ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಗೆ ಸ್ಮಾರ್ಟ್‌ ಟಚ್‌ ನೀಡಿದ ಕಾರ್ತಿಕ್‌

Last Updated 20 ಜನವರಿ 2016, 19:42 IST
ಅಕ್ಷರ ಗಾತ್ರ

ಕೆಲ ದಿನಗಳ ಹಿಂದೆ ಫೇಸ್‌ಬುಕ್‌ ಸಹಯೋಗದಲ್ಲಿ internet.org ವತಿಯಿಂದ ಭಾರತದ ಅತ್ಯುತ್ತಮ ವೆಬ್‌ಸೈಟ್‌ ಆಯ್ಕೆಯ ಸ್ಪರ್ಧೆ ನಡೆದಿತ್ತು. ಈ ಸ್ಪರ್ಧೆಯಲ್ಲಿ ರೈತನ ಮಗನೊಬ್ಬ ರೈತರಿಗೆಂದೇ ರೂಪಿಸಿದ್ದ www.farmily.com ಎನ್ನುವ ವೆಬ್‌ಸೈಟ್‌ ದ್ವಿತೀಯ ಸ್ಥಾನ ಗಳಿಸಿ, 25 ಸಾವಿರ ಡಾಲರ್‌ (ಸುಮಾರು 16,91,761 ರೂಪಾಯಿ) ಬಹುಮಾನ ಪಡೆಯಿತು.

ಇದು ನಡೆದಿರುವುದು ಒಂದು ತಿಂಗಳ ಹಿಂದೆ ಅಷ್ಟೇ. ಅಂದಹಾಗೆ ‘ಫಾರ್ಮಿಲಿ’ ಎನ್ನುವ ಈ ಕನಸಿನ ಗೋಪುರವನ್ನು ಕಟ್ಟಿದವರು ಬೆಂಗಳೂರಿನ ಕಾರ್ತಿಕ್‌ ನಟರಾಜನ್‌. ತನ್ನ ಸ್ನೇಹಿತರೊಂದಿಗೆ ನಿರ್ಮಿಸಿದ ‘ಫಾರ್ಮಿಲಿ ಇಂಡಿಯಾ ಪ್ರೈ.ಲಿ.’ ಎನ್ನುವ ಸಂಸ್ಥೆಯಡಿ ಈ ವೆಬ್‌ಸೈಟ್‌ ರೂಪಿಸಿದ್ದಾರೆ.

ರೈತ ಕುಟುಂಬದ ಕಾರ್ತಿಕ್‌, ಸಾಫ್ಟ್‌ವೇರ್‌ ಕಂಪೆನಿ ಉದ್ಯೋಗಿಯಾಗಿದ್ದರೂ, ಕೃಷಿ ಬಗ್ಗೆ ಒಲವು ಹೊಂದಿದ್ದರು. ಇದೇ ಒಲವು ಅವರ ಸಾಧನೆಗೆ ಏಣಿಯಾಯಿತು. ಒಂದೇ ವರ್ಷದಲ್ಲಿ ದೇಶದ ರೈತರೊಂದಿಗೆ ಸಂಪರ್ಕ ಬೆಸೆಯಲು ಯಶಸ್ವಿಯಾಗಿರುವ ಕಾರ್ತಿಕ್‌ ತಮ್ಮ ಸಾಧನೆಯನ್ನು ಬಿಚ್ಚಿಟ್ಟಿದ್ದು ಹೀಗೆ...

‘ಉದ್ಯೋಗದ ಜೊತೆಗೆ ಬಿಡುವು ಸಿಕ್ಕಾಗ ಕೃಷಿ ಚಟುವಟಿಕೆ ನಡೆಸುವುದು ನನ್ನ ರೂಢಿ. ಹೀಗೆ ಕೃಷಿಯಲ್ಲಿ ತೊಡಗಿದ್ದಾಗ, ಒಂದು ಹಂಗಾಮಿನಲ್ಲಿ ಶುಂಠಿ ಬೆಳೆಗೆ ಉತ್ತಮ ಬೆಲೆ ಬಂದಿತ್ತು. ಆಗ ಸುತ್ತಲಿನ ರೈತರೆಲ್ಲರೂ ಶುಂಠಿ ನಾಟಿ ಮಾಡಿದರು. ಬೆಳೆ ಕೈಗೆ ಬಂದಾಗ ಮಾರುಕಟ್ಟೆಗೆ ಎಲ್ಲಾ ಕಡೆಗಳಿಂದಲೂ ಶುಂಠಿ ಆವಕ ಆಗಿ ದರ ನೆಲಕಚ್ಚಿತು. ದಲ್ಲಾಳಿಗಳ ಹಾವಳಿಯಿಂದ ಮಾರುಕಟ್ಟೆಯ ಕನಿಷ್ಠ ಬೆಲೆಯೂ ರೈತರಿಗೆ ದೊರೆಯದೇ ಹೋಯಿತು. ಶುಂಠಿ ಬೆಳೆಗಾರರು ನಷ್ಟ ಅನುಭವಿಸಿದರು. ಮತ್ತೆ ಕೃಷಿ ಮಾಡಲು ಹಣ ಇಲ್ಲದೆ ಸಾಲದ ಸುಳಿಗೆ ಸಿಲುಕಿದರು. ಈ ಘಟನೆ ನನ್ನನ್ನು ಬಹಳಷ್ಟು ಕಾಡಿತು’.

ಆಗಷ್ಟೇ ಆನ್‌ಲೈನ್‌ ವ್ಯಾಪಾರ ತಲೆ ಎತ್ತಿತ್ತು. ಮಕ್ಕಳು ತೊಡುವ ಡೈಪರ್‌ನಿಂದ ಹಿಡಿದು ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು ಮೊಬೈಲ್‌ನಲ್ಲಿ ಬಿಕರಿಯಾಗುತ್ತಿತ್ತು. ಆ್ಯಪ್‌ಗಳ ಮೂಲಕ ಇಡೀ  ಪ್ರಪಂಚವನ್ನೇ ಬೆರಳ ತುದಿಯಲ್ಲಿ ಸಂಪರ್ಕಿಸುವ ತಾಂತ್ರಿಕತೆ ಬೆಳೆದಿತ್ತು. ಇದನ್ನು ಕಂಡಿದ್ದ ಇವರಲ್ಲಿ, ಕೃಷಿ ಉತ್ಪನ್ನವೂ ಇದೇ ರೀತಿ ಮಾರಾಟವಾದರೆ ಹೇಗೆ ಎನ್ನುವ ಉಪಾಯ ಹೊಳೆಯಿತು. ಪ್ರಗತಿಪರ ರೈತ ಬಾಲಮುರುಗನ್‌ ವೆಲುಚಾಮಿ ಮತ್ತು ಜರ್ಮನಿ ಸ್ನೇಹಿತ ಡಾ. ಕ್ರಿಷ್ಟಿನ್‌್ ಸ್ಟ್ರೆಡಿಕ್‌ ಇವರೊಂದಿಗೆ ಕೈ ಜೋಡಿಸಿದರು.

ಸದ್ಯ ಏಳು ಸಿಬ್ಬಂದಿ ಹೊಂದಿರುವ ‘ಫಾರ್ಮಿಲಿ’ ತಂಡ ಭಾರತವಷ್ಟೇ ಅಲ್ಲದೆ, ಜಾಗತಿಕವಾಗಿ ವಿಸ್ತರಿಸಿಕೊಂಡಿದೆ. ಭಾರತದಲ್ಲಿ 30 ಸಾವಿರಕ್ಕೂ ಹೆಚ್ಚು ರೈತರು ‘ಫಾರ್ಮಿಲಿ’ಯಲ್ಲಿ ನೋಂದಣಿಯಾಗಿದ್ದಾರೆ. ಕರ್ನಾಟಕದಲ್ಲಿ 8–10 ಸಾವಿರ ಜನ ‘ಫಾರ್ಮಿಲಿ’ ಕುಟುಂಬ ಸೇರಿದ್ದಾರೆ ಎಂದು ಕಾರ್ತಿಕ್‌ ವಿವರಿಸುತ್ತಾರೆ.

ಹೇಗಿದೆ ಫಾರ್ಮಿಲಿ ?
ಎಲೆಕ್ಟ್ರಾನಿಕ್‌ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ವ್ಯಾಪಾರ ಮಾಡುವ ಅಮೇಜಾನ್‌, ಫ್ಲಿಪ್‌ಕಾರ್ಟ್‌, ಸ್ನ್ಯಾಪ್‌ ಡೀಲ್‌, ಇ–ಬೇ, ಹಳೆಯ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ಓಎಲ್‌ಎಕ್ಸ್‌ನ ರೀತಿಯಲ್ಲಿಯೇ ‘ಫಾರ್ಮಿಲಿ’ ವೆಬ್‌ಸೈಟ್‌ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುತ್ತದೆ. ಈ ವೆಬ್‌ಸೈಟ್‌ ಮೂಲಕ ರೈತರು ಕೃಷಿ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದು. ಯಾರ ಮಧ್ಯಸ್ಥಿಕೆಯಿಲ್ಲದೆ ಗ್ರಾಹಕರು ಸಹ ರೈತರಿಂದ ಗುಣಮಟ್ಟದ ಉತ್ಪನ್ನವನ್ನು ಖರೀದಿಸಬಹುದು.

ಮೊಬೈಲ್ ಆ್ಯಪ್‌ ಅಭಿವೃದ್ಧಿ...
ಮೊಬೈಲ್‌ ಆ್ಯಪ್‌ ಅನ್ನು ‘ಫಾರ್ಮಿಲಿ’ ಅಭಿವೃದ್ಧಿಪಡಿಸಿದ್ದು, ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಕನಿಷ್ಠ ಜ್ಞಾನ ಉಳ್ಳವರು ಸಹ ನಿರ್ವಹಿಸುವಷ್ಟು ಇದು ರೈತ ಸ್ನೇಹಿಯಾಗಿದೆ. ಸ್ಮಾರ್ಟ್‌ಫೋನ್‌ ಮೂಲಕ ಇಂಗ್ಲಿಷ್‌, ಕನ್ನಡ, ಹಿಂದಿ ಸೇರಿದಂತೆ 13 ಭಾಷೆಯಲ್ಲಿ ಈ ಆ್ಯಪ್‌ನಲ್ಲಿ ಉಚಿತವಾಗಿ ವ್ಯವಹರಿಸಬಹುದು.

ರೈತರು ಮೊದಲು ‘ಫಾರ್ಮಿಲಿ’ ವೆಬ್‌ಸೈಟ್‌ನಲ್ಲಿ ಮೊಬೈಲ್‌ ಸಂಖ್ಯೆಯೊಂದಿಗೆ ವೈಯಕ್ತಿಕ ಮಾಹಿತಿ ಭರ್ತಿ ಮಾಡಿ (ಫೇಸ್‌ಬುಕ್‌ ರೀತಿಯಲ್ಲಿ) ಖಾತೆ ತೆರೆಯಬೇಕು. ನಂತರ, ರೈತರು ತಾವು ಬೆಳೆಯುವ ಬೆಳೆ, ಪ್ರಮಾಣ, ದರದ ಜೊತೆಗೆ ಬೆಳೆಯ ಚಿತ್ರ ಸಮೇತ ವೆಬ್‌ಸೈಟ್‌ನಲ್ಲಿ ಸೇರಿಸಬಹುದು. ಗ್ರಾಹಕರಿಗೂ ಫಾರ್ಮಿಲಿ ಖಾತೆ ಅಗತ್ಯ. ಎಸ್ಸೆಮ್ಮೆಸ್‌ನಿಂದ ವ್ಯವಹಾರ: ಗ್ರಾಹಕರು ‘ಫಾರ್ಮಿಲಿ’ಯಲ್ಲಿ ತಮಗೆ ಬೇಕಾದ ಬೆಳೆಯ ಹೆಸರನ್ನು ಆಯ್ಕೆ ಮಾಡಿದಾಗ, ಆ ಬೆಳೆ ಬೆಳೆಯುವ ಸಮೀಪದ ರೈತರ (ಫಾರ್ಮಿಲಿ ಸದಸ್ಯ) ಗುರುತುಗಳು ಜಿಪಿಎಸ್‌ ನಕ್ಷೆಯ ಮೂಲಕ ತೋರಿಸುತ್ತದೆ.

ನಕ್ಷೆಯಲ್ಲಿ ರೈತರು ಬೆಳೆ ಬಗ್ಗೆ ತಿಳಿಸಿದ ಮಾಹಿತಿಗನುಗುಣವಾಗಿ ಅವರಿಗೆ ಬಣ್ಣದ ಗುರುತು ನಿಗದಿಯಾಗುತ್ತದೆ. ಫಾರ್ಮಿಲಿಯಲ್ಲಿ ಕೇವಲ ನೋಂದಣಿಯಷ್ಟೇ ಆದ ರೈತನಿಗೆ ‘ನೀಲಿ’ ಗುರುತು, ಬೆಳೆಯ ವಿವರ ತಿಳಿಸಿದ್ದರೆ ‘ಹಸಿರು’, ರೈತನ ಕೃಷಿ ಉತ್ಪನ್ನಕ್ಕೆ ಯಾರಾದರು ಬೇಡಿಕೆ ಸಲ್ಲಿಸಿದ್ದರೆ ‘ಕೆಂಪು’ ಗುರುತು ಇರುತ್ತದೆ. ಗ್ರಾಹಕರು ಬೇಕಾದ ಗುರುತಿನ ಮೇಲೆ ಕ್ಲಿಕ್‌ ಮಾಡಿದಾಗ ಆಯ್ದ ಬೆಳೆಗೆ ರೈತ ನಮೂದಿಸಿದ ದರ ಮತ್ತು ಆತನ ಬಳಿ ಇರುವ ಉತ್ಪನ್ನದ ಪ್ರಮಾಣದ ಮಾಹಿತಿ ದೊರೆಯುತ್ತದೆ.

ಉದಾಹರಣೆಗೆ, ರಾಗಿ ಬೆಳೆ ಆಯ್ಕೆ ಮಾಡಿದರೆ, ನಕ್ಷೆಯಲ್ಲಿ ರಾಗಿ ಬೆಳೆಯುವ ರೈತರ ಗುರುತು ಕಾಣಿಸುತ್ತದೆ. ಗುರುತಿನ ಮೇಲೆ ಒತ್ತಿದಾಗ ರಾಗಿ ಬೆಳೆಗೆ ರೈತ ನಮೂದಿಸಿದ ದರ ಮತ್ತು ಅವನ ಬಳಿ ಸಂಗ್ರಹ ಇರುವ ರಾಗಿ ಪ್ರಮಾಣದ ಮಾಹಿತಿ ಸಿಗುತ್ತದೆ. ಗ್ರಾಹಕ ತನಗೆ ಬೇಕಾದಷ್ಟು ಪ್ರಮಾಣ ಮತ್ತು ತಾನು ನೀಡುವ ದರವನ್ನು ಅಲ್ಲಿ ನಮೂದಿಸಿ send ಬಟನ್‌ ಒತ್ತಿದರೆ, ರೈತನ ಮೊಬೈಲ್‌ಗೆ ಗ್ರಾಹಕನ ಮೊಬೈಲ್‌ ಸಂಖ್ಯೆ ಸಮೇತ ಆ ಮಾಹಿತಿಯುಳ್ಳ ಸಂದೇಶ ತಲುಪುತ್ತದೆ. ರೈತ, ಗ್ರಾಹಕನಿಗೆ ಕರೆ ಮಾಡಿ ವ್ಯವಹಾರ ಕುದುರಿಸಿಕೊಳ್ಳಬಹುದು ಅಥವಾ ತಿರಸ್ಕರಿಸಬಹುದು.

‘ಮೊದಲ ಹಂತದಲ್ಲಿ ಫಾರ್ಮಿಲಿಯಿಂದ ಉತ್ಪಾದನೆ, ಖರೀದಿಯಷ್ಟೇ ನಡೆಯಲಿದೆ. ನಂತರದಲ್ಲಿ ಕೃಷಿ ಉತ್ಪನ್ನಗಳ ಬೇಡಿಕೆಯ ಸ್ಪಷ್ಟ ಅಂಕಿ ಅಂಶ ನಿರ್ಧಾರವಾಗಲಿದೆ. ಆಗ ಬೇಡಿಕೆಗೆ ತಕ್ಕಂತೆ ರೈತರು ಬೆಳೆ ಬೆಳೆಯುವುದರಿಂದ ಕೃಷಿ ಉತ್ಪನ್ನ ಅನಗತ್ಯ ಪೋಲಾಗುವುದನ್ನು ತಡೆಯಬಹುದು ಮತ್ತು ಮಾರುಕಟ್ಟೆಯಲ್ಲಿನ ದರದ ವ್ಯತ್ಯಾಸವನ್ನು ನಿರ್ಧರಿಸಬಹುದು’ ಎನ್ನುತ್ತಾರೆ ಕಾರ್ತಿಕ್‌ ನಟರಾಜನ್‌.

‘ರೈತರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವುದು ‘ಫಾರ್ಮಿಲಿ’ ಉದ್ದೇಶ. ಆರಂಭದಲ್ಲಿ ಆನ್‌ಲೈನ್‌ ಮೂಲಕ ರೈತರಿಂದ ಉತ್ಪನ್ನ ಖರೀದಿಸುವ ಗ್ರಾಹಕರು, ನಂತರದಲ್ಲಿ ಮುಂದಿನ ವರ್ಷಕ್ಕೆ ಬೇಕಾದ ಉತ್ಪನ್ನಕ್ಕೆ ರೈತರೊಂದಿಗೆ ಮೊದಲೇ ಒಪ್ಪಂದ ಮಾಡಿಕೊಳ್ಳುತ್ತಾರೆ. ಇದರಿಂದ ರೈತನಿಗೆ ತಾನು ಏನು ಬೆಳೆಯಬೇಕು, ಎಷ್ಟು ಬೆಳೆಯಬೇಕು ಎನ್ನುವ ಚಿತ್ರಣ ದೊರೆಯುತ್ತದೆ. ಒಂದು ವೇಳೆ ಬರಗಾಲದಿಂದ ಬೆಳೆ ನಷ್ಟವಾದರೆ, ರೈತ ಒಪ್ಪಂದ ಮಾಡಿಕೊಂಡಿದ್ದಷ್ಟು ಉತ್ಪನ್ನವನ್ನು ಬೇರೆ ರೈತರಿಂದ ಪಡೆದು ಫಾರ್ಮಿಲಿ ಸಂಸ್ಥೆಯು ಗ್ರಾಹಕನಿಗೆ ಮುಟ್ಟಿಸುತ್ತದೆ. ಇಲ್ಲಿ ದೊಡ್ಡ ಪ್ರಮಾಣದ ಗ್ರಾಹಕರು ಇರುವುದರಿಂದ, ಸಣ್ಣ ರೈತರು ಗುಂಪು ರಚಿಸಿಕೊಂಡು ವ್ಯವಹರಿಸಬಹುದು’ ಎನ್ನುತ್ತಾರೆ ಕಾರ್ತಿಕ್‌.

ಕಷ್ಟದಲ್ಲಿ ನೆರವು
ರೈತರು ಮಳೆ ಕೊರತೆಯಿಂದ ಬೆಳೆ ಹಾನಿಯಾಗಿ ನಷ್ಟ ಅನುಭವಿಸಿದರೆ ಅಂತಹ ರೈತರಿಗೆ ಹಣಕಾಸು ಸಂಸ್ಥೆಗಳ ಮೂಲಕ ಸಾಲ ಕೊಡಿಸುವ ಯೋಜನೆ ಹೊಂದಲಾಗಿದೆ. ಇದಕ್ಕಾಗಿ ಈಗಾಗಲೇ ಅನೇಕ ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರೈತರ ಬೆಳೆಗೆ ಸಾಂದರ್ಭಿಕ ಬೆಲೆ ದೊರೆಯದೇ ಇದ್ದರೆ, ಅದನ್ನು ಸಂಗ್ರಹಿಸಿಟ್ಟುಕೊಳ್ಳಲು ಸಂಗ್ರಹಾಗಾರ ಪೂರೈಸುವ ಏಜೆನ್ಸಿಯೊಂದಿಗೆ ಫಾರ್ಮಿಲಿ ಒಪ್ಪಂದ ಮಾಡಿಕೊಂಡಿದೆ. ಫಾರ್ಮಿಲಿ ಮೂಲಕ ಈ ಏಜೆನ್ಸಿಯನ್ನು ರೈತರು ಸಂಪರ್ಕಿಸಿದರೆ, ಮನೆ ಬಾಗಿಲಿಗೇ ಸಂಗ್ರಹಾಗಾರ ವಾಹನ ಬರುತ್ತದೆ. ಈ ವಾಹನದ ಬಾಡಿಗೆ ರೈತರೇ ಭರಿಸಬೇಕು.

ಎಪಿಎಂಸಿಯಿಂದ ಕೃಷಿ ವ್ಯವಸ್ಥೆ ಹಾಳು
ರಾಜ್ಯದಲ್ಲಿ ಕೃಷಿ ಉತ್ಪನ್ನ ಮಾರಾಟಕ್ಕೆ ಇರುವ ಎಪಿಎಂಸಿ ವ್ಯವಸ್ಥೆ ಬಗ್ಗೆ ಕಾರ್ತಿಕ್‌ ಆಕ್ರೋಶ ವ್ಯಕ್ತಪಡಿಸುತ್ತಾರೆ. ‘ದೇಶದ ಮಾರುಕಟ್ಟೆ ವ್ಯವಸ್ಥೆ ಬದಲಾಗಿ ದಶಕಗಳೇ ಕಳೆದಿದೆ. ಆದರೆ, ಕೃಷಿ ಉತ್ಪನ್ನ ಮಾರಾಟಕ್ಕೆ 1950ರ ಎಪಿಎಂಸಿ ವ್ಯವಸ್ಥೆಯನ್ನೇ ನೆಚ್ಚಿಕೊಳ್ಳಲಾಗಿದೆ. ಎಪಿಎಂಸಿಗಳು ದಲ್ಲಾಳಿಗಳನ್ನು ಸೃಷ್ಟಿಸುತ್ತವೆ. ಅಲ್ಲಿ ರೈತರಿಗೆ ಸಿಗುವುದು ಬಿಡಿಗಾಸು ಮಾತ್ರ. ಎಲ್ಲಾ ಲಾಭ ದಲ್ಲಾಳಿಗಳ ಪಾಲಾಗುತ್ತಿದೆ. ರೈತರು ನೇರವಾಗಿ ಗ್ರಾಹಕರನ್ನು ಸಂಪರ್ಕಿಸುವ ವ್ಯವಸ್ಥೆಗೆ ಹೊಂದಿಕೊಂಡಾಗಲೇ ಕೃಷಿ ಕ್ಷೇತ್ರ ಅಭಿವೃದ್ಧಿಯಾಗಲು ಸಾಧ್ಯ. ಅದೇ ಗುರಿಯೊಂದಿಗೆ ಸಾಗುತ್ತಿದ್ದೇವೆ’ ಎಂದು ಕಾರ್ತಿಕ್‌ ವಿಶ್ವಾಸದಿಂದ ಹೇಳುತ್ತಾರೆ. ಮಾಹಿತಿಗೆ: https://farmily.com/en/
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT