ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಳಿತಲ್ಲೇ ಮತದಾನ ವೀಕ್ಷಣೆ

Last Updated 16 ಏಪ್ರಿಲ್ 2014, 9:15 IST
ಅಕ್ಷರ ಗಾತ್ರ

ತುಮಕೂರು: ಚುನಾವಣಾ ಅಕ್ರಮ, ಅಹಿತಕರ ಘಟನೆಗಳನ್ನು ನಿಯಂತ್ರಿಸುವ ಸಲುವಾಗಿ ಈಗಾ­ಗಲೇ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಮತ­ದಾನದ ಪೂರ್ಣ ವಿಡಿಯೊ ಚಿತ್ರೀಕರಣ ಮಾಡುತ್ತಿರುವ ಚುನಾವಣಾ ಆಯೋಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆಯ್ದ ಮತಗಟ್ಟೆ ಕೇಂದ್ರಗಳಲ್ಲಿ ‘ವೆಬ್ ಕಾಸ್ಟಿಂಗ್’ ಮೊರೆ ಹೋಗಿದೆ.

ವೆಬ್‌ ಕಾಸ್ಟಿಂಗ್ ಮೂಲಕ ರಾಜ್ಯ, ದೇಶ ಅಥವಾ ಪ್ರಪಂಚದ ಯಾವುದೇ ಮೂಲೆಯಿಂದ ಬೇಕಾದರೂ ಮತಗಟ್ಟೆಗಳಲ್ಲಿ ನಡೆಯುವ ಮತದಾನ ಪ್ರಕ್ರಿಯೆಯನ್ನು ನೇರ ಪ್ರಸಾರ ವೀಕ್ಷಿಸಬಹುದಾಗಿದೆ.

ಈ ಮತದಾನ ಕೇಂದ್ರಗಳಲ್ಲಿ ನಡೆಯುವ ಮತದಾನ ಪ್ರಕ್ರಿಯೆಯನ್ನು ಲ್ಯಾಪ್‌ಟಾಪ್‌ ವೆಬ್‌ ಕ್ಯಾಮೆರಾ ಮೂಲಕ ಸೆರೆ ಹಿಡಿದು ಅದನ್ನು ನೇರವಾಗಿ ರವಾನಿಸಲಾಗುತ್ತದೆ. ಆದರೆ ಸಾರ್ವ­ಜನಿಕರಿಗೆ ವೀಕ್ಷಿಸಲು ಮುಕ್ತವಾಗಿರಿಸಿಲ್ಲ. ಜಿಲ್ಲಾಧಿ­ಕಾರಿ, ಸಿಇಒ ಕಚೇರಿಯ ಕಂಟ್ರೋಲ್‌ ರೂಂ­ಗಳಲ್ಲಿ ವೀಕ್ಷಿಸಬಹುದಾಗಿದೆ. ರಾಜ್ಯ ಚುನಾವಣಾ ಆಯೋಗ ಕೂಡ ಇದನ್ನು ವೀಕ್ಷಿಸಲಿದೆ. ಈ ಮೂಲಕ ಮತದಾನ ಪ್ರಕ್ರಿಯೆಯಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಮುಂದಾಗಿದೆ.

ವೆಬ್‌ಕಾಸ್ಟ್ ಸೌಲಭ್ಯಕ್ಕಾಗಿಯೇ ಪ್ರತ್ಯೇಕ ವೆಬ್‌ಸೈಟ್‌ ರೂಪಿಸಿಕೊಳ್ಳಲಾಗಿದೆ. ಇದಕ್ಕೆ ಯೂಸರ್‌ ನೇಮ್‌, ಪಾಸ್‌ವರ್ಡ್ ಕೂಡ ನೀಡಲಾಗಿದೆ. ಮತದಾನ ಕೇಂದ್ರಗಳಿಂದ ಈ ವೆಬ್‌ ಕಾಸ್ಟಿಂಗ್ ತಂತ್ರಜ್ಞಾನದ ಮೂಲಕ ಈ ವೆಬ್‌ ಸೈಟ್‌ಗೆ ಚಿತ್ರೀಕರಣ ರವಾನೆಯಾಗಲಿದೆ.

65 ಮತ ಗಟ್ಟೆ: ಜಿಲ್ಲೆಯ 65 ಮತ­ಗಟ್ಟೆ­ಗಳಲ್ಲಿ ಈ ಸೌಲಭ್ಯ ಒದಗಿಸಲಾಗುತ್ತಿದೆ. ನೂರು ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್ ನಡೆಸುವ ಪ್ರಸ್ತಾವ ಆಯೋಗದ ಮುಂದೆ ಇತ್ತಾದರೂ ಇಂಟರ್‌ನೆಟ್‌ ಸಂಪರ್ಕದ ಕೊರತೆ ಕಾರಣ ಕೇವಲ 65 ಮತಗಟ್ಟೆಗಳನ್ನು ಮಾತ್ರ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ವೆಬ್‌ಕಾಸ್ಟಿಂಗ್ ವೆಚ್ಚ ಕಡಿತಗೊಳಿಸುವ ಸಲುವಾಗಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ­ಗಳನ್ನು ಬಳಸಿಕೊಳ್ಳಲು ನಿರ್ಧರಿಸ­ಲಾಯಿತು. ಎಲ್ಲ ಪಕ್ಷಗಳ ಮುಖಂಡರ ಸಭೆ ಕರೆದು ಎಸ್‌ಎಸ್‌ಐಟಿ, ಎಸ್‌ಐಟಿ, ಅಕ್ಷಯ, ಎಚ್‌ಎಂಎಸ್‌ ಕಾಲೇಜಿನ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಒಪ್ಪಿಗೆ ಪಡೆಯಲಾಗಿದೆ. ಒಟ್ಟು 70 ವಿದ್ಯಾರ್ಥಿಗಳನ್ನು ಇದಕ್ಕಾಗಿ ಬಳಸಿಕೊಳ್ಳ­ಲಾಗುತ್ತಿದೆ. ಇವರಿಗೆಲ್ಲರಿಗೂ ತರಬೇತಿ ಕೂಡ ನೀಡಲಾಗಿದೆ.

ವಿದ್ಯಾರ್ಥಿಗಳು ಅವರದೇ ಲ್ಯಾಪ್‌ಟಾಪ್‌ ತರುತ್ತಾರೆ. ಬ್ರಾಂಡ್‌ಬ್ಯಾಂಡ್‌ ಸೇವೆಯನ್ನು ಬಿಎಸ್‌ಎನ್ಎಲ್‌ ಒದಗಿಸಿ­ಕೊಡಲಿದೆ. ಮತಗಟ್ಟೆ ಒಳಗೆ ಲ್ಯಾಪ್‌ಟಾಪ್‌ ಅಳವಡಿಸಿ ಅಲ್ಲಿಂದ ನೇರ ಚಿತ್ರೀಕರಣ ರವಾನೆ ಮಾಡಲಿದ್ದಾರೆ ಎಂದು ನೋಡಲ್‌ ಅಧಿಕಾರಿ ನಾಗೇಂದ್ರಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ 30 ಮತಗಟ್ಟೆಗಳಲ್ಲಿ ವೆಬ್‌ ಕಾಸ್ಟಿಂಗ್ ಅಳವಡಿಸ­ಲಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಇದು ದ್ವಿಗುಣಗೊಂಡಿದೆ. ಮುಂದಿನ ಚುನಾವಣೆಗಳಲ್ಲಿ ಎಲ್ಲ ಮತಗಟ್ಟೆಗಳಿಗೂ ಈ ಸೌಲಭ್ಯ ಚುನಾವಣಾ ಆಯೋಗ ಒದಗಿಸಲಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ 20 ಸಾವಿರ ಮತಗಟ್ಟೆಗಳಲ್ಲಿ ವೆಬ್‌ ಕಾಸ್ಟಿಂಗ್ ಅಳವಡಿಸುವ ಉದ್ದೇಶ ಆಯೋಗಕ್ಕಿದೆ. ವೆಬ್‌ ಕಾಸ್ಟಿಂಗ್ ಮೂಲಕ ಸಾರ್ವಜನಿಕರಿಗೆ ಮತದಾನ ಪ್ರಕ್ರಿಯೆ ನೋಡಲು ಅವಕಾಶ ಮಾಡಿಕೊಟ್ಟರೆ ಒಮ್ಮೆಗೆ ವೆಬ್‌ಸೈಟ್‌ ಕ್ರಷ್‌ ಆಗಬಹುದು. ಹೀಗಾಗಿ ಸದ್ಯಕ್ಕೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಸಂಬಂಧಪಟ್ಟವರಿ­ಗಷ್ಟೇ ಅವಕಾಶ ನೀಡಲಾಗಿದೆ.

ಜಿಲ್ಲಾ ಚುನಾವಣಾಧಿಕಾರಿ ಅವಕಾಶ ಮಾಡಿಕೊಟ್ಟರೆ ಆಯಾ ಪಕ್ಷಗಳ ಅಭ್ಯರ್ಥಿಗಳು ಜಿಲ್ಲಾಧಿಕಾರಿ ಅಥವಾ ಸಿಇಒ ಕಚೇರಿಯಲ್ಲಿ ಸ್ಥಾಪಿಸುವ ಕಂಟ್ರೋಲ್‌ ರೂಂಗಳಲ್ಲಿ ಮತದಾನ ಪ್ರಕ್ರಿಯೆ ವೀಕ್ಷಿಸಬಹುದಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT