ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಮಸ್ಯೆ ಪರಿಹರಿಸಲು ಸರ್ಕಾರ ವಿಫಲ: ಬಿಎಸ್‌ವೈ

ರೈತರ ಆತ್ಮಹತ್ಯೆ ಲೋಕಸಭೆಯಲ್ಲಿ ಪ್ರಸ್ತಾಪ
Last Updated 3 ಆಗಸ್ಟ್ 2015, 20:16 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದಲ್ಲಿ ರೈತರು ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಕೃಷಿಕರ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಶಿವಮೊಗ್ಗ ಬಿಜೆಪಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಲೋಕಸಭೆಯಲ್ಲಿ ಸೋಮವಾರ ಆರೋಪಿಸಿದರು.

ಗಮನ ಸೆಳೆಯುವ ಸೂಚನೆ ಮಂಡಿಸಿ, ಮಧ್ಯಾಹ್ನ ಯಡಿಯೂರಪ್ಪ ಮಾತು ಆರಂಭಿಸುತ್ತಿದ್ದಂತೆ ಕಾಂಗ್ರೆಸ್‌ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಆವರಣಕ್ಕೆ ಬಂದು ಪ್ರತಿಭಟನೆ ಮುಂದುವರಿಸಿದರು.

ಈ ಸಮಯದಲ್ಲಿ ಸದನದಲ್ಲಿ ಹಾಜರಿದ್ದ ಕೃಷಿ ಸಚಿವ ರಾಧಮೋಹನ್‌ ಸಿಂಗ್‌, ಸರ್ಕಾರ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಕುರಿತು ಚರ್ಚೆ ನಡೆಸಲು ಸಿದ್ಧವಿದೆ. ಆದರೆ, ಕಾಂಗ್ರೆಸ್‌ ಸದಸ್ಯರು ಅಡ್ಡಿ ಮಾಡುತ್ತಿದ್ದಾರೆ ಎಂದು ದೂರಿದರು.

‘ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಬೇರೆ ರಾಜ್ಯಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಹೋಗುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ನಡೆಯುತ್ತಿರುವ ಆತ್ಮಹತ್ಯೆಗಳು ಅವರಿಗೆ ಕಾಣುತ್ತಿಲ್ಲ’ ಎಂದು ಟೀಕಿಸಿದರು. ಮಾಜಿ ಮುಖ್ಯಮಂತ್ರಿ ಟೀಕೆ ಮಾಡುವಾಗ ರಾಹುಲ್‌ ಸದನದಲ್ಲಿ ಹಾಜರಿರಲಿಲ್ಲ.

ಯಡಿಯೂರಪ್ಪನವರ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವ ರಾಧಮೋಹನ್‌ಸಿಂಗ್‌ 2014–15ನೇ ಸಾಲಿನಲ್ಲಿ ರಾಜ್ಯಕ್ಕೆ ₹ 14000 ಕೋಟಿ ತೆರಿಗೆ ಪಾಲು ನೀಡಲಾಗಿದೆ. ಈ ಹಣವನ್ನು 24ಸಾವಿರ ಕೋಟಿಗೆ ಹೆಚ್ಚಿಸಲಾಗಿದೆ. ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡುವುದಕ್ಕಾಗಿ ಹಣ ಕೊಡಲಾಗಿದೆ ವಿನಾ ವ್ಯಾಪಾರ ಮಾಡುವುದಕ್ಕಾಗಿ ಅಲ್ಲ ಎಂದರು.

ಕಾಂಗ್ರೆಸ್‌ ಸದಸ್ಯರ ಗದ್ದಲ ನಡುವೆಯೇ ಯಡಿಯೂರಪ್ಪ, ರಾಧಾ ಮೋಹನ್‌ ಮಾತನಾಡಿದರು. ರೈತರ ಆತ್ಮಹತ್ಯೆ ಮೇಲೆ ಚರ್ಚೆ ನಡೆಯುವಾಗ ಘೋಷಣೆಗಳು ನಿಂತಿರಲಿಲ್ಲ. ಒಂದಿಬ್ಬರು ಕಾಂಗ್ರೆಸ್‌ ಸದಸ್ಯರು ಕೈಯಲ್ಲಿ ಹಿಡಿದಿದ್ದ ಫಲಕವನ್ನು ತುತ್ತೂರಿ ಮಾಡಿಕೊಂಡು ಘೋಷಣೆಗಳನ್ನು ಕೂಗುತ್ತಿದ್ದರು. ತೆಲಂಗಾಣ ಸದಸ್ಯರು ಪ್ರತ್ಯೇಕ ಹೈಕೋರ್ಟ್‌ ಬೇಕೆಂದು ಘೋಷಣೆ ಕೂಗುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT