ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರು ಚಿತ್ರೋತ್ಸವಕ್ಕೆ ಕ್ಷಣಗಣನೆ

Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಏಳನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಜಗತ್ತಿನ ಸಿನಿಮಾರಂಗದ ಕಿಟಕಿಯಲ್ಲಿ ಹಣುಕಿ ಹಾಕಿದ ನೆನಪು ಮಾಸುವ ಮುನ್ನವೇ ಯುವ ಉತ್ಸಾಹಿ ತಂಡವೊಂದು ‘ಭಾರತೀಯ ಕಿರು ಚಿತ್ರೋತ್ಸವ’ದ ಹೆಸರಿನಲ್ಲಿ ಮಹಾನಗರವನ್ನು ಮತ್ತೆ ಸಿನಿಮಳೆಯಲ್ಲಿ ನೆನೆಸಲು ಮುಂದಾಗಿದೆ.

ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ದೇಶ ವಿದೇಶಗಳ ಉತ್ತಮ ಸಿನಿಮಾಗಳನ್ನು ನೋಡಿದ ಗುಂಗಿನಿಂದ ನಗರಿಗರು ಈಗಷ್ಟೇ ಹೊರಬರುತ್ತಿದ್ದಾರೆ.
ಅತ್ತ ಅದಕ್ಕೆ ತೆರೆ ಬೀಳುತ್ತಿದ್ದಂತೆ ಇತ್ತ ಯುವ ಉತ್ಸಾಹಿ ತಂಡವೊಂದು ‘ಭಾರತೀಯ ಕಿರು ಚಿತ್ರೋತ್ಸವ’ದ ಹೆಸರಿನಲ್ಲಿ ಬೆಂಗಳೂರಿನಲ್ಲಿ ಮತ್ತೊಂದು ಸಿನಿಮಾ ಸಂಭ್ರಮಕ್ಕೆ ನಾಂದಿ ಹಾಡಲು ಮುಂದಾಗಿದೆ.

ಈ ಕಿರು ಚಿತ್ರೋತ್ಸವದ ಕನಸು ಕಂಡ ತಂಡ ‘ಟೀಂ ರಂಜನ್’. ‘ಆದರ್ಶ ಫಿಲ್ಮ್ ಅಂಡ್ ಟೀವಿ ಇನ್‌ಸ್ಟಿಟ್ಯೂಟ್‌’ನಲ್ಲಿ ನಿರ್ದೇಶನದ ತರಬೇತಿ ಪಡೆದ ವಿ.ಕಿರಣ್, ರಂಗನಾಥ್‌, ಜಯರಾಮ್‌ ಮತ್ತು ಡಿಂಪು ಎಂಬ ನಾಲ್ವರು ಸೇರಿ ಸ್ವಯಂ ಆಸಕ್ತಿಯಿಂದ ಈ ಸಾಹಸಕ್ಕೆ ಕೈ ಹಾಕಿದ್ದಾರೆ.

‘ಮನರಂಜನೆ’ ಎಂಬ ಶಬ್ದದಿಂದ ‘ರಂಜನ್’ ಪದವನ್ನು ಆಯ್ದುಕೊಂಡು ತಮ್ಮ ತಂಡಕ್ಕೆ ‘ಟೀಂ ರಂಜನ್’ ಎಂದು ನಾಮಕರಣ ಮಾಡಿದ್ದಾರೆ. ಎರಡು ಮೂರು ತಿಂಗಳ ಹಸುಗೂಸಿನಂತಿರುವ ಈ ತಂಡ ಆರಂಭದಲ್ಲೇ ಇಂಥದ್ದೊಂದು ದೊಡ್ಡ ಪ್ರಯತ್ನಕ್ಕೆ ಮುಂದಾಗಿದೆ. ಈ ಚಿತ್ರೋತ್ಸವವು ರಾಷ್ಟ್ರ ಮಟ್ಟದ ಸ್ಪರ್ಧೆಯೂ ಆಗಿದ್ದು, ಭಾರತದ ಯಾವುದೇ ಮೂಲೆಯಲ್ಲಿ ನಿರ್ಮಾಣವಾದ ಯಾವುದೇ ಭಾಷೆಯ ಕಿರುಚಿತ್ರ ಕೂಡ ಇಲ್ಲಿ ಸ್ಪರ್ಧಿಸಬಹುದು.
ಚಿತ್ರೋತ್ಸವದ ಹಿಂದಿನ ಉದ್ದೇಶ ಹೊಸದಾಗಿ ಚಿತ್ರ ತಯಾರಿಕೆಯಲ್ಲಿ ತೊಡಗಿಕೊಂಡಿರುವವರಿಗೆ ವೇದಿಕೆ ಒದಗಿಸುವ ಸದುದ್ದೇಶ ಈ ಚಿತ್ರೋತ್ಸವದ ಹಿಂದಿದೆ.

ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು
ಇಂದಿನ ಕಿರುಚಿತ್ರಗಳೇ ಮುಂದಿನ ಕಥಾ ಚಿತ್ರ ಗಳು. ರಾಷ್ಟ್ರಮಟ್ಟದಲ್ಲಿನ ಎಲ್ಲ ಪ್ರತಿ ಭಾ ವಂತರಿಗೂ ಇದೊಂದು ಒಳ್ಳೆಯ ಅವಕಾಶ ವಾಗಲಿದೆ. ಅವಕಾಶಗಳು ಸುಲಭವಾಗಿ ಸಿಗು ವುದಿಲ್ಲ. ಹಾಗಾಗಿ ಇಂತಹ ಅವಕಾಶವನ್ನು ಎಲ್ಲರೂ ಸದುಪ ಯೋಗ ಪಡಿಸಿಕೊಳ್ಳಬೇಕು.
                              –ಸುನಿ, ನಿರ್ದೇಶಕ                 ಕಿರುಚಿತ್ರೋತ್ಸವದ ತೀರ್ಪುಗಾರ

‘ಎಷ್ಟೋ ಜನ ತರಬೇತಿ ಪಡೆದಿರುವವರು ಅಥವಾ ಚಿತ್ರರಂಗದಲ್ಲಿ ಆಸಕ್ತಿ ಇದ್ದು ತರಬೇತಿ ಪಡೆಯದೇ ಇರುವ ಪ್ರತಿಭಾವಂತರು ಅವಕಾಶವಂಚಿತರಾಗಿ ಯಾವುದೋ ಪ್ರದೇಶದಲ್ಲಿ ಉಳಿದುಬಿಡುತ್ತಾರೆ
ಅಥವಾ ಅವಕಾಶಕ್ಕಾಗಿ ಚಿತ್ರರಂಗದವರ ಮನೆ ಬಾಗಿಲಲ್ಲಿ ಅಂಗಲಾಚುತ್ತಿರುತ್ತಾರೆ. ಅವರ ಅರ್ಧಕ್ಕರ್ಧ ಶ್ರಮ ಹೀಗೆ ಬಾಗಿಲು ಕಾಯುವುದರಲ್ಲೇ ಕಳೆದುಹೋಗುತ್ತದೆ. ಕೊನೆಗೂ ಅವಕಾಶವೇ ಸಿಕ್ಕದೆ, ಪ್ರತಿಭೆಗಳು ಬೆಳಕಿಗೆ ಬಾರದೆ ಉಳಿದುಬಿಡುವ ಅಪಾಯಗಳೂ ಇವೆ. ತೀರಾ ಉತ್ಸಾಹಿಗಳಾದವರು ಕಿರುಚಿತ್ರ ನಿರ್ಮಿಸಿಯೂ ನಾಲ್ಕು ಜನರಿಗೆ ತೋರಿಸಲಾಗದೆ ಪರಿತಪಿಸುತ್ತಾರೆ. ಫೇಸ್‌ಬುಕ್, ಯೂಟ್ಯೂಬ್‌ಗಳಿಗಷ್ಟೇ ಅವು ಸೀಮಿತವಾಗಿಬಿಡುತ್ತವೆ. ಅವರ ಸೃಜನಶಿಲತೆ, ಪ್ರಯತ್ನಕ್ಕೊಂದು ಪ್ರಶಂಸೆ–ಪ್ರೋತ್ಸಾಹವೂ ಇಲ್ಲದೇ ಹೋಗುತ್ತದೆ.

ಹಾಗಾಗಬಾರದು, ಉತ್ಸಾಹಿಗಳನ್ನು ಬೆನ್ನುತಟ್ಟಿ ಹುರಿದುಂಬಿಸಿದರೆ ಅವರು ಮುಂದೆ ದೊಡ್ಡದಾಗಿ
ವಿಚಾರ ಮಾಡಲು ಪ್ರೇರಣೆಯಾಗುತ್ತದೆ. ಈ ರೀತಿಯ ಪ್ರೋತ್ಸಾಹ ಹಾಗೂ ಬೆನ್ನುತಟ್ಟುವ ಕೆಲಸ ಆಗಬೇಕು ಎಂಬ ಕಾರಣಕ್ಕಾಗಿಯೇ ಇಂತಹ ಒಂದು ಬೃಹತ್ ವೇದಿಕೆ ಸಿದ್ಧಪಡಿಸುತ್ತಿರುವುದು’ ಎಂದು ಉತ್ಸವದ ಹಿಂದಿನ ಉದ್ದೇಶವನ್ನು ವಿವರಿಸುತ್ತಾರೆ ‘ಟೀಂ ರಂಜನ್’ ಸದಸ್ಯರು.

ಈಗಾಗಲೇ ಸುಚಿತ್ರಾ ಫಿಲ್ಮ್ ಸೊಸೈಟಿ ಇಂಥ ಕಿರುಚಿತ್ರೋತ್ಸವ ನಡೆಸುತ್ತಿದೆ. ಅದರ ಜೊತೆಯಲ್ಲೇ ಸೇರಬಹುದಲ್ಲ. ಪ್ರತ್ಯೇಕ ಚಿತ್ರೋತ್ಸವ ಮಾಡುವ ಔಚಿತ್ಯವೇನು ಎಂದರೆ, ‘ಸುಚಿತ್ರಾದವರ ಚಿತ್ರೋತ್ಸವದ ನಂತರ ಚಿತ್ರ ತಯಾರಿಸಿದವರು ಮತ್ತೊಂದು ಇಂತಹ ಉತ್ಸವಕ್ಕಾಗಿ ಒಂದಿಡೀ ವರ್ಷ ಕಾಯಬೇಕಾಗುತ್ತದೆ’ ಎಂಬ ಕಾರಣ ನೀಡುತ್ತಾರೆ ‘ಟೀಂ ರಂಜನ್’ ಸದಸ್ಯ ಕಿರಣ್.ಇವರ ಈ ಪ್ರಯತ್ನಕ್ಕೆ ಈಗಾಗಲೇ ಕನ್ನಡ ಚಿತ್ರರಂಗದ ಹಲವು ಗಣ್ಯರ ಬೆಂಬಲವೂ ವ್ಯಕ್ತವಾಗಿದೆ.

ಪ್ರಚಾರ ಪರಿಕರಗಳು
ತಂಡದಲ್ಲಿ ಸುಮಾರು ಕೇವಲ ಇಪ್ಪತ್ತು ಸದಸ್ಯರಿದ್ದಾರೆ. ಇಷ್ಟು ಚಿಕ್ಕ ತಂಡವನ್ನಿಟ್ಟುಕೊಂಡು ದೇಶದಾದ್ಯಂತ ಸಂಪರ್ಕ ಸಾಧಿಸುವುದು ಕಷ್ಟ. ಅದಕ್ಕಾಗಿಯೇ ಬೇರೆ ಬೇರೆ ರಾಜ್ಯಗಳಲ್ಲಿರುವ ಸಿನಿಮಾ ತರಬೇತಿ ಸಂಸ್ಥೆಗಳನ್ನು ಸಂಪರ್ಕಿಸಿ, ಅಲ್ಲಿ ಪ್ರಚಾರ ಮಾಡುವ ಮತ್ತು ಆ ಮೂಲಕ ಚಿತ್ರಗಳನ್ನು ತರುವ ಯೋಜನೆ ತಂಡದ್ದು. ಅಲ್ಲದೇ ಆದರ್ಶ ಫಿಲ್ಮ್ ಅಂಡ್ ಟಿ.ವಿ ಇನ್‌ಸ್ಟಿಟ್ಯೂಟ್‌ ಇವರ ಬೆನ್ನೆಲುಬಾಗಿ ನಿಂತಿದೆ.

ಸುಮಾರು 200 ಚಿತ್ರಗಳು ಸ್ಪರ್ಧೆಗೆ ಬರುವ ನಿರೀಕ್ಷೆ ಇದೆ. ಈ ಎಲ್ಲ ಚಿತ್ರಗಳನ್ನು ನೋಡಿ ಅಂತಿಮ 50 ಚಿತ್ರಗಳನ್ನು ಆಯ್ಕೆ ಮಾಡಲು ಆರು ಜನರ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ. ಅಲ್ಲದೇ ನಿರ್ದೇಶಕರಾದ ಸುನಿ, ರೂಪಾ ಅಯ್ಯರ್, ನಟರಾದ ಆನಂದ್ ಸುಬ್ರಹ್ಮಣ್ಯನ್ ಮತ್ತು ಬರಹಗಾರ
ಎಸ್.ಎಂ. ಪಾಟೀಲ್ ಸ್ಪರ್ಧೆಗೆ ತೀರ್ಪುಗಾರರಾಗಿದ್ದಾರೆ.

ಸ್ಪರ್ಧೆಯ ನಿಯಮಗಳು
ಪ್ರವೇಶ ಬಯಸುವ ಚಿತ್ರಗಳು ಕಡ್ಡಾಯವಾಗಿ ಇಂಗ್ಲಿಷ್ ಉಪಶೀರ್ಷಿಕೆ ಹೊಂದಿರಬೇಕು. ಚಿತ್ರದ ಅವಧಿ ಕನಿಷ್ಠ 10 ನಿಮಿಷ ಹಾಗೂ ಗರಿಷ್ಠ 30 ನಿಮಿಷಗಳವರೆಗೆ ಇರಬಹುದು. ಸಾಕ್ಷ್ಯಚಿತ್ರ ಹಾಗೂ ಅನಿಮೇಷನ್ ಚಿತ್ರಗಳಿಗೆ ಇಲ್ಲಿ ಪ್ರವೇಶವಿಲ್ಲ. ಹತ್ತು ನಿಮಿಷಗಳಿಗಿಂತ ಕಡಿಮೆ ಅವಧಿಯ ಚಿತ್ರಗಳು ನಾಮನಿರ್ದೇಶನಗೊಂಡಿದ್ದರೆ ಅವು ಸ್ಪರ್ಧೆಗೆ ಪರಿಗಣನೆ ಆಗುವುದಿಲ್ಲ. ಆದರೆ ಅಂತಹ ಅತ್ಯುತ್ತಮ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಡಲಾ ಗುತ್ತದೆ. ಆಯ್ದ ಉತ್ತಮ 50 ಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. 2012 ಜನವರಿ 1ರ ನಂತರ ನಿರ್ಮಿಸಲಾದ ಚಿತ್ರಗಳಿಗೆ ಮಾತ್ರ ಅವಕಾಶ.

ಬಹುಮಾನದ ವಿವರಗಳು ಮೊದಲ ಬಹುಮಾನ ₨ 30,000, ಎರಡನೇ ಬಹುಮಾನ ₨ 20,000 ಹಾಗೂ ಮೂರನೇ ಬಹುಮಾನ ₨ 10,000 ಎಂದು ನಿಗದಿಪಡಿಸಲಾಗಿದೆ. ಮೊದಲನೇ ಬಹುಮಾನವನ್ನು ಡಾ. ರಾಜ್‌ಕುಮಾರ್ ಅವರ ಹೆಸರಿನಲ್ಲಿ ನೀಡಲು ನಟ ಪುನೀತ್‌ ರಾಜ್‌ಕುಮಾರ್ ಒಪ್ಪಿಗೆ ನೀಡಿದ್ದಾರೆ ಎಂಬುದು ತಂಡದ ಖುಷಿಯನ್ನು ಇಮ್ಮಡಿಗೊಳಿಸಿದೆ. ಅಲ್ಲದೇ ನಿರ್ದೇಶನ, ನಟನೆ, ಛಾಯಾಗ್ರಹಣ, ಸಂಗೀತ ಮತ್ತು ಸಂಕಲನ ವಿಭಾಗಗಳಲ್ಲೂ ಪ್ರಶಸ್ತಿ ನೀಡಲಾಗುವುದು.

ಉತ್ತಮ ವೇದಿಕೆ
​ಕೆಲವರು ಇನ್‌ಸ್ಟಿಟ್ಯೂಟ್ ಪ್ರಮಾಣಪತ್ರ ತೆಗೆದುಕೊಂಡು ಪೂಜೆ ಮಾಡುತ್ತಾರೆ. ಆದರೆ ಈ ಹುಡುಗರು ತಂಡ ಕಟ್ಟಿಕೊಂಡು
ವಿಶೇಷ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇದು ಪ್ರತಿಭಾವಂತರಿಗೆ ಉತ್ತಮ ವೇದಿಕೆಯಾಗಲಿದೆ. ಚಿತ್ರೋದ್ಯಮವನ್ನೂ ಜೊತೆಗೆ
ಸೇರಿಸಿಕೊಂಡರೆ ಹೆಚ್ಚಿನ ಯಶಸ್ಸು ಸಿಗುತ್ತದೆ. ಎಲ್ಲಕ್ಕಿಂತ ಹೆಚ್ಚಿನದಾಗಿ ಇದು ದಾರಿತಪ್ಪಬಾರದು. ಸದುದ್ದೇಶದಿಂದ ನಡೆಯಬೇಕು.
                                                –ಎಸ್‌.ನಾರಾಯಣ್, ಆದರ್ಶ ಫಿಲ್ಮ್ ಅಂಡ್ ಟಿ.ವಿ ಇನ್‌ಸ್ಟಿಟ್ಯೂಟ್‌ ಪ್ರಾಂಶುಪಾಲರು.

ಅಂತರ್ಜಾಲದ ಮೂಲಕ ನೋಂದಣಿ
ಸ್ಪರ್ಧೆಗೆ ಕಿರುಚಿತ್ರಗಳನ್ನು ಕಳುಹಿಸುವವರು ಅಂತರ್ಜಾಲದ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ₨ 600 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಪ್ರವೇಶ ಶುಲ್ಕವನ್ನು ಡಿಡಿ ಮೂಲಕ ಪಾವತಿಸಬಹುದು. ಚಿತ್ರಗಳನ್ನು ಡಿವಿಡಿ ರೂಪದಲ್ಲಿ ಸಂಘಟಕರಿಗೆ ಕೊನೆಯ ದಿನಾಂಕದೊಳಗಾಗಿ ತಲುಪಿಸಬೇಕು. ಒಬ್ಬನೇ ವ್ಯಕ್ತಿ ಹಲವು ಚಿತ್ರಗಳನ್ನು ಕಳುಹಿಸಲು ಬಯಸಿದರೆ ಅದಕ್ಕೆ ಪ್ರತ್ಯೇಕ ಪ್ರವೇಶ ಪಡೆಯಬೇಕು. ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ 25 ಜನವರಿ 2015. ಫೆಬ್ರುವರಿ 28 ಮತ್ತು ಮಾರ್ಚ್ 1ರಂದು ಬೆಂಗಳೂರಿನ ‘ಕುವೆಂಪು ಕಲಾಕ್ಷೇತ್ರ’ದಲ್ಲಿ ಚಿತ್ರೋತ್ಸವ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ www.teamranjan.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ 9535834830 ಸಂಖ್ಯೆಗೆ ಕರೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT