ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿ ಮಾಡಿ ಶೇ 93 ಅಂಕ ಗಳಿಸಿದ ಸುನಿಲ

ವಾಣಿಜ್ಯ ವಿಭಾಗದಲ್ಲಿ ಉತ್ತಮ ಫಲಿತಾಂಶ: ರೈತನ ಮಗನಿಗೆ ಬ್ಯಾಂಕ್‌ ಅಧಿಕಾರಿಯಾಗುವ ಆಸೆ
Last Updated 27 ಮೇ 2016, 7:35 IST
ಅಕ್ಷರ ಗಾತ್ರ

ಗದಗ: ‘ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ಬೆನ್ನಲ್ಲೇ ಚಿಕ್ಕಪ್ಪನ ಜತೆ ಕೇರಳಕ್ಕೆ ದುಡಿಯಲು ಹೋಗಿದ್ದೆ. ಕಾಸರಗೋಡು ಸಮೀಪದ ಹಳ್ಳಿಯೊಂದರಲ್ಲಿ ಅಡಿಕೆ ತೋಟದಲ್ಲಿ ಗೊಬ್ಬರ ಹಾಕುವ ಕೆಲಸ. ಒಂದೂವರೆ ತಿಂಗಳು ದುಡಿದು ಒಂದಿಷ್ಟು ಹಣ ಹೊಂದಿಸಿ ವಾರದ ಹಿಂದಷ್ಟೇ ಮನೆಗೆ ಮರಳಿದ್ದೇನೆ.

ಹೇಗಾದರೂ ಮಾಡಿ ಬಿ.ಕಾಂ ಮಾಡಬೇಕೆಂಬ ಆಸೆ ಇದೆ. ಮನೆಯಲ್ಲಿ ಬಡತನ. ಬರ ದಿಂದ ಬೆಳೆ ಇಲ್ಲ. ಮುಂದೆ ಓದಿಸುವಷ್ಟು ಆರ್ಥಿಕ ಶಕ್ತಿ ಇಲ್ಲ, ಯಾವುದಾದರೂ ಕೆಲಸಕ್ಕೆ ಹೋಗು ಎನ್ನುತ್ತಿದ್ದಾರೆ ಅಪ್ಪ. ಕಷ್ಟ ಬಂದರೂ ಸರಿಯೇ ಓದು ನಿಲ್ಲಿಸಬೇಡ ಎನ್ನುತ್ತಿದ್ದಾರೆ ಅಮ್ಮ’.

ಶಿರಹಟ್ಟಿ ತಾಲ್ಲೂಕಿನ ಗೋವಿನ ಕೊಪ್ಪ ಗ್ರಾಮದ ಸುನಿಲ್‌ ಕಬ್ಬೇರಳ್ಳಿ ಹೀಗೆ ಹೇಳುವಾಗ ಅವರ ಕಣ್ಣಾಲಿಗಳು ತುಂಬಿದ್ದವು. ಗದುಗಿನ ಕೆವಿಎಸ್‌ಆರ್‌ ಕಾಲೇಜಿನ ವಿದ್ಯಾರ್ಥಿಯಾದ ಅವರು  ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಶೇ 93.3 ಅಂಕ ಗಳಿಸಿ ಜಿಲ್ಲೆಗೆ ಮೂರನೆಯ ಸ್ಥಾನ ಪಡೆದಿದ್ದಾರೆ.

ಅರ್ಥಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಷಯದಲ್ಲಿ ಕ್ರಮವಾಗಿ 100ರಲ್ಲಿ 100 ಅಂಕ ಗಳಿಸಿದ್ದಾರೆ. ಕಾಲೇಜಿನ ಇತಿಹಾಸದಲ್ಲೇ ಇದುವರೆಗೆ ಯಾರೂ ಅರ್ಥಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದಿಲ್ಲ. ಇದು ದಾಖಲೆ ಎನ್ನುತ್ತಾರೆ ಅರ್ಥಶಾಸ್ತ್ರ ಉಪನ್ಯಾಸಕ ವಿ.ಎಸ್‌. ದಲಾಲಿ.

‘ಎಸ್ಸೆಸ್ಸೆಲ್ಸಿಯಲ್ಲಿ ಶೇ 89ರಷ್ಟು ಅಂಕ ಬಂದಿದ್ದವು. ಮುಂದೆ ಓದಲು ಹಣ ಇರಲಿಲ್ಲ. ಹಾಗಾಗಿ, ಓದು ಕೈಬಿಡಬೇಕು ಅಂದುಕೊಂಡಿದ್ದೆ. ಗದುಗಿನ ಕೆಎಸ್‌ಎಸ್‌ ಡಿಗ್ರಿ ಕಾಲೇಜಿನ ಪ್ರೊ.ಬಿ.ಜಿ ತಳ್ಳಳ್ಳಿ ಅವರು ಪೋಷಕರ ಮನ ಒಲಿಸಿ  ಕಾಲೇಜಿಗೆ ಸೇರಿಸಿದರು. ಮೊದಲ ವರ್ಷ ಬಿಸಿಎಂ ಹಾಸ್ಟೆಲ್‌ನಲ್ಲಿ ಸೀಟು ಸಿಗಲಿಲ್ಲ. ಎಪಿಎಂಸಿಯಲ್ಲಿ ದಲ್ಲಾಳಿಗಳಾಗಿ ಕೆಲಸ ಮಾಡುತ್ತಿದ್ದ ಕೆಲವರ ಪರಿಚಯ ಇತ್ತು.

ಅವರ ಜತಗೇ ಅಲ್ಲೇ  ಪುಟ್ಟ ಕೋಣೆ ಯಲ್ಲಿ ಉಳಿದುಕೊಂಡಿದ್ದೆ. ಸ್ವಂತ ಅಡುಗೆ ಮಾಡಿಕೊಳ್ಳುತ್ತಿದ್ದೆ. ಎರಡನೆಯ ವರ್ಷ ಹಾಸ್ಟೆಲ್‌ ಸೀಟು ಸಿಕ್ಕಿತು. ನನ್ನ ಕುಟುಂಬದ ಆರ್ಥಿಕ ಪರಿಸ್ಥಿತಿ ತಿಳಿದ ಗದುಗಿನ ಪ್ರಕಾಶ್‌ ಮೋಟಾರ್ಸ್‌ ಮಾಲೀಕರಾದ ಪ್ರಕಾಶ್‌ ಆರ್ಥಿಕ ನೆರವು ನೀಡಿ ಬೆನ್ನು ತಟ್ಟಿದರು. ಇವರೆಲ್ಲರ ಪ್ರೋತ್ಸಾಹದಿಂದ ಇಂದು ನಾನು ಈ ಸಾಧನೆ ಮಾಡಿದ್ದೇನೆ, ಅವರೆಲ್ಲರನ್ನೂ ನಾನು ಕೃತಜ್ಞತೆಯಿಂದ ನೆನೆಯುತ್ತೇನೆ’ ಎಂದರು ಸುನಿಲ.

‘ನಮ್ಮ ಊರಿನಲ್ಲಿ ಯಾರೂ ಇದು ವರಗೆ ಇಂತಹ ಸಾಧನೆ ಮಾಡಿಲ್ಲ. ಕಷ್ಟ ಪಟ್ಟು ಓದಿ 100ಕ್ಕೆ 100 ಅಂಕ ತೆಗೆಯ ಬೇಕು ಎಂದು ಪ್ರೀತಿಯ ಒತ್ತಡ ಹಾಕಿದ್ದೆ. ಅದನ್ನು ಸಾಧಿಸಿ ತೋರಿಸಿದ್ದಾನೆ. ಮನೆ ಯಿಂದ ಒಂದು ರೂಪಾಯಿಯನ್ನು ಪಡೆ ಯದೇ ತಾನೇ ದುಡಿದು ಇದುವರೆಗೆ ಶಿಕ್ಷಣ ಪಡೆದಿದ್ದಾನೆ.

ಒಂದೆಡೆ ಹೆಮ್ಮೆ, ಅಪಾರ ಸಂತೋಷ ಆಗುತ್ತಿದೆ. ಇನ್ನೊಂ ದೆಡೆ ಬಡತನ ಓದಿಗೆ ಅಡ್ಡಿಯಾಗಿದೆ ಎನಿಸುವಾಗ ಬೇಸರ ಆಗುತ್ತದೆ. ಯಾರಾ ದರು ದಾನಿಗಳು ನೆರವು ನೀಡಿದರೆ ಈ ಹುಡುಗ ಇದಕ್ಕಿಂತ ಉತ್ತಮ ಸಾಧನೆ ಮಾಡಬಲ್ಲ’ ಎಂದರು ಸುನೀಲ ಅವರ ಚಿಕ್ಕಪ್ಪ ಮಹೇಶ.

‘ಬಡತನದಿಂದ ನಮ್ಮ ಊರಿನ ಅನೇಕರು ಪಿಯುಸಿಗೆ ಶಿಕ್ಷಣ ನಿಲ್ಲಿಸಿದ್ದಾರೆ. ಪಿಯುಸಿಯಲ್ಲಿ ಶೇ 86ರಷ್ಟು ಅಂಕ ಗಳಿಸಿದ ಒಬ್ಬರು ಪೊಲೀಸ್‌ ಕಾನ್‌ ಸ್ಟೆಬಲ್‌ ಆಗಿದ್ದಾರೆ. ಶೇ 87ಅಂಕ ಪಡೆದ ಇನ್ನೊಬ್ಬರು ಕೆಎಸ್‌ಆರ್‌ಟಿಸಿ ಕಂಡೆಕ್ಟರ್‌ ಆಗಿದ್ದಾರೆ. ನನಗೂ ಮುಂದೆ ಓದುವುದು ಬೇಡ, ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ  ಹಾಕು ಎನ್ನುತ್ತಿದ್ದಾರೆ.

ನನಗೆ ಮುಂದೆ ಓದಬೇಕೆಂಬ ಆಸೆ ತುಂಬಾ ಇದೆ. ಅಕೌಂಟೆನ್ಸಿ ವಿಷಯದಲ್ಲಿ 95 ಅಂಕ ಬರುವ ನಿರೀಕ್ಷೆ ಇತ್ತು. 10 ಅಂಕಗಳು ಕಡಿಮೆಯಾಗಿವೆ. ಮರು ಮೌಲ್ಯಮಾಪ ನಕ್ಕೆ ಅರ್ಜಿ ಹಾಕುತ್ತೇನೆ.  ಬಿ.ಕಾಂ ಮುಗಿಸಿ ಬ್ಯಾಂಕ್‌ ಅಧಿಕಾರಿ ಆಗಬೇಕು ಅಂದುಕೊಂಡಿದ್ದೇನೆ ಎಂದು ಸುನಿಲ್‌ ಮನದಿಂಗಿತ ವ್ಯಕ್ತಪಡಿಸಿದರು.

ಶೇ 90ಕ್ಕಿಂತ ಹೆಚ್ಚಿನ ಅಂಕಗಳು ಬಂದಿರುವುದರಿಂದ ಸರ್ಕಾರಿ ಶುಲ್ಕವ ನ್ನಷ್ಟೇ ತುಂಬಿದರೆ ಸಾಕು. ಇನ್ನುಳಿದ ಕಾಲೇಜು ಶುಲ್ಕದಲ್ಲಿ ವಿನಾಯ್ತಿ ನೀಡು ತ್ತೇವೆ ಎಂದು ಕೆಎಸ್‌ಎಸ್‌ ಪದವಿ ಕಾಲೇ ಜಿನ ಆಡಳಿತ ಮಂಡಳಿಯವರು ಭರವಸೆ ನೀಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ತರಗತಿಗಳು ಪ್ರಾರಂಭವಾಗಲಿವೆ. ಹೇಗಾ ದರು ಮಾಡಿ ಬಾಕಿ ಹಣ ಹೊಂದಿಸು ತ್ತೇನೆ. ಕಾಲೇಜಿಗೆ ಹೋಗುತ್ತೇನೆ’ ಎನ್ನುತ್ತಾ ಮಾತು ಮುಗಿಸಿದರು ಸುನಿಲ್‌.

***
ಸುನಿಲ ಜಾಣ ವಿದ್ಯಾರ್ಥಿ. ಪ್ರಯತ್ನವಾದಿ. ಬಹಳ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದಾನೆ. ಜಿಲ್ಲೆಗೆ 3ನೇ ಸ್ಥಾನ ಪಡೆದು ತನ್ನ ಊರಿಗೂ, ಕಾಲೇಜಿಗೂ ಹೆಸರು ತಂದಿದ್ದಾನೆ.
–ಬಿ.ಆರ್‌. ಜಾಲಿಹಾಳ,
ಪ್ರಾಂಶುಪಾಲ ಕೆವಿಎಸ್‌ಆರ್‌ ಕಾಲೇಜು

***
ಓದಿಗೆ ಹಣ ಹೊಂದಿಸುವುದೇ ಕಷ್ಟವಾಗಿತ್ತು. ಹೀಗಾಗಿ, ಪ್ರತಿ ಶನಿವಾರ, ಭಾನುವಾರ ಕೂಲಿ ಕೆಲಸಕ್ಕೆ ಹೋಗುತ್ತಿದ್ದೆ. ರಜಾ ದಿನಗಳಲ್ಲಿ ಕೇರಳಕ್ಕೆ ದುಡಿಯಲು ಹೋಗುತ್ತಿದ್ದೆ.
–ಸುನಿಲ್‌ ಕಬ್ಬೇರಳ್ಳಿ,
ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT