ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಚಿಂಗ್‌ನಲ್ಲೊಂದು ಮಿನಿ ಇಂಡಿಯಾ

Last Updated 21 ಮೇ 2016, 19:51 IST
ಅಕ್ಷರ ಗಾತ್ರ

ಮಲೇಷ್ಯಾದ ಕುಚಿಂಗ್‌ ನಗರದಲ್ಲಿ ಭಾರತೀಯರ ಪ್ರಭಾವ ಎಷ್ಟಿದೆಯೆಂದರೆ ಅಲ್ಲಿನ ಸ್ಥಳೀಯ ಖಾದ್ಯಗಳಲ್ಲಿ ಬಹುತೇಕ ಭಾರತೀಯ ಮೂಲದವು. ಚೈನೀಸ್‌ ರೆಸ್ಟೋರೆಂಟ್‌ಗಳಲ್ಲಿ ‘ಮಲಯನ್‌ ಫುಡ್‌’ ಎಂದು ಸಿಗುವ ಬಹುತೇಕ ತಿಂಡಿಗಳ ಮೂಲ ಭಾರತೀಯವೇ. ಚೀನಾದ ಹೊಸ ವರ್ಷದಂದು ಭಾರತೀಯ ಚಕ್ಕುಲಿಯನ್ನೂ ಮಾಡಿ ಹಂಚುವ ಪದ್ಧತಿ ಅಲ್ಲಿದೆ!

ಮೂರು ಜನರಿದ್ದ ನಮ್ಮ ಪತ್ರಕರ್ತರ ತಂಡದಲ್ಲಿ ಒಬ್ಬಾಕೆ ಮಲಯಾಳಿ. ಅವತ್ತು ನಾವು ಇಂಡಿಯನ್‌ ರೆಸ್ಟೋರೆಂಟ್‌ ಹುಡುಕಿಕೊಂಡು ಹೋಗಿದ್ದೆವು. ಅಲ್ಲಿ ಹೋಟೆಲ್‌ನಲ್ಲಿ ನಮಗೆ ಸಿಕ್ಕಿದ್ದು ಮತ್ತೊಬ್ಬ ಮಲಯಾಳಿ ವೈಟರ್‌. ಹೆಸರು ದಾಮೋದರನ್‌ ಎಂದಿರಬೇಕು, ಈಗ ನೆನಪಿಲ್ಲ. ಆದರೆ ಅವನ ಹಾವಭಾವ, ವ್ಯಕ್ತಿತ್ವಗಳೆಲ್ಲ ಈಗಲೂ ನೆನಪಿರಲು ಕಾರಣವಿದೆ.

ನಾವು ಆ ಹೋಟೆಲ್‌ನಲ್ಲಿ ಮಧ್ಯಾಹ್ನದ ಊಟಕ್ಕೆ ಇದ್ದದ್ದು ಹೆಚ್ಚೆಂದರೆ ಎರಡು ಗಂಟೆಗಳ ಅವಧಿಯಷ್ಟೆ. ಆ ಎರಡು ಗಂಟೆ ಪೂರ್ತಿ ಆತ ಎಡೆಬಿಡದೆ ನಮ್ಮ ಮಲಯಾಳಿ ಪತ್ರಕರ್ತೆಯ ಜತೆಗೆ ಹರಟಿದ. ಊಟ ಮುಗಿಸಿ ಕಾರು ಹತ್ತುವಾಗಲೂ ಆತ ಕಾರಿನ ಬಳಿಗೇ ಬಂದು ಆಕೆಯ ಜತೆಗೆ ಮಾತು ಮುಂದುವರಿಸಿದ.

ಉಳಿದ ನಮಗಿಬ್ಬರಿಗೆ ‘ಇದೇನಪ್ಪಾ...ಇಷ್ಟೊಂದು ಹರಟುತ್ತಾನೆ...’ ಎಂಬ ಕುತೂಹಲ. ಕೊನೆಗೆ ಆತನ ಮಾತು ನಿಲ್ಲುವ ಲಕ್ಷಣ ಕಾಣದಿದ್ದಾಗ ಕಾರು ಸ್ಟಾರ್ಟ್‌ ಮಾಡಿದೆವು. ಆದರೂ ಆತ ನಮ್ಮನ್ನು ಬಿಡಲಿಲ್ಲ. ಕಾರು ನಿಲ್ಲಿಸಿಕೊಂಡೇ ಮತ್ತೆ ಹತ್ತು–ಹದಿನೈದು ನಿಮಿಷ ಆಕೆಯೊಂದಿಗೆ ಮಾತನಾಡಿದ. ಕೊನೆಗೂ ನಮ್ಮ ಕಾರು ಹೊರಟಾಗ ಅತ್ಯಂತ ಹತ್ತಿರದ ಬಂಧುವೊಬ್ಬರನ್ನು ಬೀಳ್ಕೊಡುವಂತೆ ಆಕೆಯತ್ತ ಕೈ ಬೀಸಿದ.

ಭಾಷೆಯೆಂಬುದು ಎಂತಹ ವಿಸ್ಮಯ ಎಂದು ನನ್ನನ್ನು ಇಡಿಯಾಗಿ ಕಾಡಿದ್ದು ಅವತ್ತು, ಆತ ಹಾಗೆ ನಿರಂತರವಾಗಿ ಮಾತನಾಡಲು ಇದ್ದ ಕಾರಣವನ್ನು ಕೊನೆಗೆ ಅವನೇ ಹೇಳಿದಾಗ! ‘ಸರ್‌, ದಯವಿಟ್ಟು ತಪ್ಪು ತಿಳಿದುಕೊಳ್ಳಬೇಡಿ. ಮಲಯಾಳಂ ಮಾತನಾಡದೆ ಸುಮಾರು ಒಂದು ವರ್ಷವಾಯಿತು ಸಾರ್‌.

ಭಾರತದಿಂದ ಸಾವಿರಾರು ಮೈಲಿ ದೂರದ ಈ ಇಡೀ ಪಟ್ಟಣದಲ್ಲಿ ಇರುವುದು ನಾನೊಬ್ಬನೇ ಮಲಯಾಳಿ. ಹಾಗಾಗಿ ಯಾರೊಂದಿಗೂ ಮಲಯಾಳಂನಲ್ಲಿ ಮಾತನಾಡುವಂತಿಲ್ಲ. ಊರಿಗೆ ಫೋನ್‌ನಲ್ಲಿ ಮಾತನಾಡಿದರೂ ಹೆಚ್ಚು ಮಾತನಾಡುವಂತಿಲ್ಲ, ದುಬಾರಿ ಕರೆನ್ಸಿ! ಅದಕ್ಕೇ ಮೇಡಂ ಅವರನ್ನು ನೋಡಿದಾಗ ನನಗೆ ಖುಷಿ ತಡೆಯಲಾಗಲಿಲ್ಲ. ಅವರ ಜತೆಗೆ ಬಾಯ್ತುಂಬ ಮಾತನಾಡಿದೆ. ತಪ್ಪು ತಿಳಿದುಕೊಳ್ಳಬೇಡಿ..!’.

ಮಲೇಷ್ಯಾದ ರಾಜಧಾನಿ ಕ್ವಾಲಾಲಂಪೂರದಿಂದ ಸಾವಿರ ಕಿ.ಮೀ ದೂರದಲ್ಲಿರುವ ಬೋರ್ನಿಯೊ ದ್ವೀಪ (ಇಲ್ಲಿಗೆ ವಿಮಾನದಲ್ಲಿ ಮಾತ್ರ ಪಯಣಿಸಬೇಕು, ರಸ್ತೆ ದಾರಿಯಿಲ್ಲ) ಯೂರೋಪಿಯನ್‌ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಸ್ವಚ್ಛ ರಸ್ತೆಗಳು, ಸೆಕೆ ಇದ್ದರೂ ದೂಳಿಲ್ಲದ, ಸ್ವಚ್ಛ ಹವೆಯ ಊರು. ವಾಹನಗಳ ಸಂಖ್ಯೆ ಬಹಳ ಕಡಿಮೆ.

ನಾವು ಉಳಿದುಕೊಂಡದ್ದು ಕುಚಿಂಗ್‌ ನಗರದಲ್ಲಿ. ಸಾರಾವಾಕ್‌ ನದೀ ತೀರದ ಈ ಪುಟ್ಟ ನಗರದ ಜನಸಂಖ್ಯೆ ಮೂರೂ ಕಾಲು ಲಕ್ಷ ಅಷ್ಟೆ. ಅಷ್ಟಕ್ಕೇ ನಗರವನ್ನು ಎರಡು ಭಾಗಗಳನ್ನಾಗಿ ಮಾಡಿ, ಇಬ್ಬರು ಮೇಯರ್‌ಗಳನ್ನು ನೇಮಿಸಿದ್ದರು. ಇಡೀ ಕುಚಿಂಗ್‌ ನಗರದಲ್ಲಿ ವಾಸಿಸುತ್ತಿದ್ದ ಒಬ್ಬನೇ ಒಬ್ಬ ಮಲಯಾಳಿ ನಮ್ಮನ್ನು ಇನ್ನಿಲ್ಲದಂತೆ ಕಾಡಿದ್ದು ಈಗಲೂ ಮರೆಯಲಾಗುತ್ತಿಲ್ಲ.

ಹಾಗೆ ನೋಡಿದರೆ, ಮಲೇಷ್ಯಾದ ರಾಜಧಾನಿ ಕ್ವಾಲಾಲಂಪೂರ ಇವತ್ತು ಭಾರತೀಯರಿಗೆ ಅಷ್ಟೊಂದು ದೂರವಲ್ಲ. ಅಲ್ಲೇ ಹುಟ್ಟಿ ಬೆಳೆದ ಮೂರನೇ ತಲೆಮಾರಿನ ಭಾರತೀಯರೂ ಕಾಣಸಿಗುತ್ತಾರೆ.

ಕ್ವಾಲಾಲಂಪೂರದ ‘ಲಿಟ್ಲ್‌ ಇಂಡಿಯಾ’ ಪ್ರದೇಶದಲ್ಲಿ ಓಡಾಡಿದರೆ ತಮಿಳುನಾಡಿನ ಯಾವುದೋ ಪುಟ್ಟ ನಗರದಲ್ಲಿ ಓಡಾಡಿದಂತೆಯೇ ಅನ್ನಿಸುತ್ತದೆ. ಆದರೆ ಕುಚಿಂಗ್‌ನ ಭಾರತೀಯರ ಜತೆಗೆ ಇವರ ಸಂಪರ್ಕ ಕಡಿಮೆ. ಹಾಗಾಗಿ ಕುಚಿಂಗ್‌ನಲ್ಲಿ ನೆಲೆಸಿರುವ ಭಾರತೀಯರು ಬಹುತೇಕ ಮಲಯಾ ಸಂಸ್ಕೃತಿಯನ್ನೇ ಅಪ್ಪಿಕೊಂಡಿದ್ದಾರೆ.

ಆದರೆ ಕುಚಿಂಗ್‌ನಲ್ಲೂ ಒಂದು ‘ಇಂಡಿಯನ್‌ ಸ್ಟ್ರೀಟ್‌’ ಇದೆ. ಅದರ ಸುತ್ತಮುತ್ತ ಪ್ರವಾಸಿಗರು ಸದಾ ಗಿಜಿಗುಡುತ್ತಾರೆ. ಭಾರತೀಯ ತಮಿಳು ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ವಾಸಿಸುತ್ತಿರುವ ಪ್ರದೇಶವಿದು.

1840ರ ಸುಮಾರಿಗೆ ಭಾರತೀಯ ತಮಿಳು ಮುಸ್ಲಿಮರು ಕಟ್ಟಿದ ಸುಂದರ ಮಸೀದಿಯೂ  ಇಲ್ಲಿದೆ. ಈ ಸ್ಟ್ರೀಟ್‌ನಲ್ಲಿ ಬಟ್ಟೆಬರೆ ಮತ್ತು ಮಸಾಲೆ ಪದಾರ್ಥಗಳ ಮಾರಾಟ ಭರದಿಂದ ನಡೆಯುತ್ತಿದೆ. ಚಿನ್ನಾಭರಣಗಳ ವ್ಯಾಪಾರದಲ್ಲೂ ಭಾರತೀಯರು ಮುಂದಿದ್ದಾರೆ. ಸಾಕಷ್ಟು ಭಾರತೀಯ ರೆಸ್ಟೋರೆಂಟ್‌ಗಳಿವೆ.

ಐದನೇ ಶತಮಾನದಲ್ಲೇ ಕುಚಿಂಗ್‌ ಸಹಿತ ಸಾರಾವಾಕ್‌ ರಾಜ್ಯದ ವಿವಿಧ ದ್ವೀಪಗಳಿಗೆ ಭಾರತೀಯರು ಆಗಮಿಸಿದ ಬಗ್ಗೆ ಇತಿಹಾಸದ ದಾಖಲೆಗಳಿವೆ. ಎಲ್ಲರೂ ಟೀ ಎಸ್ಟೇಟ್‌ ಕಾರ್ಮಿಕರು. ಆದರೆ ಇವರೆಲ್ಲ ಅಲ್ಲಿನ ಮೂಲನಿವಾಸಿಗಳೇ ಆದರು.

ಆ ಬಳಿಕದ ವಲಸೆ ಕಾಣಿಸುವುದು 19ನೇ ಶತಮಾನದಲ್ಲಿ. ದೊಡ್ಡ ಸಂಖ್ಯೆಯಲ್ಲಿ ತಮಿಳು ಮುಸ್ಲಿಮರು ಇಲ್ಲಿಗೆ ವ್ಯಾಪಾರಕ್ಕಾಗಿ ಸಮುದ್ರಮಾರ್ಗದಲ್ಲಿ ಆಗಮಿಸಿದರು. ಪಂಜಾಬಿನ ಸಿಖ್ಖರು ಪೊಲೀಸ್‌ ಪಡೆಗಳಿಗೆ ಬಂದು ಸೇರಿಕೊಂಡರು. ನೂರಾರು ತಮಿಳು ಹಿಂದೂಗಳು ಟೀ ಎಸ್ಟೇಟ್‌ಗಳಿಗೆ ಕಾರ್ಮಿಕರಾಗಿ ವಲಸೆ ಬಂದರು. ಇದಕ್ಕೆಲ್ಲ ಕಾರಣನಾದಾತ ಆಗ ಕುಚಿಂಗ್‌ನಲ್ಲಿ ಆಳ್ವಿಕೆ ನಡೆಸಿದ್ದ ರಾಜ ಚಾರ್ಲ್ಸ್‌ ಬ್ರೂಕ್‌.

1912ರ ಸುಮಾರಿಗೆ ಟೀ ಎಸ್ಟೇಟ್‌ಗಳು ಮುಚ್ಚಿಹೋದವು. ಆಗ ಭಾರತೀಯ ಕಾರ್ಮಿಕರ ಮುಂದೆ ಇದ್ದದ್ದು ಎರಡೇ ಆಯ್ಕೆ. ಭಾರತಕ್ಕೆ ಮರಳುವುದು ಅಥವಾ ಇಲ್ಲೇ ನೆಲೆಸುವುದು. ಸುಮಾರು 40 ಕುಟುಂಬಗಳು ಮಾತ್ರ ಆಗ ಕುಚಿಂಗ್‌ನಲ್ಲಿ ಉಳಿದುವಂತೆ. ಅವರೆಲ್ಲರೂ ಮಲಯನ್‌ ಮುಸ್ಲಿಮರಾಗಿ ಈಗ ಮೂಲನಿವಾಸಿಗಳೇ ಆಗಿದ್ದಾರೆ. 1929ರ ಬಳಿಕ ಮತ್ತೆ ಕುಚಿಂಗ್‌ಗೆ ತಮಿಳು ಮುಸ್ಲಿಮರ ವಲಸೆ ಶುರುವಾಯಿತು.

1953ರ ಬಳಿಕ ನೂರಾರು ಕುಟುಂಬಗಳು ಬಂದು ನೆಲೆಸಿದವು. ಈಗ ದೊಡ್ಡ ಸಂಖ್ಯೆಯಲ್ಲಿ ತಮಿಳು ಹಿಂದೂಗಳೂ ಇದ್ದಾರೆ. ಹಿಂದೂಗಳಲ್ಲಿ ಉಚ್ಛ ಕುಲದಿಂದ ಬಂದವರು ಕಟ್ಟಿಸಿದ ‘ಪೆರುಮಾಳ್‌ ಟೆಂಪಲ್‌’ ಇಲ್ಲಿನ ಬ್ಯಾನ್‌ಹಾಕ್‌ ರೋಡ್‌ನಲ್ಲಿದೆ. ಹಾಗೆಯೇ ಬಾಟುಕವಾದಲ್ಲಿ ಕೆಳಜಾತಿಯವರು ಕಟ್ಟಿಸಿದ ‘ಮಹಾಮಾರಿಯಮ್ಮನ್‌ ಟೆಂಪಲ್‌’ ಇದೆ.

ಕುಚಿಂಗ್‌ನಲ್ಲಿ ಬೆಕ್ಕಿಗೆ ಅತ್ಯಂತ ಗೌರವದ ಸ್ಥಾನವಿದೆ. ಅಲ್ಲಿನ ಯಾವ ಸರ್ಕಲ್‌ನಲ್ಲಿ ನೋಡಿದರೂ ಬೆಕ್ಕಿನ ಪ್ರತಿಮೆಗಳು. ಬೆಕ್ಕಿಗೆ ಹೊಡೆಯುವುದು ಕಾನೂನಿನನ್ವಯ ಶಿಕ್ಷಾರ್ಹ ಅಪರಾಧ. ಈ ಪಟ್ಟಣಕ್ಕೆ ಕುಚಿಂಗ್‌ ಎನ್ನುವ ಹೆಸರು ಬರಲೂ ಬೆಕ್ಕೇ ಕಾರಣವಂತೆ. ಸ್ಥಳೀಯ ಮಲಯಾದಲ್ಲಿ ಕುಚಿಂಗ್‌ ಅಂದರೆ ಬೆಕ್ಕು ಎಂಬರ್ಥವೂ ಇದೆ. ಆದರೆ ಎಲ್ಲರೂ ಈ ವಾದವನ್ನು ಒಪ್ಪುವುದಿಲ್ಲ.

ನಮ್ಮ ಗೈಡ್‌ ಪ್ರಕಾರ, ಮಲೇಷ್ಯಾ – ಇಂಡೋನೇಷ್ಯಾದ ಅತ್ಯಂತ ಜನಪ್ರಿಯ ಹಣ್ಣು ಮಟಾ ಕುಚಿಂಗ್‌. ಅದೇ ಹೆಸರು ಈ ಪಟ್ಟಣಕ್ಕೆ ಬಂದಿದೆ. ಭಾರತದ ಪ್ರಮುಖ ರೇವುಪಟ್ಟಣ ಕೊಚ್ಚಿನ್‌ನಿಂದಲೇ ಕುಚಿಂಗ್‌ ಎಂಬ ಹೆಸರು ಬಂದಿದೆ ಎನ್ನುವವರೂ ಇದ್ದಾರೆ. ಕುಚಿಂಗ್‌ ಈ ಭಾಗದಲ್ಲೇ ಅತ್ಯಂತ ಹೆಚ್ಚು ಜನವಸತಿ ಇರುವ, ನದೀ ತೀರದ ಪಟ್ಟಣ.

ಭಾರತೀಯರ ಪ್ರಭಾವ ಇಲ್ಲಿ ಎಷ್ಟಿದೆಯೆಂದರೆ ಇವತ್ತು ಕುಚಿಂಗ್‌ನ ಸ್ಥಳೀಯ ಖಾದ್ಯಗಳಲ್ಲಿ ಬಹುತೇಕ ಭಾರತೀಯ ಮೂಲದವು. ರೋಜಕ್‌, ಸೂಪ್‌ ಕಂಬಿಂಗ್‌, ರೋಟಿ ಕೆನಯ್‌, ತೆಹ್‌ ತಾರಿಕ್‌, ನಾಸಿ ಮಿನ್ಯಾಕ್‌– ಹೀಗೆ ಇಲ್ಲಿನ ಚೈನೀಸ್‌ ರೆಸ್ಟೋರೆಂಟ್‌ಗಳಲ್ಲಿ ‘ಮಲಯನ್‌ ಫುಡ್‌’ ಎಂದು ಸಿಗುವ ಬಹುತೇಕ ತಿಂಡಿಗಳ ಮೂಲ ಭಾರತೀಯವೇ. ಚೀನಾದ ಹೊಸ ವರ್ಷದಂದು ಭಾರತೀಯ ಚಕ್ಕುಲಿಯನ್ನೂ ಮಾಡಿ ಹಂಚುವ ಪದ್ಧತಿ ಇಲ್ಲಿದೆ!

ಆದರೆ ಕುಚಿಂಗ್‌ನಲ್ಲಿರುವ ಬಹುತೇಕ ಭಾರತೀಯರಿಗೆ ಇವತ್ತು ತಮ್ಮ ಸ್ಥಳೀಯ ಪೂರ್ವಜರ ಕೊಡುಗೆ ಮರೆತಂತಿದೆ. ಇಂಡಿಯಾ ಎಂದರೆ ಹಿಂದೀ ಸಿನಿಮಾಗಳನ್ನು ನೆನಪಿಸಿಕೊಳ್ಳುತ್ತಾರೆ. ತಮಿಳು ಮುಸ್ಲಿಮರು ಬಹುತೇಕ ಮಲಯನ್ ಮುಸ್ಲಿಮರಂತೆಯೇ ಆಗಿದ್ದಾರೆ. ಹಾಗೆಯೇ ಸರ್ಕಾರಿ ಹುದ್ದೆಗಳಲ್ಲಿ ಇರುವ ಹಲವಾರು ಹಿಂದೂಗಳು ಮಲಯನ್‌ ಸಂಸ್ಕೃತಿಯನ್ನೇ ಅಪ್ಪಿಕೊಂಡಿದ್ದಾರೆ.

ಮೂಲದಲ್ಲಿ ಮಲಯನ್‌ ಸಂಸ್ಕೃತಿ ಕೂಡಾ ಕಾಸ್ಮೊಪಾಲಿಟನ್‌ ಎನ್ನುವುದು ಕುತೂಹಲಕರ. ಇಸ್ಲಾಂ, ಬೌದ್ಧ ಧರ್ಮ, ತಾವೊಯಿಸಂ, ಕ್ರಿಶ್ಚಿಯಾನಿಟಿ, ಹಿಂದೂ ಧರ್ಮ ಎಲ್ಲವೂ ಒಂದೇ ಎರಕದಲ್ಲಿ ಸಂಸ್ಕೃತೀಕರಣಗೊಂಡ ವಿಶಿಷ್ಟ ಸಮಾಜ ಇಲ್ಲಿನದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT