ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲದ ಬೆನ್ನೇರುವ ವಿಜ್ಞಾನದ ಪ್ರಸಂಗಗಳು

ವಿಮರ್ಶೆ
Last Updated 27 ಜೂನ್ 2015, 19:30 IST
ಅಕ್ಷರ ಗಾತ್ರ

ಮಕ್ಕಳ ವಿಜ್ಞಾನ
(ಮಕ್ಕಳ ಮನವನ್ನು ಪುಲಕಿತಗೊಳಿಸುವ ವಿಜ್ಞಾನದ ಪತ್ತೇದಾರಿ ಕಥೆಗಳ ಸಂಕಲನ)

ಲೇ : ಡಾ. ಎಂ.ಜೆ. ಸುಂದರ್ ರಾಮ್
ಪ್ರ: ದೀಪ್ತಿ ಪ್ರಿಂಟರ್ಸ್, ಕನಕ ಕಾಂಪ್ಲೆಕ್ಸ್
ಪು:166
ರೂ. 75
50 ಅಡಿ ರಸ್ತೆ, ಶ್ರೀನಿವಾಸನಗರ, ಬೆಂಗಳೂರು.

ಕನ್ನಡದ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯವು ಬೆಳೆಯಬೇಕಾದಷ್ಟು ಬೆಳೆದಿಲ್ಲವೆಂಬುದು ಬಹು ಹಿಂದಿನ ಕೊರಗು. ಇನ್ನು ವಿಜ್ಞಾನ ಬರವಣಿಗೆಗಳನ್ನು ಸಾಹಿತ್ಯದ ಒಂದು ಪ್ರಕಾರ ಎಂದು ಗುರುತಿಸಲು ನಿರಾಕರಿಸುವ ಪರಿಸ್ಥಿತಿ ಈಗಲೂ ಉಂಟು. ಇದರಲ್ಲಿ ಸೃಜನಶೀಲತೆ ಇಲ್ಲ ಎಂಬುದು ಮೊದಲ ಆರೋಪ.

ಜನಸಾಮಾನ್ಯರು ಈ ವರ್ಗೀಕರಣದ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ. ವಿಜ್ಞಾನದಲ್ಲಿ ಉಲ್ಲಾಸ ಕಾಣುವ ಓದುಗ ವರ್ಗವೂ ಇದೆ, ಬುದ್ಧಿಗೆ ಅದು ಟಾನಿಕ್ ಎಂಬ ಹೆಗ್ಗಳಿಕೆಯೂ ಇದೆಯೆಂದು ಅದೇ ವರ್ಗ ಪ್ರತಿಪಾದಿಸುತ್ತದೆ. ಇಲ್ಲೂ ಮಕ್ಕಳಿಗಾಗಿ ವಿಜ್ಞಾನ ಬರೆದವರು ಕಡಿಮೆಯೇ.

ರಾಜರಾಣಿ ಕಥೆಯನ್ನು ಕೇಳಲು ಈಗಿನ ‘ಐ-ಪ್ಯಾಡ್’ ಮಕ್ಕಳು ಸಿದ್ಧರಿಲ್ಲ. ಅವರಿಗೇನಿದ್ದರೂ ‘ಜ್ಯುರಾಸಿಕ್ ಪಾರ್ಕ್’ನಂತಹ ಥ್ರಿಲ್ಲರುಗಳು ಬೇಕು. ಇಂಥ ಸ್ಥಿತ್ಯಂತರ ಪರಿಸರದಲ್ಲಿ ಅಧ್ಯಾಪಕರ ನೆಲೆಯಲ್ಲಿ ಮಕ್ಕಳ ಮನಸ್ಸನ್ನು ಗ್ರಹಿಸಿರುವ ಪ್ರೊ. ಎಂ.ಜೆ. ಸುಂದರ್ ರಾಮ್ ಒಂದು ವಿಶಿಷ್ಟ ಪ್ರಯೋಗ ಮಾಡಿದ್ದಾರೆ. ಮಕ್ಕಳನ್ನೂ ರಂಜಿಸಬಹುದಾದ ವಿಜ್ಞಾನ ಪ್ರಸಂಗಗಳನ್ನು ಹೆಕ್ಕಿ ಅವರಿಗೆ ನಿಲುಕುವ ತಿಳಿವಿನಲ್ಲಿ ಅಂಥ ಇಪ್ಪತ್ತು ಪ್ರಸಂಗಗಳನ್ನು ‘ಮಕ್ಕಳ ವಿಜ್ಞಾನ’ ಎಂಬ ಹೊತ್ತಗೆಯಲ್ಲಿ ತಂದಿದ್ದಾರೆ.

ಇವು ಯಾವೂ ಕಲ್ಪನೆಯ ಕಥೆಗಳಲ್ಲ. ವಿಜ್ಞಾನ ಜಗತ್ತಿನಲ್ಲಿ ಸಂದುಹೋದ, ಆದರೆ ನಮ್ಮ ಬದುಕನ್ನು ಬದಲಿಸಿದ ಮಹಾ ಪ್ರಸಂಗಗಳು. ಏನೋ ಮಾಡಲು ಹೋಗಿ ಏನೋ ಕಂಡುಹಿಡಿದ ನೈಜ ಸಂಗತಿಗಳು. ಇಂಗ್ಲಿಷ್‌ನಲ್ಲಿ ಇದನ್ನು ‘ಸೆರೆಂಡಿಪಿಟಿ’ ಎನ್ನುತ್ತಾರೆ. ಇದಕ್ಕಿರುವ ಪರ್ಷಿಯನ್ ಕಥೆಯ ಹಿನ್ನೆಲೆಯನ್ನು ಇದರಲ್ಲಿ ಹೇಳಿದ್ದಾರೆ.

ಇದೇ ಹೆಸರಿನ ಲೇಖನದಲ್ಲಿ ಸನ್ಯಾಸಿ ಬೆಕ್ಕು ಸಾಕಿದ ಕಥೆ, ಕೊನೆಗೆ ಅವನು ಸಂಸಾರಸ್ಥನಾಗಬೇಕಾದ ಅನಿವಾರ್ಯತೆ ಉಂಟಾದ ಪ್ರಸಂಗದಿಂದ ಪ್ರಾರಂಭಿಸಿ, ಮೀನುಗಳು ಏನೋ ಆಗಲು ಹೋಗಿ ರೆಕ್ಕೆ ಬರಿಸಿಕೊಂಡದ್ದು, ಪುಫ್ಪುಸಗಳನ್ನು ಸಂಪಾದಿಸಿದ್ದು, ನೆಲ-ಜಲಗಳ ನಡುವೆ ಬದುಕನ್ನು ಹಂಚಿಕೊಂಡದ್ದನ್ನು ಲಗುಬಗೆಯಿಂದ ಮಕ್ಕಳ ಮನಸ್ಸಿಗೆ ನಾಟುವಂತೆ ನಿರೂಪಿಸಿದ್ದಾರೆ.

ಕಚ್ಚಾ ಸೂಕ್ಷ್ಮದರ್ಶಕದಲ್ಲಿ ಮೊದಲು ಸೂಕ್ಷ್ಮಜೀವಿಗಳನ್ನು ಪತ್ತೆಹಚ್ಚಿದ ಲ್ಯುವೆನ್‌ಹಾಕ್‌ನ ಬದುಕು, ತನ್ನ ಸಿಂಬಳವನ್ನೇ ವೀಕ್ಷಿಸಿ ಸ್ಟಫೈಲೊಕಾಕಸ್ ಎಂಬ ಬ್ಯಾಕ್ಟೀರಿಯವನ್ನು ಕಂಡ ಫ್ಲೆಮಿಂಗ್, ಮುಂದೆ ಪೆನಿಸಿಲಿನ್ ಆವಿಷ್ಕರಿಸಿದ್ದು, ವಿಕಾಸವಾದದ ಪಿತಾಮಹ ಡಾರ್ವಿನ್ ‘ಬೀಗಲ್ ಯಾತ್ರೆ’ಗೆ ಹೊರಡಲು ಮಾವ ಜೋಸ್ ವೆಡ್ಜ್‌ವುಡ್ ಕುಮ್ಮಕ್ಕು ಕೊಟ್ಟಿದ್ದು (ಬಹುಶಃ ಆ ಪ್ರೇರಣೆ ದೊರೆಯದಿದ್ದರೆ ‘ಜೀವಿಸಂಕುಲಗಳ ಉಗಮ’ ಎಂಬ ಮೇರುಕೃತಿ ಜಗತ್ತಿಗೆ ಭ್ಯವಾಗುತ್ತಿತ್ತೋ ಇಲ್ಲವೋ), ನೈಟ್ರಸ್ ಆಕ್ಸೈಡ್ ಅನಿಲವನ್ನು ಅಂದರೆ ‘ನಗುವ ಅನಿಲ’ ಬಳಸಿ ಶಸ್ತ್ರಚಿಕಿತ್ಸೆ ಮಾಡಿದ ಭೂಪರ ಸಾಹಸಗಾಥೆ, ತೈಲಬಾವಿಯಿಂದ ವ್ಯರ್ಥಪದಾರ್ಥವೆಂದು ಬಿಸುಡಿದ್ದ ಮೇಣ ಮುಂದೆ ವ್ಯಾಸಲೀನ್ ಆಗಿ ಮಾರುಕಟ್ಟೆ ಪ್ರವೇಶಿಸಿದ್ದು– ಹೀಗೆ ವಿಜ್ಞಾನದ ಇತಿಹಾಸದ ಪುಟಗಳಿಂದ ಹೆಕ್ಕಿ ತೆಗೆದ ಹತ್ತಾರು ಪ್ರಸಂಗಗಳನ್ನು ಸುಂದರ್ ರಾಮ್ ಸುಂದರ ಮಾಲೆಯಾಗಿ ಪೋಣಿಸಿದ್ದಾರೆ.

ಕೃತಿಯ ಆರಂಭದಲ್ಲಿ ಸೇರಿಸಿರುವ ‘ಮೂಢನಂಬಿಕೆ’ ಮತ್ತು ‘ವೈಜ್ಞಾನಿಕ ಮನೋಭಾವ’ ಎಂಬ ಎರಡು ಲೇಖನಗಳ ಸೇರ್ಪಡೆ ಇಲ್ಲಿ ಅಸಾಂಗತ್ಯವನ್ನು ನಿರ್ಮಿಸುತ್ತದೆ. ಆ ಲೇಖನಗಳೇ ಪ್ರತ್ಯೇಕ ಕೃತಿಗಳಾಗುವಷ್ಟು ಚರ್ಚಿತವಾಗಿವೆ, ಅವನ್ನು ಅರ್ಥಮಾಡಿಕೊಳ್ಳಲು ಬೇಕಾದ ಮಾನಸಿಕ ಸಿದ್ಧತೆಯೇ ಬೇರೆ. ಒಬ್ಬ ಅನುಭವೀ ಅಧ್ಯಾಪಕ, ಲೇಖಕ, ಮಕ್ಕಳ ಮನಸ್ಸಿಗೆ ಯಾವ ಒತ್ತಡವನ್ನೂ ಹೇರದೆ ಹೇಗೆ ಪ್ರವೇಶಿಸಬಹುದು ಎನ್ನುವುದನ್ನು ‘ಮಕ್ಕಳ ವಿಜ್ಞಾನ’ ಕೃತಿ ತೋರಿಸಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT