ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಕು ಕಾರ್ಯಾಚರಣೆಗೆ ಬಲಿಯಾಗಬೇಡಿ: ಮೋದಿ

ವಿಶೇಷ ವರದಿ / ಪ್ರಜಾವಾಣಿ ವಾರ್ತೆ
Last Updated 3 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಬಿಜೆಪಿ ಯಶಸ್ಸಿನ ಬಗ್ಗೆ ಬಹುತೇಕರಿಗೆ ಹೊಟ್ಟೆ ಉರಿ ಇದೆ. ಯಾವುದಾದರೂ ವಿವಾದದಲ್ಲಿ ನಮ್ಮನ್ನು ಸಿಲುಕಿಸ­ಬೇಕೆಂದು ಅನೇಕರು ಕಾಯುತ್ತಿದ್ದಾರೆ. ಇಂಥವರ ಬಗ್ಗೆ ಅತಿ ಎಚ್ಚರಿಕೆಯಿಂದಿರಿ. ಕುಟುಕು ಕಾರ್ಯಾಚರಣೆಗೆ ಬಲಿಯಾಗಬೇಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಮಂತ್ರಿ ಮಂಡಳದ ಸದಸ್ಯರಿಗೆ ಸೋಮವಾರ ಎಚ್ಚರಿಕೆ ನೀಡಿದ್ದಾರೆ.

ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ಮಂತ್ರಿ ಮಂಡಳದ ಸದಸ್ಯರಿಗೆ ಔತಣಕೂಟ ಏರ್ಪಡಿಸಿದ್ದ ಪ್ರಧಾನಿ, ಸಚಿವರ ನಡವಳಿಕೆ ಹೇಗಿರಬೇಕು? ಸಾರ್ವಜನಿಕರ ಜತೆ ಹೇಗೆ ವ್ಯವಹರಿಸಬೇಕು. ಅಪರಿಚಿತರ ಜತೆ ಹೇಗೆ ನಡೆದು­ಕೊಳ್ಳಬೇಕೆಂದು ಎರಡು ಗಂಟೆ ಕಾಲ ಕಿವಿ ಮಾತು ಹೇಳಿದ್ದಾರೆ. ಹಿರಿಯ ನಾಯಕರಾದ  ಅರುಣ್‌ ಜೇಟ್ಲಿ, ಸುಷ್ಮಾ ಸ್ವರಾಜ್‌ ಮತ್ತು ರಾಜನಾಥ್‌ ಸಿಂಗ್‌ ಅವರೂ ಪ್ರಧಾನಿ ಜತೆಗೂಡಿ ಸಹೋದ್ಯೋಗಿಗಳಿಗೆ ನೀತಿ ಪಾಠ ಹೇಳಿದ್ದಾರೆ.

ದೂರವಾಣಿಯಲ್ಲಿ ಮಾತನಾಡು­ವಾಗ ಅತ್ಯಂತ ಜಾಗರೂಕರಾಗಿರಿ. ಅನಗತ್ಯವಾಗಿ ದೂರವಾಣಿಗಳಲ್ಲಿ ಮಾತನಾಡಬೇಡಿ. ನಿಮ್ಮ ಮಾತುಗಳನ್ನು ರೆಕಾರ್ಡ್‌ ಮಾಡಿ ಸಮಸ್ಯೆಗೆ ಸಿಕ್ಕಿಸಲಾಗುತ್ತದೆ. ನಿಮ್ಮನ್ನು ಹುಡುಕಿಕೊಂಡು ಬರುವವರ ಜತೆ ಹುಷಾರಾಗಿ ವ್ಯವಹರಿಸಿ ಎಂದಿದ್ದಾರೆ. ಬಿಜೆಪಿ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್‌ ವಿರುದ್ಧ ನಡೆದ
ಕುಟುಕು ಕಾರ್ಯಾಚರಣೆಯನ್ನು ಪ್ರಧಾನಿ ಸಚಿವರ ಗಮನಕ್ಕೆ ತಂದಿದ್ದಾರೆ.

ಅಧಿಕೃತ ಕಾರುಗಳಲ್ಲಿ ಅನಗತ್ಯವಾಗಿ ಕೆಂಪು ದೀಪಗಳನ್ನು ಉಪಯೋಗಿಸ­ಬೇಡಿ. ಪೊಲೀಸ್‌ ಬೆಂಗಾವಲು ಪಡೆಯ ವಾಹನಗಳನ್ನು ಅಗತ್ಯವಿಲ್ಲದೆ ಬಳಸಬೇಡಿ. ಕೆಂಪು ದೀಪಗಳನ್ನು ಯದ್ವಾತದ್ವಾ ಬಳಸುವುದನ್ನು ಕಂಡು ಜನ ರೋಸಿ ಹೋಗಿದ್ದಾರೆ. ಸುಪ್ರೀಂಕೋರ್ಟ್‌ ಕೂಡಾ ಅನೇಕ ಸಂದರ್ಭಗಳಲ್ಲಿ ಕೆಂಪು ದೀಪಗಳ ದುರ್ಬಳಕೆ ವಿರುದ್ಧ ತರಾಟೆಗೆ ತೆಗೆದುಕೊಂಡಿದೆ. ಇವೆಲ್ಲ ಸಂಗತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಸಾಧ್ಯವಾ­ದಷ್ಟು ಸಾಮಾನ್ಯರಂತೆ ಇರಲು ಪ್ರಯತ್ನಿಸಿ ಎಂದು ಮೋದಿ ಕಿವಿ ಮಾತು ಹೇಳಿದ್ದಾರೆ.

ವಿರೋಧ ಪಕ್ಷಗಳ ಮುಖಂಡರು ಜತೆ ಸ್ನೇಹ ಸಹಕಾರದಿಂದ ನಡೆಯಿರಿ. ಯಾವುದೇ ಪಕ್ಷದ ಸಂಸದರು ಬಂದು ದೂರು– ದುಮ್ಮಾನ ಹೇಳಿಕೊಂಡರೂ ಅದನ್ನು ಕೇಳಿ ಪರಿಹಾರ ಮಾಡಲು ಪ್ರಯತ್ನಿಸಿ. ರಾಜಕೀಯ ವಿರೋಧಿಗಳನ್ನು ಊಟ– ತಿಂಡಿಗೆ ಆಹ್ವಾನಿಸಿ ಹೃದಯ ಶ್ರೀಮಂತಿಕೆ ಪ್ರದರ್ಶಿಸಿ. ಇದರಿಂದ ನಾವು ಕಳೆದುಕೊಳ್ಳುವುದು ಏನೂ ಇಲ್ಲ. ಎಲ್ಲವನ್ನು ರಾಜಕಾರಣದ ನೆಲೆಯಲ್ಲಿ ನೋಡುವುದು ಬೇಡ ಎಂದು ಸಲಹೆ ಮಾಡಿದ್ದಾರೆ.

ಹಣಕಾಸು ಹಂಚಿಕೆ ಅಥವಾ ಯೋಜನೆ ಮಂಜೂರು ಮಾಡುವಾಗ ತಾರತಮ್ಯ ಮಾಡುವುದು ಬೇಡ. ಎಲ್ಲ ರಾಜ್ಯಗಳೂ ನಮಗೆ ಒಂದೇ. ಕುಟುಂಬದ ಸದಸ್ಯರಿಂದ ಬರುವ ಯಾವುದೇ ಶಿಫಾರಸಿಗೆ ಬೆಲೆ ಕೊಡಬೇಡಿ. ಅದನ್ನು ಬದಿಗಿಡಿ. ಅಧಿಕಾರಿಗಳ ಜತೆ ಅನಗತ್ಯ ಸಂಘರ್ಷ ಬೇಡ. ಸ್ನೇಹದಿಂದ ಕೆಲಸ ಮಾಡಿಸಿಕೊಳ್ಳಿ. ಯಾವುದೇ ಅಧಿಕಾರಿ ನಮ್ಮ ಅಧಿಕಾರದಲ್ಲಿ ಕೈ ಹಾಕಲು ಬಿಡಬೇಡಿ. ಕಿವಿ ಹಿಂಡಿ ಕೆಲಸ ಮಾಡಿಸಿಕೊಳ್ಳಿ ಎಂದು ಮೋದಿ ತಿಳಿಸಿದ್ದಾರೆ.

ಅಧಿಕಾರಿಗಳ ಬಳಿ ಇರುವ ನವನವೀನ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸಿ. ನಿಮ್ಮ ಇಲಾಖೆಯ ಕೆಲಸದಲ್ಲಿ ಅಗತ್ಯವಾದರೆ ತಜ್ಞರ ಸಲಹೆ ಪಡೆಯಿರಿ. ಒಟ್ಟಾರೆ ಸರ್ಕಾರಕ್ಕೆ ಒಳ್ಳೆಯ ಹೆಸರು ತನ್ನಿ. ರಾಜಕಾರಣಿಗಳು ಎಂದರೆ ಜನ ಮೂಗು ಮುರಿಯುತ್ತಾರೆ. ಈ ಸಂಸ್ಕೃತಿಯನ್ನು ಬದಲಾವಣೆ ಮಾಡಲು ಸಾಧ್ಯವಾದಷ್ಟು ಪ್ರಯತ್ನ ಮಾಡಿ ಎಂದು ಪ್ರಧಾನಿ ಕಿವಿ ಮಾತು ಹೇಳಿದ್ದಾರೆ.

ನಿಮಗೆ ಸಿಕ್ಕಿರುವ ಇಲಾಖೆಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಿ. ನಿಮಗೆ ಬರುವ ಪ್ರತಿಯೊಂದು ಕಡತವನ್ನು ಓದಿ ಸಹಿ ಹಾಕಿ. ಕಣ್ಣು ಮುಚ್ಚಿಕೊಂಡು ಸಹಿ ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಡಿ. ಹಿಂದಿನ ಯುಪಿಎ ಸರ್ಕಾರದ ಅವಾಂತರಗಳು ನಿಮಗೆ ಪಾಠವಾಗಲಿ ಎಂದು ಮೋದಿ ಸಚಿವರಿಗೆ ಹೇಳಿದ್ದಾರೆ. ಮೋದಿ ಕರೆದಿದ್ದ ಔತಣ ಕೂಟದ ಸಭೆ, ಹೊಸದಾಗಿ ಸಚಿವರಾದವರಿಗೆ ದಾರಿ ದೀಪವಾಗಿದೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT