ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಪ್ಪಳಿ ಕವಿಮನೆ: ಪ್ರಶಸ್ತಿಗಳ ಕಳವು

Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿ ಕವಿಮನೆಯಲ್ಲಿ ಸೋಮವಾರ ರಾತ್ರಿ ಅವರಿಗೆ ಸಂದಿದ್ದ ಪದ್ಮವಿಭೂಷಣ, ಪದ್ಮಭೂಷಣ ಪ್ರಶಸ್ತಿಗಳನ್ನು ಕಳವು ಮಾಡಲಾಗಿದೆ.

ಸೋಮವಾರ ರಾತ್ರಿ ಸುಮಾರು 8.30ರ ಸುಮಾರಿಗೆ ರಾತ್ರಿ ಪಾಳಿ ಸಿಬ್ಬಂದಿ ಕಾವಲಿಗೆ ಬರುವ ಹೊತ್ತಿಗೆ ಕವಿಮನೆಯೊಳಗಿಂದ ಕೇಳಿಬರುತ್ತಿದ್ದ ಸದ್ದಿನಿಂದ ಗಾಬರಿಗೊಂಡಿದ್ದಾರೆ. ಸ್ಥಳೀಯರನ್ನು ಕರೆದುಕೊಂಡು ಮನೆಯೊಳಗೆ ಪ್ರವೇಶ ಮಾಡುವಷ್ಟರಲ್ಲೇ ಕಳ್ಳರು ಪರಾರಿಯಾಗಿದ್ದಾರೆ ಎಂದು ಭದ್ರತಾ ಸಿಬ್ಬಂದಿ ಮಂಜುನಾಥ್‌ ತಿಳಿಸಿದರು.

ಕಳ್ಳರು ಪುಸ್ತಕ ಮಾರಾಟ ಮಳಿಗೆಯಲ್ಲಿದ್ದ  ₹ 1000 ನಗದು ಕೂಡ ಕಳವು ಮಾಡಿದ್ದಾರೆ. ಕವಿಮನೆಗೆ ಹೊಂದಿಕೊಂಡಿರುವ ಮನೆಯ ಹಿಂಬದಿಯಲ್ಲಿನ ಅಡಿಕೆ ಚಪ್ಪರಕ್ಕೆ ಹಾಕಿದ್ದ ಏಣಿಯನ್ನು ಬಳಸಿಕೊಂಡು ಮನೆಗೆ ನುಗ್ಗಿದ ಕಳ್ಳರು ಚೌಕಿಮನೆ ವರಾಂಡದಲ್ಲಿ ಇರಿಸಿದ್ದ ತಿಜೋರಿಯನ್ನು ಒಡೆಯಲು ಪ್ರಯತ್ನ ನಡೆಸಿದ್ದಾರೆ. ಕವಿಮನೆಯೊಳಗೆ ಅಳವಡಿಸಿದ್ದ 6 ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಮಾಡಿದ್ದಾರೆ. ಅಷ್ಟೇ ಅಲ್ಲ, ಸಿಸಿ ಟಿವಿ ಕ್ಯಾಮೆರಾ ವೀಕ್ಷಣೆಗೆ ಇಟ್ಟಿದ್ದ ಟಿವಿಯನ್ನು ಸಹ ಒಡೆದುಹಾಕಿದ್ದಾರೆ.
*
ರಾಷ್ಟ್ರಕವಿ ಕುವೆಂಪು ಅವರ ಮನೆಯಲ್ಲಿ ಕಳ್ಳತನ ನಡೆದಿರುವ ಪ್ರಕರಣ ಕುವೆಂಪು ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ರಾಷ್ಟ್ರಕವಿ ಕುವೆಂಪು ಅವರ ಕವಿಮನೆಯನ್ನು 2001ರಲ್ಲಿ ಸರ್ಕಾರ ವಶಕ್ಕೆ ಪಡೆದು, ನವೀಕರಿಸಿದ ನಂತರ ಇಲ್ಲಿಯವರೆಗೆ ಇಂತಹ ಯಾವುದೇ ಅನಪೇಕ್ಷಿತ ಘಟನೆಗಳು ನಡೆದಿರಲಿಲ್ಲ.

‘ವರ್ಷದಲ್ಲಿ ಸುಮಾರು 1,20 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಒಂದು ದಿನವೂ ಕೂಡ ಈ ಕೇಂದ್ರವನ್ನು ಮುಚ್ಚಿಲ್ಲ. ಕನ್ನಡ ಸಾರಸ್ವತ ಲೋಕ ಕುಪ್ಪಳಿಯನ್ನು ಕಟ್ಟಿ ಬೆಳೆಸಿದೆ. ಇನ್ನೂ ಹೆಚ್ಚಿನ ಭದ್ರತೆಯನ್ನು ನೀಡುವ  ನಿಟ್ಟಿನಲ್ಲಿ ಕ್ರಮ . ನಿರ್ಜನ ಪ್ರದೇಶ ಇದಾಗಿದ್ದು ಇಂತಹ ಘಟನೆಯನ್ನು ನಾವು ನಿರೀಕ್ಷಿಸಿರಲಿಲ್ಲ’ ಎಂದು ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್‌ ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳ್ಳರ ಸುಳಿವು ಸಿಕ್ಕಿದ್ದು ಆದಷ್ಟು ಬೇಗನೇ ಪತ್ತೆಹಚ್ಚಲಾಗುವುದು ಎಂದರು. ಆರೋಪಿಗಳನ್ನು ಪತ್ತೆಗಾಗಿ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ  ವಿಷ್ಣುವರ್ಧನ್ ಹಾಗೂ ತೀರ್ಥಹಳ್ಳಿ ಡಿವೈಎಸ್‌ಪಿ ರಾಮಚಂದ್ರ ನಾಯಕ್‌ ಅವರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿದೆ.

ಸ್ಥಳಕ್ಕೆ ಶ್ವಾನದಳವೂ ಬಂದಿತ್ತು. ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳವು ಸುದ್ದಿ ಹರಡುತ್ತಿದ್ದಂತೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಖಜಾಂಚಿ ದೇವಂಗಿ ಮನುದೇವ್‌ ಸೇರಿದಂತೆ ಅನೇಕರು ಕವಿಮನೆಗೆ ಭೇಟಿ ನೀಡಿದರು.

ಒಬ್ಬನಿಂದಲೇ ನಡೆದ ಕೃತ್ಯ: ಕಳವು ಪ್ರಕರಣದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯನ್ನು ಜಿಲ್ಲಾ ಪೊಲೀಸರು ಬಿಡುಗಡೆ ಮಾಡಿದ್ದು, ಇಡೀ ಪ್ರಕರಣದ ಸೂತ್ರದಾರಿ ಒಬ್ಬನೇ ಎನ್ನುವ ಅಂಶ ಬೆಳಕಿಗೆ ಬಂದಿದೆ.

ಕಾವಲುಗಾರನ ಮೇಲೆ ಸಂಶಯ: ಕವಿಮನೆಗೆ ಇಬ್ಬರು ಕಾವಲುಗಾರರಿದ್ದು, ಅದರಲ್ಲಿ ಒಬ್ಬ ಈ ಕೃತ್ಯ ಎಸಗಿರಬಹುದು ಎಂಬ ಅನುಮಾನ ಮಂಗಳವಾರ ಸಂಜೆಯ ವೇಳೆಗೆ ಮೂಡಿದ್ದು, ಪೊಲೀಸರು ಆ ನಿಟ್ಟಿನಲ್ಲೂ ತನಿಖೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT