ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿಗಳಿಗೆ ಈ ಹುಲ್ಲು

Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ಗೋಮಾಳ, ಕಾಡು ಮತ್ತು ಬಯಲುಗಳು ಈಗ ಕಾಣೆಯಾಗಿವೆ. ಇದರಿಂದ ದನ ಕರುಗಳಂತೆ ಕುರಿ, ಆಡು, ಮೇಕೆಗಳಿಗೂ ಮೇಯಲು ಜಾಗವಿಲ್ಲ. ಆದ್ದರಿಂದ ರೈತರು ಕುರಿ, ಮೇಕೆಗಳಿಗೆ ಮನೆಯಲ್ಲಿಯೇ ಮೇವಿನ ಬೆಳೆ ನೀಡಿ ಸಲಹುತ್ತಿದ್ದಾರೆ. ಮುಸುಕಿನ ಜೋಳ, ಕೋ-3 ಮತ್ತು ಕೋ- 4 ಹುಲ್ಲುಗಳು ಉತ್ತಮ ಇಳುವರಿ ಕೊಟ್ಟರೂ ಅವು ಕುರಿ, ಆಡು ಮತ್ತು ಮೇಕೆಗಳಿಗೆ ಅಷ್ಟು ಸೂಕ್ತವಾಗಿರುವುದಿಲ್ಲ. ಇವುಗಳ ಕಾಂಡದ ಭಾಗವು ದಪ್ಪವಾಗಿ ಇರುವ ಕಾರಣ ಕುರಿ, ಮೇಕೆಗಳು ಎಲೆ ಭಾಗ ಮಾತ್ರ ತಿಂದು ಕಾಂಡವನ್ನು ಹಾಗೆಯೇ ಬಿಡುತ್ತವೆ.

ಹಾಗಿದ್ದರೆ ಇವುಗಳಿಗೆ ಉತ್ತಮವಾದ ಮೇವಿನ ಬೆಳೆ ಯಾವುದು, ಅದರ ಪ್ರಯೋಜನಗಳೇನು ಎಂಬ ಬಗ್ಗೆ ಹಾಸನ ಕಂದಲಿ ವಿಭಾಗದ ಕೃಷಿ ವಿಜ್ಞಾನ ಕೇಂದ್ರ ಬೇಸಾಯ ಶಾಸ್ತ್ರ ವಿಷಯ ತಜ್ಞೆ ಡಾ.ಬಿ.ಎಸ್‌.ಲಲಿತಾ ಇಲ್ಲಿ ಮಾಹಿತಿ ನೀಡಿದ್ದಾರೆ.

*ಕುರಿ, ಆಡು, ಮೇಕೆಗಳಿಗೆ ಸೂಕ್ತವಾದ ಮೇವಿನ ಬೆಳೆಗಳು ಯಾವುವು?
ಕಾಂಗೂ- ಸಿಗ್ನಲ್ ಹುಲ್ಲು, ಗ್ರೀನ್‌ ಪ್ಯಾನಿಕ್‌ ಹುಲ್ಲು, ಗಿನಿ ಹುಲ್ಲು ಮತ್ತು ರೋಡ್ಸ್ ಹುಲ್ಲುಗಳು ಸೂಕ್ತ ಬೆಳೆಗಳು.

*ಕಾಂಗೂ- ಸಿಗ್ನಲ್ ಹುಲ್ಲಿನ ಮಾಹಿತಿ ನೀಡಿ.
ಇದು ಸುಲಭವಾಗಿ ಜೀರ್ಣವಾಗುವ ರುಚಿಕರವಾದ ಪೌಷ್ಟಿಕ ಮೇವು.  ಈ  ಹುಲ್ಲಿನಲ್ಲಿ ಕಡ್ಡಿ ಅತಿ ಕಡಿಮೆ ಇರುವುದರಿಂದ ಮತ್ತು ಗಿಡ ಮೃದುವಾಗಿರುವುದರಿಂದ ಪೂರ್ತಿ ಭಾಗ ಉಪಯೋಗವಾಗುತ್ತದೆ. ಇದನ್ನು ಹಸಿರು ಮೇವಾಗಿ, ರಸಮೇವಾಗಿ ಅಥವಾ ಒಣ ಮೇವಿನ ರೂಪದಲ್ಲಾದರೂ ಉಪಯೋಗಿಸಬಹುದು. ಬದುಗಳ ಮೇಲೆಯೂ ಸುಲಭವಾಗಿ ಇದನ್ನು ಬೆಳೆಯಬಹುದು. ಹೆಚ್ಚು ಮಣ್ಣು ಮತ್ತು ನೀರು ಇರುವ ಪ್ರದೇಶದಲ್ಲಿ ಮಣ್ಣಿನ ಬಂಧಕವಾಗಿ ಅಥವಾ ಅಡಿಕೆ ಮತ್ತು ತೆಂಗಿನ ತೋಟಗಳ ಮಧ್ಯೆ ನೆರಳಿನಲ್ಲೂ ಬೆಳೆಯಬಹುದು.

‌‌ಈ ಬೆಳೆಯನ್ನು ಬೀಜದಿಂದ ಹಾಗೂ ಬೇರಿನಿಂದ ಬೆಳೆಯಬಹುದು. ಬೀಜವನ್ನು ಒಂದು ವರ್ಷದ ಬೆಳೆಯಿಂದ ಪಡೆಯಬಹುದು. ಬೇರಿನಿಂದ ಹುಲ್ಲು ಬೆಳೆಸುವುದಾದರೆ ಬೇರಿನ ತುಂಡುಗಳ ಮೇಲ್ಭಾಗದಲ್ಲಿರುವ ಹಸಿರು ಭಾಗವೆಲ್ಲಾ ತೆಗೆದುಹಾಕಿ ನಾಟಿ ಮಾಡಬೇಕು. ನಾಟಿ ಮಾಡಿದ 60 ದಿನಗಳಲ್ಲಿ ಬೆಳೆ ಕಟಾವಿಗೆ ಬರುತ್ತದೆ. ನಂತರ ಪ್ರತಿ 40 ರಿಂದ 45 ದಿನಗಳಲ್ಲಿ ಕಟಾವು ಮಾಡಬಹುದು. ಚೆನ್ನಾಗಿ ಬೆಳೆದರೆ ಮಣ್ಣಿನ ಫಲವತ್ತತೆಯನ್ನು ಆಧರಿಸಿ ವರ್ಷಕ್ಕೆ 7ರಿಂದ 8 ಬಾರಿ ಕಟಾವು ಮಾಡಬಹುದು. ಒಂದು ಎಕರೆ ನೀರಾವರಿ ಪ್ರದೇಶದಲ್ಲಿ 23 ರಿಂದ 30 ಟನ್‌ ಹಾಗೂ ಮಳೆಯಾಶ್ರಿತದಲ್ಲಿ 12ರಿಂದ 14 ಟನ್‌ ಕಾಂಗೂ ಸಿಗ್ನಲ್ ಹುಲ್ಲು ಬೆಳೆಯಬಹುದು.

*ಗ್ರೀನ್ ಪ್ಯಾನಿಕ್ ಹುಲ್ಲಿನ ವೈಶಿಷ್ಟ್ಯಗಳೇನು?
ಈ ಹುಲ್ಲು ಶೀಘ್ರವಾಗಿ ಬೆಳೆಯುವ ರುಚಿಕರವಾದ ಹುಲ್ಲು. ನೀರಾವರಿ ಇದ್ದಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು. ಕಾಂಡ ಮತ್ತು ಎಲೆಗಳು ಮೃದುವಾಗಿರುವುದರಿಂದ ಪೂರ್ತಿ ಗಿಡ ಉಪಯೋಗವಾಗುತ್ತದೆ. ರಸ ಮೇವು, ಹಸಿರು ಮೇವು ಮತ್ತು ಒಣ ಮೇವಾಗಿ ಸಹ ರಾಸುಗಳಿಗೆ ಕೊಡಬಹುದು.

ಅಷ್ಟೇ ಅಲ್ಲದೆ ತೋಟಗಾರಿಕೆ ಬೆಳೆಗಳಲ್ಲಿ ಸಹ ಉತ್ತಮವಾಗಿ ಬರುತ್ತದೆ. ಮರಳು ಮಿಶ್ರಿತ ಮಣ್ಣಿನಲ್ಲಿ ಅಧಿಕ ಇಳುವರಿಯನ್ನು ಪಡೆಯಬಹುದು. ಅತಿ ಹುಳಿ ಮತ್ತು ಚೌಳು ಭೂಮಿಯಲ್ಲಿ ಬೆಳೆಯಬೇಕಾದರೆ ಸುಣ್ಣ ಹಾಗೂ ರಂಜಕ ಸತ್ವಗಳನ್ನು ಪೂರೈಸಬೇಕಾಗುತ್ತದೆ.
ಮೊದಲು ನಾಟಿ ಮಾಡಿದಾಗ 40 ರಿಂದ 45 ದಿನಗಳಲ್ಲಿ ಕಟಾವಿಗೆ ಬರುತ್ತದೆ. ನಂತರ ಪ್ರತಿ 30 ದಿನಗಳಿಗೊಮ್ಮೆ ಕಟಾವು ಮಾಡಬಹುದು. ನೀರಾವರಿ ಆಶ್ರಯದಲ್ಲಿ 10 ರಿಂದ 12 ಬಾರಿ ಹಾಗೂ ಮಳೆಯಾಶ್ರಯದಲ್ಲಿ 6 ರಿಂದ 8 ಬಾರಿ ಹುಲ್ಲು ಕೊಯ್ಲು ಮಾಡಬಹುದು. ಈ ಹುಲ್ಲಿನಲ್ಲಿ ಕವಲೊಡೆಯುವ ಶಕ್ತಿ ಕಡಿಮೆ ಇರುವುದರಿಂದ ಮಳೆಯಾಶ್ರಿತದಲ್ಲಿ 14 ರಿಂದ 16 ಟನ್ ಮತ್ತು ನೀರಾವರಿ ಪ್ರದೇಶಗಳಲ್ಲಿ 36 ರಿಂದ 40 ಟನ್ ಪಡೆಯಬಹುದು.

*ಏನಿದು ಗಿನಿ ಹುಲ್ಲು...?
ಇದು ಒಂದು ಬಹುವಾರ್ಷಿಕ ಬೆಳೆ. ಎಲ್ಲಾ ಪ್ರದೇಶದಲ್ಲಿ ಬೆಳೆಯಬಹುದಾದ, ಉಷ್ಣ ವಲಯದ ಪ್ರದೇಶದಲ್ಲಿ ಅಧಿಕ ಇಳುವರಿ ಪಡೆಯಬಹುದಾದ ಹಸಿರು ಮೇವು. ಮರಳು ಮಿಶ್ರಿತ ಗೋಡು ಮಣ್ಣಿನ ಪ್ರದೇಶದಲ್ಲಿ ಬೆಳೆಯಲು ಸೂಕ್ತ. ಆದರೆ ಹುಳಿ ಹಾಗೂ ಕ್ಷಾರಯುಕ್ತ ಮಣ್ಣು ಅಥವಾ ಚೌಳು ಪ್ರದೇಶ ಯೋಗ್ಯವಲ್ಲ.

ಹುಲ್ಲು 1–1.5 ಮೀಟರ್ವರೆಗೆ ಹುಲುಸಾಗಿ ಬೆಳೆಯುತ್ತದೆ. ಇದನ್ನು ಹಸಿರು ಮೇವು, ರಸ ಮೇವು ಮತ್ತು ಒಣ ಹುಲ್ಲಾಗಿ ಉಪಯೋಗಿಸಬಹುದು. ಈ ಹುಲ್ಲು ಬೀಜ ಮತ್ತು ಬೇರಿನ ತುಂಡುಗಳಿಂದ ಪ್ರಸಾರ ಮಾಡಬಹುದು. ಇದನ್ನು ಬದುಗಳ ಮೇಲೆ, ತೋಟಗಾರಿಕೆ ಬೆಳೆಗಳ ಮಧ್ಯೆ ಮತ್ತು ಅಳಿದುಳಿದ ಜಮೀನಿನಲ್ಲಿ ಉತ್ತವಾಗಿ ಬೆಳೆಯಬಹುದು. ನಾಟಿ ಮಾಡಿದ ಮೊದಲು 60 ರಿಂದ 70 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ನಂತರ ಪ್ರತಿ 30 ರಿಂದ 35 ದಿನ ಗಳಿಗೊಮ್ಮೆ ಕಟಾವು ಮಾಡಬಹುದು. ಫಲವತ್ತಾದ ಭೂಮಿಯಲ್ಲಿ ಎಕರೆಗೆ 36 ರಿಂದ 40 ಟನ್ ಹಾಗೂ ಮಳೆಯಾಶ್ರಯದಲ್ಲಿ 14 ರಿಂದ 16 ಟನ್ ಇಳುವರಿ ಪಡೆಯಬಹುದು.

*ರೋಡ್ಸ್ ಹುಲ್ಲಿನ ವಿವರ ನೀಡಿ.
ಬಹುವಾರ್ಷಿಕ ಹುಲ್ಲು ಮತ್ತು ಅತಿ ಶೀಘ್ರವಾಗಿ ಬೆಳೆಯುವ ಹಾಗೂ ಹೆಚ್ಚು ಕವಲೊಡೆಯುವ, ನೀರು ಕಡಿಮೆಯಾದರೂ ತಡೆದುಕೊಳ್ಳುವ ಶಕ್ತಿ ಇದೆ. ಉತ್ತಮ ಹಸಿರು ಮತ್ತು ಒಣ ಮೇವಾಗಿದೆ. ಇದು ರುಚಿಕರವಾದ, ಪೌಷ್ಟಿಕಾಂಶಗಳಿಂದ ಕೂಡಿದ ಉತ್ತಮ ಮೇವೆನಿಸಿದೆ. ಮರಳು, ಮೆಕ್ಕಲು ಹಾಗೂ ಚೌಳು ಭೂಮಿಯಲ್ಲೂ ಈ ಹುಲ್ಲನ್ನು ಬೆಳೆಯಬಹುದು. ಈ ಹುಲ್ಲು ನಾಟಿ ಮಾಡಿದ 60 ರಿಂದ 70 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ನಂತರ ಪ್ರತಿ 30 ರಿಂದ 35 ದಿನಗಳಿಗೊಮ್ಮೆ ಕಟಾವು ಮಾಡಬಹುದು. ಫಲವತ್ತಾದ ಭೂಮಿಯಲ್ಲಿ ಎಕರೆಗೆ 32 ರಿಂದ 36 ಟನ್ ಹಾಗೂ ಮಳೆಯಾಶ್ರಯದಲ್ಲಿ 12 ರಿಂದ 14 ಟನ್ ಇಳುವರಿ ಪಡೆಯಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT