ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡಗಿ ಸ್ಥಾವರಕ್ಕೆ ವಿರೋಧ ಬೇಡ

ರೈತರಲ್ಲಿ ಸಂಸದ ಜಿಗಜಿಣಗಿ ಮನವಿ
Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಶತಮಾನಗಳಿಂದ ಹಿಂದುಳಿದಿರುವ ವಿಜಾಪುರ ಜಿಲ್ಲೆ ಅಭಿವೃದ್ಧಿ ಬಾಗಿಲು ತೆರೆಯಲಿರುವ ಕೂಡಗಿ ವಿದ್ಯುತ್‌ ಸ್ಥಾವರವನ್ನು ವಿರೋಧಿಸಬಾರದು ಎಂದು ಲೋಕಸಭಾ ಸದಸ್ಯ ರಮೇಶ್‌ ಜಿಗಜಿಣಗಿ ಬುಧವಾರ ಮನವಿ ಮಾಡಿದರು. ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಚಿತಾವಣೆಗೆ ಕಿವಿಗೊಟ್ಟು ಕೂಡಗಿ ಉಷ್ಣ ವಿದ್ಯುತ್‌ ಸ್ಥಾವರಕ್ಕೆ ಅಡ್ಡಿ ಮಾಡಿ ಕಾಲ ಮೇಲೆ ಕಲ್ಲು ಹಾಕಿಕೊಳ್ಳಬಾರದು ಎಂದು ಜಿಗಜಿಣಗಿ ರೈತರಿಗೆ ಕಳಕಳಿಯ ಮನವಿ ಮಾಡಿದರು.

ಕೂಡಗಿ ವಿದ್ಯುತ್‌ ಸ್ಥಾವರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಚಳವಳಿ­ಗಾರರು ಸ್ಥಳೀಯರಲ್ಲ. ಈ ಚಳವಳಿ ನೇತೃತ್ವ ವಹಿಸಿರುವ ರೈತ ನಾಯಕರು ಹೊರಗಿನವರು ಎಂದು ರಮೇಶ್‌ ಜಿಗಜಿಣಗಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ವಿದ್ಯುತ್‌ ಸ್ಥಾವರಕ್ಕೆ ವಿರೋಧ ಮಾಡುತ್ತಿರುವ ಚಳವಳಿಗಾರರನ್ನು ಮಾತುಕತೆಗೆ ಆಹ್ವಾನಿಸಿ ಮನವೊಲಿ­ಸಬೇಕು. ಯಾವುದೇ ಕಾರಣಕ್ಕೂ ವಿದ್ಯುತ್‌ ಸ್ಥಾವರದ ಕೆಲಸ ನಿಲ್ಲಿಸ­ಬಾರದು ಎಂದು ಒತ್ತಾಯಿಸಿದರು.

ಎರಡು ಹಂತದ ಒಟ್ಟು 4200 ಮೆ. ವಾ ಸಾಮರ್ಥ್ಯದ ಕೂಡಗಿ ಯೋಜನೆಗೆ 2700 ಎಕರೆ ಭೂಮಿಯನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ. ಪ್ರತಿ ಎಕರೆ ನೀರಾವರಿ ಜಮೀನಿಗೆ ₨ 8.40 ಲಕ್ಷ, ಒಣ ಬೇಸಾಯದ ಭೂಮಿಗೆ ₨ 6.30ಲಕ್ಷ ಪರಿಹಾರ ವಿತರಿಸಲಾಗಿದೆ. ಮೊದಲ ಹಂತದ 2400 ಮೆ. ವಾ ಯೋಜನೆ ಕೆಲಸ ಇನ್ನೇನು ಮುಗಿಯುತ್ತಿದೆ. 2016ರೊಳಗೆ ಎರಡನೇ ಹಂತದ ಯೋಜನೆಯೂ ಮುಗಿಯಲಿದೆ. ಈ ಹಂತದಲ್ಲಿ ಚಳವಳಿ ನಡೆಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಕೂಡಗಿ ಉಷ್ಣ ವಿದ್ಯುತ್‌ ಸ್ಥಾವರದಿಂದ ಬರೀ ವಿಜಾಪುರ ಜಿಲ್ಲೆಗೆ ವಿದ್ಯುತ್‌ ಸಿಗುವುದಿಲ್ಲ. ಇಡೀ ರಾಜ್ಯಕ್ಕೆ 2000 ಮೆ. ವಾ ವಿದ್ಯುತ್‌ ದೊರೆಯಲಿದೆ. ಕೃಷ್ಣಾ ಮೂರನೇ ಹಂತದಲ್ಲಿ ಐದು ಏತ ನೀರಾವರಿ ಯೋಜನೆಗಳಿಗೆ ನೀರು ಪೂರೈಸುವ ಉದ್ದೇಶವಿದೆ. ಕೃಷ್ಣಾ ಹಾಗೂ ಭೀಮಾ ತೀರದ ಹಳ್ಳಿಗಳ ಒಂದು ನೂರು ಕೆರೆಗಳನ್ನು ತುಂಬಿಸುವ ತೀರ್ಮಾನವನ್ನು ಸರ್ಕಾರ ಮಾಡಿದ್ದು, ಈಗಾಗಲೇ 210 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಇವೆಲ್ಲಕ್ಕೂ ವಿದ್ಯುತ್‌ ಅಗತ್ಯವಿದೆ ಎಂದು ಜಿಗಜಿಣಗಿ ತಿಳಿಸಿದರು.

ಹಿಂದಿನ ಯುಪಿಎ ಸರ್ಕಾರದ ಮೇಲೆ ಒತ್ತಡ ಹಾಕಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಕೂಡಗಿ ಯೋಜನೆ ತಂದಿದೆ. ಆಗ ಸಚಿವರಾಗಿದ್ದ ಬೆಳ್ಳುಬ್ಬಿ ರೈತರನ್ನು ಕರೆದೊಯ್ದು ಬೇರೆ ಬೇರೆ ವಿದ್ಯುತ್‌ ಸ್ಥಾವರಗಳನ್ನು ತೋರಿಸಿಕೊಂಡು ಬಂದ ಬಳಿಕ ರೈತರು ಎನ್‌ಟಿಪಿಸಿಗೆ ಭೂಮಿ ಬಿಟ್ಟುಕೊಟ್ಟಿದ್ದಾರೆ. ಭೂಮಿ ಪರಿಹಾರದ ಹಣವನ್ನು ಬೇರೆ ಬೇರೆ ಕಡೆಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ನುಡಿದರು.

ಕೂಡಗಿ ಉಷ್ಣ ವಿದ್ಯುತ್‌ ಸ್ಥಾವರಕ್ಕೆ ಈಗಾಗಲೇ 12 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈಗ ಹೊರಗಿನಿಂದ ಬಂದಿರುವ ಚಳವಳಿಗಾರರು ರೈತರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ತಕ್ಷಣ ಸ್ಥಳೀಯ ಶಾಸಕರು ಹಾಗೂ ರೈತ ಸಂಘಟನೆ ಮುಖಂಡರನ್ನು ಮಾತುಕತೆಗೆ ಕರೆದು ಮನ­ವೊಲಿಸಬೇಕು ಎಂದು ಜಿಗಜಿಣಗಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT