿನಲ್ಲಿ ಅವರಿಗೆ ಕನ್ನಡಿಯೇ ಕ್ಯಾಮೆರಾ ಮತ್ತು ಪ್ರೇಕ್ಷಕ ಕೂಡ. ಆಸಕ್ತಿ ಇದ್ದರೂ ಅಭಿನಯ ಕಲಿಕೆ ಅಥವಾ ಅವಕಾಶಗಳಿಗೆಂದು ಆರಂಭದಲ್ಲಿ ಹುಡುಕಿಕೊಂಡು ಹೋದವರಲ್ಲ. ಎಂಟು ವರ್ಷದ ಹಿಂದೆ ಕಿರುತೆರೆ ನಿರ್ದೇಶಕ ರವಿಕಿರಣ್‌ ಅವರನ್ನು ಭೇಟಿ ಮಾಡಿದ ಅವರು ಧಾರಾವಾಹಿಯಲ್ಲಿ ನಟಿಸುವ ಬಯಕೆ ವ್ಯಕ್ತಪಡಿಸಿದ್ದರು. ಹಿಂದೆಂದೂ ಕ್ಯಾಮೆರಾ ಎದುರಿಸದ ನಟಿಗೆ ಒಳ್ಳೆಯದೊಂದು ಪಾತ್ರ ನೀಡಲು ರವಿಕಿರಣ್‌ ಸಹ ಹಿಂದೆ ಮುಂದೆ ನೋಡಲಿಲ್ಲ. ಮೀನಾಕ್ಷಿ ಅವರ ಮಾತಿನಲ್ಲಿಯೇ ಅವರೊಬ್ಬ ಉತ್ತಮ ನಟಿಯಾಗಬಹುದು ಎಂದು ಅವರಿಗೆ ಅನಿಸಿತ್ತು.

ಹೀಗೆ ಮೀನಾಕ್ಷಿ ಅವರನ್ನು ಬಣ್ಣದ ಲೋಕಕ್ಕೆ ಕರೆತಂದಿದ್ದು ‘ಬದುಕು’ ಧಾರಾವಾಹಿ. ಅಲ್ಲಿಂದ ‘ಸೀತೆ’, ‘ರಾಘವೇಂದ್ರ ವೈಭವ’, ‘ಸೌಭಾಗ್ಯವತಿ’, ‘ಅನುರಾಧ’, ‘ಪುಟ್ಟಗೌರಿ ಮದುವೆ’ ಧಾರಾವಾಹಿಗಳಲ್ಲಿ ಕಿರುತೆರೆ ಪಯಣ ಮುಂದುವರಿಸಿದ್ದಾರೆ. ಕಿರುತೆರೆಯ ನಂಟು ಬೆಳ್ಳಿಪರದೆಗೂ ಕರೆತಂದಿತು. ಸಿನಿಮಾಗಳಲ್ಲಿ ಮ್ಯಾನೇಜರ್‌ ಆಗಿದ್ದ ಚಂದ್ರಶೇಖರ್‌ ಅವರ ಮೂಲಕ ಸಿನಿಮಾರಂಗವೂ ಪರಿಚಯವಾಯಿತು.

ಅಮ್ಮನ ಪಾತ್ರಗಳನ್ನು ಮಾಡುವ ವಯಸ್ಸು ಅಲ್ಲದಿದ್ದರೂ ಅವರಿಗೆ ಅದು ಅನಿವಾರ್ಯವಾಯಿತು. ಈಗ ಆ ಅನಿವಾರ್ಯತೆಯೇ ಅವರಿಗೆ ಹಿತವೆನಿಸಿದೆ. ನಾಯಕ ಅಥವಾ ನಾಯಕಿಯ ಅಮ್ಮನ ಪಾತ್ರಗಳಲ್ಲಿ ಸಾಮಾನ್ಯವಾಗಿ ಏಕತಾನತೆ ಇರುತ್ತದೆ. ಅಪವಾದವೆಂಬಂತೆ ಕೆಲವು ಅಪರೂಪದ ಚಿತ್ರಗಳು ಮಾತ್ರ ಹೆಚ್ಚಿನ ಮಹತ್ವ ನೀಡುತ್ತವೆ. ಹಾಗೆಂದು ಮೀನಾಕ್ಷಿ ತಮ್ಮ ಪಾತ್ರಗಳ ಕುರಿತು ಬೇಸರಿಸಿಕೊಂಡಿಲ್ಲ. ಬರುವ ಯಾವ ಅವಕಾಶವನ್ನೂ ಕಳೆದುಕೊಳ್ಳುವುದಿಲ್ಲ ಎನ್ನುತ್ತಾರೆ ಅವರು.

‘ಪಾತ್ರ ಕೊಡಿ ಎಂದು ನಾನಾಗಿಯೇ ಯಾರನ್ನೂ ಹೋಗಿ ಕೇಳುವುದಿಲ್ಲ. ಹಾಗೆಯೇ ಬರುವ ಅವಕಾಶವನ್ನು ಸಹ ಬೇರೆಯವರಿಗೆ ಬಿಟ್ಟುಕೊಡುವುದಿಲ್ಲ. ಎಷ್ಟೇ ಕಷ್ಟವಾದರೂ ಸಮಯ ಹೊಂದಾಣಿಕೆ ಮಾಡಿಕೊಂಡು ನಟಿಸುತ್ತೇನೆ’ ಎನ್ನುತ್ತಾರೆ ಮೀನಾಕ್ಷಿ. ಅಮ್ಮನ ಪಾತ್ರಗಳಲ್ಲದೆಯೇ ಬೇರೆ ಪಾತ್ರಗಳಿಗೂ ಅವರಿಗೆ ಆಹ್ವಾನ ಬಂದದ್ದಿದೆ. ಐಟಂ ಸಾಂಗ್‌ಗಳಲ್ಲಿ ನರ್ತಿಸಿ ಎಂದು ಸಲಹೆ ನೀಡಿದವರೂ ಇದ್ದಾರೆ.

‘ಆದರೆ ಸಾಂಪ್ರದಾಯಿಕ ಕುಟುಂಬದಿಂದ ಬಂದವಳಾಗಿ ಕೊಂಚವೂ ಮುಜುಗರ ಉಂಟಾಗದ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳಲು ಬಯಸುತ್ತೇನೆ. ಮನಸ್ಸಿಗೆ ಹಿತ ಎನಿಸದ ಪಾತ್ರಗಳನ್ನು ಮಾಡುವುದೇ ಇಲ್ಲ. ಆ ರೀತಿ ತಿರಸ್ಕರಿಸಿ ಬಂದ ಸಿನಿಮಾಗಳೂ ಸಾಕಷ್ಟಿವೆ’ ಎಂದು ಅವರು ಹೇಳುತ್ತಾರೆ. ಈ ಕಾರಣಕ್ಕಾಗಿಯೇ ಅವರು ಅಮ್ಮನ ಪಾತ್ರಗಳಲ್ಲಿ ಖುಷಿ ಕಾಣುತ್ತಿರುವುದು.

‘ಪಾತ್ರ ಮತ್ತು ಬದುಕಿನಲ್ಲಿ ಶಿಸ್ತು ಅಳವಡಿಸಿಕೊಂಡವಳು ನಾನು. ತಪ್ಪು ಕಂಡರೆ ನೇರವಾಗಿ ಅಲ್ಲಿಯೇ ಅದನ್ನು ಖಂಡಿಸುತ್ತೇನೆ’ ಎನ್ನುವ ಅವರು, ಸಂಭಾವನೆ ತಾರತಮ್ಯದ ಕುರಿತೂ ಪ್ರಸ್ತಾಪಿಸುತ್ತಾರೆ. ಸಿನಿಮಾದ ಬೇರೆ ಬೇರೆ ಕೆಲಸಗಳಿಗೆ ಹೆಚ್ಚು ಹಣ ಚೆಲ್ಲುವ ಕೆಲವು ನಿರ್ಮಾಪಕರು, ಕಲಾವಿದರ ಅದರಲ್ಲೂ ಪೋಷಕ ಕಲಾವಿದರ ಸಂಭಾವನೆ ವಿಚಾರಕ್ಕೆ ಬಂದಾಗ ಜಿಪುಣತನ ತೋರಿಸುತ್ತಾರೆ ಎನ್ನುವುದು ಅವರ ಅನುಭವ. ಈ ವ್ಯವಸ್ಥೆ ಬದಲಾಗಬೇಕು. ಕಲಾವಿದರು, ತಂತ್ರಜ್ಞರು ಎಲ್ಲರಿಗೂ ಒಳ್ಳೆಯ ಸಂಭಾವನೆ, ಸಮಾನ ಗೌರವ ಸಿಗಬೇಕು ಎನ್ನುವ ಅಭಿಪ್ರಾಯ ಅವರದು.

ಧಾರಾವಾಹಿಗಳು ತಂದುಕೊಟ್ಟಿರುವ ಜನಪ್ರಿಯತೆ ಮೀನಾಕ್ಷಿ ಅವರಿಗೆ ಖುಷಿ ನೀಡಿದೆ. ಹೊರಗೆ ಎಲ್ಲಿ ಹೋದರೂ ಜನ ಗುರುತಿಸುತ್ತಾರೆ ಎನ್ನುತ್ತಾರೆ. ಅಭಿನಯದ ನಡುವೆಯೂ ಸಿನಿಮಾ ನಿರ್ಮಾಣಕ್ಕೆ ಇಳಿಯುವ ಕನಸಿದೆ. ಅದರಲ್ಲಿಯೂ ಮಕ್ಕಳ ಸಿನಿಮಾ ಮಾಡುವ ಮಹದಾಸೆ ಅವರದು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT