ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಪತಿ ದಿನೇಶ್‌ ಸಿಂಗ್‌ ರಾಜೀನಾಮೆ

ದೆಹಲಿ ವಿವಿ–ಯುಜಿಸಿ ಜಟಾಪಟಿ
Last Updated 24 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್): ನಾಲ್ಕು ವರ್ಷದ ಪದವಿ ಶಿಕ್ಷಣ ಕಾರ್ಯಕ್ರಮ (ಎಫ್‌ಐಯುಪಿ­–ಫೋರ್‌ ಇಯರ್‌ ಅಂಡರ್‌ ಗ್ರಾಜುಯೇಟ್‌ ಪ್ರೋಗ್ರಾಮ್‌) ರದ್ದು ಮಾಡುವಂತೆ  ವಿಶ್ವ­ವಿದ್ಯಾಲಯ ಅನು­ದಾನ ಆಯೋಗ (ಯುಜಿಸಿ) ನೀಡಿದ ನಿರ್ದೇಶನ­ವನ್ನು ಪ್ರತಿಭಟಿಸಿ ದೆಹಲಿ ವಿಶ್ವವಿದ್ಯಾಲಯದ ಕುಲಪತಿ ದಿನೇಶ್‌ ಸಿಂಗ್ ಮಂಗಳವಾರ ರಾಜೀನಾಮೆ ನೀಡಿದರು.

ಈ ಬೆಳವಣಿಗೆ­ಯಿಂದಾಗಿ, ಯುಜಿಸಿ ಹಾಗೂ ದೆಹಲಿ ವಿವಿ ನಡುವಣ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.

‘ಎಫ್‌ಐಯುಪಿ ವಿಷಯವಾಗಿ ವಿವಿ ಹಾಗೂ ಯುಜಿಸಿ ನಡುವಣ ಜಟಾಪಟಿ ಬಳಿಕ ಸಿಂಗ್‌ ತಮ್ಮ ಸ್ಥಾನಕ್ಕೆ ರಾಜೀ­ನಾಮೆ ನೀಡಿದ್ದಾರೆ’ ಎಂದು ವಿವಿ ಮಾಧ್ಯಮ ಸಂಚಾಲಕ ಮಲಯ್‌ ನೀರವ್‌ ಹೇಳಿದ್ದಾರೆ.

ವಿವಾದಕ್ಕೆ ಕಾರಣವಾಗಿರುವ ನಾಲ್ಕು ವರ್ಷಗಳ ಪದವಿ ಶಿಕ್ಷಣ ಕಾರ್ಯಕ್ರಮ ರದ್ದುಪಡಿಸಿ, ಮೂರು ವರ್ಷದ ಪದವಿಗೆ ಮಾತ್ರ ಪ್ರವೇಶ ನೀಡುವಂತೆ ದೆಹಲಿ ವಿವಿ ಹಾಗೂ ಅದರ ವ್ಯಾಪ್ತಿಯ 64 ಕಾಲೇಜು­ಗಳಿಗೆ ಯುಜಿಸಿ ನಿರ್ದೇಶನ ನೀಡಿತ್ತು. ಇದಕ್ಕೆ ಸೊಪ್ಪುಹಾಕದ ಸಿಂಗ್‌, ನಿರ್ಧಾರ ಹಿಂತೆಗೆ­ದು­­ಕೊಳ್ಳುವುದಿಲ್ಲ ಎಂದು ಪಟ್ಟುಹಿಡಿದಿದ್ದರು.

ಯುಜಿಸಿಯ ಈ ನಿರ್ದೇಶನವು ವಿವಿ ಸ್ವಾಯತ್ತತೆ ಮೇಲಿನ ಅತಿಕ್ರಮಣ ಎಂದು ಸಿಂಗ್‌ ದೂರಿದ್ದರು. ಈ ಅಸಮಾ­ಧಾನದಿಂದಲೇ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಈ ವಿವಾದದಲ್ಲಿ ಮಧ್ಯ­ಪ್ರವೇ­ಶಿ­ಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಿಂದೇಟು ಹಾಕಿತ್ತು. ‘ವಿವಾದವನ್ನು ಸೌಹಾರ್ದ­ಯುತ­ವಾಗಿ ಬಗೆಹರಿಸಿಕೊಳ್ಳಿ’ ಎಂದು ವಿವಿ ಹಾಗೂ ಯುಜಿಸಿಗೆ ತಾಕೀತು ಮಾಡಿ  ಸಚಿವಾಲಯ ಕೈತೊಳೆದುಕೊಂಡಿತ್ತು.

ಮಧ್ಯಪ್ರವೇಶಿಸಲು ‘ಸುಪ್ರೀಂ’ ನಕಾರ
ನವದೆಹಲಿ (ಪಿಟಿಐ): ಎಫ್‌ಐಯುಪಿ ವಿಷಯ­ವಾಗಿ ಯುಜಿಸಿ ಹಾಗೂ ದೆಹಲಿ ವಿವಿ ನಡುವಣ ಸಂಘರ್ಷದಲ್ಲಿ ಮಧ್ಯಪ್ರವೇಶಿ­ಸಲು ಸುಪ್ರೀಂ­ಕೋರ್ಟ್‌ ಮಂಗಳವಾರ ನಿರಾಕರಿಸಿದೆ. ಎಫ್‌ಐಯುಪಿ ರದ್ದತಿಗೆ ಯುಜಿಸಿ ನೀಡಿದ್ದ ನಿರ್ದೇಶನವನ್ನು ಪ್ರಶ್ನಿಸಿ  ಪ್ರೊ.ಆದಿತ್ಯ­ನಾರಾಯಣ ಮಿಶ್ರಾ ಸುಪ್ರೀಂ­ಕೋರ್ಟ್‌ ಮೊರೆ ಹೋಗಿ­ದ್ದರು. ಈ ವಿಷಯವಾಗಿ ದೆಹಲಿ ಹೈಕೋರ್ಟ್ ಮೊರೆ ಹೋಗು­ವಂತೆ ಮಿಶ್ರಾ ಅವರಿಗೆ ಸುಪ್ರೀಂ­ಕೋರ್ಟ್‌ ಸೂಚಿಸಿದೆ.

ಪ್ರತಿಭಟನೆ ಕೈಬಿಟ್ಟ ವಿದ್ಯಾರ್ಥಿಗಳು: ನಾಲ್ಕು ವರ್ಷಗಳ ಪದವಿ ಯೋಜನೆ­ಯನ್ನು ರದ್ದು ಮಾಡುವುದಿಲ್ಲ ಎಂದು ವಿಶ್ವ­­ವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ಭರವಸೆ ನೀಡಿದ್ದರಿಂದ ವಿದ್ಯಾರ್ಥಿ­ಗಳು ಮಂಗಳವಾರ ಪ್ರತಿಭಟನೆ ಕೈಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT