ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿಚೌರ್ಯ ನಿಲ್ಲಲಿ

Last Updated 8 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಪಿಎಚ್.ಡಿ ಹಾಗೂ ಇತರ ಸಂಶೋಧನಾ ಪ್ರಬಂಧಗಳಲ್ಲಿ ಕೃತಿಚೌರ್ಯ ಹಾವಳಿ ತಡೆಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯು.ಜಿ.ಸಿ.) ಮುಂದಾಗಿದೆ.  ಈ ಸಂಬಂಧದಲ್ಲಿ ಅನೇಕ ಕಠಿಣ ನಿಯಮಾ­ವಳಿಗಳು ಹಾಗೂ ಮಾರ್ಗಸೂಚಿಗಳನ್ನು ಕಾನ್ಪುರ ಐ.ಐ.ಟಿ.ಯ ಮಾಜಿ ನಿರ್ದೇಶಕ ಸಂಜಯ್‌ ದಾಂಡೆ ನೇತೃತ್ವದಲ್ಲಿ ಯು.ಜಿ.ಸಿ.ಯಿಂದ ನೇಮಕ­ವಾಗಿ­­ರುವ ಉನ್ನತ ಮಟ್ಟದ ಸಮಿತಿ ಸಿದ್ಧಪಡಿಸಿದೆ.

ಸಂಶೋಧನಾ ಕ್ಷೇತ್ರ­ದಲ್ಲಿ ನಡೆಯುವ ಕೃತಿಚೌರ್ಯಕ್ಕೆ ವಿವಿಧ ಹಂತದ ಶಿಕ್ಷೆಗಳ ಶಿಫಾರಸಿಗೆ ಈ ಸಮಿತಿ ಮುಂದಾಗಿರುವುದು ಸ್ವಾಗತಾರ್ಹ. ಸಂಶೋಧನೆಯನ್ನು ಅರಿವಿನ ಶೋಧದ ಪವಿತ್ರ ಕಾರ್ಯ ಎಂದೇ ಪರಿಗಣಿಸಲಾಗಿದೆ. ಆದರೆ ದೇಶದ ಸಂಶೋಧನಾ ಕ್ಷೇತ್ರದಲ್ಲಿ  ಅಕ್ರಮ ಮತ್ತು ಕೃತಿಚೌರ್ಯ ವ್ಯಾಪಕವಾಗಿರುವುದು ಆತಂಕದ  ವಿಷಯ.

ವಿಶ್ವವಿದ್ಯಾಲಯಗಳಲ್ಲಿ ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋ­ಧನೆ ನಡೆಸುವವರು ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತೂ  ದಾಂಡೆ ಸಮಿತಿ ಸಲಹೆ ನೀಡಿದೆ.  ಕೃತಿಚೌರ್ಯವನ್ನು ತಡೆಯಲು ಈವರೆಗೆ ಸೂಕ್ತ­ವಾದ ಯಾವುದೇ ಮಾರ್ಗೋಪಾಯ ಇರಲಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ.

ಸಂಶೋಧನೆಯಲ್ಲಿ ತೊಡಗುವವರಲ್ಲಿ  ಸಾಮರ್ಥ್ಯ ಮತ್ತು ಕೌಶಲಗಳ ಜತೆಗೆ ಪ್ರಾಮಾಣಿಕತೆ ಇರುವುದೂ ಅವಶ್ಯ. ಅವರು ನಡೆಸುವ ಶೋಧ ಕಾರ್ಯ  ಸ್ವಂತ ಪ್ರಯತ್ನದ್ದಾಗಿರಬೇಕು. ಆಗ ಅದು ವಿದ್ವತ್‌ ವಲಯದಲ್ಲಿ ಮನ್ನಣೆ  ಪಡೆಯುತ್ತದೆ. ಆದರೆ ಕೃತಿಚೌರ್ಯವು ಹೀನವಾದ ಕಾರ್ಯ ಮಾತ್ರ­ವಲ್ಲ, ಜಾಗತಿಕ ಮಟ್ಟದಲ್ಲಿ ದೇಶದ ಘನತೆಯನ್ನೂ ತಳಮಟ್ಟಕ್ಕೆ ಇಳಿ­ಸು­ವಂತಹದ್ದು. 

ಪಿಎಚ್‌.ಡಿ ಪದವಿಗೆ ಪ್ರೌಢ ಪ್ರಬಂಧವನ್ನು  ಹಾಗೂ ಸಂಶೋ­ಧನಾ ಪತ್ರಿಕೆಗಳಿಗೆ ಲೇಖನಗಳನ್ನು ಸಲ್ಲಿಸುವ ಮೊದಲೇ ತಮ್ಮ ಕೆಲಸ ಅಸಲಿಯೇ ಹೊರತು ಯಾವುದೇ ಕೃತಿಚೌರ್ಯವಲ್ಲ ಎಂಬ ಮುಚ್ಚಳಿಕೆ­ಯನ್ನು ವಿದ್ಯಾರ್ಥಿಗಳು ಬರೆದುಕೊಡಬೇಕೆಂದು ಈ ಸಮಿತಿ ಮಾಡಿರುವ ಸಲಹೆ ಸೂಕ್ತವಾದದ್ದು. ಒಂದು ವೇಳೆ ಕೃತಿಚೌರ್ಯದ  ಲೇಖನಗಳು ಅಚ್ಚಾ­ಗಿ­ಬಿಟ್ಟರೆ ಆಗ ಸಂಶೋಧಕರ ಜತೆಗೆ ಅವರ ಮಾರ್ಗದರ್ಶಕರ ಮೇಲೂ ಶಿಸ್ತುಕ್ರಮ ಜರುಗಿಸಬಹುದು.

ಕೃತಿಚೌರ್ಯವನ್ನು ಪತ್ತೆ ಮಾಡುವ ತಂತ್ರಾಂ­ಶ­ಗಳು ಲಭ್ಯವಿದ್ದು, ಅವುಗಳ ಬಳಕೆಗೂ ಸಮಿತಿ ಸಲಹೆ ನೀಡಿದೆ.  ಮೂಲ ಲೇಖಕರ ಹೆಸರನ್ನು ಸೂಚಿಸದೆ ನೇರವಾಗಿ ಅವರ ಸಾಲುಗಳನ್ನು ಬಳಸಿ­ಕೊಳ್ಳುವುದು, ಲೇಖಕರ ಅಥವಾ ಪ್ರಕಾಶಕರ ಅನುಮತಿ ಇಲ್ಲದೆ ಚಿತ್ರಗಳನ್ನು ಉಪ­ಯೋ­ಗಿಸುವುದು, ಬೇರೆಯವರು ಸಂಗ್ರಹಿಸಿದ ಮಾಹಿತಿಯನ್ನು ಕದ್ದು ಬಳಸು­ವುದು, ಇತರರ ಫಲಿತಾಂಶಗಳನ್ನು ತಮ್ಮದೆಂದು ಬಿಂಬಿಸಿಕೊಳ್ಳು­ವುದು– ಈ ನಾಲ್ಕು ಬಗೆಯ ಕೃತಿಚೌರ್ಯದ ಅಪರಾಧಗಳನ್ನು ಗಮನಿಸಿ­ರುವ ಸಮಿ­ತಿಯು, ವಿವಿಧ ಹಂತದ ಶಿಕ್ಷೆಗಳನ್ನೂ ಸೂಚಿಸಿದೆ.

ಯು.ಜಿ.ಸಿ.ಗೆ ಸಲ್ಲಿಸ­ಲಾ­ಗಿರುವ ಈ ಸಲಹೆಗಳು ಮುಂದಿನ ದಿನಗಳಲ್ಲಿ ಸ್ವೀಕೃತವಾದರೆ ಗಂಭೀರವಾಗಿ ಸಂಶೋಧನಾ ಕಾರ್ಯದಲ್ಲಿ ತೊಡಗುವವರಿಗೆ ಇನ್ನಷ್ಟು ಅವ­ಕಾಶಗಳು ದೊರೆ­ಯಬಹುದು. ಹಾಗೆಯೇ ಜಾಗತಿಕ ಶಿಕ್ಷಣ ರಂಗದಲ್ಲಿ ಭಾರತ ಬೌದ್ಧಿಕ­ವಾಗಿ ಕಳಂಕರಹಿತವಾದ ಛಾಪು ಮೂಡಿಸಬಹುದು. ಸಂಶೋ­ಧನೆಯಲ್ಲಿ ಮತ್ತು ಪಿಎಚ್‌.ಡಿ ಪದವಿಗಳಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಇದೊಂದು ಉತ್ತಮ ಪ್ರಯತ್ನವೆಂದೇ ಹೇಳಬಹುದು.  ಈ ದಿಸೆ­ಯಲ್ಲಿ ಯು.ಜಿ.ಸಿ.,  ದಾಂಡೆ ಸಮಿತಿಯ ಶಿಫಾರಸುಗಳನ್ನು ಸ್ವೀಕರಿಸುವುದು ದೇಶದ ಬೌದ್ಧಿಕ ಪ್ರಗತಿಯ ದೃಷ್ಟಿಯಿಂದ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT