ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲ ಹೊತ್ತು ತರಲಿರುವ ‘ಡೇವಿಡ್‌’

Last Updated 4 ಮೇ 2016, 19:30 IST
ಅಕ್ಷರ ಗಾತ್ರ

ಚೊಚ್ಚಿಲ ಸಿನಿಮಾ ‘ಡೇವಿಡ್‌’ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಹೊಸ ಅಲೆ ಎಬ್ಬಿಸುವ ತಯಾರಿ ನಡೆಸಿದ್ದಾರೆ ಭಾರ್ಗವ್‌ ಯೋಗಾಂಬರ್‌. ಚಿಕ್ಕಂದಿನಿಂದಲೂ ಸಿನಿಮಾ ನಿರ್ಮಾಣದ ಕನಸು ಕಾಣುತ್ತಿದ್ದವರು ಭಾರ್ಗವ್‌.

ಬಿ.ಕಾಂ. ಮುಗಿಸಿದ ನಂತರ ಆಸ್ಟ್ರೇಲಿಯನ್‌ ಸಿನಿಮಾ ‘ಟ್ಯಾಕ್ಸಿ ಕ್ಲಬ್‌’, ಬಾಲಿವುಡ್‌ ಚಿತ್ರ ‘ಉದ್ಯಾನ್‌’, ಕನ್ನಡದ ‘ರಂಗ್‌ಬಿರಂಗಿ’ ಸೇರಿದಂತೆ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು.

ಡಾನ್ಸ್‌ ಮಾಸ್ಟರ್‌ ಹಾಗೂ ನೃತ್ಯ ಸಂಯೋಜಕರಾಗಿಯೂ ಕೆಲಸ ಮಾಡಿ ಅನುಭವ ದಕ್ಕಿಸಿಕೊಂಡರು. ಒಂದು ವರ್ಷದ ಮೊದಲೇ ಸಿನಿಮಾಕ್ಕೆಂದು ಕಥೆ ಹೆಣೆದು, ಚಿತ್ರಕಥೆ ಸಿದ್ಧಪಡಿಸಿದ್ದರು. ಕಳೆದ ಮೂರು ತಿಂಗಳಿನಿಂದ ಗೆಳೆಯರ ಸಹಕಾರದೊಂದಿಗೆ ಸಿನಿಮಾ ನಿರ್ಮಾಣ ಚಟುವಟಿಕೆ ಆರಂಭಿಸಿದ್ದಾರೆ.

ಹಾಲಿವುಡ್‌ನಲ್ಲಿ ‘ಸ್ಟಾರ್‌ವಾರ್‌ 2’, ‘ಏಲಿಯನ್‌’, ‘ರಾಬಿನ್‌’ ಮುಂತಾದ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಸ್ಟೀವ್‌ ರೈಸ್‌ ಅವರ ಕೈಚಳಕವನ್ನು ಈ ಚಿತ್ರದ ಮೂಲಕ ಕನ್ನಡಕ್ಕೆ ಪರಿಚಯಿಸುವ ಆಲೋಚನೆ ಅವರಿಗಿದೆ.

ಹಾಲಿವುಡ್‌ ಸಿನಿಮಾಗಳಲ್ಲಿ ಸಂಕಲನಕಾರರಾಗಿ ಕೆಲಸ ಮಾಡಿರುವ  ಬ್ರೆಂಡನ್‌ ಅಮೆಡ್ಯೂರಿ  ಅವರಿಂದಲೇ ಸಂಕಲನ ಮಾಡಿಸಬೇಕು ಎಂಬ ಆಸೆಯನ್ನೂ ತಂಡ ಹೊಂದಿದೆ.

ಲಕ್ಕಿ ಅಲಿ ಅವರೊಂದಿಗೆ ತಂಡವು ಮಾತುಕತೆ ನಡೆಸಿದೆ. ಅವರು ಚಿತ್ರದಲ್ಲಿ ಅಭಿನಯಿಸುವ ನಿರೀಕ್ಷೆಯಿದೆ. ನಾಯಕ ನಟರಾಗಿ ‘ರಂಗ್‌ಬಿರಂಗಿ’ ಖ್ಯಾತಿಯ ಶ್ರೇಯಸ್‌ ಚಿಂಗಾ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಚಿತ್ರವೊಂದಕ್ಕೆ ಹಾಲಿವುಡ್‌ ದಿಗ್ಗಜರನ್ನು ಕರೆತರುವ ಮಹತ್ವಾಕಾಂಕ್ಷೆ ಭಾರ್ಗವ್‌ ಅವರಿಗಿದೆ. ಈ ಮೊದಲು ‘ಉದ್ಯಾನ್‌’ ಚಿತ್ರದಲ್ಲಿ ಸ್ಟೀವ್‌ ರೈಸ್‌ ಅವರೊಂದಿಗೆ ಕೆಲಸ ಮಾಡಿರುವ ಅನುಭವ ಅವರಲ್ಲಿ ಈ ಆತ್ಮವಿಶ್ವಾಸವನ್ನು ಹುಟ್ಟಿಸಿದೆ.

ಸಂಗೀತ ಆದಿತ್ಯ ರಾಕೇಶ್‌ ನೀಡಲಿದ್ದಾರೆ. ಇದೇ ಜುಲೈನಿಂದ ಚಿತ್ರೀಕರಣ ಆರಂಭಿಸುವ ಉತ್ಸಾಹ ತಂಡದಲ್ಲಿದೆ. ನಾಯಕಿಯ ಹುಡುಕಾಟ ಆರಂಭವಾಗಿದೆ. ‘ಡೇವಿಡ್‌ ಯಾರು ಎಂಬ ಕುತೂಹಲದ ಎಳೆ ಸಿನಿಮಾವನ್ನು ಇಡಿಯಾಗಿ ಆವರಿಸಲಿದೆ. ಇದೇ ಆಂಶ ಪ್ರೇಕ್ಷಕರನ್ನೂ ಹಿಡಿದಿಡಲಿದೆ. ಈ ಚಿತ್ರದಲ್ಲಿ ಪ್ರೀತಿಯೂ ಇದೆ, ಆಕ್ಷನ್‌, ಹಾಸ್ಯ, ಮನರಂಜನೆ, ಡ್ರಾಮಾ, ಥ್ರಿಲ್‌, ಸಸ್ಪೆನ್ಸ್‌ ಎಲ್ಲವೂ ಇರಲಿದೆ. ಎಲ್ಲ ರೀತಿಯ ಪ್ರೇಕ್ಷಕ ವರ್ಗಕ್ಕೆ ಈ ಚಿತ್ರ ಇಷ್ಟವಾಗಲಿದೆ ಎಂಬ ನಂಬಿಕೆ ನನ್ನದು’ ಎನ್ನುತ್ತಾರೆ ಭಾರ್ಗವ್‌.

‘ವಿಭಿನ್ನ ಸಿನಿಮಾ ಮಾಡಬೇಕು ಎಂದುಕೊಂಡಿದ್ದೇವೆ. ಐಫೋನ್‌ 6ಎಸ್‌ನಲ್ಲಿ ಟೀಸರ್ ಚಿತ್ರೀಕರಿಸಿದ್ದೇವೆ. ಫಣಿದರ್‌ ರೇವಣೂರು ಕ್ಯಾಮೆರಾ ನಿರ್ವಹಿಸಿದ್ದಾರೆ. ಸಿನಿಮಾ ಚಿತ್ರೀಕರಣಕ್ಕೆ ಸ್ಟೀವ್‌ ರೈಸ್‌ ಅವರು ಎಸ್ಐ2ಕೆ ಕ್ಯಾಮೆರಾ ಬಳಸಲಿದ್ದಾರೆ. ಕನ್ನಡ ಸಿನಿಮಾಗಳಿಗೆ ಇಂಥ ಕ್ಯಾಮೆರಾ ಬಳಸುತ್ತಿರುವುದು ಇದೇ ಮೊದಲು’ ಎಂದು ಹೇಳಿಕೊಳ್ಳುತ್ತಾರೆ ಶ್ರೇಯಸ್‌.

ಸಿನಿಮಾದ ಟೀಸರ್‌ಗೆ ಫೇಸ್‌ಬುಕ್‌ನಲ್ಲಿ ಐದು ಸಾವಿರ ಲೈಕ್‌ ಹಾಗೂ ಯೂಟ್ಯೂಬ್‌ನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಲೈಕ್‌ಗಳು ಸಿಕ್ಕಿವೆ. ಡೇವಿಡ್‌ ಟೀಸರ್‌ ವೀಕ್ಷಿಸಲು: goo.gl/l40c41 ಲಿಂಕ್ ಕ್ಲಿಕ್ ಮಾಡಿ.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT