ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿ ನಿಷೇಧಕ್ಕೆ ಸಾಹಿತಿಗಳ ಖಂಡನೆ

ನಾರಾಯಣಾಚಾರ್ಯರ ‘ವಾಲ್ಮೀಕಿ ಯಾರು?’
Last Updated 31 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಯಾವುದೇ ಕೃತಿಯನ್ನು ಏಕಾ­ಏಕಿ ನಿಷೇಧಿಸುವುದು ಸರಿಯಲ್ಲ ಎಂದು ಸಾಂಸ್ಕೃತಿಕ ನೀತಿ ನಿರೂಪಣಾ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿ ತಿಂಗಳು ಕಳೆದಿದೆ. ಸಮಿತಿಯ ಶಿಫಾರಸು ಸಾರ್ವಜನಿಕರ ಮುಂದಿರುವ ಸಂದರ್ಭ­ದಲ್ಲಿ ಸರ್ಕಾರ ಡಾ.ಕೆ.ಎಸ್‌. ನಾರಾಯ­ಣಾ­ಚಾರ್ಯ ಅವರ ‘ವಾಲ್ಮೀಕಿ ಯಾರು?’ ಕೃತಿ ಮುಟ್ಟುಗೋಲು ಹಾಕಲು ತೀರ್ಮಾನಿಸಿದೆ. ಇದನ್ನು ಸಾಹಿ­­ತಿಗಳು, ಬರಹಗಾರರು ಖಂಡಿಸಿದ್ದಾರೆ.

‘ಸರ್ಕಾರ ಯಾವುದೇ ಕೃತಿಯನ್ನು ಏಕಾಏಕಿ ನಿಷೇಧಿಸಬಾರದು. ತಜ್ಞರ ಸಮಿತಿ ರಚಿಸಿ, ಅಭಿಪ್ರಾಯ ಪಡೆದು ಮುಂದುವರಿಯಬೇಕು’ ಎಂದು ಪ್ರೊ. ಬರಗೂರು ರಾಮ­ಚಂದ್ರಪ್ಪ ನೇತೃತ್ವದ ಸಾಂಸ್ಕೃತಿಕ ನೀತಿ ನಿರೂಪಣಾ ಸಮಿತಿ ಕರಡು ಶಿಫಾ­ರಸಿನಲ್ಲಿ ಹೇಳಿದೆ. ಇದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರಿಗೆ ಜೂನ್‌ 25ರಂದು ಸಲ್ಲಿಸಲಾಗಿದೆ.

ಆದರೆ, ಕಾಂಗ್ರೆಸ್ಸಿನ ವಿ.ಎಸ್‌. ಉಗ್ರಪ್ಪ ಅವರು ವಿಧಾನ ಪರಿಷತ್ತಿನಲ್ಲಿ ತಂದ ಒತ್ತಡಕ್ಕೆ ಸರ್ಕಾರ ಮಣಿಯಿತು. ‘ವಾಲ್ಮೀಕಿ ಯಾರು?’ ಕೃತಿಯನ್ನು ಮುಟ್ಟು­ಗೋಲು ಹಾಕಿಕೊಳ್ಳಲಾಗು­ವುದು ಎಂದು ಸಭಾ ನಾಯಕ ಎಸ್‌.ಆರ್‌. ಪಾಟೀಲ ಅವರು ಸದನ­ದಲ್ಲಿ ಕಳೆದ ವಾರ ಪ್ರಕಟಿಸಿದರು.

‘ಕೋಮುವಾದಿ ಅಲ್ಲದ ಕಾಂಗ್ರೆಸ್‌ ಸರ್ಕಾರ ಪ್ರಜಾಸತ್ತಾತ್ಮಕ ಮೌಲ್ಯ­ಗ­ಳನ್ನು ಗೌರವಿಸಬೇಕಿತ್ತು. ಆಲೋಚನಾ ಸ್ವಾತಂ­ತ್ರ್ಯವನ್ನು ಮೊಟಕುಗೊಳಿ­ಸು­ವುದು ಸರಿಯಲ್ಲ’ ಎಂದು ಕನ್ನಡ ಪುಸ್ತಕ ಪ್ರಾಧಿ­ಕಾರದ ಅಧ್ಯಕ್ಷ ಪ್ರೊ. ಬಂಜಗೆರೆ ಜಯಪ್ರಕಾಶ್‌ ಅವರು ಪುಸ್ತಕ ನಿಷೇಧ ಕುರಿತು ‘ಪ್ರಜಾವಾಣಿ’ಗೆ ಪ್ರತಿ­ಕ್ರಿಯೆ ನೀಡಿದರು.

ಜಯಪ್ರಕಾಶ್‌ ಅವರ ‘ಆನುದೇವಾ ಹೊರಗಣ­ವನು’ ಕೃತಿಯನ್ನು ಬಿಜೆಪಿ ಸರ್ಕಾರ ನಿಷೇಧಿಸಿತ್ತು.
ಪುಸ್ತಕದ ಮೂಲಕ ವಿಚಾರ ಹೇಳು­ವು­ದಕ್ಕೂ ಸಾರ್ವಜನಿಕ ಭಾಷ­ಣದ ಮೂಲಕ ಹೇಳುವುದಕ್ಕೂ ವ್ಯತ್ಯಾಸ ಇದೆ. ಸಾರ್ವಜನಿಕ ಭಾಷಣದ ಮೂಲಕ ಸಭಿಕರನ್ನು ಉದ್ರೇಕಿಸುವ ಸಾಧ್ಯತೆ ಹೆಚ್ಚು. ಆದರೆ ಓದಿನ ಹವ್ಯಾಸ ಉಳ್ಳವರು ಸಾಮಾನ್ಯವಾಗಿ ಉದ್ರೇಕ­ಗೊ­ಳ್ಳುವುದಿಲ್ಲ. ಯಾವುದೇ ಕೃತಿಯನ್ನು ಏಕಾ­ಏಕಿ ಮುಟ್ಟುಗೋಲು ಹಾಕಿಕೊ­ಳ್ಳುವುದು ಸರಿಯಲ್ಲ ಎಂದು ಜಯಪ್ರಕಾಶ್‌ ಹೇಳಿದರು.

‘ದುರುದ್ದೇಶದ ಪುಸ್ತಕ’: ‘ವಾಲ್ಮೀಕಿ ಯಾರು?’ ಕೃತಿ ದುರುದ್ದೇಶದ್ದು. ಸಂಶೋ­ಧನೆ ಅಥವಾ ವಿಶ್ಲೇಷಣೆಯ ಘನ­ತೆಯಿಲ್ಲದ ಆಕ್ಷೇಪಾರ್ಹ ಅಸಂಬ­ದ್ಧ­ತೆಗಳನ್ನು ಒಳಗೊಂಡ ಕೃತಿ ಅದು. ಆದರೂ ಸರ್ಕಾರ ಯಾವುದೇ ಕೃತಿ­ಯನ್ನು ತಜ್ಞರ ಪರಿಶೀಲನೆಗೆ ಒಪ್ಪಿಸಿ, ಸಲಹೆ ಪಡೆಯದೆ ಮುಟ್ಟುಗೋಲು ಹಾಕಿಕೊಳ್ಳುವುದು ಸರಿಯಲ್ಲ’ ಎಂದು ಪ್ರೊ. ಬರಗೂರು ರಾಮಚಂದ್ರಪ್ಪ ಅನಿಸಿಕೆ ವ್ಯಕ್ತಪಡಿಸಿದರು.

ಅಭಿಪ್ರಾಯ ಆಹ್ವಾನ: ಸಾಂಸ್ಕೃತಿಕ ನೀತಿ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಲಾಗಿದೆ. ಅವುಗಳನ್ನು ಸ್ವೀಕರಿ­ಸಿದ ನಂತರ ನೀತಿಯನ್ನು ಸರ್ಕಾರ ಅಳ­ವಡಿಸಿಕೊಳ್ಳಲಿದೆ ಎಂದು ಸಚಿವೆ ಉಮಾಶ್ರೀ ತಿಳಿಸಿದರು.

ಒಂದು ಸಮುದಾಯದ ಭಾವನೆ­ಗಳಿಗೆ ಧಕ್ಕೆಯಾಗುವ ಅಂಶಗಳಿರುವ ಕೃತಿ ಕುರಿತು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಆ ಸಮುದಾಯ ಬೀದಿಗಿಳಿಯಬಹುದು. ಶಾಂತಿ ಭಂಗವಾ­ಗಬಹುದು. ಈ ಎಲ್ಲ ವಿಚಾರಗಳ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ ಆಗಿದೆ ಎಂದು ಸಚಿವ ಪಾಟೀಲ  ಸರ್ಕಾರದ ಕ್ರಮ ಸಮರ್ಥಿಸಿಕೊಂಡರು.

ಪಿ.ವಿ. ನಾರಾಯಣ ಅವರ ‘ಧರ್ಮ­ಕಾರಣ’ ಕೃತಿಯನ್ನೂ ಕೂಡ ಸರ್ಕಾರ ನಿಷೇಧಿಸಿತ್ತು. ಅದೇ ರೀತಿ, ಯೋಗೇಶ್‌ ಮಾಸ್ಟರ್‌ ಅವರ ‘ಢುಂಡಿ’ ಕಾದಂಬ­ರಿಯ ಮಾರಾಟವನ್ನು ನ್ಯಾಯಾಲಯ ನಿರ್ಬಂಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ನಿಷೇಧ ಸರಿ
‘ವಾಲ್ಮೀಕಿ ಯಾರು?’ ಕೃತಿಯಿಂದ ತಮ್ಮ ಭಾವನೆ­ಗಳಿಗೆ ನೋವಾಗಿದೆ ಎಂದು ನಿರ್ದಿಷ್ಟ ಸಮುದಾಯದ ಜನ ಪ್ರತಿಭಟನೆ ನಡೆಸಿದ್ದರು. ಹಾಗಾಗಿ ಕೃತಿ ಮುಟ್ಟುಗೋಲಿಗೆ ನಿರ್ಧರಿಸಲಾಯಿತು.

-­–ಸಚಿವೆ ಉಮಾಶ್ರೀ

ನಿಷೇಧ ತಪ್ಪು

ಕೃತಿಯ ನಿಷೇಧ ಖಂಡಿತ ಸರಿಯಲ್ಲ. ಕೃತಿಯಲ್ಲಿರುವ ತಪ್ಪುಗಳನ್ನು ಖಂಡಿಸಲು ಸಾತ್ವಿಕವಾದ ಮಾರ್ಗಗಳಿವೆ. ಯಾವುದೇ ಲೇಖಕ

ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಮಾಡಿದ್ದರೆ, ಅದನ್ನು ವೈಚಾರಿಕ ಮಾರ್ಗದಲ್ಲಿ ಬಯಲುಗೊಳಿಸಬೇಕು. ಆ ಲೇಖಕನನ್ನು ವೈಚಾರಿಕವಾಗಿಯೇ ಎದುರಿಸಬೇಕು.

–ಪ್ರೊ. ಹಂಪ ನಾಗರಾಜಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT