ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪಣ್ಣ ಆಯೋಗಕ್ಕೆ ದಾಖಲೆ ಸಲ್ಲಿಸಿದ ಬಿಜೆಪಿ

ಅರ್ಕಾವತಿ ಬಡಾವಣೆ ಜಮೀನಿನ ಡಿನೋಟಿಫಿಕೇಷನ್‌ ವಿವಾದ
Last Updated 5 ಮಾರ್ಚ್ 2015, 19:29 IST
ಅಕ್ಷರ ಗಾತ್ರ

ಬೆಂಗಳೂರು: ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ 119 ಎಕರೆ 02 ಗುಂಟೆ ಜಮೀನನ್ನು ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯ ವಕೀಲರ ವಿಭಾಗದ ಸದಸ್ಯ ನಟರಾಜ್‌ ಶರ್ಮ, ಈ ಸಂಬಂಧ ನ್ಯಾಯಮೂರ್ತಿ ಎಚ್‌.ಎಸ್‌.ಕೆಂಪಣ್ಣ ವಿಚಾರಣಾ ಆಯೋಗಕ್ಕೆ 810 ಪುಟಗಳ ದಾಖಲೆ ಸಲ್ಲಿಸಿದರು.

ಬಿಜೆಪಿಯ ವಕೀಲರ ವಿಭಾಗದ  ಮತ್ತೊಬ್ಬ ಸದಸ್ಯ ಎಸ್‌.ದೊರೈರಾಜು ಅವರೊಂದಿಗೆ ಸೋಮ­ವಾರ ಆಯೋ­ಗದ ಕಚೇರಿಗೆ ಬಂದ ಶರ್ಮ, ಆಯೋ­ಗದ ಕಾರ್ಯದರ್ಶಿ ಎಸ್‌.­ಶ್ರೀವತ್ಸ ಕೆದಿ­ಲಾಯ ಅವರಿಗೆ ದಾಖಲೆಗಳನ್ನು ಸಲ್ಲಿಸಿ­ದರು. ಈ ದಾಖಲೆಗಳನ್ನು ಆಧರಿಸಿ ವಿಚಾ­­ರಣೆ ನಡೆಸುವಂತೆಯೂ ಮನವಿ ಮಾಡಿದರು.

ಬಳಿಕ ಪತ್ರಕರ್ತರ ಜೊತೆ ಮಾತ­ನಾಡಿದ ಶರ್ಮ, ‘ಬೆಂಗಳೂರು ಅಭಿ­ವೃದ್ಧಿ ಪ್ರಾಧಿಕಾರ (ಬಿಡಿಎ) ಅರ್ಕಾವತಿ ಬಡಾವಣೆ ನಿರ್ಮಾಣ­ಕ್ಕಾಗಿ ಸ್ವಾಧೀನ­ಪಡಿಸಿಕೊಂಡಿದ್ದ ಜಮೀನನ್ನು ಸಿದ್ದ­ರಾಮಯ್ಯ ಅವರು ಕಾನೂನಿಗೆ ವಿರುದ್ಧ­ವಾಗಿ ಡಿನೋಟಿಫೈ ಮಾಡಿದ್ದಾರೆ. ‘ರೀ ಡು’ ಎಂಬ ಹೆಸ­ರಿನಲ್ಲಿ ಬೇಕಾಬಿಟ್ಟಿ­ಯಾಗಿ ಡಿನೋಟಿಫಿ­ಕೇಷನ್‌ ನಡೆದಿದೆ. ಈ ಎಲ್ಲ ಆರೋಪಗಳಿಗೆ ಪೂರಕವಾಗಿ ಆಯೋಗಕ್ಕೆ ದಾಖಲೆ ನೀಡಿದ್ದೇವೆ’ ಎಂದರು.

119 ಎಕರೆ 02 ಗುಂಟೆ ಜಮೀನನ್ನು ಯೋಜನೆ­ಯಿಂದ ಕೈಬಿಡಲು ಅವಕಾ­ಶವೇ ಇರ­ಲಿಲ್ಲ. ಆದರೂ, ಅಕ್ರಮವಾಗಿ ಡಿನೋಟಿಫೈ ಮಾಡಲಾಗಿದೆ. ಸಿದ್ದ­ರಾಮಯ್ಯ ಅವರ ಈ ತೀರ್ಮಾನದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಿದೆ ಎಂದು ದೂರಿದರು.

ಯಾವುದೇ ಆಧಾರಗಳಿಲ್ಲದೇ 119 ಎಕರೆ 02 ಗುಂಟೆಯನ್ನು ಭೂಸ್ವಾಧೀನ ಪ್ರಕ್ರಿಯೆ­ಯಿಂದ ಕೈಬಿಡಲಾಗಿದೆ ಎಂಬು­ದನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಬಿಡಿಎಯಿಂದ ಪಡೆದಿರುವ ದಾಖಲೆಗಳು ಸಾಬೀತು ಮಾಡುತ್ತವೆ. ಇನ್ನೂ ಹಲವು ದಾಖಲೆಗಳನ್ನು ಪಡೆಯಲು ಸಾಧ್ಯ­ವಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳಿಂದ ಆ ದಾಖಲೆ­ಗಳನ್ನು ಪಡೆದು, ವಿಚಾರಣೆ ನಡೆಸುವಂತೆ ಕೋರಲಾಗಿದೆ ಎಂದರು.

ಮತ್ತೊಂದು ದೂರು: ಇದೇ ವೇಳೆ ನಗರದ ಅಶೋಕ್‌ ಕುಮಾರ್‌ ಎಂಬು­ವರು ಆಯೋಗದ ಕಾರ್ಯದರ್ಶಿಯ­ವ­ರನ್ನು ಭೇಟಿಮಾಡಿ ಮುಖ್ಯ­ಮಂತ್ರಿ­ಯ­ವರ ವಿರುದ್ಧ ದೂರು ನೀಡಿದರು. ಕೆಲವು ವ್ಯಕ್ತಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಮುಖ್ಯಮಂತ್ರಿಯವರು ಹಲವು ಜಮೀನುಗಳನ್ನು ಡಿನೋಟಿಫೈ ಮಾಡಿದ್ದಾರೆ ಎಂಬ ಆರೋಪ ಅವರ ದೂರಿನಲ್ಲಿದೆ.

‘ಅರ್ಕಾವತಿ ಬಡಾವಣೆಗೆ ಗುರುತಿಸಿದ್ದ ಜಮೀನನ್ನು ಡಿನೋಟಿಫೈ ಮಾಡುವ ಕೆಲಸ 2003ರಿಂದಲೇ ಆರಂಭವಾ­ಗಿತ್ತು. ಆಗಿನ ಮುಖ್ಯಮಂತ್ರಿ ಎಸ್‌.ಎಂ.­ಕೃಷ್ಣ ಅವರು ಒಂದೇ ಬಾರಿ 589 ಎಕರೆ 12 ಗುಂಟೆ ಜಮೀನನ್ನು ಕೈಬಿಟ್ಟಿದ್ದರು. ಹೀಗಾಗಿ ಈ ಯೋಜನೆಯ ಆರಂಭ­ದಿಂದ ಈ­ವರೆಗೆ ಬಿಡಿಎ ಆಯುಕ್ತರ ಹುದ್ದೆಯಲ್ಲಿದ್ದ ಎಲ್ಲ ಅಧಿಕಾರಿಗಳ ವಿಚಾರಣೆಯನ್ನೂ ನಡೆಸಬೇಕು’ ಎಂದು ಮನವಿ ಮಾಡಿದ್ದಾರೆ.

ನಿವೃತ್ತ ಐಎಎಸ್‌ ಅಧಿಕಾರಿಗಳಾದ ಜೈಕರ್‌ ಜೆರೋಮ್‌, ಸಿದ್ದಯ್ಯ, ಎಂ.ಕೆ.­ಶಂಕರಲಿಂಗೇಗೌಡ, ಐಎಎಸ್‌ ಅಧಿಕಾರಿ ಭರತ್‌ಲಾಲ್‌ ಮೀನಾ, ಬಿಡಿಎ ಈಗಿನ ಆಯುಕ್ತ ಟಿ.ಶ್ಯಾಂಭಟ್‌ ಅವರನ್ನು ವಿಚಾರಣೆ ನಡೆಸಬೇಕು ಎಂದು ಅಶೋಕ್‌ ಕುಮಾರ್‌ ಆಗ್ರಹಿಸಿದ್ದಾರೆ.
‘ಕೆಲವು ಜಮೀನುಗಳನ್ನು ಬಿಡಿಎ­ಯಿಂದ ಶಿಫಾರಸು ಪಡೆದು ಮೂರೇ ದಿನಗಳಲ್ಲಿ ಡಿನೋಟಿಫೈ ಮಾಡಲಾಗಿದೆ. ಉದ್ಯಮಿ ತೇಜರಾಜ್‌ ಗುಲ್ಲೇಚ ಎಂಬುವರಿಗೆ ಅನುಕೂಲ ಮಾಡಿಕೊ­ಡುವ ಉದ್ದೇಶದಿಂದ ಈ ಜಮೀನು­ಗಳನ್ನು ಡಿನೋಟಿಫೈ ಮಾಡಲಾಗಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ಇನ್ನೊಂದು ಪ್ರಕರಣದಲ್ಲಿ ಮೊದಲು 35 ಎಕರೆ ಎರಡೂವರೆ ಗುಂಟೆ ಜಮೀನನ್ನು ಡಿನೋಟಿಫಿಕೇಷನ್‌ ಕೋರಿಕೆ ಕುರಿತು ಮರು ಸ್ಥಳಪರಿಶೀಲನೆಗೆ ಶಿಫಾರಸು ಮಾಡಲಾಗಿತ್ತು. ನಂತರ ಅದನ್ನು 54 ಎಕರೆಗೆ ಹೆಚ್ಚಿಸಲಾಗಿದೆ. ಈ ಜಮೀನುಗಳಿಗೆ ಸಂಬಂಧಿಸಿದಂತೆ  ಬಿಡಿಎ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿದ್ದಾರೆ’ ಎಂದು ಅಶೋಕ್‌ ಕುಮಾರ್ ದೂರಿದ್ದಾರೆ.

ಕೈಪಿಡಿ ಸಲ್ಲಿಕೆ: ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಅಧ್ಯಕ್ಷ ಸಿ.ಎಂ.ಧನಂಜಯ ಅವರು ಕೂಡ ಆಯೋಗದ ಕಾರ್ಯದರ್ಶಿಯನ್ನು ಭೇಟಿ ಮಾಡಿ­ದರು. ಅರ್ಕಾವತಿ ಬಡಾವಣೆ ಜಮೀನಿನ ಡಿನೋಟಿಫಿ­ಕೇಷನ್‌ ವಿಚಾರದಲ್ಲಿ ಸಿದ್ದರಾಮಯ್ಯ ಅವರು ತಪ್ಪೆಸಗಿಲ್ಲ ಎಂಬ ಸಮ­ಜಾಯಿಷಿಯೊಂದಿಗೆ ಪ್ರಕಟಿಸಿರುವ ‘ಅರ್ಕಾವತಿ ವಾಸ್ತವ ವರದಿ’ ಹೆಸರಿನ ಕೈಪಿಡಿಯನ್ನು ಆಯೋಗಕ್ಕೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT